ಕಳೆದ ಲೋಕಸಭಾ ಚುನಾವಣೆಯಲ್ಲಿ ದರ್ಶನ್, ಸುಮಲತಾ ಅಂಬರೀಶ್ ಪರ ಪ್ರಚಾರ ಮಾಡಿದ್ದರು. ಸುಮಲತಾ ಗೆಲುವಿಗೆ ದರ್ಶನ್ ಕೂಡ ಪ್ರಮುಖ ಕಾರಣ. ಈಗ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಯುತ್ತಿದ್ದು, ಸುಮಲತಾ ಬಿಜೆಪಿ ಸೇರಿದ್ದಾರೆ. ಲೋಕಸಭೆ ಅವಧಿ ಮುಗಿಯುವವರೆಗೂ ಅವರು ಬಿಜೆಪಿ ಸದಸ್ಯರಾಗುವುದು ತಾಂತ್ರಿಕವಾಗಿ ಸಾಧ್ಯವಿಲ್ಲ. ಈ ನಡುವೆ ಬಿಜೆಪಿ ಮತ್ತು ಜೆಡಿಎಸ್ ಮಧ್ಯೆ ಮಂಡ್ಯ ಟಿಕೆಟ್ ಯಾವ ಪಕ್ಷಕ್ಕೆ ಎನ್ನುವುದು ಇನ್ನೂ ಬಗೆಹರಿದಿಲ್ಲ. ಕಳೆದ ಬಾರಿ ಪಕ್ಷೇತರರಾಗಿದ್ದ ಸುಮಲತಾ ಅವರ ಪರ ಪ್ರಚಾರ ಮಾಡಿದ್ದ ದರ್ಶನ್, ಈ ಬಾರಿ ಬಿಜೆಪಿ ಪರವಾಗಿ ನಿಂತರೆ ಪ್ರಚಾರ ಮಾಡ್ತಾರಾ ಎಂಬ ಪ್ರಶ್ನೆಗೆ ದರ್ಶನ್ ಉತ್ತರ ಕೊಟ್ಟಿದ್ದಾರೆ.
ಮೊನ್ನೆವರೆಗೂ ಸುಮಲತಾ ಅಮ್ಮನ ಜೊತೆ ಇದ್ದೆ. ಈಗ ಅಮ್ಮನ ಕೈಬಿಟ್ಟರೆ ಆಗುತ್ತಾ. . ಈ ಹಿಂದೆ ಕೂಡ ಅಮ್ಮನ ಜೊತೆನೇ ಇದ್ದೀನಿ. ಈಗ ಒಂದು ಹೇಳ್ತೀನಿ. ನಿಮ್ಮ ಮನೆಯಲ್ಲಿ ನಿಮ್ಮ ತಾಯಿಯನ್ನು ಬಿಟ್ಟು ಬಿಡ್ತೀರಾ..? ಬಿಜೆಪಿಗೆ ಬಂದ ಕೂಡಲೇ ನಿಮ್ಮ ತಾಯಿ ಅಲ್ಲ ಅಂತ ಬಿಟ್ಟುಬಿಡ್ತೀರಾ? ಅಮ್ಮ ಅಮ್ಮನೇ ಸರ್ ಎಂದು ಉತ್ತರ ನೀಡಿದ್ದಾರೆ ದರ್ಶನ್.
ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿ ಕೊರಗಜ್ಜನ ದರ್ಶನ ಪಡೆದ ದರ್ಶನ್, ಆನಂತರ ಮಾಧ್ಯಮದವರಿಗೆ ಸಿಕ್ಕು ಹೀಗೆ ಹೇಳಿದ್ಧಾರೆ.
ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದರೂ ಕರ್ನಾಟಕದಿಂದ ಯಾವುದೇ ಅಭ್ಯರ್ಥಿಗಳ ಟಿಕೆಟ್ ಘೋಷಣೆ ಆಗಿಲ್ಲ. ಆದರೆ, ಜಿದ್ದಾಜಿದ್ದಿನ ಕ್ಷೇತ್ರಗಳಲ್ಲಿ ಒಂದಾಗಿರುವ ಮಂಡ್ಯದ ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ ಭಾರಿ ಕುತೂಹಲ ಮೂಡಿಸಿದೆ. ಎರಡೂ ಪಕ್ಷಗಳ ಕಾರ್ಯಕರ್ತರು ಟಿಕೆಟ್ ಯಾರಿಗೆ ಸಿಗಲಿದೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ಒಂದೆಡೆ, ಜೆಡಿಎಸ್ಗೆ ಮಂಡ್ಯ ಕ್ಷೇತ್ರದ ಟಿಕೆಟ್ ಫಿಕ್ಸ್ ಆಗಿದೆ ಎಂದು ಹೇಳಲಾಗುತ್ತಿದ್ದು, ಹೆಚ್ಡಿ ಕುಮಾರಸ್ವಾಮಿ ಅವರು ಸಭೆಗಳ ಮೇಲೆ ಸಭೆ ನಡೆಸುತ್ತಿದ್ದಾರೆ.
ಇನ್ನೊಂದೆಡೆ, ಕ್ಷೇತ್ರದ ಟಿಕೆಟ್ 100 ಪರ್ಸೆಂಟ್ ನನಗೆ ಸಿಗಲಿದೆ ಎಂದು ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರು ಹೇಳಿದ್ದರು. ರಾಜ್ಯದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವೇಳೆ ನನ್ನ ಹೆಸರು ಇರುತ್ತದೆ ಎಂದು ಸ್ಪಷ್ಟಪಡಿಸಿದ್ದರು.



