ರಾಷ್ಟ್ರ ಮತ್ತು ರಾಜ್ಯ ರಾಜಕೀಯದಲ್ಲಿ ನೂರಾರು ಸ್ತ್ರೀಯರು ರಾಜಕಾರಣ ಮಾಡಿದ್ಧಾರೆ. ಉನ್ನತ ಸ್ಥಾನಕ್ಕೆ ಹೋಗಿದ್ಧಾರೆ. ಸಿಎಂ, ಪಿಎಂ ಕೂಡಾ ಆಗಿದ್ದಾರೆ. ಮಂತ್ರಿಯಾಗಿದ್ದಾರೆ. ಆದರೆ ಆ ಎಲ್ಲ ಹೆಣ್ಣು ಮಕ್ಕಳು ಸಂಪಾದಿಸಿದ ಗೌರವವನ್ನು ಒಂದೇ ಮಾತಿನಲ್ಲಿ ಗಂಡಸರ ಬೆಡ್ ರೂಂಗೆ ತಂದು ಕ್ರೆಡಿಟ್ ಕೊಟ್ಟಿದ್ದಾರೆ ಪಪ್ಪು ಯಾದವ್. ಅಂದಹಾಗೆ ಈ ಪಪ್ಪು ಯಾದವ್ ಕಾಂಗ್ರೆಸ್ ಮುಖಂಡ.
ಪಪ್ಪು ಯಾದವ್ ಪ್ರಕಾರ ʻʻಮಹಿಳೆಯರು ರಾಜಕಾರಣಕ್ಕೆ ಬರಬೇಕಾದರೆ ರಾಜಿಯಾಗಬೇಕು. ರಾಜಕಾರಣಿಗಳ ಕೋಣೆಗೆ ಹೋಗದೆ, ಶೇ.90ರಷ್ಟು ಮಹಿಳೆಯರು ರಾಜಕೀಯ ಮಾಡಲು ಸಾಧ್ಯವಿಲ್ಲ. ರಾಜಕಾರಣಿಗಳ ದೈನಂದಿನ ಸಿಸಿಟಿವಿ ದೃಶ್ಯಗಳಲ್ಲಿ ಇದನ್ನು ಕಾಣಬಹುದು. ಇದು ಒಂದು ಸಂಸ್ಕೃತಿಯಾಗಿ ಮಾರ್ಪಟ್ಟಿದೆʼʼ ಎಂದಿದ್ದಾರೆ. ಅಂದರೆ ಇದರ ಅರ್ಥ ಬಹುತೇಕ ಮಹಿಳಾ ರಾಜಕಾರಣಿಗಳು ಪುರುಷ ರಾಜಕಾರಣಿಗಳಿಗೆ ಸೆರಗು ಹಾಸಿಯೇ ಅಧಿಕಾರ ಹಿಡಿದಿದ್ದಾರೆಯೇ ಎಂಬ ಅನುಮಾನ ಮೂಡುವಂತೆ ಮಾಡಿದೆ.
ಶೇ. 90ರಷ್ಟು ಮಹಿಳೆಯರು ಹಿರಿಯ ನಾಯಕರ ರೂಂನೊಳಗೆ ಹೋಗಿ ಅವರೊಂದಿಗೆ ಮಂಚ ಹಂಚಿಕೊಳ್ಳದೆ ರಾಜಕಾರಣಿಯಾಗಲು ಸಾಧ್ಯವಿಲ್ಲ. ಬಹುತೇಕ ಮಹಿಳೆಯರು ಹಿರಿಯರ ರಾಜಕಾರಣಿಗಳೊಂದಿಗೆ ಲೈಂಗಿಕತೆಯ ರಾಜಿ ಮಾಡಿಕೊಂಡಿರುತ್ತಾರೆ ಎಂಬ ಮಾತಿಗೆ ಕಾಂಗ್ರೆಸ್‌ನ ಯಾವ ದೊಡ್ಡ ದೊಡ್ಡ ರಾಜಕಾರಣಿಗಳು ರಿಯಾಕ್ಟ್ ಮಾಡಿಲ್ಲ. ಆದರೆ ಇತರರು ಮಾತನಾಡಿದ್ದಾರೆ.
ಯಾರೀತ ಪಪ್ಪು ಯಾದವ್..?
