ಬಿಡದಿ ಬಡಿದಾಟ ಈಗ ಹಾಲಿ ಸಿಎಂ ಡಿಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ನಡುವಿನ ಬಡಿದಾಟವಾಗಿ ಕನ್ವರ್ಟ್ ಆಗಿದೆ. ಅವರಿಗೆ ಇವರು ಸವಾಲ್ ಹಾಕೋದು.. ಇವರಿಗೆ ಅವರು ಸವಾಲ್ ಹಾಕೋದು. ಇದರ ಮಧ್ಯೆ ಸರ್ಕಾರಕ್ಕೆ ರೈತರು ಹಾಕುತ್ತಿರುವ ಸವಾಲ್‌ನ್ನು ಯಾರೂ ಕೇಳ್ತಿಲ್ಲ. ಈ ಯೋಜನೆ ಜಾರಿಗೆ ಬಂದರೆ 1 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತವೆ ಎನ್ನುವುದು ಡಿಕೆ ಶಿವಕುಮಾರ್ ಅವರ ವಾದ. ಆದರೆ ಅದೇ ವೇಳೆ ಇಲ್ಲಿ ಲಾಸ್ ಆಗುವ ಉದ್ಯೋಗಗಳು ಎಷ್ಟು ಎನ್ನುವುದು ಅಷ್ಟೇ ಮುಖ್ಯ ಅಲ್ಲವೇ.. ಹೋಗುವುದು ಕೇವಲ ರೈತರ ಕೆಲಸಗಳಷ್ಟೇ ಅಲ್ಲ..
ಬಿಡದಿ ಟೌನ್ ಶಿಪ್ ಪ್ರಾಜೆಕ್ಟ್ ಏನು..?
9 ಕಂದಾಯ ಗ್ರಾಮಗಳಾದ ಕೆಂಪಯ್ಯನಪಾಳ್ಯ, ಮಂಡಲಹಳ್ಳಿ, ವಡೇರಹಳ್ಳಿ, ಬನ್ನಿಗಿರಿ, ಕಾಂಚುಗಾರನಹಳ್ಳಿ, ಅರಳಾಳುಸಂದ್ರ, ಕೆಜಿ ಗೊಲ್ಲರಪಾಳ್ಯ, ಹೊಸೂರು, ಭೈರಮಂಗಲದ ರೈತರು ಭೂಮಿ ಕಳೆದುಕೊಳ್ತಾರೆ. ಯೋಜನೆಗೆ ವಶ ಪಡಿಸಿಕೊಳ್ಳುತ್ತಿರುವ ಭೂಮಿ ಒಟ್ಟಾರೆ ಅಧಿಕೃತವಾಗಿ 7,481 ಎಕರೆ. ಈ ಟೌನ್ ಶಿಪ್ ಯೋಜನೆಯ ವೆಚ್ಚ 18,133 ಕೋಟಿ ರೂ. ರೈತರ ಭೂಮಿಗೆ ಕೊಡುತ್ತಿರುವ ಪರಿಹಾರ ಪ್ರತಿ ಎಕರೆಗೆ 2.07 ಕೋಟಿಯಿಂದ 2.50 ಕೋಟಿ. ಇದೇ ವೇಳೆ GBA ಯೋಜನೆಗೆ ಎತ್ತುತ್ತಿರುವ ಸಾಲದ ಮೊತ್ತವೇ 7,500 ಕೋಟಿ. ಇಷ್ಟೆಲ್ಲ ಆಗಿ ಈ ಟೌನ್ ಶಿಪ್‌ನಿಂದ ಸುಮಾರು 1 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯ ನಿರೀಕ್ಷೆ ಇದೆ. ಇದು ಕೇವಲ ಆರಂಭಿಕ ಮಾಹಿತಿ ಅಷ್ಟೇ.
ಇಷ್ಟಕ್ಕೂ ಉದ್ಯೋಗ ಯಾರಿಗೆ ಸಿಗಬಹುದು.. ಅದನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಇಲ್ಲಿ ಆಗುವ ಪ್ರಾಜೆಕ್ಟ್ ಏನು ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು.
