ಸಿಎಂ ಡಿಕೆ ಶಿವಕುಮಾರ್ ಅವರಿಗೆ ವರ ಕೊಟ್ಟಿರುವುದು ದೇವರು ಮಾತ್ರ. ಹೌದು, ಅವರಿಗೆ ಪಕ್ಷದ ಹೈಕಮಾಂಡ್ ಆಗಲಿ, ಮೊನ್ನೆ ಮೊನ್ನೆವರೆಗೂ ಅವರೇ ಸಹಕಾರ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಆಗಲಿ, ಜೊತೆಗೆ ನಿಂತಿದ್ದ ಗೆಳೆಯರಾಗಲೀ ವರ ಕೊಟ್ಟಿಲ್ಲ. ಬದಲಿಗೆ ಶಾಕ್ ಮೇಲೆ ಶಾಕ್ ಕೊಟ್ಟಿದ್ಧಾರೆ. ಆದರೆ ದೇವರು ಮಾತ್ರ ವರ ಕೊಟ್ಟಿದ್ಧಾನೆ.
ತಮಿಳುನಾಡು ಮತ್ತು ಕರ್ನಾಟಕ ನಡುವಿನ ಕಾವೇರಿ ನೀರು ಹಂಚಿಕೆ ವಿವಾದ ಇನ್ನುವರೆಗೂ ಸಂಪೂರ್ಣವಾಗಿ ಪರಿಹಾರವಾಗಿಲ್ಲ. ಎರಡೂ ರಾಜ್ಯಗಳ ನಡುವೆ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಕಾನೂನು ಮತ್ತು ರಾಜಕೀಯ ಹೋರಾಟಗಳು ನಿರಂತರವಾಗಿ ಮುಂದುವರಿಯುತ್ತಲೇ ಇವೆ. ಆದರೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಡಿಕೆ ಶಿವಕುಮಾರ್ ಅವರನ್ನು ನಿರಾಳವಾಗುವಂತೆ ಮಾಡಿದೆ.
ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ತಮಿಳುನಾಡಿಗೆ ಪ್ರತಿದಿನ 3,500 ಕ್ಯುಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಆದೇಶ ನೀಡಿದ್ದವು. ಇದೀಗ ತಮಿಳುನಾಡಿಗೆ ಮಂಗಳವಾರ 3,000 ಕ್ಯೂಸೆಕ್ ನೀರು ಬಿಡುತ್ತೇವೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕೇರಳದ ಜಲಾನಯನ ಪ್ರದೇಶಗಳಲ್ಲಿ (ವಿಶೇಷವಾಗಿ ವೈನಾಡು) ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜಲಾಶಯಗಳಿಗೆ ಭಾರಿ ಪ್ರಮಾಣದ ನೀರು ಹರಿದುಬರುತ್ತಿದೆ. ಇದರಿಂದಾಗಿ ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ.
ಕಬಿನಿ ಜಲಾಶಯದಲ್ಲಿ 27,115 ಕ್ಯೂಸೆಕ್ ಒಳಹರಿವಿದ್ದು, ಮಳೆಯಿಂದಾಗಿ ಭರ್ತಿಯಾಗಿದೆ. ನದಿ ಪಾತ್ರಕ್ಕೆ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ.
ಕೆಆರ್‌ಎಸ್‌ನಲ್ಲಿ 31,583 ಕ್ಯೂಸೆಕ್ ಒಳಹರಿವಿದೆ. ಕೊಡಗು ಮತ್ತು ದಕ್ಷಿಣ ಕರ್ನಾಟಕದ ಮಳೆಯಿಂದಾಗಿ ನೀರಿನ ಮಟ್ಟ 100 ಅಡಿಗಳ ಗಡಿಯನ್ನು ದಾಟಿದೆ. ಇನ್ನು 10 ಅಡಿ ನೀರು ಬಂದರೆ ಸಾಕು, ಮಂಡ್ಯ ಭಾಗದ ಜನ ಒಂದು ಬೆಳೆ ಬೆಳೆಯಬಹುದು. ಸಾಮಾನ್ಯವಾಗಿ 2 ಬೆಳೆ ತೆಗೆಯುತ್ತಿದ್ದವರು ಈ ಬಾರಿ ಒಂದು ಬೆಳೆ ಬೆಳೆಯುವುದಕ್ಕೆ ಅಡ್ಡಿ ಇಲ್ಲ. ಆದರೆ ಕಬ್ಬು ಬೆಳೆದವರು ಕಷ್ಟ ಪಡಲೇಬೇಕು.
ಹೇಮಾವತಿಗೆ 11,884 ಕ್ಯೂಸೆಕ್ ನೀರು ಬರುತ್ತಿದೆ. ಕಾರಣ ಮೂಡಿಗೆರೆ ಮತ್ತು ಸಕಲೇಶಪುರ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ.
ಹಾರಂಗಿಗೆ 10,430 ಕ್ಯೂಸೆಕ್ ಒಳಹರಿವು ಬರುತ್ತಿದೆ. ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯವು ಶೇ. 95 ರಷ್ಟು ಭರ್ತಿಯಾಗಿದೆ.
ಹಾರಂಗಿಯಿಂದ ನೀರು ಬಿಡಲಾಗುತ್ತಿದ್ದು, ಯಾವ ರೀತಿಯಲ್ಲಿ ಲೆಕ್ಕ ಹಾಕಿದರೂ ಅದು 3,500 ಕ್ಯುಸೆಕ್‌ಗಳಿಗಿಂತ ಹೆಚ್ಚೇ ನೀರು ಹೋಗಲಿದೆ. ಹೀಗಾಗಿಯೇ ದೇವರು ಡಿಕೆ ಶಿವಕುಮಾರ್ ಜೊತೆಯಲ್ಲಿದ್ದಾನೆ.
ಕೇರಳದ ವೈನಾಡು ಭಾಗದಲ್ಲಿ ಸುರಿಯುತ್ತಿರುವ ನಿರಂತರ ಮಳೆಯು ಕಬಿನಿ ನದಿಯ ಮೂಲಕ ನೇರವಾಗಿ ಕರ್ನಾಟಕದ ಕಬಿನಿ ಜಲಾಶಯವನ್ನು ತಲುಪುತ್ತಿದೆ. ಜಲಾಶಯಗಳು ಭರ್ತಿಯಾಗುತ್ತಿರುವುದರಿಂದ ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಲಾಗುತ್ತಿದ್ದು, ಇದು ಕಾವೇರಿ ನೀರು ಹಂಚಿಕೆ ವಿವಾದದ ರಾಜಕೀಯ ಒತ್ತಡವನ್ನು ಸದ್ಯಕ್ಕೆ ಸ್ವಲ್ಪ ಮಟ್ಟಿಗೆ ತಗ್ಗಿಸಿದೆ.



