ದರ್ಶನ್ ಸಿನಿಮಾ ರಿಲೀಸ್ ಆಗುವುದಕ್ಕೂ ಮೊದಲು ಮಿನಿಮಮ್ ಕಾಂಟ್ರವರ್ಸಿಗಳಿರಬೇಕು ಅನ್ನೋದು ಮತ್ತೆ ಮತ್ತೆ ಪ್ರೂವ್ ಆಗುತ್ತಿದೆ. ಈ ಬಾರಿಯೂ ಅಷ್ಟೇ..ಕಾಟೇರನಿಗೆ ವನ್ಯಜೀವಿ ಸಂರಕ್ಷಣಾ ಒಕ್ಕೂಟದ ಕಾಟ ಶುರುವಾಗಿದೆ. ವಾದದಲ್ಲಿ ಹುರುಳಿದೆಯಾ..? ಅದೇ ಅರ್ಥವಾಗದ ಸಂಗತಿ.
ಕಾಟೇರ. ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದೇ ತಡ. ಸಂಚಲನವನ್ನೇ ಸೃಷ್ಟಿಸಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ನಟ ದರ್ಶನ್ ಅಭಿನಯ, ಮೇಕಿಂಗ್, ಮ್ಯೂಸಿಕ್ ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗಿದೆ. ಆದರೆ ದರ್ಶನ್ ಅವರಿಗೆ ವನ್ಯಜೀವಿ ಸಂರಕ್ಷಣಾ ಒಕ್ಕೂಟದಿಂದ ಸಮಸ್ಯೆ ಎದುರಾಗುವ ಸೂಚನೆಗಳಿವೆ.
ಇವರೆಲ್ಲಾ ಹಾವು ಇದ್ದಂಗೆ. ವಿಷ ಇಲ್ಲಾಂದ್ರೆ ಹಿಡಿಬೇಕು. ವಿಷ ಇದ್ರೆ ಹೊಡಿಬೇಕು” ಟ್ರೇಲರ್ ನಲ್ಲಿ ಕೇಳಿ ಬಂದ ಡೈಲಾಗ್. ಹಾವಿನ ಬಗ್ಗೆ ಹೇಳಿರೋ ಡೈಲಾಗ್ ಇದೀಗ ದರ್ಶನ್‌ಗೆ ಸಂಕಷ್ಟ ತಂದೊಡ್ಡಿದೆ. ದರ್ಶನ್ ಜೀವನ ಶೈಲಿ, ಡೈಲಾಗ್ ಫಾಲೋ ಮಾಡೋ ಕೋಟ್ಯಂತರ ಅಭಿಮಾನಿಗಳಿದ್ದಾರೆ. ದರ್ಶನ ಆಡುವ ಒಂದೊಂದು ಮಾತು ಅಭಿಮಾನಿಗಳು ಅನುಕರಣೆ ಮಾಡ್ತಾರೆ ಅಂತಾದ್ರಲ್ಲಿ ಹಾವಿನ ಬಗ್ಗೆ ಈ ರೀತಿ ಡೈಲಾಗ್ ಹೇಳಿರೋದು ಎಷ್ಟು ಸರಿ ಅಂತಿರೋ ವನ್ಯ ಜೀವಿ ಸಂರಕ್ಷಣಾ ಒಕ್ಕೂಟ ದೂರು ಕೊಡುವ ಸೂಚನೆ ಕೊಟ್ಟಿದೆ.
ಅವರು ಹೇಳೋ ಪ್ರಕಾರ ವಿಷಕಾರಿ ಹಾವುಗಳ ಸಂರಕ್ಷಣೆಗೆ 2021ರಲ್ಲಿ ಕಾನೂನು ರೂಪಿಸಲಾಗಿದೆ. ಇದೀಗ ಸಿನಿಮಾದಲ್ಲಿ ದರ್ಶನ್ ಹೇಳಿರುವ ಡೈಲಾಗ್ ಕಾನೂನಿಗೆ ವಿರುದ್ಧ. ವಿಷಕಾರಿ ಹಾವುಗಳನ್ನು ಉಳಿಸಿಕೊಂಡು ಹೋಗಬೇಕೇ ಹೊರತು ಹೊಡೆದು ಕೊಲ್ಲೋಕೆ ಪ್ರಚೋದನೆ ನೀಡಬಾರದು ಎಂದು ಸಿಎಂ, ಗವರ್ನರ್ʻಗೆ ದೂರು ಕೊಡಲಾಗಿದೆ. ಅಂದಹಾಗೆ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದು ಖುದ್ದು ಸಿಎಂ ಸಿದ್ದರಾಮಯ್ಯ.
