ಸಿಎಂ ಡಿಕೆ ಶಿವಕುಮಾರ್ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಮೊದಲ ಟೆನ್ಷನ್ ಕೊಟ್ಟಿದ್ದಾರೆ. ಡಿಕೆ ಶಿವಕುಮಾರ್ ಸಂಪುಟ ರಚನೆಯಾದಾಗ ಜೊತೆಯಲ್ಲೆ ಇದ್ದ ಸಿದ್ದರಾಮಯ್ಯ, ಸುಮಾರು ಒಂದು ತಿಂಗಳ ನಂತರ ನಡೆದಿರುವ ಸಂಪುಟ ವಿಸ್ತರಣೆಗೆ ಬರಲೇ ಇಲ್ಲ. ವಿಶೇಷ ಎಂದರೆ ಅವರು ಬೆಂಗಳೂರಿನಲ್ಲೇ ಇದ್ದರು. ರಾಜಭವನದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದ್ದ ಸಿದ್ದರಾಮಯ್ಯ, ಲೋಕಭವನದ ಕಡೆ ತಲೆಹಾಕಲಿಲ್ಲ. ಡಿಕೆಗೆ ಟೆನ್ಷನ್ ಶುರುವಾಗಿದೆ. ಟ್ರಬಲ್ ಶೂಟರ್ ಡಿಕೆ ಅದನ್ನು ಹೇಗೆ ಮ್ಯಾನೇಜ್ ಮಾಡಬಹುದು..
ಆಗಸ್ಟ್ 3, ಸಿದ್ದರಾಮಯ್ಯ ಹುಟ್ಟುಹಬ್ಬವೂ ಹೌದು. ಸಿದ್ದರಾಮಯ್ಯ ಹುಟ್ಟುಹಬ್ಬದ ದಿನವೇ ನಡೆದ ಸಂಪುಟ ವಿಸ್ತರಣೆ ದಿನ ಸಿದ್ದರಾಮಯ್ಯಗೆ ಹೈಕಮಾಂಡ್ ಸಿಹಿ ಸುದ್ದಿಯನ್ನೇನೂ ಕೊಡಲಿಲ್ಲ. ಸಿದ್ದರಾಮಯ್ಯ ಕೂಡಾ ಅಷ್ಟೇ.. ಸಿಹಿ ಸುದ್ದಿಯನ್ನು ಅವರೂ ಕೊಟ್ಟಿಲ್ಲ. ಹುಟ್ಟುಹಬ್ಬದ ಅಂಗವಾಗಿ ಅಧಿಕೃತ ನಿವಾಸ ಕಾವೇರಿಯಲ್ಲೇ ಉಳಿದು ಅಭಿಮಾನಿಗಳು, ಬೆಂಬಲಿಗರಿಂದ ಶುಭಾಶಯ ಸ್ವೀಕರಿಸುತ್ತಾ ಖುಷಿ ಖುಷಿಯಾಗಿದ್ದ ಸಿದ್ದರಾಮಯ್ಯ ನೂತನ ಸಚಿವರ ಪಟ್ಟಿಯನ್ನು ಎಐಸಿಸಿ ಹೈಕಮಾಂಡ್ ಪ್ರಕಟಿಸುತ್ತಿದ್ದಂತೆ ಕೆರಳಿ ಕೆಂಡವಾಗಿದ್ದಾರೆ.
ಬೆಂಗಳೂರಿನ ಪ್ರಭಾವಿ ನಾಯಕರೊಬ್ಬರಿಗೆ ಸಚಿವ ಸ್ಥಾನ ಕೊಡುವುದು ಬೇಡ ಎಂದು ಹೇಳಿದ್ದರಂತೆ ಸಿದ್ದರಾಮಯ್ಯ. ಅದನ್ನು ಮೀರಿ ಸಚಿವ ಸ್ಥಾನ ಕೊಟ್ಟಿರುವುದು ಸಿದ್ದರಾಮಯ್ಯ ಆಕ್ರೋಶಕ್ಕೆ ಮೊದಲ ಕಾರಣ. ಅಂದಹಾಗೆ ಬೆಂಗಳೂರಿನ ಆ ಪ್ರಭಾವಿ ಸಚಿವ ಜಮೀರ್ ಅಹ್ಮದ್ ಇರಬಹುದಾ.. ಸ್ಪಷ್ಟತೆ ಇಲ್ಲ.
