ದೇವರಿಗೆ ಮುಡಿ ಕೊಡುವುದು ಸಹಜ ಸಾಮಾನ್ಯ. ರಕ್ತಕಣ್ಣೀರು ಚಿತ್ರದಲ್ಲೊಂದು ಡೈಲಾಗ್ ಇದೆ. ಹರಕೆ ಹೊತ್ತಿದ್ದರೆ ಕೈ ಕೊಡು, ಕಾಲು ಮುರಿದು ಕೊಡು, ಹಾರ್ಟು ಕೊಡು ಎಂದೆಲ್ಲ ಡೈಲಾಗ್ ಹೊಡೀತಾರೆ ಉಪೇಂದ್ರ. ಇದನ್ನು ಕೇಳಿದ ಕೆಲವರಿಗಾದರೂ ಹೌದು.. ಹೌದು ಎನ್ನಿಸುವುದು ಸಹಜ. ಆದರೆ ದೇವರಿಗೆ ಅದರಲ್ಲೂ ತಿಮ್ಮಪ್ಪನಿಗೆ ಮುಡಿ ಕೊಡುವುದರ ಹಿಂದೆಯೂ ಒಂದು ಕಥೆ ಇದೆ. ನಂಬಿಕೆ ಇದೆ. ಆಚರಣೆ, ಪದ್ಧತಿ ಇದೆ. ಅದರ ಬಗ್ಗೆ ಹಿಂದೂಗಳು ಆರಾಧಿಸುವ ಪುರಾಣದಲ್ಲಿ ಎರಡು ಕಥೆಗಳಿವೆ. ಎರಡೂ ಕಥೆಗಳು ಸ್ಕಂದ ಪುರಾಣದಲ್ಲಿದೆ.
ಒಂದು ಕಥೆ ನೀಲಾದೇವಿಯದ್ದು : ಪುರಾಣಗಳ ಪ್ರಕಾರ, ಒಮ್ಮೆ ವೆಂಟಕೇಶ್ವರ ಸ್ವಾಮಿ ಬೆಟ್ಟದ ಮೇಲೆ ನೆಲೆಸಿದ್ದಾಗ ಆತನಿಗೆ ಪೆಟ್ಟಾಗಿತ್ತು. ತಲೆಯ ಒಂದು ಭಾಗದ ಕೂದಲು ಉದುರಿ ಹೋಗಿತ್ತು. ಸ್ವಾಮಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಭಕ್ತರಿಗೆ ಆತನ ಸುಂದರ ರೂಪದಲ್ಲಿ ಸಣ್ಣ ಕಲೆಯಾದರೂ ಅದು ಸಹಿಸಲು ಆಗುತ್ತಿರಲಿಲ್ಲ. ಆ ಸಮಯದಲ್ಲಿ ನೀಲಾದೇವಿ ಎಂಬ ಮಹಿಳೆ ಸ್ವಾಮಿಯ ತಲೆಯಲ್ಲಿ ಕೂದಲು ಉದುರಿರುವುದನ್ನು ನೋಡುತ್ತಾಳೆ. ತನ್ನ ತಲೆಯ ಕೂದಲನ್ನೇ ಕತ್ತರಿಸಿ ಸ್ವಾಮಿಗೆ ನೀಡುತ್ತಾಳೆ. ತನ್ನ ಸೌಂದರ್ಯಕ್ಕಿಂತ ಆಕೆಗೆ ಸ್ವಾಮಿಯ ಮೇಲಿನ ಭಕ್ತಿಯೇ ದೊಡ್ಡದಾಗಿದ್ದ ನೀಲಾದೇವಿಯ ನಿಸ್ವಾರ್ಥ ಪ್ರೀತಿಗೆ ವೆಂಕಟೇಶ್ವರ ಮಾರು ಹೋಗುತ್ತಾನೆ. “ಇಂದಿನಿಂದ ಈ ಬೆಟ್ಟದ ಮೇಲೆ ಯಾರು ತಮ್ಮ ಕೂದಲನ್ನು ಅರ್ಪಿಸುತ್ತಾರೋ, ಅದು ನೀಲಾದೇವಿಯ ಕೈಯಿಂದಲೇ ನನಗೆ ಸಿಕ್ಕಂತಾಗುತ್ತದೆ” ಎಂದು ವರ ನೀಡುತ್ತಾನೆ. ಈಕೆಯ ನೆನಪಿಗಾಗಿಯೇ ತಿರುಮಲದ 7 ಬೆಟ್ಟಗಳಲ್ಲಿ ಒಂದಕ್ಕೆ ನೀಲಾದ್ರಿ ಎಂಬ ಹೆಸರಿದೆ.
