ಪಿತೃಪಕ್ಷದ (pithrupaksha) ದಿನ ಪೂಜೆ ಮಾಡುವುದು ಕುಟುಂಬದಲ್ಲಿದ್ದ ಮೃತಪಟ್ಟಿರುವ ಹಿರಿಯರಿಗೆ. ಪಿತೃಪಕ್ಷದ ದಿನ ಪೂರ್ವಜರಿಗೆ ಪಿಂಡ ಪ್ರಧಾನ ಮಾಡುವ ಪದ್ಧತಿ ಇದೆ. ಆದರೆ ಸೃಜನ್ ಲೋಕೇಶ್ ತಮ್ಮ ಮನೆಯಲ್ಲಿ 130 ಹಿರಿಯರಿಗೆ ಪಿಂಡ ಪ್ರಧಾನ ಮಾಡಿದ್ದಾರೆ. ಸೃಜನ್ ಅವರ ತಾಯಿ ಗಿರಿಜಾ ಲೋಕೇಶ್ (srujanlokesh and girija lokesh) ನೇತೃತ್ವದಲ್ಲಿ ನಡೆಯುವ ಈ ಪೂಜೆಯಲ್ಲಿ ಲೋಕೇಶ್ ಹಾಗೂ ಹಿರಿಯರಿಗಷ್ಟೇ ಅಲ್ಲ, ಚಿತ್ರರಂಗದ ಹಲವರಿಗೂ ಪೂಜೆ ಮಾಡಿದ್ದಾರೆ. 2004ರ ಅಕ್ಟೋಬರ್ 14ರಂದು ಲೋಕೇಶ್ ವಿಧಿವಶರಾಗಿದ್ದರು. ಈ ಹಿನ್ನೆಲಯಲ್ಲಿ ನಡೆಯುವ ಪುಣ್ಯಸ್ಮರಣೆಯಲ್ಲಿ ನೂರಾರು ಜನರಿಗೆ ಪೂಜೆ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ ಸೃಜನ್ ಲೋಕೇಶ್.
ಆ ವಿಡಿಯೋದಲ್ಲಿ ಮನೆಯ ದೇವರ ಮನೆಯಲ್ಲಿ ಲೋಕೇಶ್, ಡಾ. ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ಜಯಂತಿ ಸೇರಿದಂತೆ ಕನ್ನಡ ಚಿತ್ರರಂಗದ ಸಾಕಷ್ಟು ಜನ ಅಗಲಿರುವ ಗಣ್ಯರಿಗೆ ಪೂಜೆ ಸಲ್ಲಿಸಿರುವುದನ್ನು ನೋಡಬಹುದು.
ನಮ್ಮ ಕುಟುಂಬಕ್ಕೆ ಆಪ್ತರಾಗಿದ್ದರ ಫೋಟೊಗಳನ್ನು ನಮ್ಮ ಮನೆಯಲ್ಲಿ ಇಟ್ಟು ಪೂಜಿಸುತ್ತೇವೆ. ಪ್ರತಿ ವರ್ಷ ನಾವು ಇದೇ ರೀತಿ ಪೂಜೆ ಮಾಡುತ್ತಾ ಬರುತ್ತಿದ್ದೇವೆ. ಡಾ. ರಾಜ್‌ಕುಮಾರ್ ನಮ್ಮ ಯಜಮಾನರ ತಂದೆ ಸುಬ್ಬಯ್ಯ ನಾಯ್ಡು ಕಂಪೆನಿಯಲ್ಲಿ ಕೆಲಸ ಮಾಡಿದ್ದರು. ಹಾಗಾಗಿ ಅವರು ನಮ್ಮ ಕುಟುಂಬಕ್ಕೆ ಬಹಳ ಆಪ್ತರು. ಅದೇ ರೀತಿ ಪುನೀತ್, ಚಿರು ಎಲ್ಲರೂ ನಮ್ಮ ಮಕ್ಕಳಿಗೆ ಆಪ್ತರು. ಇನ್ನು ಜಯಂತಿ ಅವರು ನನಗೆ ಬಹಳ ಆಪ್ತರಾಗಿದ್ದರು. ಹೀಗೆ ನಮಗೆ ಬಹಳ ಆಪ್ತರಾಗಿದ್ದವರ ಫೋಟೊಗಳನ್ನು ಇಟ್ಟು ಪೂಜೆ ಮಾಡುತ್ತೇವೆ. ತೂಗುದೀಪ ಶ್ರೀನಿವಾಸ್ ನಮಗೆ ಸಂಬಂಧಿಕರೇ ಆಗಬೇಕು. ಇನ್ನು ನಮ್ಮ ಮಾವ, ಚಿಕ್ಕಪ್ಪ ಸೇರಿದಂತೆ ಹಲವರು ಫೋಟೊಗಳು ಇವೆ. ನಾವು ಪ್ರತಿವರ್ಷ 130 ಜನರಿಗೆ ತರ್ಪಣ ಕೊಡುತ್ತೇವೆ ಎಂದಿದ್ದಾರೆ ಗಿರಿಜಾ ಲೋಕೇಶ್.
ನಾವು ಅಗಲಿರುವ ಎಲ್ಲ ಹಿರಿಯ ಕಲಾವಿದರ ಫೋಟೋಗಳನ್ನೂ ಇಟ್ಟು ಪೂಜೆ ಮಾಡುತ್ತಿಲ್ಲ. ಪೂಜೆ ಮಾಡುತ್ತಿರುವ ಫೋಟೋಗಳಿಲ್ಲ ಎಂದ ತಕ್ಷಣ ಅವರು ನಮಗೆ ಆತ್ಮೀಯರಲ್ಲ ಎಂದೂ ಅರ್ಥ ಅಲ್ಲ. . ಪುರೋಹಿತರು ನಮ್ಮ ಮನೆಗೆ ಬಂದರೆ ಮೂರ್ನಾಲ್ಕು ಗಂಟೆ ಪೂಜೆ ಮಾಡುತ್ತಾರೆ. 100ಕ್ಕೂ ಅಧಿಕ ಜನರ ಹೆಸರುಗಳನ್ನು ಹೇಳಿ ತರ್ಪಣ ಕೊಡಬೇಕು. ಅಷ್ಟು ಸಮಯ ಹಿಡಿಸುತ್ತದೆ. ಎಲ್ಲರ ಫೋಟೊ ಇಡುವುದಕ್ಕೆ ಜಾಗ ಇಲ್ಲ ಎಂದಿದ್ದಾರೆ ಗಿರಿಜಾ ಲೋಕೇಶ್.