ಎರಡನೆಯದಾಗಿ ಸಿದ್ದರಾಮಯ್ಯ ಅವರು ಬ್ಯಾಡಗಿ ಕ್ಷೇತ್ರದ ಬಸವರಾಜ್ ನೀಲಪ್ಪ ಶಿವಣ್ಣವರ್ ಅವರ ಹೆಸರು ಹೇಳಿದ್ದರು. ಅವರಿಗೂ ಅವಕಾಶ ಕೊಟ್ಟಿಲ್ಲ. ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರಿಗೆ ಕರೆ ಮಾಡಿ ಮಾತನಾಡಿದ ಸಿದ್ದರಾಮಯ್ಯ, ವರ್ಚಸ್ಸು ಇಲ್ಲದವರಿಗೆ ಮಣೆ ಹಾಕಿದ್ದೀರಿ, ಪಟ್ಟಿಯಲ್ಲಿ ಪ್ರಾದೇಶಿಕ ಮತ್ತು ಸಾಮಾಜಿಕ ಸಮತೋಲನ ಇಲ್ಲ ಎಂದು ಹೇಳಿದ್ದಾರೆ.
ಮೂರನೇದಾಗಿ ಸಚಿವ ಸಂಪುಟಕ್ಕೆ ಸಿದ್ದರಾಮಯ್ಯ ಅವರು ಉಮಾಶ್ರೀ ಹೆಸರನ್ನು, ಸಿಎಂ ಡಿ.ಕೆ. ಶಿವಕುಮಾರ್ ಅವರು ಲಕ್ಷ್ಮೇ ಹೆಬ್ಬಾಳಕರ್ ಹೆಸರನ್ನು ಸೂಚಿಸಿದ್ದರಂತೆ. ಕೊನೆಗೆ ಇಬ್ಬರ ವಾದವನ್ನೂ ತಳ್ಳಿ ಹಾಕಿರುವ ಹೈಕಮಾಂಡ್ ಗಾಯತ್ರಿ ಶಾಂತೇಗೌಡ ಹೆಸರನ್ನು ಪರಿಗಣಿಸಿತು. ಆದರೆ, ಪರಿಷತ್ ನಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರಾತಿನಿಧ್ಯವಿದ್ದು, ಕುರುಬ ಸಮುದಾಯದ ಮತ್ತೊಬ್ಬರಾದ ಗಾಯತ್ರಿ ಅವರಿಗೆ ಅವಕಾಶ ಕೊಟ್ಟರೆ ತಪ್ಪಾಗುತ್ತದೆ ಎಂಬ ಕಾರಣಕ್ಕೆ ಗಾಯತ್ರಿ ಶಾಂತೇಗೌಡ ಅವರನ್ನು ಸಂಪುಟದಿಂದ ಆಚೆಗೆ ಇಟ್ಟಿದೆ. ಆದರೆ ಇಷ್ಟು ಸಣ್ಣ ವಿಷಯ ಹೈಕಮಾಂಡ್‌ಗೆ ಅರ್ಥವಾಗಲು ಇಷ್ಟು ಹೊತ್ತು ಬೇಕಾಯಿತಾ ಎಂಬುದೇ ಹೈಕಮಾಂಡ್ ನಗೆಪಾಟಲಿಗೀಡಾಗುವಂತೆ ಮಾಡಿದೆ.