ಬಿಡದಿ ಟೌನ್ ಶಿಪ್ ಪ್ರಾಜೆಕ್ಟ್ ವಿಶೇಷತೆ ಏನೆಂದರೆ ಇದು ಭಾರತದ ಮೊದಲ ‘AI ಸಿಟಿ’ ಮತ್ತು ಐಟಿ ಹಬ್ ಕಲ್ಪನೆಯಲ್ಲಿ ಅರಳುತ್ತಿರುವ ಪ್ರಾಜೆಕ್ಟ್. ಇಲ್ಲಿ 2 ಸಾವಿರ ಎಕರೆ ಪ್ರದೇಶದಲ್ಲಿ AI ಇಂಡಸ್ಟ್ರಿಯಲ್ ಪಾರ್ಕ್ ಸ್ಥಾಪನೆ ಮಾಡ್ತಾರೆ. ಕೃತಕ ಬುದ್ಧಿಮತ್ತೆ (AI), ರೊಬೊಟಿಕ್ಸ್, ಸೆಮಿಕಂಡಕ್ಟರ್ ಉದ್ಯಮಗಳಿಗೆ ಮೀಸಲು ಇರುವ ಕಂಪೆನಿಗಳು ತಲೆ ಎತ್ತುತ್ತವೆ. ಅದು ಬೆಂಗಳೂರಿನ ಎಂಜಿ ರಸ್ತೆ ಮಾದರಿಯಲ್ಲಿ ರಾಜ್ಯದ 2ನೇ ವಾಣಿಜ್ಯ ಪ್ರದೇಶವಾಗಿ ಅಭಿವೃದ್ಧಿ ಆಗುತ್ತದೆ. ಚಿನ್ನಸ್ವಾಮಿ ಸ್ಟೇಡಿಯಂಗಿಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಕಟ್ಟುವ ಯೋಜನೆ ಜೊತೆಗೆ ಒಲಿಂಪಿಕ್ ತರಬೇತಿಗಾಗಿ ಬೃಹತ್ ಕ್ರೀಡಾ ತರಬೇತಿ ಕೇಂದ್ರ ನಿರ್ಮಿಸುವ ಗುರಿಯೂ ಇದೆ. ರೈತರನ್ನು ಮರೆಯುವುದಿಲ್ಲ. ಬೈರಮಂಗಲ ಕೆರೆ ಪುನಶ್ಚೇತನ ಮತ್ತು ಸಾವಿರ ಎಕರೆಯಲ್ಲಿ ಉದ್ಯಾನವನ ಸ್ಥಾಪನೆಯನ್ನೂ ಮಾಡ್ತಾರೆ. ಸಂಪೂರ್ಣ ಟೌನ್ ಶಿಪ್ ಮಾಲಿನ್ಯ ರಹಿತ ಪರಿಸರ ಸ್ನೇಹಿಯಾಗಿ ನಿರ್ಮಾಣವಾಗುತ್ತದೆ. ಒಟ್ಟಿನಲ್ಲಿ ರೈತರ ಹಸಿರು ಭೂಮಿಯಲ್ಲಿ ಉದ್ಯಮ, ಉದ್ಯೋಗ, ಸ್ಟೇಡಿಯಂ, ಒಲಿಂಪಿಕ್ ತರಬೇತಿ ಕೇಂದ್ರ, ಶಾಪಿಂಗ್ ಮಾಲ್.. ಹೀಗೆ ದೊಡ್ಡದಾಗಿಯೇ ಕಟ್ಟಲಾಗುತ್ತದೆ.
ಟೌನ್ ಶಿಪ್ ಉದ್ಯೋಗಗಳು ಕೇಂದ್ರ ಸ್ಥಾನದಲ್ಲಿ ಸುತ್ತುವುದು AI ಎಂಜಿನಿಯರ್‌ಗಳ ಸುತ್ತ. ಆ ಇಂಡಸ್ಟ್ರಿ 2 ಸಾವಿರ ಎಕರೆಯಲ್ಲಿ ಬರುತ್ತದೆ. ಜೊತೆಗೆ ರೊಬೊಟಿಕ್ಸ್, ಸೆಮಿಕಂಡಕ್ಟರ್ ಪರಿಣಿತರಿಗೆ ಕೆಲಸ ಸಿಗುತ್ತದೆ. ಇವರ ಜೊತೆ ಒಂದು ಟೌನ್ ಶಿಪ್ ಆರಂಭವಾದಾಗ ಶಾಪಿಂಗ್ ಮಾಲ್ ಉದ್ಯೋಗ, ಅದಕ್ಕೆ ಸಂಬಂಧಪಟ್ಟ ಉದ್ಯೋಗಗಳು (ಫ್ಲಂಬರ್ಸ್, ಎಲೆಕ್ಟ್ರಿಷಿಯನ್, ಎಸಿ ರಿಪೇರಿ, ಹಾರ್ಡ್‌ವೇರ್ ಸಿಸ್ಟಂ.. ಇತ್ಯಾದಿ), ಅಂಗಡಿಗಳು, ಬೇಕರಿ, ಜ್ಯೂಸ್ ಸೆಂಟರ್, ಬಾರ್ & ರೆಸ್ಟೋರೆಂಟ್, ಸ್ನೂಕರ್ ಮಾದರಿಯಲ್ಲಿ ಹಲವು ಗೇಮ್.. ತಲೆ ಎತ್ತುತ್ತವೆ. ಎಲ್ಲವೂ ಸೇರಿ ಒಂದು ಲಕ್ಷ ಉದ್ಯೋಗ ಆಗಬಹುದು ಎಂಬುದು ನಿರೀಕ್ಷೆ.
