ಬಿಡದಿ ಇಂಟಿಗ್ರೇಟೆಡ್ ಟೌನ್‌ಶಿಪ್ (GBIT) ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ರೈತರ ತೀವ್ರ ವಿರೋಧದ ನಡುವೆಯೂ ಮೊದಲ ಹಂತದ ಭೂಸ್ವಾಧೀನಕ್ಕಾಗಿ ಜೂನ್ 2026 ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿದೆ. ಈ ಯೋಜನೆ ಈ ಹಿಂದೆ 2006 ರಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಮೊದಲು ರೂಪಿತಗೊಂಡಿದ್ದು ಸತ್ಯ. ಅಂದಿನ ಕಾಂಗ್ರೆಸ್ ಪಕ್ಷವು ಇದರ ವಿರುದ್ಧ ತನಿಖೆಗಾಗಿ ‘ಸತ್ಯಶೋಧನಾ ಸಮಿತಿ’ ರಚಿಸಿದ್ದೂ ಸತ್ಯ. ಈಗ ಎರಡೂ ಪಕ್ಷಗಳ ವರಸೆ ಬದಲಾಗಿದೆ. ಟೌನ್ ಶಿಪ್ ಯೋಜನೆಗಾಗಿ ಹಠ ಹಿಡಿದಿದ್ದ ಕುಮಾರಸ್ವಾಮಿ ವಿರೋಧಿಸುತ್ತಿದ್ದರೆ, ರೈತರ ಪರವಾಗಿ ನಿಂತು ಹೋರಾಟ ಮಾಡಿದ್ದ ಕಾಂಗ್ರೆಸ್.. ಶತಾಯಗತಾಯ ಯೋಜನೆ ಜಾರಿಗೆ ಬದ್ಧವಾಗಿದೆ. ವಿಶೇಷ ಎಂದರೆ ಕುಮಾರಸ್ವಾಮಿ ಟೌನ್ ಶಿಪ್ ಪ್ರಾಜೆಕ್ಟ್ ಘೋಷಿಸಿದಾಗಲೂ ವಿರೋಧ ಮಾಡಿದ್ದವರು ರೈತರು. ಈಗ ಡಿಕೆ ಶಿವಕುಮಾರ್ ಅವರನ್ನೂ ವಿರೋಧ ಮಾಡಿರುವುದೂ ಇದೇ ರೈತರು. ಅಂದಹಾಗೆ ರೈತರ ಎದುರು ಹೆಚ್ಚು ಆಯ್ಕೆಗಳಿಲ್ಲ. ಸರ್ಕಾರ ಕೊಡು ಎಂದು ಹೇಳಿದೆ. ಅಧಿಸೂಚನೆ ಹೊರಡಿಸಿ ಆಗಿದೆ. ಭೂಮಿಯನ್ನು ಕೊಡಬೇಕು ಅಷ್ಟೇ, ಹೋರಾಟ ಮಾಡಿದರೆ ಕಾನೂನು ಕ್ರಮ ಎದುರಿಸಬೇಕು. ಕೋರ್ಟಿಗೆ ಹೋಗಬೇಕು. ಇಷ್ಟವಿಲ್ಲದಿದ್ದರೆ ಕೋರ್ಟಿಗೆ ಹೋಗಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರೇ ಹೇಳಿಬಿಟ್ಟಿದ್ದಾರೆ.
2006ರಲ್ಲಿ ಕುಮಾರಸ್ವಾಮಿ ಯೋಚನೆ.. ಯೋಜನೆ.. ವಿರೋಧ :
2006 ರಲ್ಲಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರವು ಬಿಡದಿ ಸೇರಿದಂತೆ ಬೆಂಗಳೂರು ಸುತ್ತಮುತ್ತ 5 ಟೌನ್‌ಶಿಪ್‌ಗಳನ್ನು ಘೋಷಿಸಿದಾಗ, ಕಾಂಗ್ರೆಸ್ ನಾಯಕ ಹೆಚ್.ಕೆ. ಪಾಟೀಲ್ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಲಾಗಿತ್ತು. ಆ ವರದಿಯ ಪ್ರಕಾರ..
