ಕರ್ನಾಟಕ ರಾಜ್ಯ ಬಿಜೆಪಿ ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಮೀಡಿಯಾಗಳ ಮುಂದೆ ಹೇಳಿಕೆ ಕೊಡುವುದು ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕುವುದು ಬಿಟ್ಟರೆ ಮತ್ತೇನೂ ಮಾಡುತ್ತಿಲ್ಲ. ದುರ್ಬಲ ಪ್ರತಿಪಕ್ಷ ಎಂದೆಲ್ಲ ಟೀಕೆಗಳಿವೆ ನಿಜ. ಆದರೆ ಇದರಲ್ಲಿ ರಾಜ್ಯ ಬಿಜೆಪಿ ನಾಯಕರ ಕೊಡುಗೆ ಎಷ್ಟಿದೆಯೋ, ಅಷ್ಟೇ ದೊಡ್ಡ ಪಾಲು ಹೈಕಮಾಂಡ್ ನಾಯಕರದ್ದೂ ಇದೆ. ಈಗ ಆಗಿರುವ ಅಡ್ಡ ಮತದಾನದ ರಗಳೆ ಅದಕ್ಕೊಂದು ಹೊಸ ಸೇರ್ಪಡೆ ಅಷ್ಟೇ. ಇದನ್ನೆಲ್ಲ ಸುಮ್ಮನೆ ಹೇಳುತ್ತಿಲ್ಲ, ಪ್ರತಿಯೊಂದಕ್ಕೂ ಕಾರಣಗಳಿವೆ. ವಿಜಯೇಂದ್ರ ಅಥವಾ ಅಶೋಕ್ ಅವರಿಗೆ ಯಾವ ತೀರ್ಮಾನವನ್ನೂ ತೆಗೆದುಕೊಳ್ಳುವುದಕ್ಕೆ ಬ್ರೇಕ್ ಹಾಕುತ್ತಲೇ ಬಂದಿರುವ ಹೈಕಮಾಂಡ್, ತನ್ನ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ನಿಗೂಢವಾಗಿಯೇ ಇಟ್ಟಿದೆ. ಇದರಿಂದ ವೀಕ್ ಆಗುತ್ತಿರುವುದು ವಿಜಯೇಂದ್ರರೂ ಅಲ್ಲ, ಅಶೋಕ್ ಅವರೂ ಅಲ್ಲ. ರಾಜ್ಯ ಬಿಜೆಪಿ. ನೀವೇ ನೋಡಿ..
ಇದೀಗ ತಾನೇ ಮುಗಿದಿರುವ ವಿಧಾನಪರಿಷತ್ ಚುನಾವಣೆಗೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಕಳುಹಿಸಿದ್ದ ಪ್ರಮುಖ ನಾಯಕರ ಹೆಸರುಗಳ ಪಟ್ಟಿಯಲ್ಲಿ ಒಂದೇ ಒಂದು ಹೆಸರಿಗೂ ಹೈಕಮಾಂಡ್ ಎಸ್ ಎನ್ನಲಿಲ್ಲ. ರಾಜ್ಯ ಬಿಜೆಪಿಯ ನಾಯಕರಿಗೇ ಗೊತ್ತಿಲ್ಲದ, ಕೆಲವರಿಗಷ್ಟೇ ವೈಯಕ್ತಿಕವಾಗಿ ಪರಿಚಯ ಇರುವವರಿಗೆ ಟಿಕೆಟ್ ಕೊಟ್ಟಿತ್ತು. ರಾಜ್ಯ ನಾಯಕರಿಗೆ ಯಾವುದೇ ಮುನ್ಸೂಚನೆ ನೀಡದೆ, ಪಕ್ಷದ ತಳಮಟ್ಟದ ಕಾರ್ಯಕರ್ತರಿಗೆ ಟಿಕೆಟ್ ನೀಡುವುದು ಓಕೆ, ಆದರೆ ಅಂತಹದ್ದೊಂದು ಸೂಚನೆ ಅಥವಾ ಸುಳಿವನ್ನೂ ಹೈಕಮಾಂಡ್ ನೀಡುವುದಿಲ್ಲ. ಹೀಗಾದರೆ ರಾಜ್ಯ ನಾಯಕರು ಯಾಕೆ ಕೆಲಸ ಮಾಡಬೇಕು ಎಂಬ ಭಾವನೆ ಬರುವುದು ಸಹಜ.
ಹೈಕಮಾಂಡ್ ಇದನ್ನು ಯಾವುದೋ ಒಂದು ಪ್ರಕರಣದಲ್ಲಿ ಮಾಡುತ್ತಿಲ್ಲ. ಅದಕ್ಕೆ ಇತಿಹಾಸವೇ ಇದೆ. ಲೋಕಸಭೆ ಚುನಾವಣೆ ವೇಳೆ ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಟಿಕೆಟ್ ನೀಡಿದ್ದು, ಹಾಲಿ ಸಂಸದರಾಗಿದ್ದ ಅನಂತಕುಮಾರ್ ಹೆಗಡೆ ಅವರಿಗೆ ಟಿಕೆಟ್ ತಪ್ಪಿಸಿ, ಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಉತ್ತರ ಕನ್ನಡ ಕ್ಷೇತ್ರದ ಲೋಕಸಭೆ ಟಿಕೆಟ್ ನೀಡಿದ್ದು, ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಬದಲಿಗೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಟಿಕೆಟ್ ಕೊಟ್ಟಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸ್ಥಳೀಯವಾಗಿ ಗುರುತಿಸಿಕೊಂಡಿದ್ದ ಪ್ರಭಾವಿ ರಾಜಕಾರಣಿಗಳ ಹೆಸರುಗಳನ್ನು ಬಿಟ್ಟು, ರಾಜಕೀಯ ಹಿನ್ನೆಲೆಯೇ ಇಲ್ಲದ, ನಿವೃತ್ತ ಸೇನಾ ಅಧಿಕಾರಿ ಬ್ರಿಗೇಡಿಯರ್ ಪಿ. ಟಿ. ಪರಮೇಶ್ವರ್ ಅವರಿಗೆ ದಿಢೀರ್ ಟಿಕೆಟ್ ನೀಡಿದ್ದು.. ಹೀಗೆ ಪಟ್ಟಿಗಳನ್ನು ಮಾಡುತ್ತಾ ಹೋಗಬಹುದು.
ಇದು ಕೇವಲ ಒಮ್ಮೆ ಆಗಿರುವ ಬೆಳವಣಿಗೆ ಅಲ್ಲ, ಇಲ್ಲಿನ ಪಟ್ಟಿ ನೋಡಿದರೆ ಅರ್ಥವಾಗುತ್ತದೆ. ಹೈಕಮಾಂಡ್ ಎಲ್ಲವನ್ನೂ ತಾನು ನಿರ್ಧಾರ ಮಾಡಿ, ಹೆಸರಿಗೆ ಮಾತ್ರವೇ ನೀವೊಂದು ಲಿಸ್ಟ್ ಕಳಿಸಿ ಎನ್ನುವುದಾದರೆ ರಾಜ್ಯ ಬಿಜೆಪಿ ನಾಯಕರಿಗೆ ಯಾಕಾದರೂ ಕೆಲಸ ಮಾಡಬೇಕು ಎನಿಸುವುದಿಲ್ಲವೇ..? ಈಗ ಆಗಿರುವುದೇ ಇದು.
ಅಷ್ಟೇ ಅಲ್ಲ, ರಾಜ್ಯ ಬಿಜೆಪಿ ನಾಯಕರು ಹೋರಾಟವನ್ನು ಘೋಷಿಸಿ ರೂಪುರೇಷೆ ನಿರ್ಧಾರ ಮಾಡುವುದಕ್ಕೂ ಹೈಕಮಾಂಡ್ ನಾಯಕರು ಮೀನಾಮೇಷ ಎಣಿಸುತ್ತಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಿಂದ ಮೈಸೂರಿಗೆ ಬೃಹತ್ ಪಾದಯಾತ್ರೆ ನಡೆಸಲು ಮುಂದಾಗಿದ್ದ ವಿಜಯೇಂದ್ರ ಅವರಿಗೆ ಕ್ಷಣವೇ ಅನುಮತಿ ನೀಡದೆ, ಉಭಯ ನಾಯಕರನ್ನು ದೆಹಲಿಗೆ ಕರೆಸಿಕೊಂಡು ಸುದೀರ್ಘ ಚರ್ಚೆ ನಡೆಸಿ, ದಿನಾಂಕಗಳನ್ನು ಮುಂದೂಡುವಂತೆ ಸೂಚಿಸಿ ಅನುಮತಿಯನ್ನು ಸಾಕಷ್ಟು ವಿಳಂಬ ಮಾಡಿದ್ದರು. ಅದಕ್ಕೆ ಕಾರಣ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ವಿರೋಧ ಮಾಡಿದ್ದು.
