ಬಿಗ್ ಬಾಸ್ ಹೌಸ್ ಪ್ರತಿ ಬಾರಿಯೂ ಒಂದಲ್ಲ ಒಂದು ಕಾಂಟ್ರವರ್ಸಿ ಹುಟ್ಟು ಹಾಕುತ್ತೆ. ಈ ಬಾರಿಯೂ ಅಷ್ಟೆ, ಬಿಗ್ ಬಾಸ್ ಮನೆ ಮತ್ತೊಮ್ಮೆ ಸದ್ದು ಮಾಡೋಕೆ ಶುರು ಮಾಡಿದೆ. ಪ್ರತಿ ಬಾರಿ ಬಿಗ್ ಬಾಸ್ ಶುರುವಾದಾಗಲೂ ಒಂದಿಷ್ಟು ಕಾಂಟ್ರವರ್ಸಿ ಪರ್ಸನಾಲಿಟಿಗಳಿರುತ್ತವೆ. ಈ ಬಾರಿಯೂ ಹಾಗೆಯೇ ಇದೆ. ಪ್ರತಿ ಬಾರಿಯೂ ಒಂದೊಂದು ರಂಗದಿಂದ ಒಬ್ಬೊಬ್ಬ ಸೆಲಬ್ರಿಟಿ ಇರ್ತಾರೆ. ಈ ಬಾರಿಯೂ ಹಾಗೆಯೇ ಆಗಿದೆ. ಜನಸಾಮಾನ್ಯರ ಗ್ರೂಪ್ನಿಂದಲೂ ಆಯ್ಕೆಯಾಗುತ್ತಾರೆ. ಎಲ್ಲವೂ ಸೇಮ್ ಟು ಸೇಮ್. ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಗಮನ ಸೆಳೆದಿರುವುದು ಶಾಸಕ ಪ್ರದೀಶ್ ಈಶ್ವರ್. ಪತ್ರಕರ್ತ ಗೌರೀಶ್ ಅಕ್ಕಿ. ಡ್ರೋಣ್ ಪ್ರತಾಪ್.. ಇತ್ಯಾದಿ..
ಶಾಸಕ ಪ್ರದೀಪ್ ಈಶ್ವರ್, ಪ್ರಭಾವಿ ಸಚಿವರಾಗಿದ್ದ ಸುಧಾಕರ್ ಅವರನ್ನೇ ಸೋಲಿಸಿ ಶಾಸಕರಾದವರು. ಸಖತ್ ಮ್ಯಾನರಿಸಂ ಕೂಡಾ ಇದ್ದ ಪ್ರದೀಪ್ ಈಶ್ವರ್ ಅವರನ್ನು ಎಲೆಕ್ಷನ್ ಭಾಷಣ ಕೇಳಿ ಈತ ಇನ್ನೊಬ್ಬ ಹುಚ್ಚ ವೆಂಕಟ್ ಎಂದವರಿದ್ದರು. ಸೋಲು ಕಟ್ಟಿಟ್ಟ ಬುತ್ತಿ ಎಂದೇ ಷರಾ ಬರೆದಿದ್ದವರ ಎದುರು ಗೆದ್ದು ಬಂದವರು ಪ್ರದೀಪ್ ಈಶ್ವರ್. ಶಾಸಕರೊಬ್ಬರು ಬಿಗ್ ಬಾಸ್ ಮನೆಗೆ ಹೋಗಿದ್ದು ಇದೇ ಮೊದಲು. ಇದೀಗ ಅವರ ಶಾಸಕ ಸ್ಥಾನ ಪ್ರಶ್ನಿಸಿ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಅರ್ಜಿ ಸಲ್ಲಿಸಲಾಗಿದೆ. ಇದೇ ವೇಳೆ ಪ್ರದೀಪ್ ಈಶ್ವರ್ ಸ್ಪರ್ಧಿ ಅಲ್ಲ, ಅತಿಥಿ ಎಂದು ಕೂಡಾ ಹೇಳಲಾಗುತ್ತಿದೆ.
