ಮದುವೆಯಾಗಿ ಡಿವೋರ್ಸ್ ಆದ ಮೇಲೆ ಪತ್ನಿಗೆ ಪತಿಯಾದವನು ಜೀವನಾಂಶ ಕೊಡಬೇಕು. ಕೊಡಲೇಬೇಕು. ಇದನ್ನೊಂದು ಸಂಪ್ರದಾಯದಂತೆ ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಅಪರೂಪಕ್ಕೆ ಬರುವ ಇಂತಹ ತೀರ್ಪುಗಳು ಡಿವೋರ್ಸ್, ಜೀವನಾಂಶದ ಕುರಿತಂತೆ ಬೇರೆಯದೇ ಆದ ವಿವರಣೆಯನ್ನು ನೀಡುತ್ತವೆ. ಈಗಿನ ವಿಷಯದಲ್ಲೂ ಅಷ್ಟೇ, ಪತಿಯ ಜೊತೆ ಪತ್ನಿಯಾದವರು ಡಿವೋರ್ಸ್ ಕೇಳಿದ್ದರು. ಜೀವನಾಂಶವನ್ನೂ ಕೇಳಿದ್ದರು. ಆದರೆ ಪತ್ನಿಯ ವೇತನ, ಗಂಡನ ವೇತನಕ್ಕಿಂತ ಹೆಚ್ಚಿತ್ತು. ಹೀಗಾಗಿ ಜೀವನಾಂಶ ಅಗತ್ಯ ಇಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಡಿವೋರ್ಸ್ ವೇಳೆ ಜೀವನಾಂಶದ ಕುರಿತಂತೆ ಕೆಲವು ಸ್ಪಷ್ಟನೆಗಳಿವೆ. ಎಲ್ಲ ಸಂದರ್ಭದಲ್ಲೂ ಪತಿ ಎನ್ನಿಸಿಕೊಂಡ ವ್ಯಕ್ತಿಯೇ, ಪತ್ನಿಗೆ ಜೀವನಾಂಶ ಕೊಡಬೇಕಿಲ್ಲ. ಪತಿಗೆ ಪತ್ನಿಯಾದವಳೇ ಜೀವನಾಂಶ ನೀಡಿದ್ದ ಪ್ರಕರಣಗಳೂ ಇವೆ.
ಪತಿ, ಪತ್ನಿಗೆ ಜೀವನಾಂಶ ಕೊಡಬೇಕಿಲ್ಲ ಎಂದು ತೀರ್ಪು ನೀಡಿರುವುದು ಬೆಂಗಳೂರು ಹೈಕೋರ್ಟ್. ಈ ಪ್ರಕರಣದಲ್ಲಿ ಪತ್ನಿಯಾದವರಿಗೆ ಮಾಸಿಕ ಸಂಬಳ 1 ಲಕ್ಷ ರೂ ಇದ್ದರೆ, ಪತಿಯ ವೇತನ 60 ಸಾವಿರ ರೂ. ಇತ್ತು. ಪತ್ನಿ ಆಗಿದ್ದ ಮಹಿಳೆ ಮಾಸಿಕ 20 ಸಾವಿರ ರೂ. ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಮಧ್ಯಂತರ ಆದೇಶ ನೀಡಿರುವ ನ್ಯಾಯಾಲಯ ಅದು ಕಾನೂನಿನ ದೃಷ್ಟಿಯಲ್ಲಿ ಸಮರ್ಥನೀಯವಲ್ಲ, ಜೀವನಾಂಶ ಕೊಡಬೇಕಿಲ್ಲ ಎಂದು ಹೇಳಿದೆ.
