ಶಿವಣ್ಣ ಪೈಲ್ವಾನ್ ಪಾತ್ರಕ್ಕೆ ಸೂಟ್ ಆಗ್ತಾರಾ.. ಹಾಗೆ ಪ್ರಶ್ನೆ ಶಿವಣ್ಣನ ಕಟ್ಟಾ ಅಭಿಮಾನಿಗಳು ಕೂಡಾ ಬೇಡ ಅಂತಾರೆ. ಪೈಲ್ವಾನ್ ಪಾತ್ರಕ್ಕೆ ಬೇಕಾದಂತಹ ಕಟ್ಟುಮಸ್ತು ದೇಹ, ಹುರಿ ಮೀಸೆ ಎರಡೂ ಇಲ್ಲದ ಶಿವಣ್ಣನಿಗೆ ಆ ಪಾತ್ರ ಸೂಟ್ ಆಗಲ್ಲ ಅಂತಾರೆ. ಡಾ.ರಾಜ್ ರಣಧೀರ ಕಂಠೀರವ, ಮಯೂರ ಮೊದಲಾದ ಚಿತ್ರಗಳಲ್ಲಿ ಪೈಲ್ವಾನ್ ಪಟ್ಟು ಹಾಕಿದ್ದರು. ಪುನೀತ್ ಪೈಲ್ವಾನ್ ಆಗದೇ ಇದ್ದರೂ, ಕಿಕ್ ಬಾಕ್ಸರ್ ಪಾತ್ರದಲ್ಲಿ ನಟಿಸಿದ್ದರು. ಆದರೆ ಶಿವಣ್ಣ ಪೆದ್ದಿಯಲ್ಲಿ ಪೈಲ್ವಾನ್ ಗುರುವಾಗಿ ಕಾಣಿಸಿಕೊಂಡಿದ್ಧಾರೆ. ಅದೂ ಆಪರೇಷನ್ ಬಳಿಕ.
ಪೆದ್ದಿ ಚಿತ್ರದಲ್ಲಿ ಹೀರೋ ರಾಮ್ ಚರಣ್ ಅವರ ಗುರು ಶಿವಣ್ಣ. ‘ಗೌರ ನಾಯ್ಡು’ ಪಾತ್ರದಲ್ಲಿ ನಟಿಸುತ್ತಿದ್ಧಾರೆ. ದಟ್ಟವಾದ ಮೀಸೆ, ರಗಡ್ ಲುಕ್ ಹಾಗೂ ಗಂಭೀರ ನೋಟದೊಂದಿಗೆ ಶಿವಣ್ಣ ಅವರ ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿತ್ತು. ಇದೀಗ ಮೇಕಿಂಗ್ ವಿಡಿಯೋದಲ್ಲಿ ಶಿವಣ್ಣ ಅವರು ಕುಸ್ತಿಪಟುವೊಬ್ಬನನ್ನು ಎತ್ತಿ ಹಾಕುವ ಸಾಹಸ ದೃಶ್ಯವಿದೆ. ಚಿತ್ರದಲ್ಲಿ ಗೌರ ನಾಯ್ಡು ಅವರ ಗತ್ತು ಮತ್ತು ಆಕ್ಷನ್ ಹೈಲೈಟ್ ಆಗಲಿದೆ. “ಬ್ಯಾಟ್‌ನಿಂದ ಬಾಲ್ ಹೊಡೆದಂಗೆ ಅಲ್ಲ ಇದು.. ಇದು ಸಾವಿಗೆ ಎದೆಯೊಡ್ಡುವ ಆಟ” ಎಂಬ ಡೈಲಾಗ್ ರೋಮಾಂಚನ ಹುಟ್ಟಿಸಿದೆ.
ಪೆದ್ದಿ ಚಿತ್ರದಲ್ಲಿ ರಾಮ್ ಚರಣ್ ಹೀರೋ. ಕ್ರಿಕೆಟ್ ಆಡುವ ಸೀನ್ ಹೈಲೈಟ್ ಆಗಿದ್ದರೂ, ಚಿತ್ರದಲ್ಲಿ ಅವರು ಕುಸ್ತಿ ಪೈಲ್ವಾನ್. ರಾಮ್ ಚರಣ್ ಮತ್ತು ಶಿವಣ್ಣ ಅವರ ನಡುವಿನ ಗುರು-ಶಿಷ್ಯರ ಕೆಮಿಸ್ಟ್ರಿ ಚಿತ್ರದ ಪ್ರಮುಖ ಆಕರ್ಷಣೆಯಾಗಲಿದೆ. ರಾಮ್ ಚರಣ್ ಅವರಿಗೆ ಗುರುವಾಗಿ ನಟಿಸಿರುವುದು ಶಿವರಾಜ್ ಕುಮಾರ್.