ಆದರೆ ಪ್ರದೀಪ್ ಈಶ್ವರ್ ಹೇಳೋದೇ ಬೇರೆ. ನಾನೇನು ೧೦೦ ದಿನ ಬಿಗ್ ಬಾಸ್ ಮನೆಯಲ್ಲಿ ಇರಲ್ಲ. ಕಂಪ್ಲೇಂಟ್ ಕೊಡೋವ್ರು ಎಷ್ಟು ಬೇಕಾದ್ರೂ ಕೊಡಲಿ, ಡೋಂಟ್ ಕೇರ್ ಎಂದಿದ್ದಾರೆ. ಅವರ ಪ್ರಕಾರ ಅವರು ಒಬ್ಬ ಶಾಸಕನಾಗಿ ಏನೂ ಕೆಲಸ ಮಾಡಬೇಕೋ ಅದನ್ನೆಲ್ಲ ಮಾಡಿದ್ದಾರೆ. ಹಾಗಾಗಿ ಅವರಿಗೆ ಭಯವೇನೂ ಇಲ್ಲ. ಆದರೆ ಕ್ಷೇತ್ರದ ಶಾಸಕರಾದ ವ್ಯಕ್ತಿ, ಹೀಗೆ ಹೋಗಿ ಹೋಗಿ ಬಿಗ್ ಬಾಸ್ ಅಂದ್ಕೊಂಡು ಕೂಂತ್ರೆ ಜನರ ಪಾಡೇನು ಅನ್ನೋದು ಪ್ರಶ್ನೆ.
ಇನ್ನು ಅವರ ಬೆಂಬಲಿಗರ ಅರ್ಥಾತ್ ಕಾಂಗ್ರೆಸ್ಸಿಗರ ವಾದವೇನಂದ್ರೆ, ಬಿಜೆಪಿಯಲ್ಲಿ ಎಂಎಲ್‌ಎ, ಎಂಪಿಗಳು ಸಿನಿಮಾ ಮಾಡಲ್ವಾ.. ಇಷ್ಟಕ್ಕೂ ನಮ್ಮ ಪ್ರದೀಪ್ ಈಶ್ವರ್ ಏನ್ ತಪ್ಪ್ ಮಾಡಿದ್ದಾರೆ ಅನ್ನೋ ಪ್ರಶ್ನೆ ಹಾಕಿದ್ಧಾರೆ. ಪ್ರದೀಪ್ ಈಶ್ವರ್ ಬಿಗ್ ಬಾಸ್ ಪ್ರಶ್ನೆ ಮಾಡ್ತಿರೋವ್ರಿಗೆ ಪ್ರದೀಪ್ ಈಶ್ವರ್ ಬೆಂಬಲಿಗರು ಜಗ್ಗೇಶ್, ಬಿಸಿ ಪಾಟೀಲ್, ತಾರಾ, ಸುಮಲತಾ ಅಂಬರೀಷ್, ಹೇಮಮಾಲಿನಿ ಮೊದಲಾದವರನ್ನೆಲ್ಲ ತೋರಿಸಿ ಉತ್ತರ ಕೊಡ್ತಿದ್ದಾರೆ.