ಸಂಪುಟದಲ್ಲಿ ರಾಜ್ಯ ನಾಯಕರ ಅಭಿಪ್ರಾಯ ಪಡೆಯಲಾಯಿತಾದರೂ ಪಟ್ಟಿ ಅಂತಿಮಗೊಳಿಸುವಲ್ಲಿ ಎಐಸಿಸಿ ಹೈಕಮಾಂಡ್ ತನ್ನದೇ ಮಾನದಂಡವನ್ನು ಅನುಸರಿಸಿತು. ಈ ಮೂಲಕ ತಾನೇ ಸುಪ್ರೀಂ ಎಂಬ ಸಂದೇಶವನ್ನೇನೋ ಕೊಟ್ಟಿದೆ. ಆದರೆ ಈ ವೇಳೆ ತಾನು ಎಷ್ಟು ಎಳಸು ಎಂದು ತೋರಿಸಿಕೊಟ್ಟಿದೆ.
ಮೊದಲಿಗೆ ಎಸ್.ಎಸ್.ಮಲ್ಲಿಕಾರ್ಜುನ್ ಹೆಸರನ್ನು ಕೈಬಿಡಲಾಗಿತ್ತು. ಆದರೆ, ಒಕ್ಕಲಿಗ ಸಮುದಾಯಕ್ಕೆ 6 ಸ್ಥಾನ ಕಲ್ಪಿಸಿ, ಲಿಂಗಾಯತರನ್ನು 5 ಸ್ಥಾನಕ್ಕೆ ಉಳಿಸಿದರೆ ತಪ್ಪು ಸಂದೇಶ ಹೋಗಲಿದೆ ಎಂಬ ಕಾರಣಕ್ಕೆ ತೀರ್ಮಾನ ಬದಲಾಯಿತು.
ಮಂಕಾಳ್ ವೈದ್ಯ ಅವರಿಗೆ ಕೊಕ್ ನೀಡಿ ಮಲ್ಲಿಕಾರ್ಜುನ ಅವರಿಗೆ ಮಣೆ ಹಾಕಲಾಯಿತು. ಮಂಕಾಳ್ ವೈದ್ಯ ಮೊಗವೀರ ಸಮುದಾಯಕ್ಕೆ ಸೇರಿದವರು. ಇತ್ತೀಚೆಗಷ್ಟೇ ಮೊಗವೀರ ಸಮುದಾಯದಲ್ಲಿ ಕಾಂಗ್ರೆಸ್ ಬಲವಾಗುತ್ತಿದೆ.
ಇನ್ನು ದಾವಣಗೆರೆ ಬೈ-ಎಲೆಕ್ಷನ್ ವಿಚಾರದಲ್ಲಿ ದೂರು ಕೊಟ್ಟ ಎಸ್ ಎಸ್ ಮಲ್ಲಿಕಾರ್ಜುನ್, ಸಮಸ್ಯೆ ಸೃಷ್ಟಿಸಿದ ಜಮೀರ್ ಅಹ್ಮದ್, ಪರಿಹಾರ ಮಾಡಲು ಓಡಾಡಿದ ರಿಜ್ವಾನ್ ಅರ್ಷದ್ ಮೂವರಿಗೂ ಮಂತ್ರಿ ಸ್ಥಾನ ಕೊಟ್ಟಿದೆ. ಇದರ ಸಂದೇಶ ಏನು ಎಂದು ಅರ್ಥವಾಗದೆ ನಾಯಕರು ತಲೆ ಕೆಡಿಸಿಕೊಂಡಿದ್ಧಾರೆ.
ಅಂದಹಾಗೆ ಸಿದ್ದು ಬಣದಲ್ಲಿದ್ದ 12 ಮಂದಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಆ 12ರಲ್ಲಿ ಪರಮಾಪ್ತ ಮಹದೇವಪ್ಪನವರೂ ಇದ್ಧಾರೆ.



