ಬಸವರಾಜ ಹೊರಟ್ಟಿ. ರಾಜ್ಯ ವಿಧಾನಪರಿಷತ್ ಸಭಾಪತಿಯಾಗಿದ್ದವರು. ಪ್ರಸ್ತುತ ಸಭಾಪತಿಯಾಗಿರುವ ಹೊರಟ್ಟಿ ಅವರು ಈ ಹುದ್ದೆಯಲ್ಲಿ ಕುಳಿತಿರುವುದಕ್ಕೆ ಕಾರಣ ಸಿದ್ದರಾಮಯ್ಯ. ಸಿದ್ದರಾಮಯ್ಯ ಸಿಎಂ ಆಗಿರುವವರೆಗೆ ಹೊರಟ್ಟಿ ಅವರ ಸ್ಥಾನಮಾನಕ್ಕೆ ಧಕ್ಕೆ ಬಂದಿರಲಿಲ್ಲ. ಆದರೆ ಈಗ ಸಿದ್ದರಾಮಯ್ಯ ಪೀರಿಯಡ್ ಕಂಪ್ಲೀಟ್ ಆಗಿದೆ. ಡಿಕೆ ಜಮಾನ ಶುರುವಾಗಿದೆ. ಹೊರಟ್ಟಿ ಸ್ಥಾನವನ್ನು ಬಿಡಲೇಬೇಕು.
ಜುಲೈ 2ನೇ ವಾರ ಅಥವಾ 3 ನೇ ವಾರದಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನ ವೇಳೆ ಬಸವರಾಜ ಹೊರಟ್ಟಿ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಒಟ್ಟು 75 ಸದಸ್ಯ ಬಲದ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಒಟ್ಟು 37 ಸದಸ್ಯರನ್ನು ಹೊಂದಿತ್ತು. ಇದೀಗ 7 ಸ್ಥಾನಗಳಿಗೆ ವಿಧಾನಸಭೆಯಿಂದ ನಡೆದ ದ್ವೈವಾರ್ಷಿಕ ಚುನಾವಣೆ ಬಳಿಕ ಸದನದಲ್ಲಿ ಕಾಂಗ್ರೆಸ್ ಬಲ 39ಕ್ಕೆ ಏರಿದೆ. ಜುಲೈ 21ಕ್ಕೆ ಐವರು ಸದಸ್ಯರ ನಾಮನಿರ್ದೇಶನ ಅವಕಾಶವೂ ಸರಕಾರಕ್ಕೆ ಸಿಗುತ್ತದೆ. ಆಗ ಒಟ್ಟು ಬಲ 43ಕ್ಕೆ ಏರಲಿದೆ. ಹಾಗಾಗಿ ಸಭಾಪತಿ ಮತ್ತು ಉಪ ಸಭಾಪತಿ ಹುದ್ದೆ ಹೊಂದುವ ಅವಕಾಶವನ್ನು ಬಳಸಿಕೊಳ್ಳಲು ಕಾಂಗ್ರೆಸ್ ಬಯಸಿದೆ.
ಸಿದ್ದರಾಮಯ್ಯ ಕೃಪೆ ಹೇಗೆ..?
ಒಟ್ಟು 75 ಸದಸ್ಯ ಬಲದ ವಿಧಾನ ಪರಿಷತ್‌ನಲ್ಲಿ ಈ ಮೊದಲು ಕಾಂಗ್ರೆಸ್ಸಿಗೆ ಇದ್ದ ಸದಸ್ಯ ಬಲ 37. ಬಿಜೆಪಿ+ ಜೆಡಿಎಸ್ ದೋಸ್ತಿ ಬಲ 36 ಇತ್ತು. ದೋಸ್ತಿಗಿಂತ ಒಂದು ಸೀಟು ಹೆಚ್ಚೇ ಇದ್ದರೂ ಬಸವರಾಜ ಹೊರಟ್ಟಿ ಅವರ ಸ್ಥಾನಕ್ಕೆ ಧಕ್ಕೆ ಬಂದಿರಲಿಲ್ಲ. ಹೊರಟ್ಟಿ ಅವರು ಜನತಾದಳದ ಕಾಲದಿಂದಲೂ ಸಿದ್ದರಾಮಯ್ಯ ಅವರಿಗೆ ಆಪ್ತರು. ಹೀಗಾಗಿ ಪಕ್ಷ ಬೇರೆಯಾಗಿದ್ದರೂ ಹೊರಟ್ಟಿ ಅವರನ್ನು ಹಾಗೆಯೇ ಉಳಿಯಲು ಬಿಟ್ಟಿದ್ದರು ಸಿದ್ದರಾಮಯ್ಯ. ಇದೀಗ ಸಿದ್ದರಾಮಯ್ಯ ಮಾಜಿ ಸಿಎಂ ಆಗಿದ್ದಾರೆ. ಇನ್ನು ಮುಂದೆ ಅವರ ಗೇಮ್ ಕಾಂಗ್ರೆಸ್ ಪಕ್ಷದಲ್ಲಿ ಹಿಂದಿನಂತೆ ನಡೆಯುವುದಿಲ್ಲ. ಅದು ವಾಸ್ತವ.
