ರಾಜ್ಯದ ನೂತನ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರುವ ಡಿಕೆ ಶಿವಕುಮಾರ್, ತಾವು ಅಧಿಕಾರಕ್ಕೇರಿದ ಕ್ಷಣದಿಂದ ಮೋದಿ ಸೂತ್ರ ತಂತ್ರವನ್ನೇ ಫಾಲೋ ಮಾಡ್ತಿರೋದು ವಿಶೇಷ. ಅದು ಹಲವು ವಿಷಯಗಳಲ್ಲಿ ಸಾಬೀತಾಗಿದೆ. ಇದೀಗ ʻಗಿವ್ ಅಪ್ʼ (Give up) ಮಾಡೆಲ್‌ನ್ನೂ ಫಾಲೋ ಮಾಡ್ತಿದ್ದಾರೆ ಡಿಕೆ ಶಿವಕುಮಾರ್. ನಿಮಗೆ ನೆನಪಿದ್ದರೆ ನರೇಂದ್ರ ಮೋದಿ ಮೊದಲ ಬಾರಿ ಪ್ರಧಾನಿಯಾದಾಗ ವರ್ಷ ತುಂಬುವ ಮೊದಲೇ ‘ಗಿವ್ ಅಪ್’ (Give It Up) ಮಾಡೆಲ್ ಆರಂಭಿಸಿದ್ದರು. ಈಗ ಡಿಕೆ ಶಿವಕುಮಾರ್ ಕೂಡಾ ಅದೇ ಹಾದಿ ಹಿಡಿದಿದ್ದಾರೆ.
2015ರಲ್ಲಿ ಮೋದಿ ಆರಂಭಿಸಿದ್ದ ಗಿವ್ ಅಪ್ ಮಾಡೆಲ್ ಏನು..?
೨೦೧೫ರ ಮಾರ್ಚ್‌ನಲ್ಲಿ ಪ್ರಧಾನಿ ಮೋದಿ ಆರ್ಥಿಕವಾಗಿ ಸದೃಢರಾಗಿರುವ ಜನರು ಎಲ್‌ಪಿಜಿ (LPG) ಅನಿಲ ಸಬ್ಸಿಡಿಯನ್ನು ಸ್ವಯಂಪ್ರೇರಣೆಯಿಂದ ಬಿಟ್ಟುಕೊಡುವಂತೆ ಕರೆ ಕೊಟ್ಟರು. ಈ ಅಭಿಯಾನವು ದೇಶಾದ್ಯಂತ ಭಾರಿ ಜನಮನ್ನಣೆ ಗಳಿಸಿತು ಮತ್ತು ಕೋಟ್ಯಂತರ ಜನರು ಮುಂದೆ ಬಂದು ತಮ್ಮ ಸಬ್ಸಿಡಿಯನ್ನು ತ್ಯಜಿಸಿದರು. ಈ ರೀತಿ ತ್ಯಜಿಸಲಾದ ಸಬ್ಸಿಡಿಯ ಹಣವನ್ನು ನೇರವಾಗಿ ಸರ್ಕಾರದ ‘ಪ್ರಧಾನಮಂತ್ರಿ ಉಜ್ವಲ ಯೋಜನೆ’ಗೆ (Pradhan Mantri Ujjwala Yojana) ಬಳಸಿಕೊಳ್ಳಲಾಯಿತು.