ಇದರ ನಡುವೆ ಬಿಗ್ ಬಾಸ್ ಮನೆಯಲ್ಲಿರುವ ಇತರರ ವಿವರಗಳು ಹೀಗಿವೆ. ಪತ್ರಕರ್ತ ಗೌರೀಶ್ ಅಕ್ಕಿ. ಲೆಕ್ಚರರ್ ಆಗಿದ್ದ ಗೌರೀಶ್, ನಿರೂಪಕರಾಗಿದ್ದು ಈಟಿವಿ ನ್ಯೂಸ್ ಚಾನೆಲ್ ಮೂಲಕ. ಸ್ಟೈಲಿಷ್ ಆಂಕರ್ ಎಂದೇ ಗುರುತಿಸಿಕೊಂಡಿದ್ದ ಗೌರೀಶ್ ಅಕ್ಕಿ, ಅಬ್ಬರ..ಆರ್ಭಟದ ಮಧ್ಯೆ ಮೆದು ಹಾಗೂ ಮೃದು ಮಾತಿನ ಆಂಕರಿಂಗ್ ಮೂಲಕ ಗಮನ ಸೆಳೆದವರು. ಒಳ್ಳೆಯ ಕನ್ನಡ ಮತ್ತು ಅದ್ಭುತ ಇಂಗ್ಲಿಷ್ ಎರಡೂ ಗೌರೀಶ್ ಅವರಿಗೆ ಇದೆ. ಈಟಿವಿ ಕನ್ನಡ ನ್ಯೂಸ್, ಟಿವಿ 9, ಸುವರ್ಣ ನ್ಯೂಸ್ ಚಾನೆಲ್ಲಿನಲ್ಲಿ ಕೆಲಸ ಮಾಡಿರುವ ಗೌರೀಶ್, ನಟರಾಗಿ, ನಿರ್ದೇಶಕರಾಗಿಯೂ ಒಂದು ಕೈ ನೋಡಿದ್ದವರು. ಈಗ ಜರ್ನಲಿಸಂ ಸ್ಕೂಲ್ ನಡೆಸುತ್ತಿದ್ದಾರೆ.
ಇವರನ್ನು ಹೊರತುಪಡಿಸಿದರೆ ಡ್ರೋಣ್ ಪ್ರತಾಪ್ ಭರ್ಜರಿ ಸುದ್ದಿ ಹಾಗೂ ಸದ್ದು ಮಾಡಿದ್ದವರು. ಕಿರುತೆರೆ ಮೂಲಕ ಫೇಮಸ್ ಆದ ಕೃಷ್ಣ ನಾಗಿಣಿ 2 ಮೂಲಕ ಜನಪ್ರಿಯತೆ ಪಡೆದ ನಮ್ರತಾ ಗೌಡ, ಹರ ಹರ ಮಹಾದೇವ ಧಾರಾವಾಹಿಯಲ್ಲಿ ಶಿವನ ಪಾತ್ರ ಮಾಡಿರುವ ವಿನಯ್ ಗೌಡ, ನಮ್ಮನೆ ಯುವರಾಣಿ ಧಾರಾವಾಹಿ ಮೂಲಕ ಜನರ ಮನಗೆದ್ದ ಸ್ನೇಹಿತ್ ಗೌಡ, ರ್ಯಾಪರ್ ಈಶಾನಿ, ಮಿಸ್ ಟ್ರಾನ್ಸ್ ಜೆಂಡರ್ ಕ್ವೀನ್ ಆಗಿದ್ದ ತೃತೀಯ ಲಿಂಗಿ ನೀತು ವನಜಾಕ್ಷಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ತುಕಾಲಿ ಸಂತೋಷ್, ರಂಗೋಲಿ ಧಾರಾವಾಹಿ ಖ್ಯಾತಿಯ ಸಿರಿ, ಸ್ನೇಕ್ ಶ್ಯಾಮ್, ಲಕ್ಷಣ ಧಾರಾವಾಹಿ ಖ್ಯಾತಿಯ ಭಾಗ್ಯಶ್ರೀ ಬಿಗ್ ಬಾಸ್ ಮನೆಗೆ ಬಂದಿದ್ದಾರೆ.
ನಟಿ ಸಂಗೀತಾ ಶೃಂಗೇರಿ, ನೈಜೀರಿಯಾ ಮೂಲದ ಕನ್ನಡಿಗ ಮೈಕೇಲ್, ಮಂಗಳ ಗೌರಿ ಧಾರಾವಾಹಿಯ ವಿಲನ್ ತನಿಷಾ ಕುಪ್ಪಂಡ, ರೈತ ವರ್ತೂರು ಸಂತೋಷ್, ಕಾರ್ತಿಕ್ ಕೂಡಾ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ.