ಪರಿಷತ್‌ನಲ್ಲಿ ಬಹುಮತಕ್ಕೆ 38 ಸದಸ್ಯ ಬಲ ಅಗತ್ಯವಿದ್ದು, ಕಾಂಗ್ರೆಸ್‌ನಲ್ಲಿ37 ಸದಸ್ಯರಿದ್ದರು. ಪಕ್ಷೇತರ ಸದಸ್ಯ ಲಖನ್ ಜಾರಕಿಹೊಳಿ ಬೆಂಬಲದೊಂದಿಗೆ ಸಭಾಪತಿ ಹುದ್ದೆ ಪಡೆಯಬೇಕು ಎಂಬ ಚರ್ಚೆ ಹಿಂದೆಯೇ ಪಕ್ಷದೊಳಗೆ ನಡೆದಿತ್ತು. ಆದರೆ, ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಜನತಾ ಪರಿವಾರದ ಒಡನಾಡಿಯಾಗಿದ್ದ ಬಸವರಾಜ ಹೊರಟ್ಟಿ ವಿಚಾರದಲ್ಲಿಮೃದು ಧೋರಣೆ ಹೊಂದಿದ್ದರು. ಇದರ ವಿರುದ್ಧ ಕಾಂಗ್ರೆಸ್‌ನ ಕೆಲವು ಪರಿಷತ್ ಸದಸ್ಯರು ಒಟ್ಟಾಗಿ ಹೈಕಮಾಂಡ್ ನಾಯಕರಿಗೆ ದೂರು ಕೊಟ್ಟಿದ್ದರೂ ಪ್ರಯೋಜನವಾಗಿರಲಿಲ್ಲ. ಬಿಜೆಪಿಯ 39 ಮತ್ತು ಜೆಡಿಎಸ್‌ನ 7 ಸೇರಿ ಪ್ರತಿಪಕ್ಷದ ಬಲವೂ 36 ಇರುವುದರಿಂದ ಸ್ಪಷ್ಟ ಬಹುಮತ ಸಿಗುವ ವರೆಗೆ ಕಾಯೋಣ ಎಂಬುದು ಸಿದ್ದರಾಮಯ್ಯ ಅವರ ಸಮಜಾಯಿಷಿಯಾಗಿತ್ತು.
ಆಗ 36 ಸದಸ್ಯರನ್ನು ಹೊಂದಿದ್ದ ಬಿಜೆಪಿ ಮತ್ತು ಜೆಡಿಎಸ್ ‘ದೋಸ್ತಿ’ ಬಲವು ಸದ್ಯ 34ಕ್ಕೆ ಕುಸಿದಿದೆ. ಜುಲೈನಲ್ಲಿ ಬಿಜೆಪಿಯ ನಾಲ್ವರು ನಾಮನಿರ್ದೇಶನ ನಿವೃತ್ತಿ ಹೊಂದುವುದರಿಂದ ಪ್ರತಿಪಕ್ಷ ಪಾಳೆಯದ ಒಟ್ಟು ಬಲ 30ಕ್ಕೆ ಕುಸಿಯಲಿದೆ. ಹಾಗಾಗಿ ಹಾಲಿ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡುವ ಸಾಧ್ಯತೆಗಳಿವೆ.
ಒಂದು ವೇಳೆ ಇವರು ಪದತ್ಯಾಗಕ್ಕೆ ಮುಂದಾಗದಿದ್ದರೆ ಮುಂದಿನ ಅಧಿವೇಶನದಲ್ಲಿಅವಿಶ್ವಾಸ ಗೊತ್ತುವಳಿ ಮೂಲಕ ಸ್ಥಾನದಿಂದ ಕೆಳಗೆ ಇಳಿಸುವುದಕ್ಕೂ ಅವಕಾಶಗಳಿವೆ.
ಅವಮಾನ ಎದುರಿಸುವ ಇಚ್ಚೆ ಇಲ್ಲದಿರುವ ಹೊರಟ್ಟಿ ಮತ್ತು ಪ್ರಾಣೇಶ್ ಇಬ್ಬರೂ ಸ್ವಯಂ ರಾಜೀನಾಮೆ ಕೊಡುವ ಸಾಧ್ಯತೆಗಳು ಅಧಿಕವಾಗಿವೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟದ ಖಾಲಿ 20 ಸ್ಥಾನಗಳ ಭರ್ತಿಗಾಗಿ ಈ ಮಾಸಾಂತ್ಯಕ್ಕೆ ಚೊಚ್ಚಲ ಕ್ಯಾಬಿನೆಟ್ ವಿಸ್ತರಣೆಯಾಗುವ ನಿರೀಕ್ಷೆಗಳಿವೆ. ಸಂಭಾವ್ಯ ಸಚಿವರ ಯಾದಿಯೊಂದಿಗೆ ಸಭಾಪತಿ ಮತ್ತು ಉಪ ಸಭಾಪತಿ ಸ್ಥಾನಗಳಿಗೆ ಹೆಸರುಗಳನ್ನೂ ಅಂತಿಮಗೊಳಿಸಲು ಡಿಕೆ ನಿರ್ಧಾರ ಮಾಡಿದ್ದಾರೆ.



