ತಮಿಳುನಾಡಿನಲ್ಲಿ ಅಸ್ಥಿತ್ವಕ್ಕೆ ಹೋರಾಟ ಮಾಡ್ತಿದ್ದ ಬಿಜೆಪಿಗೆ ಹೊಸ ಶಕ್ತಿ ತುಂಬಿದ್ದ ಅಣ್ಣಾಮಲೈ.. ಇದೀಗ ಪಕ್ಷವನ್ನೇ ಬಿಟ್ಟು ಹೊಸ ಪಕ್ಷ ಕಟ್ಟುವ ಮನಸ್ಸು ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇತ್ತೀಚೆಗೆ ಕೇಂದ್ರ ಬಿಜೆಪಿ ಮತ್ತು ಅಣ್ಣಾಮಲೈ ನಡುವೆ ಹೊಂದಾಣಿಕೆ ಇರಲಿಲ್ಲ. ಅದು ಈಗ ಇನ್ನಷ್ಟು ಎಕ್ಸ್‌ಪೋಸ್ ಆಗುತ್ತಿದೆ. ಸದ್ಯಕ್ಕೆ ಅಣ್ಣಾಮಲೈ ʻಮಕ್ಕಳ್ ಶಕ್ತಿ ಇಯಕ್ಕಂʼ ಎಂದು ಆಂದೋಲನ ಶುರು ಮಾಡಿದ್ದಾರೆ. ಇದು ಅಣ್ಣಾಮಲೈ ಅವರು ಆರಂಭ ಮಾಡಲಿರುವ ಹೊಸ ಪಕ್ಷದ ಆರಂಭ ಎನ್ನಲಾಗುತ್ತಿದೆ.
ಬಿಜೆಪಿ ಹೈಕಮಾಂಡ್ ತಮಿಳುನಾಡು ಬಿಜೆಪಿಯ ಹಳೆಯ ನಾಯಕರು ಹೇಳಿದಂತೆ ಕೇಳುತ್ತಿತ್ತು. ಅಣ್ಣಾಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡರೆ ಈ ಬಾರಿಯೇ ಅಧಿಕಾರ ಸಿಕ್ಕಬಹುದು ಎಂದು ಮೈತ್ರಿಗೆ ಮುಂದಾಗಿತ್ತು. ಅದು ಅಣ್ಣಾಮಲೈಗೆ ಇಷ್ಟ ಇರಲಿಲ್ಲ. ಅಣ್ಣಾಮಲೈ ಸ್ಪಷ್ಟವಾಗಿ ವಿರೋಧ ಪಕ್ಷದಲ್ಲಿ ಕೂರೋಣ ಎಂದು ಹೇಳಿದ್ದರು. ಎಐಎಡಿಎಂಕೆ (AIADMK) ಜೊತೆಗಿನ ಮೈತ್ರಿಗಾಗಿ ಬಿಜೆಪಿಯು ಅಣ್ಣಾಮಲೈ ಅವರನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ನೈನಾರ್ ನಾಗೇಂದ್ರನ್ ಅವರನ್ನು ನೇಮಿಸಿತ್ತು. ಅಣ್ಣಾಮಲೈ ಟಿಕೆಟ್ ಕೂಡಾ ಬೇಡ ಎಂದು ಹೇಳಿ ಮೌನವಾಗಿದ್ದು ಬಿಟ್ಟರು. ನಾಮಕಾವಸ್ತೆ ಪ್ರಚಾರ ಮಾಡಿದರು. ಫಲಿತಾಂಶ ಕೊನೆಗೆ ಬಂದಿದ್ದು ಒಂದೇ ಒಂದು ಸೀಟು.
ಇಷ್ಟೆಲ್ಲ ಆದ ನಂತರ ಅಣ್ಣಾಮಲೈ ತಮಿಳುನಾಡಿನಲ್ಲಿ ಸಮಾನ ಮನಸ್ಕರನ್ನು ಒಟ್ಟುಗೂಡಿಸಲು, ಪ್ರಬಲ ಸ್ವಯಂಸೇವಕ ಜಾಲವನ್ನು ನಿರ್ಮಿಸಲು ಮತ್ತು ಭವಿಷ್ಯದ ರಾಜಕೀಯ ನಾಯಕರನ್ನು ರೂಪಿಸಲು ಅಣ್ಣಾಮಲೈ ಅವರು ಹೊಸ ಚಳವಳಿಯನ್ನು ಪ್ರಾರಂಭಿಸುತ್ತಿದ್ದಾರೆ. ಆ ಚಳವಳಿಗೆ ಅಣ್ಣಾಮಲೈ ಇಟ್ಟಿರುವ ಹೆಸರು ʻಮಕ್ಕಳ ಶಕ್ತಿ ಇಯಕ್ಕಂʼ ಅಂದರೆ ಅರ್ಥ (People’s Power Movement).