ಈ 1 ಲಕ್ಷ ಉದ್ಯೋಗವೂ ಕನ್ನಡಿಗರಿಗೇ ಸಿಗುತ್ತದೆ ಎಂಬ ಯಾವ ಗ್ಯಾರಂಟಿಯೂ ಇಲ್ಲ. ಬೇರೆ ರಾಜ್ಯದವರು ಬರಬಹುದು.. ಬೇರೆ ದೇಶದವರೂ ಬರಬಹುದು. ಆದರೆ ಇದೇ ಟೌನ್ ಶಿಪ್ ಯೋಜನೆಯಿಂದ ಕೆಲಸ ಕಳೆದುಕೊಳ್ಳೋದು ಯಾರು ಎಂದು ನೋಡಿದರೆ..
ಟೌನ್ ಶಿಪ್ ಯೋಜನೆಯಿಂದ ಕೆಲಸ ಕಳೆದುಕೊಳ್ಳುವವರು
ತೆಂಗು, ಅಡಿಕೆ, ಬಾಳೆ, ಮಾವು, ಹಲಸು, ದಾಳಿಂಬೆ, ಸೀತಾಫಲ, ಸಪೋಟ ಹಣ್ಣಿನ ತೋಟಗಳ ಬೆಳೆಗಾರರು ಮತ್ತು ಮಾರಾಟಗಾರರಿಗೆ ಕೆಲಸ ಹೋಗುತ್ತದೆ.
ರಾಮನಗರ ರೇಷ್ಮೆ ಕೃಷಿಗೆ ಪ್ರಸಿದ್ಧಿ. ಹಿಪ್ಪು ನೇರಳೆ ಬೆಳೆಯುವ ರೇಷ್ಮೆ ಬೆಳೆಗಾರರು ಮನೆ ಮನೆಯಲ್ಲೂ ಇದ್ಧಾರೆ. ಅದಕ್ಕೆ ಸಂಬಂಧಪಟ್ಟಂತೆ ನರ್ಸರಿ ಉದ್ಯಮ ಅಂದರೆ ಉತ್ತಮ ತಳಿಯ ಹಿಪ್ಪುನೇರಳೆ ಕಡ್ಡಿ ಹಾಗೂ ಸಸಿಗಳನ್ನು ಬೆಳೆಸಿ ರೈತರಿಗೆ ಮಾರಾಟ ಮಾಡುವುದು, ಹಿಪ್ಪುನೇರಳೆ ಉಳಿದ ಸೊಪ್ಪು ಮತ್ತು ಹುಳುಗಳ ಮಲವನ್ನು ಬಳಸಿ ಉತ್ತಮ ಗುಣಮಟ್ಟದ ವರ್ಮಿ ಕಾಂಪೋಸ್ಟ್ (ಎರೆಹುಳು ಗೊಬ್ಬರ) ತಯಾರಿಸಿ ಮಾರುವ ಉದ್ಯಮ, : ರೇಷ್ಮೆ ಮೊಟ್ಟೆಗಳನ್ನು ತಂದು ವೈಜ್ಞಾನಿಕವಾಗಿ ಕಾವು ಕೊಟ್ಟು, ಪ್ರಥಮ ಹಾಗೂ ದ್ವಿತೀಯ ಹಂತದ ಜೀವಿಗಳನ್ನು (ಚಾಕಿ ಹುಳು) ಬೆಳೆಸುವ ಉದ್ಯಮ, ರೈತರಿಗೆ ನೇರವಾಗಿ ಚಾಕಿ ಹುಳುಗಳನ್ನು ಪೂರೈಸುವವರು, ರೇಷ್ಮೆ ಗೂಡುಗಳನ್ನು ಬಳಸಿ ಹೂವಿನ ಹಾರ, ಆಟಿಕೆ, ಮತ್ತು ಗೃಹಾಲಂಕಾರಿಕ ವಸ್ತುಗಳನ್ನು ತಯಾರಿಸುವುದು, ರೇಷ್ಮೆ ಸಾಕಾಣಿಕೆಗೆ ಬೇಕಾಗುವ ಚಂದ್ರಿಕೆ, ತಟ್ಟೆಗಳು, ಸ್ಟ್ಯಾಂಡ್ ಹಾಗೂ ತುಂತುರು ನೀರಾವರಿ ಉಪಕರಣಗಳ ತಯಾರಿಕೆ ಮತ್ತು ಮಾರಾಟ ಮಾಡುವ ಉದ್ಯಮ, ಸುಣ್ಣದ ಪುಡಿ, ವಿಜೇತ, ಅಸ್ತ್ರ ಮುಂತಾದ ರೇಷ್ಮೆ ರೋಗನಿರೋಧಕ ಔಷಧಗಳ ವ್ಯವಹಾರ, ಗೂಡುಗಳಿಂದ ರೇಷ್ಮೆ ನೂಲನ್ನು ತೆಗೆಯುವ ಸಣ್ಣ ಪ್ರಮಾಣದ ರೀಲಿಂಗ್ ಯೂನಿಟ್ ಉದ್ಯೋಗಿಗಳುಲ ಕೆಲಸ ಕಳೆದುಕೋಳ್ತಾರೆ.
ರಾಗಿ, ಭತ್ತ, ತೊಗರಿ, ಅಲಸಂದೆ, ಅವರೆಕಾಯಿ, ಜೋಳ, ಶೇಂಗಾ, ಹುರುಳಿ ಬೆಳೆಯುವವರೂ ಇದ್ದಾರೆ. ಗುಲಾಬಿ, ಚೆಂಡು ಹೂವು ಬೆಳೆಯುತ್ತಾರೆ. ಮನೆ ಮನೆಗಳಲ್ಲೂ ಹಸು, ಎಮ್ಮೆ ಸಾಕಿ ಹಾಲು ಮಾರುವವರಿಗೆ ಕೆಲಸ ಇರುವುದಿಲ್ಲ. ಆ ಹಸು, ಎಮ್ಮೆಗಳು ಎಲ್ಲಿಗೆ ಹೋಗುತ್ತವೋ.. ಗೊತ್ತಿಲ್ಲ.
ಅಷ್ಟೇ ಅಲ್ಲ, ಇಲ್ಲಿ ಈಗ ಇರುವ ಬಿಡದಿಯ ತಟ್ಟೆ ಇಡ್ಲಿ ಹೋಟೆಲ್ಲುಗಳು, ಸಣ್ಣ ಸಣ್ಣ ಅಂಗಡಿಗಳು, ಟೈಲರುಗಳು, ಎಲೆಕ್ಟ್ರಿಷಿಯನ್ನುಗಳು, ಆಟೋ, ಟ್ಯಾಕ್ಸಿ ಚಾಲಕರು, ಬೇಕರಿ, ಕಾಂಡಿಮೆಂಟ್ಸ್ ಸೇರಿದಂತೆ 9 ಹಳ್ಳಿಗಳ ಜನರಿಂದ ಬದುಕುತ್ತಿರುವ ಉದ್ಯೋಗಗಳೂ ಹೋಗುತ್ತವೆ.
ಇವರಿಗೆಲ್ಲ ಲಾಸ್ ಆಗುತ್ತೆ. ಉದ್ಯೋಗ ಹೋಗುತ್ತೆ. ಜಸ್ಟ್ ಆಲೋಚನೆ ಮಾಡಿ.. ಹೆಚ್ಚೂ ಕಡಿಮೆ 1 ಲಕ್ಷ ಉದ್ಯೋಗಗಳನ್ನ ಬಂದ್ ಮಾಡಿ, ಒಂದು ಲಕ್ಷ ಉದ್ಯೋಗ ಸೃಷ್ಟಿಸೋದು ಓಕೆ ಓಕೆನಾ..?



