ಬಿಡದಿ ಟೌನ್ ಶಿಪ್ ವಿರೋಧಿ ಹೋರಾಟ ನೋಡ ನೋಡುತ್ತಲೇ ದೊಡ್ಡದಾಗಿ ಬೆಳೆಯುತ್ತಿದೆ. ಸಿಎಂ ಡಿಕೆ ಶಿವಕುಮಾರ್ ಹಠಕ್ಕೆ ಬಿದ್ದಿದ್ದಾರೆ. ರೈತರ ವಿರೋಧ, ಪ್ರತಿಭಟನೆ, ಟೀಕೆ ಯಾವುದನ್ನೂ ಕೇಳುತ್ತಿಲ್ಲ. ಡೋಂಟ್ ಕೇರ್ ವರ್ತನೆ. ಇಷ್ಟೆಲ್ಲದರ ನಡುವೆ ಕುಮಾರಸ್ವಾಮಿ ಅವರು ಮಾಡಿರುವ ಒಂದು ಆರೋಪ ವಿಚಿತ್ರ ಕುತೂಹಲ ಮೂಡಿಸಿದೆ. ಅದು ʻನಾಗರಬಾವಿ ಬಾಡಿಗೆ ಮನೆಯಲ್ಲಿ ಡೀಲಿಂಗ್ ದಂಧೆʼ ಆರೋಪ. ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ನಡುವಿನ ಪಂಥಾಹ್ವಾನ ಚರ್ಚೆಯ ನಡುವೆ ಈ ಮುಖ್ಯ ಅಂಶ ಕಳೆದೇ ಹೋಗಿದೆ ಎನ್ನುವುದು ಸತ್ಯ. ಅಷ್ಟೇ ಅಲ್ಲ, ಇನ್ನೂ ಕೆಲವು ಸ್ಫೋಟಕ ಸತ್ಯಗಳನ್ನು ದಾಖಲೆ ಸಮೇತ ಹೇಳಿದ್ಧಾರೆ.
ಬಾಡಿಗೆ ಮನೆಯಲ್ಲಿ ದಂಧೆ :
ʻನಾಗರಬಾವಿಯ ಬಾಡಿಗೆ ಮನೆಯಲ್ಲಿ ದಂಧೆ ನಡೆಯುತ್ತಿದೆ. ಕೆಲವು ಪುಡಾರಿಗಳು, ಕಿಂಗ್ ಪಿನ್ ಚೇಲಾಗಳು ನಾಗರಬಾವಿಯ ಬಾಡಿಗೆ ಮನೆಯಲ್ಲಿ ಕುಳಿತು ಡೀಲ್ ಮಾಡ್ತಿದ್ದಾರೆ. ವಿಧಾನಸೌಧದಲ್ಲೋ, ರಾಮನಗರದ ಕಚೇರಿಯಲ್ಲೋ ಕೆಲಸಗಳು ನಡೆದರೆ ಕುಮಾರಸ್ವಾಮಿ ಗೊತ್ತಾಗುತ್ತದೆ ಎಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆʼ ಎಂದು ಆರೋಪಿಸಿದ್ದಾರೆ ಕುಮಾರಸ್ವಾಮಿ. ಕುಮಾರಸ್ವಾಮಿಯವರ ಹಿಸ್ಟರಿ ಚೆಕ್ ಮಾಡಿದರೆ ಅವರು ಸುಖಾಸುಮ್ಮನೆ ಆರೋಪ ಮಾಡುವುದಿಲ್ಲ. ಕೆಲವೊಮ್ಮೆ ಸಾಕ್ಷಿ ಸಿಗದೇ ಹೋಗಬಹುದು, ಕೆಲವೊಮ್ಮೆ ಹಿಟ್ & ರನ್ ಆಗಬಹುದು. ಆದರೆ ಕುಮಾರಸ್ವಾಮಿ ಮಾತುಗಳನ್ನು ತಳ್ಳಿ ಹಾಕೋದಕ್ಕೆ ಸಾಧ್ಯವಂತೂ ಇರಲ್ಲ.