ಅಣ್ಣಾಮಲೈ ಅವರು ಇತ್ತೀಚೆಗೆ ಕೇಂದ್ರ ಸರ್ಕಾರ ಸಿಬಿಎಸ್‌ಇ ಪಠ್ಯದಲ್ಲಿ 3ನೇ ಭಾಷೆಯನ್ನು ಕಡ್ಡಾಯ ಮಾಡಿತ್ತು. ಇದನ್ನು ಅಣ್ಣಾಮಲೈ ಬಹಿರಂಗವಾಗಿ ವಿರೋಧ ಮಾಡಿದ್ದರು. ಅದಾದ ನಂತರ ದೆಹಲಿಯ ಹಲವು ನಾಯಕರು ಅಣ್ಣಾಮಲೈ ಅವರನ್ನು ತರಾಟೆಗೆ ತೆಗೆದುಕೊಂಡರಂತೆ. ಇದು ಅಣ್ಣಾಮಲೈಗೆ ಇಷ್ಟ ಆಗಿಲ್ಲ. ಹೀಗಾಗಿ ಪಕ್ಷದಿಂದ ಒಂದು ಕಾಲು ಹೊರಗೆ ಇಟ್ಟಿರುವ ಅಣ್ಣಾಮಲೈ ಗ್ರೌಂಡ್ ಟೆಸ್ಟ್ ಮಾಡಲು ಮುಂದಾಗಿದ್ಧಾರೆ. ಅದರ ಮೊದಲ ಹೆಜ್ಜೆಯೇ ಮಕ್ಕಳ ಶಕ್ತಿ ಇಯಕ್ಕಂ.
ಮೂಲಗಳ ಪ್ರಕಾರ, ಮುಂದಿನ ಕನಿಷ್ಠ 6 ತಿಂಗಳವರೆಗೆ ಅವರು ಯಾವುದೇ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವ ಆಲೋಚನೆ ಹೊಂದಿಲ್ಲ. ಸದ್ಯಕ್ಕೆ ಅವರು ‘ವಿ ದ ಲೀಡರ್ಸ್’ (We The Leaders) ಎಂಬ ಎನ್‌ಜಿಒ ಮೂಲಕ ಸಕ್ರಿಯರಾಗಿದ್ದಾರೆ. ಅಣ್ಣಾಮಲೈ ಅವರು ಬಿಜೆಪಿಯಲ್ಲೇ ಮುಂದುವರಿಯುತ್ತಾರಾ ಅಥವಾ ಸ್ವತಂತ್ರ ರಾಜಕೀಯ ಹಾದಿ ಹಿಡಿಯುತ್ತಾರಾ ಎಂಬ ಬಗ್ಗೆ ಜೂನ್ ಮೊದಲ ವಾರದಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ. ಅವರು ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುತ್ತಿದ್ದಾರೆ ಎಂಬ ಸುದ್ದಿಗಳಿಗೆ ಸಂಬಂಧಿಸಿದಂತೆ, ಅವರು ಸದ್ಯಕ್ಕೆ ಯಾವುದೇ ಹೊಸ ಪಕ್ಷವನ್ನು ಘೋಷಿಸಿಲ್ಲ, ಆದರೆ ತಮಿಳುನಾಡಿನಲ್ಲಿ ಒಂದು “ಹೊಸ ಚಳವಳಿ” ಆರಂಭಿಸಲು ಸಜ್ಜಾಗಿದ್ದಾರೆ. ಅಂದಹಾಗೆ ಇದು ಬಿಜೆಪಿಗೆ ಗುಡ್ ನ್ಯೂಸ್ ಅಂತೂ ಅಲ್ಲ.



