2 ನಿಮಿಷದಲ್ಲಿ ಮ್ಯಾಗಿ ಎಂಬುದು ಜನಪ್ರಿಯವಷ್ಟೇ ಅಲ್ಲ, ನಿಜವೂ ಹೌದು. ಮ್ಯಾಗಿ ನೂಡಲ್ಸ್ ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಬಾರಿಯೂ ಅಷ್ಟೇ, ಮತ್ತೆ ಹುಳುಗಳು ಪತ್ತೆಯಾಗಿರುವ ಕಾರಣಕ್ಕೆ. ಕಂಪನಿಯ ಮ್ಯಾಗಿ ನೂಡಲ್ಸ್ ಇತ್ತೀಚೆಗೆ ಪ್ಯಾಕೆಟ್‌ನಲ್ಲಿ ಹುಳು/ಲಾರ್ವಾಗಳು (Insects/Larvae) ಪತ್ತೆಯಾಗಿವೆ ಎಂಬ ಸಾಮಾಜಿಕ ಮಾಧ್ಯಮದ ದೂರುಗಳಿಂದಾಗಿ ಮತ್ತೆ ಸುದ್ದಿಯಲ್ಲಿದೆ. ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಒಂದು ದೂರಿನ ನಂತರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಎಫ್ಎಸ್ಎಸ್ಎಐ (FSSAI) ನೆಸ್ಲೆ ಇಂಡಿಯಾಗೆ (Nestle India) ನೋಟಿಸ್ ನೀಡಿದೆ.
ಎಎನ್ಐ ವರದಿ ಪ್ರಕಾರ ಎಫ್ಎಸ್ಎಸ್ಎಐ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದೆ. ಮ್ಯಾಗಿ ಪ್ಯಾಕೆಟ್ನಲ್ಲಿ ಕೀಟ ಅಥವಾ ಲಾರ್ವಾ ಇರುವುದಾಗಿ ಒಬ್ಬ ಗ್ರಾಹಕ ಮಾಡಿದ ಆರೋಪದ ಆಧಾರದ ಮೇಲೆ ನಿಯಂತ್ರಕ ಸಂಸ್ಥೆ ನೆಸ್ಲೆ ಇಂಡಿಯಾದಿಂದ ವಿವರವಾದ ಉತ್ತರ ಕೇಳಿದೆ. ಕಂಪನಿಯ ಗುಣಮಟ್ಟ ಪರಿಶೀಲನೆ, ಪೂರೈಕೆದಾರರ ದಾಖಲೆ ಮತ್ತು ಸರಿಪಡಿಸುವ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಇದು ಕೇವಲ ಮಾಹಿತಿ ಸಂಗ್ರಹ ಪ್ರಕ್ರಿಯೆ ಎಂದು ಎಫ್ಎಸ್ಎಸ್ಎಐ ಸ್ಪಷ್ಟಪಡಿಸಿದೆ.
FSSAI ನೋಟಿಸ್ ಕೊಟ್ಟಿದೆ ಎಂದು ಸುದ್ದಿಯಾಗುತ್ತಿದ್ದಂತೆಯೇ ನೆಸ್ಲೆ ಇಂಡಿಯಾ ಷೇರು ದಿಢೀರ್ ಕುಸಿದುಬಿತ್ತು. 1,439 ರೂಪಾಯಿಗೆ ಆರಂಭವಾಗಿದ್ದ ಷೇರು ಸುದ್ದಿ ಹರಡುತ್ತಿದ್ದಂತೆ ಷೇರು ವೇಗವಾಗಿ ಕುಸಿದು ದಿನದ ಕನಿಷ್ಠ 1,370 ರೂಪಾಯಿಗೆ ತಲುಪಿತು. ಅಂತಿಮವಾಗಿ ಷೇರು 3.23 ಶೇಕಡಾ ಇಳಿಕೆಯೊಂದಿಗೆ 1,375.85 ರೂಪಾಯಿಗೆ ಮುಕ್ತಾಯವಾಯಿತು. ಕಂಪನಿಯ ಮಾರುಕಟ್ಟೆ ಮೌಲ್ಯ ಸುಮಾರು 2.65 ಲಕ್ಷ ಕೋಟಿ ರೂಪಾಯಿಗೆ ಇಳಿಯಿತು.
ಆರೋಪ ನಿರಾಕರಿಸಿರುವ ಕಂಪೆನಿ : ಕಂಪನಿ ಈ ಎಲ್ಲ ಆರೋಪಗಳನ್ನು ಸ್ಪಷ್ಟವಾಗಿ ತಿರಸ್ಕರಿಸಿದೆ. ಪರಿಶೀಲಿಸದ ಸಾಮಾಜಿಕ ಮಾಧ್ಯಮ ಖಾತೆಯಿಂದ ಬಂದ ದೂರಿನ ಆಧಾರದ ಮೇಲೆ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವರದಿಗಳು ಆಧಾರರಹಿತ ಎಂದು ಹೇಳಿದೆ. ದೂರುದಾರರ ಖಾತೆ ಸಂಪರ್ಕಕ್ಕೆ ಸಿಗದ ಕಾರಣ ಮಾದರಿ ಇನ್ನೂ ಕಂಪನಿಗೆ ತಲುಪಿಲ್ಲ ಎಂದು ನೆಸ್ಲೆ ತಿಳಿಸಿದೆ. ಅದೇ ಬ್ಯಾಚ್ನ ರೆಫರೆನ್ಸ್ ಮಾದರಿಯನ್ನು ಎಫ್ಎಸ್ಎಸ್ಎಐ ಅಧಿಸೂಚಿತ ಮತ್ತು ಎನ್ಎಬಿಎಲ್ ಮಾನ್ಯತೆ ಪಡೆದ ಸ್ವತಂತ್ರ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿದ್ದು ಯಾವುದೇ ಕೀಟ ಬಾಧೆ ಕಂಡುಬಂದಿಲ್ಲ. ಗುಣಮಟ್ಟ ದಾಖಲೆಗಳು ಮತ್ತು ಪರೀಕ್ಷಾ ವರದಿಗಳನ್ನು ಈಗಾಗಲೇ ಸಂಬಂಧಿತ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ಕಂಪನಿ ಹೇಳಿದೆ.