ಟೌನ್ ಶಿಪ್ ಯೋಜನೆಗೆ ಸಿದ್ದರಾಮಯ್ಯ, ಖರ್ಗೆ, ಡಿಕೆಶಿ ವಿರೋಧ :
ಈ ವೇಳೆ ಬಿಡದಿ ಟೌನ್ ಶಿಪ್ ಯೋಜನೆಗೆ ಪ್ಲಾನ್ ಮಾಡಿದ್ದು ತಾನೇ ಎಂಬುದನ್ನು ಒಪ್ಪಿಕೊಂಡಿರುವ ಕುಮಾರಸ್ವಾಮಿ, ರೈತರ ವಿರೋಧ ಬಂದಾಗ ಆ ಯೋಜನೆಯಿಂದ ಹಿಂದೆ ಸರಿದಿದ್ದೆ ಎಂದೂ ಹೇಳಿದ್ಧಾರೆ. 2007ರ ಜುಲೈನಲ್ಲಿ ನಡೆದ ವಿಧಾನಸಭಾ ಕಲಾಪದ ಚರ್ಚೆಗಳನ್ನು ನೆನಪಿಸಿದ ಅವರು, ಅಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಮುಂತಾದವರು ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎಂದು ನೆನಪಿಸಿದ್ದಾರೆ.
ಆಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ʻʻರಾಮನಗರದ ಎಲ್ಲಾ ರೈತರು ಭೂಮಿ ನೀಡಲು ಒಪ್ಪಿದ್ದಾರಾ?. ಹಲವು ರೈತರು ನಾವು ಜಮೀನು ಕೊಡುವುದಿಲ್ಲ ಅನ್ನುತ್ತಿದ್ದಾರೆ. ಆ ಜಮೀನಿನಲ್ಲಿ ಸಾಕಷ್ಟು ಕೃಷಿ ಬೆಳೆಗಳಿವೆ. ಆದರೆ, ಯಾರೋ ಟೌನ್ ಶಿಪ್ ಮಾಡಲು ಹೊರಟಿದ್ದಾರೆ. ರೈತರ ಭೂಮಿ ಲಪಟಾಯಿಸಲಾಗುತ್ತಿದೆ. ಅಧಿಕಾರಿಗಳು ಇದಕ್ಕೂ ಮನ್ನಣೆ ಕೊಡಬಾರದುʼʼ ಎಂದಿದ್ದರು. ದಾಖಲೆ ಮರೆತಿದ್ದರೆ ವಿಧಾನಸಭೆಯ ಅಧಿವೇಶನದ ಕಲಾಪಗಳಲ್ಲಿ ಇದೆ ಎಂದು ಹೇಳಿದ್ಧಾರೆ.
ಯಡಿಯೂರಪ್ಪ ಅವಧಿಯಲ್ಲಿ ಬಿಡ್ಡಿಂಗ್ ವಾಪಸ್ :
ರಾಷ್ಟ್ರಪತಿ ಆಡಳಿತ ಇದ್ದಾಗ ಯೋಜನೆ ಸಂಬಂಧ ಅಂದು ನಡೆದ ಬಿಡ್ಡಿಂಗ್ನಲ್ಲಿ ಡಿಎಲ್ಎಫ್ ಸಂಸ್ಥೆ ಮಾತ್ರ ಬಿಡ್ಡಿಂಗ್ ಆಗಿತ್ತು. ಆದರೆ ಯಡಿಯೂರಪ್ಪ ಅವಧಿಯಲ್ಲಿ ಡಿಎಲ್ಎಫ್ ಆ ಹಣವನ್ನು ವಾಪಸು ಪಡೆದು, ಯೋಜನೆಯಿಂದ ಹಿಂದೆ ಸರಿಯಿತು ಎಂದು ವಿವರ ಕೊಟ್ಟಿದ್ಧಾರೆ ಕುಮಾರಸ್ವಾಮಿ.
ರೈತರ ಭೂಮಿಗೆ 2 ಕೋಟಿ, ಈಗಲ್ ಟನ್ ಖರಾಬು ಭೂಮಿಗೆ 12 ಕೋಟಿ.
ರೈತರ ಭೂಮಿ ಸ್ವಾಧೀನಕ್ಕೆ 2 ಕೋಟಿ ನಿಗದಿ ಮಾಡಿರುವ ಇದೇ ಸರ್ಕಾರ ಈಗಲ್ ಟನ್ಗೆ ಖರಾಬು ಭೂಮಿಗೆ 12 ಕೋಟಿ ಪರಿಹಾರ ನಿಗದಿ ಮಾಡಿದ್ದಾರೆ. ಈಗಲ್ ಟನ್ ರೆಸಾರ್ಟ್‌ಗೂ ಡಿಕೆಗೂ ಏನು ಸಂಬಂಧ ಎನ್ನುವುದು ಕುಮಾರಸ್ವಾಮಿ ಪ್ರಶ್ನೆ.