ಸಿನಿಮಾ ಸ್ಟಾರ್ಟ್ ಆದಾಗ ಶಿವರಾಜ್ ಕುಮಾರ್ ಅಮೆರಿಕದಲ್ಲಿ ಆಪರೇಷನ್‌ಗೆ ಒಳಗಾಗಿದ್ದರು. ಕಳೆದ ವರ್ಷ ಆಪರೇಷನ್ ಕೂಡಾ ಆಗಿತ್ತು. ಇಡೀ ಕರುನಾಡಿನ ಲಕ್ಷಾಂತರ ಅಭಿಮಾನಿಗಳ ಮನೆ ಮನೆಗಲ್ಲಿ ಶಿವಣ್ಣ ಚೇತರಿಕೆಗೆ ಪ್ರಾರ್ಥನೆ ನಡೆದಿತ್ತು. ಚಿಕಿತ್ಸೆ ನಂತರ ದೇಹದ ತೂಕವೂ ಕೊಂಚ ಇಳಿದಿತ್ತು. ಅಮೆರಿಕಕ್ಕೆ ತೆರಳುವ ಮುನ್ನ ವಾಪಸ್ ಬಂದ ಮೇಲೆ ನೋಡೋಣ ಎಂದು ಹೇಳಿದ್ದರಂತೆಶಿವಣ್ಣ. ವಾಪಸ್ ಬಂದ ಮೇಲೆ ಪೆದ್ದಿ ನಿರ್ದೇಶಕರನ್ನು ಮತ್ತೊಮ್ಮೆ ಮನೆಗೆ ಕರೆಸಿಕೊಂಡಿದ್ದರಂತೆ. ಸಣ್ಣಗಾಗಿರುವ ತಾವು ಪೆದ್ದಿ ಚಿತ್ರದ ಪೈಲ್ವಾನ್ ಪಾತ್ರಕ್ಕೆ ಸೂಟ್ ಆಗುತ್ತೇನೆಯೋ.. ಇಲ್ಲವೋ.. ಇನ್ನೊಮ್ಮೆ ನೋಡಿ ಎಂದಿದ್ದರಂತೆ. ಮತ್ತೊಮ್ಮೆ ಲುಕ್ ಟೆಸ್ಟ್ ಮಾಡಿಸಿದ್ದ ನಿರ್ದೇಶಕರು ನೀವೇ ಮಾಡಬೇಕು ಎಂದು ಹೇಳಿದ್ದರಂತೆ. ಪೆದ್ದಿ ಚಿತ್ರದ ನಿರ್ದೇಶಕ ಸುಕುಮಾರ್ ಶಿಷ್ಯ ಬುಚ್ಚಿಬಾಬು ಸನಾ ಅವರಿಗೆ ಶಿವಣ್ಣ ಅವರೇ ಈ ಪಾತ್ರ ಮಾಡಬೇಕು ಎಂದು ಹಠ ಇತ್ತು. ಹೀಗಾಗಿ ಬುಚ್ಚಿಬಾಬು ಹಿಂದಕ್ಕೆ ಸರಿಯಲಿಲ್ಲ.
‘ಉಪ್ಪೆನ’ ಚಿತ್ರದ ಖ್ಯಾತಿಯ ಬುಚ್ಚಿ ಬಾಬು ಸನಾ ನಿರ್ದೇಶನದ ಚಿತ್ರದಲ್ಲಿ ಬಾಲಿವುಡ್ ನಟಿ ಜಾನ್ವಿ ಕಪೂರ್ ನಾಯಕಿ. ಆಸ್ಕರ್ ವಿಜೇತ ಎ. ಆರ್. ರೆಹಮಾನ್ ಸಂಗೀತ ನೀಡಿದ್ದಾರೆ.
ಕನ್ನಡದಲ್ಲೂ ಡಬ್ ಆಗಿ ಬಿಡುಗಡೆಯಾಗುತ್ತಿರುವ ಈ ಚಿತ್ರದ ಕರ್ನಾಟಕದ ವಿತರಣಾ ಹಕ್ಕನ್ನು ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ದೊಡ್ಡ ಮೊತ್ತಕ್ಕೆ ಖರೀದಿಸಿದೆ.



