ಕರ್ನಾಟಕದಲ್ಲಿ ಸ್ವಾಮೀಜಿಯೊಬ್ಬರು ರಾಜಕೀಯಕ್ಕೆ ಬರುತ್ತಾರೆ. ಸಿಎಂ ಆಗುತ್ತಾರೆ ಎಂಬ ಸುದ್ದಿಗಳು ಹೊಸದಲ್ಲ. ಇತ್ತೀಚೆಗೆ ಪ್ರಶಾಂತ್ ಕಿಣಿ ಎಂಬ ಜ್ಯೋತಿಷಿಯೊಬ್ಬರು ಹೇಳಿದ್ದ ಮಾತು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಯಾರಿಗೆ ಇರಬಹುದು ಅಂತಹ ಅವಕಾಶ.. ಯಾರು ಸಿಎಂ ಆಗಬಹುದು ಎಂಬ ದೊಡ್ಡ ಮಟ್ಟದ ಚರ್ಚೆಗಳು ನಡೆದಿದ್ದವು. ಪ್ರಭಾವಿ ಸ್ವಾಮೀಜಿ, ಪ್ರಬಲ ಸಮುದಾಯದ ಸ್ವಾಮೀಜಿ, ಸುಶಿಕ್ಷಿತ ವ್ಯಕ್ತಿ ಎಂದೆಲ್ಲ ಚರ್ಚೆಗಳು ನಡೆದಾಗ ಜನ ಊಹೆ ಮಾಡಿದ್ದು ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಅವರನ್ನು. ಈ ಚರ್ಚೆ ತಿಂಗಳಿಂದ ನಡೆಯುತ್ತಿದ್ದರೂ.. ಅದಕ್ಕೆಲ್ಲ ಸ್ವಾಮೀಜಿಯವರೇ ಉತ್ತರ ಕೊಟ್ಟಿದ್ದಾರೆ.
ಆದಿಚುಂಚನಗಿರಿ ಮಠವು ರಾಜಕೀಯದಿಂದ ದೂರವಿದ್ದು, ಕೇವಲ ಆಧ್ಯಾತ್ಮಿಕ ಕೇಂದ್ರವಾಗಿದೆ ಎಂದು ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ. ಯೋಗಿ ಆದಿತ್ಯನಾಥ್ ಅವರಂತೆ ತಾವೂ ಸಿಎಂ ಆಗಬೇಕೆಂಬ ಚರ್ಚೆಗೆ ತೆರೆ ಎಳೆದ ಅವರು, ಮಠವು ಧಾರ್ಮಿಕ ಪರಂಪರೆಯ ಹಾದಿಯಲ್ಲೇ ಮುಂದುವರಿಯಲಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ʻʻ ಆದಿಚುಂಚನಗಿರಿ ಮಠ ರಾಷ್ಟ್ರ ಹಾಗೂ ರಾಜ್ಯ ಆಳುವವರನ್ನು ಸೃಷ್ಟಿ ಮಾಡುತ್ತದೆಯೇ ಹೊರತು, ರಾಜಕಾರಣ ಮಾಡುವುದಿಲ್ಲ. ನಮ್ಮದು ಶುದ್ದ ಆಧ್ಯಾತ್ಮಿಕ ಮಠ. ರಾಜಕಾರಣದ ಸೋಂಕು ಇಲ್ಲʼʼ ಎಂದು ಹೇಳಿದ್ಧಾರೆ.