- ಕುಮಾರಸ್ವಾಮಿ ಸರ್ಕಾರವು ಅಭಿವೃದ್ಧಿಯ ಹೆಸರಿನಲ್ಲಿ ಬೆಂಗಳೂರು ಸುತ್ತಮುತ್ತಲಿನ ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಕಬಳಿಸಲು ರಿಯಲ್ ಎಸ್ಟೇಟ್ ಕಂಪನಿಗಳೊಂದಿಗೆ ಕೈಜೋಡಿಸಿದೆ.
- ಬಿಡದಿ ಟೌನ್‌ಶಿಪ್ ಯೋಜನೆಗಾಗಿ ‘ಡಿಎಲ್‌ಎಫ್’ (DLF) ನಂತಹ ಪ್ರಮುಖ ಖಾಸಗಿ ರಿಯಲ್ ಎಸ್ಟೇಟ್ ಸಂಸ್ಥೆಗೆ ಮಣೆ ಹಾಕಲಾಗಿತ್ತು. ಈ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆದಿದೆ ಮತ್ತು ಅಂದಿನ ಸರ್ಕಾರ ಆ ಕಂಪನಿಯಿಂದ ₹400 ಕೋಟಿ ಮುಂಗಡ ಹಣ ಪಡೆದಿದೆ
- ಯೋಜನಾ ವ್ಯಾಪ್ತಿಯ ಹಳ್ಳಿಗಳಲ್ಲಿ ಯಾವುದೇ ಜನಪ್ರತಿನಿಧಿಗಳ ಅಥವಾ ರೈತರ ಒಪ್ಪಿಗೆ ಪಡೆದಿಲ್ಲ. ಕೃಷಿಯನ್ನೇ ನಂಬಿದವರನ್ನು ಒಕ್ಕಲೆಬ್ಬಿಸಲು ಈ ಯೋಜನೆ ರೂಪಿಸಲಾಗಿದೆ.
ಈಗ ಕುಮಾರಸ್ವಾಮಿ ವಾದ ಏನು..?
“2006 ರಲ್ಲಿ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಲು ನಾನು 5 ಟೌನ್‌ಶಿಪ್‌ಗಳನ್ನು ಘೋಷಿಸಿದ್ದು ನಿಜ. ಆದರೆ, ಬಿಡದಿ ಭಾಗದ ರೈತರು ಅಂದು ನನ್ನ ಬಳಿ ಬಂದು ಜಮೀನು ನೀಡಲು ತೀವ್ರ ವಿರೋಧ ವ್ಯಕ್ತಪಡಿಸಿದ ತಕ್ಷಣವೇ, ರೈತರ ಭಾವನೆಗಳಿಗೆ ಗೌರವ ನೀಡಿ ನಾನು ಆ ಯೋಜನೆಯನ್ನು ತಕ್ಷಣವೇ ಕೈಬಿಟ್ಟಿದ್ದೆ. ಅಂದು ನಾನು ಯೋಜನೆ ರೂಪಿಸಿದಾಗ ರೈತರಿಗೆ ಟೌನ್‌ಶಿಪ್‌ನಲ್ಲಿ ಶೇ. 