ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತ್ ಅವರ ಒಂದು ಹೇಳಿಕೆ ವಿವಾದ ಸೃಷ್ಟಿಸಿದೆ.


ಭಾರತದ ಮುಸ್ಲಿಮರು ಭಯಪಡುವ ಅಗತ್ಯ ಇಲ್ಲ. ಹಿಂದೂಸ್ಥಾನ ಹಿಂದೂಸ್ಥಾನವಾಗಿಯೇ ಉಳಿಯಬೇಕು ಎಂದರೆ ಭಾರತದ ಮುಸ್ಲಿಮರು ತಮ್ಮ ಶ್ರೇಷ್ಟತೆಯ ಭ್ರಮೆ ಬಿಡಬೇಕು. ಮುಸಲ್ಮಾನರಿಗೆ ಭಾರತದಲ್ಲಿ ಯಾವುದೇ ಭಯವಿಲ್ಲ. ಇದು ಆರ್ಗನೈಜರ್ ಹಾಗೂ ಪಾಂಚಜನ್ಯ ಮ್ಯಾಗಜಿನ್`ಗಳಿಗೆ ನೀಡಿದ ಸಂದರ್ಶನದಲ್ಲಿ ಆಯ್ದ ಭಾಗ. ಇದು ವಿವಾದದ ಕಿಡಿ ಹೊತ್ತಿಸಿದೆ.


ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್, ಎಐಎಎಂಎಂ ಮುಖಂಡ ಅಸಾದುದ್ದೀನ್ ಓವೈಸಿ, ಸಿಪಿಎಂ, ಮೊದಲಾದವರು ಕಿಡಿ ಕಾರಿದ್ದಾರೆ. ಹಿಂದೂಸ್ತಾನ ಹಿಂದೂಸ್ತಾನವಾಗಿಯೇ ಉಳಿಯಬೇಕ ಎಂಬ ಭಾಗವತ್ ವಾದವನ್ನು ಒಪ್ಪುತ್ತೇನೆ. ಆದರೆ ಮೊದಲು ಮನುಷ್ಯರು ಮನುಷ್ಯರಾಗಿ ಉಳಿಯಬೇಕು ಎಂದಿದ್ದಾರೆ. ಓವೈಸಿಯವರಂತೂ ನಮಗೆ ಹೀಗೇ ಬದುಕಬೇಕು ಎಂದು ಅನುಮತಿ ನೀಡೋಕೆ ಈ ಭಾಗವತ್ ಯಾರು? ಮುಸ್ಲಿಮರು ಹೀಗೇ ಬದುಕಬೇಕು ಎಂದು ಷರತ್ತು ವಿಧಿಸಲು ಅವರಿಗೆ ಎಷ್ಟು ಧೈರ್ಯ ಎಂದು ಭಾಗವತ್ ಅವರನ್ನು ಪ್ರಶ್ನಿಸಿದ್ದಾರೆ. ಇಷ್ಟಕ್ಕೂ ಭಾಗವತ್ ಅವರು ಹೇಳಿದ್ದೇನು? ಅವರು ಕೇವಲ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಈ ಮಾತು ಹೇಳಿದ್ದಾರೆಯೇ ಎಂಬುದನ್ನು ಹುಡುಕಿದಾಗ ಕಂಡಿದ್ದೇ ಬೇರೆ.




ಆರ್.ಎಸ್.ಎಸ್.ನಿಂದಾಗಿ ಹಿಂದೂಗಳಲ್ಲಿ ಜಾಗೃತಿ ಮೂಡಿದೆ ಎಂದು ವಾದಿಸಿರುವ ಮೋಹನ್ ಭಾಗವತ್, ಹಿಂದೂಗಳ ವಿರುದ್ಧ ಸಂಚು, ಪಿತೂರಿಯೂ ನಡೆಯುತ್ತಿದ್ದು, ಅದಕ್ಕೆ ವಿದೇಶದ ಕುಮ್ಮಕ್ಕು ಇದೆ ಎಂದೂ ಹೇಳಿದ್ದಾರೆ.



