ಕಾಂಗ್ರೆಸ್ ಎಂದರೆ ಸೋನಿಯಾ ಗಾಂಧಿ. ಸೋನಿಯಾ ಎಂದರೆ ಕಾಂಗ್ರೆಸ್. ಉತ್ತರ ಪ್ರದೇಶದ ಅಮೇಥಿ ಹಾಗೂ ರಾಯ್ʻಬರೇಲಿಯಿಂದ ಸತತವಾಗಿ ಗೆದ್ದಿರುವ ಸೋನಿಯಾ ಗಾಂಧಿಗೆ ಸೋಲಿನ ಭಯ ಕಾಡುತ್ತಿದ್ದೆಯಾ..? ಹೌದು ಎನ್ನುತ್ತಿವೆ ಮೂಲಗಳು. ಸೋನಿಯಾ ಗಾಂಧಿಯೂ ಮಗನಂತೆಯೇ ಉತ್ತರ ಪ್ರದೇಶ ಬಿಟ್ಟು, ದಕ್ಷಿಣಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದಾರಂತೆ.
ಹಾಲಿ ಉತ್ತರಪ್ರದೇಶದ ರಾಯ್‌ಬರೇಲಿ ಸಂಸದೆಯಾಗಿರುವ ಸೋನಿಯಾ ಅವರಿಗೆ ಮುಂದಿನ ಚುನಾವಣೆಯಲ್ಲಿ ಅಲ್ಲಿ ಹಿನ್ನಡೆಯಾಗಬಹುದು ಎಂಬ ಭೀತಿ ಇದೆ. ರಾಮಮಂದಿರ ವಿಷಯ ಮುಂದಿಟ್ಟುಕೊಂಡು ರಾಜ್ಯದ ಎಲ್ಲ 80 ಕ್ಷೇತ್ರ ಗೆಲ್ಲಲು ಬಿಜೆಪಿ ತಂತ್ರ ರೂಪಿಸಿದೆ. ಹೀಗಾಗಿ ಉತ್ತರಪ್ರದೇಶ ಬಿಟ್ಟು ತೆಲಂಗಾಣ ರಾಜ್ಯ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಅವರನ್ನು ತೆಲಂಗಾಣದಿಂದ ಕಣಕ್ಕೆ ಇಳಿಸುವ ಪ್ರಯತ್ನಗಳು ನಡೆಯುತ್ತಿವೆ ಎನ್ನುತ್ತಿವೆ ದೆಹಲಿ ಕಾರಿಡಾರ್ʻಗಳು.
ಸೋನಿಯಾ ಗಾಂಧಿ ರಾಜಕೀಯಕ್ಕೆ ಬಂದಿದ್ದು 1999ರಲ್ಲಿ. ಆಗ ಕರ್ನಾಟಕದ ಬಳ್ಳಾರಿಯಂದ ಸ್ಪರ್ಧಿಸಿದ್ದರು. ಸೋನಿಯಾ ಎದುರು ಸುಷ್ಮಾ ಸ್ವರಾಜ್ ನಿಂತು ಸೋತಿದ್ದರು. ಸೋನಿಯಾ ಗಾಂಧಿ 1999ರಲ್ಲಿ ಬಳ್ಳಾರಿಯಲ್ಲಷ್ಟೇ ಅಲ್ಲ, ಉತ್ತರ ಪ್ರದೇಶದ ಅಮೇಥಿಯಿಂದಲೂ ಸ್ಪರ್ಧೆ ಮಾಡಿದ್ದರು. ಎರಡೂ ಕಡೆ ಗೆದ್ದ ಮೇಲೆ ಬಳ್ಳಾರಿ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟು, ಅಮೇಥಿಯನ್ನು ಉಳಿಸಿಕೊಂಡಿದ್ದರು.
ಮಗ ರಾಹುಲ್ ಗಾಂಧಿ ರಾಜಕೀಯಕ್ಕೆ ಬಂದಾಗ ಅಮೇಥಿಯನ್ನು ಮಗನಿಗೆ ಬಿಟ್ಟುಕೊಟ್ಟು ರಾಯ್ʻಬರೇಲಿಗೆ ಶಿಫ್ಟ್ ಆಗಿದ್ದರು. ಅಲ್ಲಿಂದಲೂ ಸತತ ಗೆದ್ದಿರುವ ಸೋನಿಯಾ, ಇದೂವರೆಗೆ ಸೋತಿಲ್ಲ. ರಾಯ್ʻಬರೇಲಿಯಿಂದ ಸತತ 5 ಬಾರಿ ಗೆದ್ದಿರುವ ಸೋನಿಯಾ ಗಾಂಧಿ, ಈ ಬಾರಿ ಕೇತ್ರ ಬದಲಿಸಲಿದ್ಧಾರೆ ಎನ್ನಲಾಗುತ್ತಿದೆ.