ಇನ್ನು ವಾಲ್ಮೀಕಿ ನಿಗಮದ ಹಗರಣದ ರಾಜ್ಯಮಟ್ಟದ ಪ್ರತಿಭಟನೆ ವಿಷಯವೂ ಅಷ್ಟೇ.. ಹೋರಾಟದ ನೇತೃತ್ವವನ್ನು ಕೇವಲ ವಿಜಯೇಂದ್ರ ಮತ್ತು ಅಶೋಕ್ ಅವರೇ ವಹಿಸಿಕೊಳ್ಳುತ್ತಿರುವುದಕ್ಕೆ ಪಕ್ಷದ ರೆಬಲ್ ಟೀಂ ಅಸಮಾಧಾನ ವ್ಯಕ್ತಪಡಿಸಿತು. ಹೈಕಮಾಂಡ್ ಎಲ್ಲ ನಾಯಕರನ್ನು ಒಟ್ಟಾಗಿ ಕರೆದೊಯ್ಯುವ “ಸಮೂಹ ನಾಯಕತ್ವ” (Collective Leadership) ಪ್ರದರ್ಶಿಸುವಂತೆ ಹೈಕಮಾಂಡ್ ತಾಕೀತು ಮಾಡಿತು. ವಿಶೇಷ ಎಂದರೆ ಪಾದಯಾತ್ರೆ ಬಳ್ಳಾರಿ ನಗರಕ್ಕೆ ಸೀಮಿತವಾಯ್ತು. ಅನುಮತಿ ಕೊಡುವುದಕ್ಕೇ ವಾರಗಟ್ಟಲೆ ಸಮಯ ವ್ಯರ್ಥ ಮಾಡಿತು.
ಬರ ಮತ್ತು ರೈತರ ಮುಷ್ಕರದ ಹೋರಾಟಗಳಿಗೂ ಅಷ್ಟೇ, ಅಶೋಕ್ ಮತ್ತು ಯತ್ನಾಳ್ ನಡುವಿನ ಸಮನ್ವಯದ ಕೊರತೆ ಕಾರಣ, ಇದನ್ನು ನೀವೇ ಬಗೆಹರಿಸಿಕೊಳ್ಳಿ ಎಂದು ಹೇಳಿದ ಹೈಕಮಾಂಡ್ ಅನುಮತಿ ಕೊಡಲೇ ಇಲ್ಲ.
ಉಚಿತ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸ ಖಾಲಿಯಾಗುತ್ತಿದೆ ಮತ್ತು ಅಭಿವೃದ್ಧಿ ಕುಂಠಿತಗೊಂಡಿದೆ ಎಂಬ ಹೋರಾಟಕ್ಕೆ ಜನಸಾಮಾನ್ಯರ ಆಕ್ರೋಶಕ್ಕೆ ಈಡಾಗಬೇಕಾದೀತು ಎಂದು ಹೇಳಿದ ಹೈಕಮಾಂಡ್, ವಿಳಂಬ ಸೂತ್ರವನ್ನೇ ಅನುಸರಿಸಿತು. ಅದು ಇವತ್ತಿಗೂ ನಡೆದಿಲ್ಲ.
ಇನ್ನು ವಕ್ಫ್ ವಿರುದ್ಧದ ಹೋರಾಟದಲ್ಲೂ ಅಷ್ಟೇ, ಪಕ್ಷದ ನಾಯಕರು ಒಂದು ಹೆಜ್ಜೆ ಇಟ್ಟರೆ, ಇನ್ನೊಂದು ಕಡೆ ಯತ್ನಾಳ್, ರಮೇಶ್ ಜಾರಕಿಹೊಳಿ ಟೀಂ ಬೇರೆಯದೇ ಹೆಜ್ಜೆ ಇಟ್ಟಿತು. ಇದನ್ನು ನಿವಾರಿಸಬೇಕಾದ ಹೈಕಮಾಂಡ್, ನೋಡಿಯೂ ನೋಡದಂತೆ ಸುಮ್ಮನಿತ್ತು. ಕೊನೆಗೆ ಯತ್ನಾಳ್ ಟೀಂ ವರದಿಯನ್ನು ಸ್ವತಃ ಸ್ವೀಕಾರ ಮಾಡಿತು. ಈ ಮೂಲಕ ರಾಜ್ಯಾಧ್ಯಕ್ಷ ವಿಜಯೇಂದ್ರರನ್ನು ಲೆಕ್ಕಕ್ಕಿಲ್ಲ ಎಂಬ ಮೆಸೇಜ್ ಕೊಟ್ಟಿತು.
ಪಟ್ಟಿ ಮಾಡುತ್ತಾ ಹೋದರೆ..ಇಂತಹ ಪ್ರಕರಣಗಳು ಹಲವಾರಿವೆ. ಪಕ್ಷದಲ್ಲಿ ಆಂತರಿಕವಾಗಿ ನಡೆದಿರುವ ಹಲವು ಪ್ರಕರಣಗಳು ಆಚೆ ಬಂದಿಲ್ಲ, ಅಷ್ಟೇ. ಹೈಕಮಾಂಡ್ ಪ್ರತಿಯೊಂದಕ್ಕೂ ಕೊಕ್ಕೆ ಹಾಕುತ್ತಲೇ ಪಕ್ಷವನ್ನು ವೀಕ್ ಮಾಡುತ್ತಿರುವುದು ಗುಟ್ಟೇನಲ್ಲ. ಆದರೆ ಯಾಕೆ.. ಅದು ಅರ್ಥವಾಗುತ್ತಿಲ್ಲ.