ಈಗ ಬಿಡಿ.. ಈಗ ಸಾಮಾನ್ಯ ಗ್ರಾಹಕರಿಗೆ (ಗಿವ್ ಅಪ್ ಮಾಡದೇ ಇರುವವರಿಗೂ ಸಹ) ಯಾವುದೇ ಸಬ್ಸಿಡಿ ಹಣ ಸಿಗುತ್ತಿಲ್ಲ. ಕೇಂದ್ರ ಸರ್ಕಾರವು ಜೂನ್ 2020 ರಿಂದ ಸಾಮಾನ್ಯ ಗ್ರಾಹಕರಿಗೆ ಎಲ್‌ಪಿಜಿ (LPG) ಸಬ್ಸಿಡಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಪ್ರಸ್ತುತ ಕೇವಲ ‘ಪ್ರಧಾನಮಂತ್ರಿ ಉಜ್ವಲ ಯೋಜನೆ’ (PMUY) ಅಡಿಯಲ್ಲಿ ಉಚಿತ ಗ್ಯಾಸ್ ಸಂಪರ್ಕ ಪಡೆದ ಬಡ ಕುಟುಂಬಗಳಿಗೆ ಮಾತ್ರ ಸಬ್ಸಿಡಿ ನೀಡಲಾಗುತ್ತಿದೆ. ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್‌ಗೆ ₹300 ಸಬ್ಸಿಡಿ ಸಿಗುತ್ತದೆ. ನೀವು ‘ಗಿವ್ ಅಪ್’ ಮಾಡದೇ ಇದ್ದರೂ ಸಹ, ನೀವು ಸಾಮಾನ್ಯ ವರ್ಗದ ಗ್ರಾಹಕರಾಗಿದ್ದರೆ (Ujjwala ಅಲ್ಲದವರು), ನಿಮ್ಮ ಬ್ಯಾಂಕ್ ಖಾತೆಗೆ ಯಾವುದೇ ಸಬ್ಸಿಡಿ ಜಮಾ ಆಗುವುದಿಲ್ಲ. ಪ್ರಸ್ತುತ ಮಾರುಕಟ್ಟೆಯಲ್ಲಿ ಸಿಲಿಂಡರ್ ಬೆಲೆ ಎಷ್ಟಿದೆಯೋ, ಅಷ್ಟೂ ಪೂರ್ಣ ಹಣವನ್ನು (Market Price) ನೀಡಿ ಎಲ್ಲರೂ ಸಿಲಿಂಡರ್ ಖರೀದಿಸಬೇಕಾಗಿದೆ.
ಡಿಕೆ ಶಿವಕುಮಾರ್ ಗಿವ್ ಅಪ್ ಮಾಡೆಲ್ ಏನು..?
ಗ್ಯಾರಂಟಿ ಗಿವ್ ಅಪ್ ಮಾಡಿ. ಇದು ಸಿಎಂ ಡಿಕೆ ಶಿವಕುಮಾರ್ ಪಠಿಸುತ್ತಿರುವ ಮಂತ್ರ. ಅದರ ಪ್ರಕಾರ ಆರ್ಥಿಕವಾಗಿ ಸಬಲವಾಗಿರುವವರು ಗ್ಯಾರಂಟಿ ಯೋಜನೆಯಿಂದ ಹೊರಬರಬೇಕು. ಸ್ಥಿತಿವಂತರು ಗ್ಯಾರಂಟಿ ಲಾಭ ಬಿಟ್ಟುಕೊಟ್ಟರೆ ಅದನ್ನು ಪ್ರೋತ್ಸಾಹ ಮಾಡಬೇಕು. ಜೊತೆಗೆ ಅವರೆಲ್ಲರೂ ಕಡ್ಡಾಯವಾಗಿ ವೋಟರ್ ಐಡಿ ಇಟ್ಟುಕೊಂಡಿರಲೇಬೇಕು. ಇದು ಡಿಕೆ ಶಿವಕುಮಾರ್ ಸೂತ್ರ. ಆದರೆ ಇದನ್ನು ಬಹಿರಂಗವಾಗಿ ಹೇಳುತ್ತಿಲ್ಲ. ಅದಕ್ಕೆ ಅಡ್ಡಿಯಾಗಿರುವುದು ಚುನಾವಣೆಗೆ ಮೊದಲೇ ಹೇಳಿದ್ದ ನಂಗೂ ಫ್ರೀ.. ನಿಂಗೂ ಫ್ರೀ.. ಮಹದೇವಪ್ಪಂಗೂ ಫ್ರೀ.. ಕಾಕಾ ಪಾಟೀಲ್‌ಗೂ ಫ್ರೀ ಎಂದು ಹೇಳಿದ್ದ ಮಾತು.



