ಸಚಿವ ದಿನೇಶ್ ಗುಂಡೂರಾವ್ ಮನೆಯಲ್ಲಿಅರ್ಧ ಪಾಕಿಸ್ತಾನ ಇದೆ. ಇಂತಾದ್ದೊಂದು ವಿವಾದಾತ್ಮಕ ಹೇಳಿಕೆ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ದೂರು ದಾಖಲಾಗಿದೆ. ದೂರು ಕೊಟ್ಟಿರುವುದು ದಿನೇಶ್ ಗುಂಡೂರಾವ್ ಪತ್ನಿ ಟಬು ರಾವ್.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ಬಿಜೆಪಿ ಕಾರ್ಯಕರ್ತನ ವಿಚಾರಣೆ ನಡೆಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿ ಏಪ್ರಿಲ್ 6 ರಂದು ಸುದ್ದಿಗಾರರ ಜತೆ ಮಾತನಾಡಿದ್ದ ಶಾಸಕ ಯತ್ನಾಳ್, ” ಸಚಿವ ದಿನೇಶ್ ಗುಂಡೂರಾವ್ ಅವರ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಈ ಸಂಬಂಧ ಗಾಂಧಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಸರವಣನ್ ಶೇಷಾದ್ರಿಪುರ ಠಾಣೆಯಲ್ಲಿ ಯತ್ನಾಳ್ ವಿರುದ್ಧ ಶನಿವಾರ ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ಯತ್ನಾಳ್ ವಿರುದ್ಧ ದೂರು ದಾಖಲಿಸಿರುವ ಟಬು ʻʻ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಯತ್ನಾಳ್ ಅವರು ನಮ್ಮ ಕುಟುಂಬದ ಗೌರವ ಹಾಳು ಮಾಡುವ ದುರುದ್ದೇಶದಿಂದ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ನಮ್ಮ ಭಾವನೆಗಳಿಗೆ ನೋವುಂಟು ಮಾಡಿ, ಸಾರ್ವಜನಿಕವಾಗಿ ಅವಹೇಳನ ಮಾಡಿರುವ ಯತ್ನಾಳ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕುʼ ಎಂದು ಮನವಿ ಮಾಡಿದ್ದಾರೆ.
ವಿವಾದ ಶುರುವಾಗಿದ್ದು ಎಲ್ಲಿಂದ..?
ವಿವಾದ ಶುರುವಾಗಿದ್ದು ರಾಮೇಶ್ವರಂ ಕೆಫೆಯಲ್ಲಿ ಬಾಂಬಿಟ್ಟವನ ಹುಡುಕಾಟದಲ್ಲಿ ಶಿವಮೊಗ್ಗಲ್ಲಿ ಬಿಜೆಪಿ ಕಾರ್ಯಕರ್ತನ ವಿಚಾರಣೆ ನಡೆಸಿತ್ತು. ಆರೋಪಿ ಉಗ್ರ ಬಿಜೆಪಿ ಕಾರ್ಯಕರ್ತರ ಮೊಬೈಲ್ ಅಂಗಡಿಯಲ್ಲಿ ಸಿಮ್ ಚಾರ್ಜ್ ಮಾಡಿಸಿಕೊಂಡಿದ್ದ. ಇದಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಅಧಿಕೃತ ಖಾತೆಯಲ್ಲಿ, ಹಲವು ನಾಯಕರು ಹಾಗೂ ಸಚಿವರ ಖಾತೆಗಳಲ್ಲಿ ಬಾಂಬ್ ಇಟ್ಟ ಆರೋಪಿ ಬಿಜೆಪಿ ಕಾರ್ಯಕರ್ತ ಎಂದು ಟ್ವೀಟ್ ಬಂದಿತ್ತು. ಕೊನೆಗೆ ಬಿಜೆಪಿ ಕಾರ್ಯಕರ್ತ ಆರೋಪಿ ಅಲ್ಲ, ಸಾಕ್ಷಿ ಎಂದು ಅರ್ಥವಾಗಿತ್ತು. ಆದರೆ.. ಯಾವ ನಾಯಕರೂ ಆ ಟ್ವೀಟ್ ತೆಗೆಯಲೂ ಇಲ್ಲ. ಕ್ಷಮೆಯನ್ನೂ ಕೇಳಲಿಲ್ಲ. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಯತ್ನಾಳ್ ಸಚಿವ ದಿನೇಶ್ ಗುಂಡೂರಾವ್ ಮನೆಯಲ್ಲೇ ಅರ್ಧ ಪಾಕಿಸ್ತಾನ ಇದೆ. ದಿನೇಶ್ ಗುಂಡೂರಾವ್‌ಗೆ ದೇಶ ವಿರೋಧಿ ಹೇಳಿಕೆ ನಿಡೋದು ಚಟವಾಗಿದೆ ಎಂದು ಹೇಳಿಕೆ ನೀಡಿದ್ದರು. ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟದ ಪ್ರಕರಣದಲ್ಲಿ ಎನ್‌ಐಎ ಅಧಿಕಾರಿಗಳು ಬಿಜೆಪಿ ಪದಾಧಿಕಾರಿಯನ್ನು ಬಂಧಿಸಿದ್ದಾರೆ ಎಂದು ಪೋಸ್ಟ್ ಮಾಡಿದ್ದ ಸಚಿವರಿಗೆ ತಿರುಗೇಟು ನೀಡಿದ್ದರು.