40 ರಷ್ಟು ಅಭಿವೃದ್ಧಿಪಡಿಸಿದ ಭೂಮಿಯನ್ನು ಒದಗಿಸಲು ಮತ್ತು ರೈತರೊಂದಿಗೆ ಸುದೀರ್ಘ ಚರ್ಚೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರವು ಯಾವುದೇ ಸಾಮಾಜಿಕ ಪರಿಣಾಮಗಳ ಮೌಲ್ಯಮಾಪನ (Social Impact Assessment) ಮಾಡದೆ, ಬಲವಂತವಾಗಿ ಪೊಲೀಸರನ್ನು ಬಳಸಿ ರೈತರನ್ನು ಹೆದರಿಸುತ್ತಿದೆ. ಯೋಜನೆ ಕೇವಲ ಸಾರ್ವಜನಿಕ ಕಲ್ಯಾಣಕ್ಕಾಗಿ ಅಲ್ಲ, ಬದಲಿಗೆ ನಿವೇಶನಗಳ ಮಾರಾಟ ಮತ್ತು ತೆರಿಗೆಯಿಂದ ₹33,000 ಕೋಟಿಗೂ ಅಧಿಕ ಆದಾಯ ಗಳಿಸುವ ಉದ್ದೇಶ ಹೊಂದಿದೆ. ಡಿ.ಕೆ. ಶಿವಕುಮಾರ್ ಸರ್ಕಾರವು ಅಧಿಕೃತವಾಗಿ ‘ರಿಯಲ್ ಎಸ್ಟೇಟ್ ಬ್ರೋಕರ್’ ತರಹ ಕೆಲಸ ಮಾಡುತ್ತಿದೆ.
ಕಾಂಗ್ರೆಸ್ ಈಗ ಉಲ್ಟಾ : ಕಾಂಗ್ರೆಸ್ ನಾಯಕರು ಈಗ ಎಚ್‌ಕೆ ಪಾಟೀಲ್ ಅವರು ಸಲ್ಲಿಸಿದ್ದ ಸತ್ಯಶೋಧನಾ ಸಮಿತಿ ವರದಿಯನ್ನು ಅಪ್ಪಿತಪ್ಪಿಯೂ ನೆನಪಿಸಿಕೊಳ್ಳೋದಿಲ್ಲ. ಇದು ಕುಮಾರಸ್ವಾಮಿ ಅವರದ್ದೇ ಕೂಸು ಎಂದು ಎಸ್ಕೇಪ್ ಆಗುತ್ತಾರೆ. ಸಮರ್ಥನೆಗಾಗಿಯೇ ಕಾಂಗ್ರೆಸ್‌ನ ಕೆಲವು ನಾಯಕರು ಬಿಡದಿ, ರಾಮನಗರಕ್ಕೆ ಬಂದು ಪ್ರತಿದಿನ ಸುದ್ದಿಗೋಷ್ಟಿ ನಡೆಸುತ್ತಿದ್ಧಾರೆ. ಬಿಡದಿ ಹೋಬಳಿಯ ಸುಮಾರು 25 ಹಳ್ಳಿಗಳ ಸಾವಿರಾರು ರೈತರು, ‘ಸಂಯುಕ್ತ ಹೋರಾಟ – ಕರ್ನಾಟಕ’ ಮತ್ತು ‘ಕರ್ನಾಟಕ ಪ್ರಾಂತ ರೈತ ಸಂಘ’ (KPRS) ಮುಖಂಡರ ನೇತೃತ್ವದಲ್ಲಿ ಬೈರಮಂಗಲ ಕ್ರಾಸ್ ಹಾಗೂ ವಿವಿಧೆಡೆ ನಿರಂತರ ಧರಣಿ ನಡೆಸುತ್ತಿದ್ದಾರೆ.
ಆದರೆ ಸರ್ಕಾರಕ್ಕೆ ಹಠಕ್ಕೆ ಬಿದ್ದಿದೆ. ಹೋರಾಟ ಮಾಡಿದರೆ, ಮುಂದುವರೆಸುತ್ತಾ ಹೋದರೆ.. ರೈತರು ಕಾನೂನು ಕ್ರಮ ಎದುರಿಸಬೇಕೇ ಹೊರತು, ಹೋರಾಟಕ್ಕೆ ಗೆಲುವು ಸಿಗುವ ಲಕ್ಷಣಗಳಿಲ್ಲ.