ಪಪ್ಪು ಯಾದವ್ (ನಿಜ ಹೆಸರು: ರಾಜೇಶ್ ರಂಜನ್) ಬಿಹಾರದ ಪ್ರಮುಖ ರಾಜಕಾರಣಿ. ಅವರು ಪೂರ್ಣಿಯಾ (Purnia) ಕ್ಷೇತ್ರದಿಂದ ಪಕ್ಷೇತರ ಸಂಸದರಾಗಿ ಆಯ್ಕೆಯಾಗಿದ್ದಾರೆ. ಒಟ್ಟಾರೆ 6 ಬಾರಿ ಎಂಪಿಯಾಗಿರುವ ಪಪ್ಪು ಯಾದವ್ ಸಮಾಜವಾದಿ ಪಕ್ಷ, ಆರ್‌ಜೆಡಿ, ಜನ್ ಅಧಿಕಾರ್ ಪಾರ್ಟಿಗಳಲ್ಲಿಯೂ ಇದ್ದವರು.
ಪಪ್ಪು ಯಾದವ್ ಮೇಲೆ ಇರುವ ಕ್ರಿಮಿನಲ್ ಕೇಸುಗಳ ಸಂಖ್ಯೆ 40ಕ್ಕೂ ಹೆಚ್ಚು. ಕ್ರಿಮಿನಲ್ ಬೆದರಿಕೆ, ಕಿಡ್ನ್ಯಾಪಿಂಗ್ , ಅಟೆಂಪ್ಟ್ ಟು ಮರ್ಡರ್, ಹಫ್ತಾ ವಸೂಲಿ, ಹಲ್ಲೆ, ಆಸ್ತಿ ಹಾನಿ, ಸಾರ್ವಜನಿಕ ಸೇವಕರ ಮೇಲೆ ಹಲ್ಲೆ , ಕೊಲೆ ಕೇಸುಗಳಿವೆ. ಕೆಳಹಂತದ ಕೋರ್ಟುಗಳಲ್ಲಿ ಜೀವಾವಧಿ ಶಿಕ್ಷೆ ಎದುರಿಸಿರುವ ಪಪ್ಪು ಯಾದವ್ ಅವರನ್ನು ಹೈಕೋರ್ಟ್ ಸಾಕ್ಷಿಗಳ ಕೊರತೆ ಕಾರಣ ನೀಡಿ ಬಿಡುಗಡೆ ಮಾಡಿದೆ.
ಇದೀಗ ಪಪ್ಪು ಯಾದವ್ ಮಹಿಳೆಯರು ರಾಜಕೀಯ ಜೀವನವನ್ನು ಹೇಗೆ ಪ್ರವೇಶಿಸುತ್ತಾರೆ ಎಂಬ ಹೇಳಿಕೆ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿದೆ. ಬಿಹಾರದ ರಾಜ್ಯ ಮಹಿಳಾ ಆಯೋಗವು ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಅವರಿಗೆ ನೋಟಿಸ್ ನೀಡಿದೆ. “ಪೂರ್ನಿಯಾ ಸಂಸದರು ನೀಡಿದ ಆಕ್ಷೇಪಾರ್ಹ ಹೇಳಿಕೆಗಳನ್ನು ನಾವು ಸ್ವಯಂಪ್ರೇರಿತವಾಗಿ ಸ್ವೀಕರಿಸಿದ್ದೇವೆ. ಅವರಿಂದ ಉತ್ತರ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಆಯೋಗದ ಅಧ್ಯಕ್ಷೆ ಅಪ್ಸರಾ ಹೇಳಿದ್ದಾರೆ.
ಅಷ್ಟೇ ಅಲ್ಲ ಶೇ. 75 ರಷ್ಟು ನಾಯಕರು ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಾರೆ ಎಂದು ನಾನು ಸದನದಲ್ಲಿ ಹೇಳಿದ್ದೆ. ಎಲ್ಲರ ಮೊಬೈಲ್ ಪರಿಶೀಲಿಸಿ ಎಂದೂ ಪತ್ರಕರ್ತರಿಗೆ ಸವಾಲು ಹಾಕಿದ್ದಾರೆ ಪಪ್ಪು ಯಾದವ್.