ರೈತರಿಗೆ ಒಬ್ಬರಿಗಾದರೂ ಉತ್ತರ ಕೊಟ್ಟಿದ್ದೀರಾ..?
ಬಹಳಷ್ಟು ರೈತರು ಭೂಮಿ ಕೊಡಲು ಒಪ್ಪಿಕೊಂಡಿದ್ದಾರೆ ಎಂದು ಕ್ಯಾಬಿನೆಟ್ ನೋಟ್ನಲ್ಲಿ ಹೇಳಿದ್ದಾರೆ. ನಾಲ್ಕು ಸಾವಿರಕ್ಕೂ ಹೆಚ್ಚು ರೈತರಿಂದ ಆಕ್ಷೇಪ ಬಂದಿದೆ. ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ದಿನದಿಂದ ಇಲ್ಲಿಯವರೆಗೆ 4 ಸಾವಿರಕ್ಕೂ ಹೆಚ್ಚು ರೈತರು ಆಕ್ಷೇಪಣೆ ಸಲ್ಲಿಸಿದ್ದಾರೆ. ಒಬ್ಬರಿಗೂ ಉತ್ತರ ಕೊಟ್ಟಿಲ್ಲ. ಇದೇನಾ ಪ್ರಜಾ ಸೇವೆ ಇಲಾಖೆಯ ಕೆಲಸ ಮಾಡುವ ಕಾರ್ಯ ವೈಖರಿ?. ನೈಸ್ ಕಂಪನಿಯವರು ಇನ್ನೂ ಅಭಿವೃದ್ಧಿ ಹೊಂದಿದ ನಿವೇಶನವನ್ನು ರೈತರಿಗೆ ಕೊಟ್ಟಿಲ್ಲ. 30 ವರ್ಷವಾದರೂ ಸೈಟ್ ಕೊಟ್ಟಿಲ್ಲ. ಈಗ ನಿಮ್ಮನ್ನು ಏಕೆ ನಂಬಬೇಕು?. ನೈಸ್ ಕಂಪನಿಯ ಪಿತಾಮಹ ಇದೇ ಡಿಕೆಶಿ ಎಂದು ಆರೋಪಿಸಿದ್ಧಾರೆ.
ಹಳೇ ಯೋಜನೆಯನ್ನೇ ಮುಗಿಸಿಲ್ಲ.. ಇದೇಕೆ..?
ಬೆಂಗಳೂರಲ್ಲಿ 5 ಬಡಾವಣೆ ಘೋಷಣೆ ಮಾಡಿದ್ದವರು ಕುಮಾರಸ್ವಾಮಿ. ಶಿವರಾಮ್ ಕಾರಂತ, ಕೆಂಪೇಗೌಡ ಬಡಾವಣೆ ಸೇರಿದಂತೆ ಐದು ಬಡಾವಣೆ ರಚನೆಗೆ ತೀರ್ಮಾನಿಸಲಾಗಿತ್ತು. ಆ ಬಡಾವಣೆಯನ್ನೇ ಇನ್ನೂ ಮುಗಿಸಿಲ್ಲ. ಹೀಗಿರುವಾಗಲೇ ಟೌನ್ ಶಿಪ್ ಯೋಜನೆಗೆ ಮುಂದಾಗಿದ್ದಾರೆ. ಸ್ತುತ ಸರ್ಕಾರ ಜಾರಿಗೆ ತರುತ್ತಿರುವ 18,133 ಕೋಟಿ ರೂ. ವೆಚ್ಚದ ಈ ಯೋಜನೆಯು ಸಾರ್ವಜನಿಕ ಹಿತಾಸಕ್ತಿಯದ್ದಲ್ಲ, ಬದಲಿಗೆ ಭೂ ಮಾಫಿಯಾ ಮತ್ತು ರಿಯಲ್ ಎಸ್ಟೇಟ್ ದಂಧೆಕೋರರ ಜೇಬು ತುಂಬಿಸುವ ತಂತ್ರವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.