ಇದಕ್ಕೆ ಅಭಿಮಾನಿಗಳೇ ಉತ್ತರವನ್ನೂ ಕೊಟ್ಟಿದ್ದಾರೆ. ಚಿತ್ರದಲ್ಲಿ ಯಾವುದೇ ಪ್ರಾಣಿಗಳನ್ನು ಹಿಂಸೆ ಮಾಡಿರುವುದಿಲ್ಲ ಎಂದು ತೋರಿಸಿಯೇ ಸೆನ್ಸಾರ್ ಮಾಡಿಸಿರುತ್ತಾರೆ. ಅಗತ್ಯ ಬಿದ್ದರೆ ಗ್ರಾಫಿಕ್ಸ್ ಮಾಡಿಸುತ್ತಾರೆ. ಇನ್ನು ಚಿತ್ರದಲ್ಲಿನ ಒಂದು ಡೈಲಾಗ್ ಕೇಳಿಕೊಂಡು ಪ್ರಭಾವಿತರಾಗಿ ಸಿಕ್ಕ ಸಿಕ್ಕ ಹಾವುಗಳನ್ನೆಲ್ಲ ಕೊಲ್ಲುತ್ತಾರೆ ಎನ್ನುವುದು ಹಾಸ್ಯಾಸ್ಪದ. ಸಿನಿಮಾದಲ್ಲಿ ಇರುವ ಡೈಲಾಗ್‌ಗೆ ಸಮಸ್ಯೆ ತಂದೊಡ್ಡುತ್ತಾ, ವಿವಾದ ಸೃಷ್ಟಿಸಿ ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರ ಎಂದೇ ವಿಶ್ಲೇಷಿಸಲಾಗುತ್ತಿದೆ. ಇನ್ನು ದರ್ಶನ್ ವನ್ಯಜೀವಿ ಪ್ರೇಮಿ. ರಾಯಭಾರಿಯೂ ಹೌದು. ಈ ರೀತಿಯ ವಿಷಯಗಳಿಗೆಲ್ಲ ಕಿರಿಕ್ಕು ಮಾಡುತ್ತಾ ಹೋದರೆ..ಸಿನಿಮಾ ಮಾಡೋದು ಕಷ್ಟ ಕಷ್ಟ.
ಕೊನೆ ಮಾತು : ಜಗತ್ತಿನ ಎಲ್ಲ ದೇಶಗಳಲ್ಲಿ ಕೊಲೆ ಮಾಡುವುದು ಅಪರಾಧ ಎನ್ನುವ ಕಾನೂನು ಇದೆ. ಸಿನಿಮಾಗಳಲ್ಲಿ ಕೊಲೆ ಮಾಡುವುದನ್ನು ತೋರಿಸುತ್ತಾರೆ. ಸಿನಿಮಾಗಳಲ್ಲಿನ ಕೊಲೆ ನೋಡಿ, ಕೊಲೆ ಮಾಡುವುದಕ್ಕೆ ಜನ ಪ್ರೇರೇಪಣೆ ಪಡೆದುಕೊಂಡರೆ.. ಅತ್ಯಾಚಾರ ಮಾಡಿದರೆ.. ಚುಡಾಯಿಸಿದರೆ.. ಹೊಡೆದಾಡಿದರೆ.. ಇವೆಲ್ಲವೂ ಕಾನೂನಿನ ಪ್ರಕಾರ ತಪ್ಪೇ. ಅಪರಾಧಗಳೇ. ಅಯ್ಯಯ್ಯೋ.. ಕೆಟ್ಟದ್ದು ಎನ್ನುವುದಿದೆಯಲ್ಲ.. ಅದೆಲ್ಲವೂ ಅಪರಾಧ. ಹೀಗೆ ಪ್ರತಿಯೊಂದು ಡೈಲಾಗ್, ದೃಶ್ಯಕ್ಕೂ ಕಿರಿಕ್ಕು ಮಾಡುತ್ತಾ ಹೋದರೆ.. ಜನ ಸಿನಿಮಾನೇ ಮಾಡೋಕಾಗಲ್ಲ.