ವಿಜಯಪುರದ ಬಿಜೆಪಿ ಕಚೇರಿ ಬಳಿ ಮಾತನಾಡಿದ ಅವರು, ನಮ್ಮ ಪದಾಧಿಕಾರಿಗಳಲ್ಲಿ ಮೊಬೈಲ್ ಸಿಮ್ ವ್ಯಾಪಾರಿಗಳಿದ್ದಾರೆ. ಅವರ ಬಳಿ ಯಾರು ಬಂದಿರುತ್ತಾರೆ ಏನು ಗೊತ್ತಾಗುತ್ತದೆ. ಬಿಜೆಪಿ, ಕಾಂಗ್ರೆಸ್ ಇರಲಿ, ಯಾರೇ ಇರಲಿ ತನಿಖೆಗೆ ಸಹಕಾರ ನೀಡೋದಾಗಿ ಹೇಳಿದ್ದಾನೆ ಎಂದು ಹೇಳಿದ್ದಾರೆ ಎಂದಿದ್ದ ಯತ್ನಾಳ್, ಈ ದೂರನ್ನೂ ಎದುರಿಸೋದಾಗಿ ಹೇಳಿದ್ಧಾರೆ.
ಇತ್ತ ಟಬು ರಾವ್ ಬಸನಗೌಡ ಪಾಟೀಲ್ ಯತ್ನಾಳ್ ಯಾರೆಂದು ನನಗೆ ಗೊತ್ತಿಲ್ಲ. ಪತಿ ದಿನೇಶ್ ಬಗ್ಗೆ ಮಾತನಾಡಿದರೆ ಪರವಾಗಿಲ್ಲ. ನಾನು ರಾಜಕೀಯದಲ್ಲಿಲ್ಲ, ಅವರು ನನಗೇಕೆ ಹೀಗೆ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಈ ರೀತಿ ಮಾತನಾಡೋದೆ ರಾಜಕೀಯನಾ? ಎಂದಿದ್ದಾರೆ.
ಅಂದಹಾಗೆ.. ಟಬು ಮೂಲತಃ ಮುಸ್ಲಿಂ. ದಿನೇಶ್ ಗುಂಡೂರಾವ್ ಅವರನ್ನು ಮದುವೆಯಾಗಿದ್ದಾರೆ. ಯತ್ನಾಳ್ ಅವರು ಹೇಳಿದ್ದು ಯಾವ ವಿಷಯಕ್ಕೇ ಇರಬಹುದು.. ಆದರೆ.. ಟಬು ಮುಸ್ಲಿಂ ಆಗಿರುವುದರಿಂದ ಅರ್ಧ ಪಾಕಿಸ್ತಾನ ಇದೆ ಎಂಬ ಹೇಳಿಕೆ ಟಬು ಅವರನ್ನು ಕುರಿತದ್ದೇ ಆಗಿದೆ ಎನ್ನುವುದು ದೂರು ಕೊಟ್ಟವರ ಆರೋಪ.