ಒಂದು ಕಾಲದಲ್ಲಿ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ಉತ್ತರ ಪ್ರದೇಶದಲ್ಲಿನ ಎಂಬತ್ತು ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಗೆದ್ದ ಏಕೈಕ ಕ್ಷೇತ್ರ ರಾಯ್ʻಬರೇಲಿ ಮಾತ್ರ. ಮಗ ರಾಹುಲ್ ಗಾಂಧಿ ಅಮೇಥಿಯಲ್ಲಿ ಕಳೆದ ಬಾರಿ ಸೋತಿದ್ದರು. ಅಮೇಥಿಯಲ್ಲಿ ಮಾತ್ರವೇ ನಿಂತಿದ್ದರೆ ಸಂಸತ್ ಪ್ರವೇಶಿಸಲು ಆಗುತ್ತಿರಲಿಲ್ಲ. ಅವರೀಗ ಕೇರಳದ ವಯನಾಡು ಕ್ಷೇತ್ರದ ಸಂಸದರಾಗಿದ್ದಾರೆ. ರಾಯ್ʻಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಈಗ ಕಾಂಗ್ರೆಸ್ʻನ ಒಬ್ಬನೇ ಒಬ್ಬ ಶಾಸಕನೂ ಇಲ್ಲ.
ಈಗ ಸೋನಿಯಾ ಅವರು ಕೂಡ ದಕ್ಷಿಣದತ್ತ ಬಂದರೆ ಬೇರೆ ವ್ಯಾಖ್ಯಾನಗಳು ವ್ಯಕ್ತವಾಗುತ್ತವೆ ಎಂಬ ಚರ್ಚೆ ಇದೆ. ಹೀಗಾಗಿ ಅವರು ತೆಲಂಗಾಣದ ಜತೆ ರಾಯ್‌ಬರೇಲಿಯಲ್ಲೂ ಸ್ಪರ್ಧಿಸುವ ಸಾಧ್ಯತೆ ಇದೆ. ಇಲ್ಲವಾದಲ್ಲಿ ರಾಯ್‌ಬರೇಲಿಯನ್ನು ಪುತ್ರಿ ಪ್ರಿಯಾಂಕಾ ಅವರಿಗೆ ಬಿಟ್ಟು ತೆಲಂಗಾಣದಲ್ಲಿ ಸ್ಪರ್ಧಿಸಬಹುದು ಎಂದೂ ಹೇಳಲಾಗುತ್ತಿದೆ.
ಫೆಬ್ರವರಿ ಐದರಂದು ದೆಹಲಿಯಲ್ಲಿ ಸೋನಿಯಾ ಅವರನ್ನು ತೆಲಂಗಾಣದ ಉಪ ಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಮತ್ತು ಸಚಿವ ಪೊಂಗುಲೇಟಿ ಶ್ರೀನಿವಾಸ ರೆಡ್ಡಿಯವರ ಜೊತೆಗೆ ರೇವಂತ್ ರೆಡ್ಡಿ ಭೇಟಿಯಾಗಿ, ರಾಜ್ಯದಿಂದ ಸ್ಪರ್ಧಿಸುವಂತೆ ಕೇಳಿಕೊಂಡಿದ್ದಾರೆ.
ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ಉದಯಿಸಿದ್ದಕ್ಕೆ ಸೋನಿಯಾ ಗಾಂಧಿಯವರೇ ಮೂಲ ಕಾರಣ. ನಮ್ಮ ನಾಡಿನ ಜನರು ಸೋನಿಯಾಜೀ ಅವರನ್ನು ತಾಯಿಯಂತೆ ಗೌರವಿಸುತ್ತಾರೆ. ಹಾಗಾಗಿ, ರಾಜ್ಯದಿಂದಲೇ ಸ್ಪರ್ಧಿಸುವಂತೆ ಮನವಿ ಮಾಡಲಾಗಿದೆ. ಸೂಕ್ತ ಸಮಯದಲ್ಲಿ ಈ ಬಗ್ಗೆ ನಿರ್ಧರಿಸಲಾಗುವುದು ಎಂದು ಸೋನಿಯಾ ಪ್ರತಿಕ್ರಿಯಿಸಿದ್ದಾರೆ” ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.
ಕರ್ನಾಟಕಕ್ಕೆ ಹೋಲಿಸಿದರೆ, ತೆಲಂಗಾಣವೇ ಸೋನಿಯಾ ಗಾಂಧಿಯವರಿಗೆ ಸೇಫ್ ಎನ್ನಲಾಗಿದೆ.