ಕಾನೂನಿನ ಪ್ರಕಾರ ಪತ್ನಿಗೆ ಜೀವನಾಂಶ (Maintenance) ಕೊಡುವುದು ಎಲ್ಲಾ ಪರಿಸ್ಥಿತಿಗಳಲ್ಲೂ ಕಡ್ಡಾಯವಲ್ಲ. ಭಾರತೀಯ ಕಾನೂನು ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳ ಪ್ರಕಾರ, ಪತ್ನಿಯು ಪತಿಗಿಂತ ಹೆಚ್ಚು ಸಂಪಾದಿಸುತ್ತಿದ್ದರೆ ಅಥವಾ ತನ್ನ ಜೀವನವನ್ನು ಸ್ವತಂತ್ರವಾಗಿ ಮತ್ತು ಗೌರವಾನ್ವಿತವಾಗಿ ನಡೆಸಲು ಸಾಕಾಗುವಷ್ಟು ಆದಾಯ ಹೊಂದಿದ್ದರೆ ಜೀವನಾಂಶ ಸಿಗುವುದಿಲ್ಲ. ಉತ್ತಮ ವಿದ್ಯಾರ್ಹತೆ ಇದ್ದು, ದುಡಿಯುವ ಸಾಮರ್ಥ್ಯವಿದ್ದರೂ ಸುಮ್ಮನಿದ್ದರೆ ಕೆಲಸ ಮಾಡದೆ ಸುಮ್ಮನೆ ಕುಳಿತಿದ್ದರೆ ನ್ಯಾಯಾಲಯ ಜೀವನಾಂಶ ನಿರಾಕರಿಸುವ ಸಾಧ್ಯತೆ ಇದೆ. ಪತಿಯೊಂದಿಗೆ ವಾಸಿಸಲು ಯಾವುದೇ ಸೂಕ್ತ ಅಥವಾ ಕಾನೂನುಬದ್ಧ ಕಾರಣ ನೀಡದೇ ಹೋದರೆ, ಆಕೆಗೆ ಜೀವನಾಂಶ ಪಡೆಯುವ ಹಕ್ಕಿರುವುದಿಲ್ಲ. ಪತ್ನಿಯು ಮತ್ತೊಬ್ಬ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಆ ಜೀವನದಲ್ಲೇ ಮುಂದುವರಿದಿದ್ದರೆ ಆಕೆಗೆ ಪತಿಯಿಂದ ಜೀವನಾಂಶ ಸಿಗುವುದಿಲ್ಲ. ದಂಪತಿಗಳು ಯಾವುದೇ ಜೀವನಾಂಶ ಬೇಡಿಕೆಯಿಲ್ಲದೆ, ಪರಸ್ಪರ ಒಪ್ಪಿಗೆಯಿಂದ ಬೇರೆಯಾಗಲು ನಿರ್ಧರಿಸಿದ್ದರೆ ನಂತರ ಜೀವನಾಂಶ ಕೇಳಲು ಬರುವುದಿಲ್ಲ.
ಹೆಂಡತಿಯೇ ಗಂಡನಿಗೆ ಜೀವನಾಂಶ ಕೊಟ್ಟಿದ್ದ ಪ್ರಕರಣಗಳು
ಲಲಿತ್ ಮೋಹನ್ ವರ್ಸಸ್ ತ್ರಿಪ್ತಾ ದೇವಿ (ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್) ಪ್ರಕರಣ : ಇದು ಭಾರತದ ನ್ಯಾಯಾಂಗ ಇತಿಹಾಸದಲ್ಲೇ ಅತ್ಯಂತ ಪ್ರಸಿದ್ಧ ಪ್ರಕರಣವಾಗಿದೆ. ಈ ಪ್ರಕರಣದಲ್ಲಿ ವಿಚ್ಛೇದನ ಪಡೆದ ಪತಿಯು ತನ್ನ ಮಾಜಿ ಪತ್ನಿಯಿಂದ ಜೀವನಾಂಶ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದನು. ಪತಿಯು ಆರ್ಥಿಕವಾಗಿ ಸಂಪೂರ್ಣ ಅಸಹಾಯಕನಾಗಿದ್ದ. ಆದರೆ ಪತ್ನಿಗೆ ಉತ್ತಮ ಆದಾಯ ಇತ್ತು. ಅದನ್ನು ಪರಿಗಣಿಸಿದ ಹೈಕೋರ್ಟ್, ಪತ್ನಿಯು ತನ್ನ ಪತಿಗೆ ಮಾಸಿಕ ಜೀವನಾಂಶ ಮತ್ತು ಕೋರ್ಟ್ ವೆಚ್ಚವನ್ನು ನೀಡಬೇಕು ಎಂದು ಐತಿಹಾಸಿಕ ತೀರ್ಪು ನೀಡಿತು.