ಮ್ಯಾಗಿಗೆ ಆರೋಪಗಳು ಹೊಸದಲ್ಲ : 2015ರಲ್ಲಿ ಉತ್ತರ ಪ್ರದೇಶದ ಆಹಾರ ಸುರಕ್ಷತೆ ಅಧಿಕಾರಿಗಳು ನಡೆಸಿದ ಪರೀಕ್ಷೆಯಲ್ಲಿ ಮ್ಯಾಗಿಯಲ್ಲಿ ನಿಗದಿಗಿಂತ ಹೆಚ್ಚಿನ ಪ್ರಮಾಣದ ಸೀಸ (Lead) ಮತ್ತು ಮೊನೊಸೋಡಿಯಂ ಗ್ಲುಟಮೇಟ್ (MSG) ಇರುವುದು ಪತ್ತೆಯಾಗಿತ್ತು. ಪರಿಣಾಮ ಏನಾಗಿತ್ತೆಂದರೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಮ್ಯಾಗಿಯನ್ನು ಮನುಷ್ಯರ ಬಳಕೆಗೆ ಅಪಾಯಕಾರಿ ಎಂದು ಘೋಷಿಸಿ, ದೇಶಾದ್ಯಂತ ನಿಷೇಧಿಸಿತು. ನೆಸ್ಲೆ ಸಂಸ್ಥೆಯು ಸುಮಾರು ೩೮,೦೦೦ ಟನ್ ಮ್ಯಾಗಿ ಪ್ಯಾಕೆಟ್‌ಗಳನ್ನು ಮಾರುಕಟ್ಟೆಯಿಂದ ಹಿಂಪಡೆದು ಸಂಪೂರ್ಣವಾಗಿ ನಾಶಪಡಿಸಬೇಕಾಯಿತು. ಕಂಪನಿಗೆ ಕೋಟ್ಯಂತರ ರೂಪಾಯಿ ನಷ್ಟವಾಯಿತು. ಮ್ಯಾಗಿಯನ್ನು ಪ್ರಚಾರ ಮಾಡುತ್ತಿದ್ದ ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್, ಮಾಧುರಿ ದೀಕ್ಷಿತ್, ಮತ್ತು ಪ್ರೀತಿ ಜಿಂಟಾ ಮೊದಲಾದವರು ಕೇಸ್ ಎದುರಿಸಿದ್ದರು.
2017ರಲ್ಲಿ ಮ್ಯಾಗಿ ಮತ್ತೆ ಮಾರುಕಟ್ಟೆಗೆ ಬಂತು. ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲಾಡಳಿತ ನಡೆಸಿದ ಪ್ರಯೋಗಾಲಯ ಪರೀಕ್ಷೆಯಲ್ಲಿ ಮ್ಯಾಗಿ ಸ್ಯಾಂಪಲ್‌ಗಳು ಮತ್ತೆ ವಿಫಲವಾದವು. ಮ್ಯಾಗಿಯಲ್ಲಿನ ಬೂದಿಯ ಅಂಶ (Ash content) ನಿಗದಿತ ಮಿತಿಗಿಂತ ಹೆಚ್ಚಿದ್ದಕ್ಕಾಗಿ ಉತ್ತರ ಪ್ರದೇಶ ಸರ್ಕಾರ ನೆಸ್ಲೆ ಕಂಪನಿ ಮತ್ತು ಅದರ ವಿತರಕರಿಗೆ ಒಟ್ಟು 45 ಲಕ್ಷ ರೂ. ದಂಡ ವಿಧಿಸಿತ್ತು.
2021ರಲ್ಲಿ ನೆಸ್ಲೆ ಕಂಪನಿಯ ಆಂತರಿಕ ಪ್ರೆಸೆಂಟೇಶನ್ ವರದಿಯೊಂದರಲ್ಲಿ ಕಂಪನಿಯ ಶೇ. 60 ಕ್ಕಿಂತ ಹೆಚ್ಚು ಪ್ರಮುಖ ಆಹಾರ ಉತ್ಪನ್ನಗಳು (ಮ್ಯಾಗಿ ಸೇರಿದಂತೆ) ಆರೋಗ್ಯಕರ ಆಹಾರ ಅಲ್ಲ ಎಂದಿತ್ತು. ಇದು ಗ್ರಾಹಕರಲ್ಲಿ ತಲ್ಲಣ ಸೃಷ್ಟಿಸಿತ್ತು. ಇದೀಗ ಮ್ಯಾಗಿಯಲ್ಲಿ ಹುಳು ಎಂಬ ಆರೋಪ ಮತ್ತೆ ಕೇಳಿ ಬಂದಿದೆ.