ಮಾಧ್ಯಮವರು ಬಿಟ್ಟಿಲ್ಲ. ಮತ್ತೆ ಪ್ರಶ್ನೆ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ನಾಥ ಪಂಥಕ್ಕೆ ಸೇರಿದವರು. ಆದಿಚುಂಚನಿಗಿರಿ ಸ್ವಾಮೀಜಿಗಳೂ ನಾಥ ಪಂಥದವರು. ಉತ್ತರ ಪ್ರದೇಶದಲ್ಲಿ ಯೋಗಿ ಆದಂತೆಯೇ ನೀವೇಕೆ ಆಗಬಾರದು ಎಂದು ಕೆದಕಿದ್ದಾರೆ. ಅದಕ್ಕೆ ನಿರ್ಮಲಾನಂದ ಸ್ವಾಮೀಜಿ ಕೊಟ್ಟಿರುವ ಉತ್ತರ ʻʻ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರು ಸಿಎಂ ಆಗುವ ಮುಂಚೆಯೇ ಅವರ ಮಠ ರಾಜಕಾರಣದಲ್ಲಿದೆ. ಆದರೆ, ಆದಿಚುಂಚನಗಿರಿ ಮಠ ಎಂದಾದರೂ ರಾಜಕಾರಣ ಪ್ರವೇಶ ಮಾಡಿದ್ದನ್ನು ನೋಡಿದ್ದೀರಾ?. ಅವರಿಗೂ, ನಮಗೂ ವ್ಯತ್ಯಾಸ ಇಷ್ಟೇ. ಎಂದೂ ಕೂಡ ಆ ಆಲೋಚನೆ ಬೇಡʼʼ ಎಂದು ಕ್ಲಿಯರ್ ಆಗಿ ಹೇಳಿದ್ಧಾರೆ.
ಆದಿಚುಂಚನಗಿರಿ ಮಠವು ಕೇವಲ ಆಧ್ಯಾತ್ಮಿಕ, ಧಾರ್ಮಿಕ ಮತ್ತು ಸಾಮಾಜಿಕ ಸೇವೆಗೆ ಮುಡಿಪಾದ ಕೇಂದ್ರವಾಗಿದೆ. ಮಠಕ್ಕೆ ರಾಜಕಾರಣದ ಕೊಂಚ ಸೊಕ್ಕು ಅಥವಾ ಸಂಪರ್ಕ ಒಂದಿಷ್ಟೂ ಇಲ್ಲ ಎಂದು ಶ್ರೀಗಳು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದ ಚಾಮುಂಡೇಶ್ವರಿ ಬಸವಪ್ಪನ ಪುಣ್ಯಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಜೋಗಿಗಳ ಸಮಾವೇಶ ಹಾಗೂ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ವೇಳೆ ಈ ಎಲ್ಲ ಅನುಮಾನಗಳಿಗೂ ಉತ್ತರ ಕೊಟ್ಟಿದ್ದಾರೆ ನಿರ್ಮಲಾನಂದ ಸ್ವಾಮೀಜಿ.
ಇಂತಹ ಚರ್ಚೆಗಳು ಶುರುವಾಗಲು ಕಾರಣವೇನು?
ನಾಥ ಸಂಪ್ರದಾಯದ ನಂಟು: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ‘ನಾಥ ಸಂಪ್ರದಾಯ’ಕ್ಕೆ ಸೇರಿದವರಾಗಿದ್ದಾರೆ. ಕರ್ನಾಟಕದ ಆದಿಚುಂಚನಗಿರಿ ಮಠವೂ ಸಹ ಇದೇ ನಾಥ ಪರಂಪರೆಯನ್ನು ಹೊಂದಿದೆ. ಈ ಧಾರ್ಮಿಕ ಸಾಮ್ಯತೆಯಿಂದಾಗಿ, ಯೋಗಿ ಆದಿತ್ಯನಾಥ್ ಅವರಂತೆ ನಿರ್ಮಲಾನಂದನಾಥ ಶ್ರೀಗಳೂ ರಾಜಕೀಯಕ್ಕೆ ಬರಬಹುದು ಎಂಬ ಚರ್ಚೆಗಳು ಮತ್ತು ಊಹಾಪೋಹಗಳು ಆಗಾಗ ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುತ್ತವೆ. ಇನ್ನು ಈ ಬಾರಿ ಈ ಸುದ್ದಿ ಹರಡುವುದಕ್ಕೆ ಕಾರಣವಾಗಿದ್ದು ಪ್ರಶಾಂತ್ ಕಿಣಿ ಎಂಬ ಸ್ವಾಮೀಜಿ. ಅವರು ಕರ್ನಾಟಕದಲ್ಲಿ ಗುರು ಪರಂಪರೆಯ ಹಿನ್ನೆಲೆಯವರೊಬ್ಬರು ಸಿಎಂ ಆಗುತ್ತಾರೆ ಎಂದು ಪೋಸ್ಟ್ ಹಾಕಿದ್ದರ ಹಿನ್ನೆಲೆ ಈ ಎಲ್ಲ ಸುದ್ದಿಗಳೂ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿವೆ.