ಮನೀಶ್ ಜೈನ್ ವರ್ಸಸ್ ಆಕಾಂಕ್ಷಾ ಜೈನ್ (ಸುಪ್ರೀಂ ಕೋರ್ಟ್ – 2017): ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 24 ಕೇವಲ ಪತ್ನಿಗೆ ಮಾತ್ರ ಸೀಮಿತವಾಗಿಲ್ಲ ಎಂದು ಸ್ಪಷ್ಟಪಡಿಸಿತು. ಯಾವುದೇ ಒಂದು ವೈವಾಹಿಕ ವಿವಾದದ ಪ್ರಕರಣ ಕೋರ್ಟ್‌ನಲ್ಲಿ ನಡೆಯುತ್ತಿರುವಾಗ, ಪತಿಯು ತನಗಾಗಿ ದುಡಿಯಲು ಸಾಧ್ಯವಾಗದ ಸ್ಥಿತಿಯಲ್ಲಿದ್ದರೆ ಮತ್ತು ಪತ್ನಿಯು ಆರ್ಥಿಕವಾಗಿ ಸಶಕ್ತಳಾಗಿದ್ದರೆ, ಪತಿಯೂ ಸಹ ಪತ್ನಿಯಿಂದ ಮಧ್ಯಂತರ ಜೀವನಾಂಶವನ್ನು ಪಡೆಯಬಹುದು ಎಂದು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯಿತು.
ಹೀಗಿದ್ದರೆ ಪತಿಯೂ ಪತ್ನಿಯಿಂದ ಜೀವನಾಂಶ ಪಡೆಯಬಹುದು
ಪತಿಯು ಯಾವುದೇ ತೀವ್ರವಾದ ಕಾಯಿಲೆ, ದೈಹಿಕ ಅಂಗವೈಕಲ್ಯ ಅಥವಾ ಮಾನಸಿಕ ಅಸ್ವಸ್ಥತೆಯಿಂದಾಗಿ ದುಡಿಯಲು ಸಂಪೂರ್ಣವಾಗಿ ಅಸಮರ್ಥನಾಗಿದ್ದರೆ, ಪತ್ನಿಯು ಅತ್ಯಂತ ಶ್ರೀಮಂತಳಾಗಿದ್ದು ಅಥವಾ ದೊಡ್ಡ ಉದ್ಯೋಗದಲ್ಲಿದ್ದು, ಪತಿಯು ಯಾವುದೇ ಆದಾಯದ ಮೂಲವಿಲ್ಲದೆ ತುತ್ತು ಅನ್ನಕ್ಕೂ ಕಷ್ಟಪಡುವ ಪರಿಸ್ಥಿತಿಯಲ್ಲಿದ್ದರೆ ಪತಿಗೆ ಪತ್ನಿ ಆದವಳು ಜೀವನಾಂಶ ನೀಡಬೇಕು. ಇಲ್ಲಿ ಪತ್ನಿಯ ದುಡಿಮೆಯೂ ಚೆನ್ನಾಗಿರಬೇಕು.
ಆದರೆ ಭಾರತದಲ್ಲಿ ಶೇಕಡಾ 95 ಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಪತಿಯೇ ಪತ್ನಿಗೆ ಜೀವನಾಂಶ ನೀಡಬೇಕಾಗುತ್ತದೆ.