ಇನ್ನೊಂದು ಕಥೆ ಹಸುವಿನ ಹಾಲಿನದ್ದು : ಸ್ಕಂದ ಪುರಾಣದ ವೆಂಕಟಾಚಲ ಮಹಾತ್ಮ್ಯದಲ್ಲಿ ಮತ್ತೊಂದು ಕಥೆಯಿದೆ. ಶ್ರೀನಿವಾಸನು ಈ ಬೆಟ್ಟಕ್ಕೆ ಬಂದಾಗ ಯಾವುದೇ ದೇವಸ್ಥಾನವಿರಲಿಲ್ಲ. ಆತ ಒಂದು ಹುತ್ತದೊಳಗೆ ಅಡಗಿ ಕುಳಿತಿರುತ್ತಾನೆ. ಯಾರಿಗೂ ಈ ವಿಷಯ ತಿಳಿದಿರುವುದಿಲ್ಲ. ಆದರೆ ಒಂದು ಹಸು ಪ್ರತಿದಿನ, ಆ ಹುತ್ತದ ಬಳಿ ಬಂದು ತನ್ನ ಹಾಲನ್ನೆಲ್ಲಾ ಸ್ವಾಮಿಗೆ ಅರ್ಪಿಸಿ ಹೋಗುತ್ತಿರುತ್ತದೆ. ಒಂದು ದಿನ ಹಸುವಿನ ಮಾಲೀಕ ಅದನ್ನು ಹಿಂಬಾಲಿಸಿ ಬಂದು ಹುತ್ತವನ್ನು ಅಗೆದಾಗ, ಅಲ್ಲಿ ಶ್ರೀನಿವಾಸನಿರುವುದು ತಿಳಿಯುತ್ತದೆ. ಇದರ ಸಂಕೇತ ಏನೆಂದರೆ ಭಕ್ತರು ತಮಗೆ ಇಷ್ಟವಾದ ವಸ್ತುವನ್ನು ಸ್ವಾಮಿಗೆ ನೀಡುವುದು ಎಂದು.
ಧರ್ಮಶಾಸ್ತ್ರಗಳ ಪ್ರಕಾರ, ಮನುಷ್ಯ ಮಾಡುವ ಪಾಪಗಳು ಮತ್ತು ತಪ್ಪುಗಳು ಸುಮ್ಮನೆ ಮಾಯವಾಗುವುದಿಲ್ಲ, ಅವು ಕಾಲಕ್ರಮೇಣ ತಲೆಯಲ್ಲಿ (ಕೂದಲಿನಲ್ಲಿ) ಶೇಖರಣೆಯಾಗುತ್ತವೆ ಎಂಬ ನಂಬಿಕೆಯಿದೆ. ಹಾಗಾಗಿ, ತಲೆ ಬೋಳಿಸಿಕೊಳ್ಳುವ ಮೂಲಕ ಮನುಷ್ಯ ತನ್ನ ಹಿಂದಿನ ತಪ್ಪುಗಳನ್ನು, ಪಾಪಗಳನ್ನು ಮತ್ತು ತನ್ನ ಅಹಂಕಾರವನ್ನು ದೇವರ ಮುಂದಿಟ್ಟು ಹಗುರಾಗುತ್ತಾನೆ ಎನ್ನಲಾಗುತ್ತದೆ. ಕೂದಲು ಅಹಂಕಾರದ ಸಂಕೇತವೂ ಹೌದಂತೆ. ಅಹಂಕಾರದ ಸಂಕೇತವಾಗಿರುವ ಸೌಂದರ್ಯವನ್ನು ಭಗವಂತನ ಪಾದಕ್ಕೆ ಅರ್ಪಿಸುವುದೇ ಮುಡಿ ಕೊಡುವುದರ ಹಿಂದಿನ ಅಸಲಿ ಉದ್ದೇಶ. ಇಂದಿಗೂ ದಿನಕ್ಕೆ ಸುಮಾರು 50,000ಕ್ಕೂ ಹೆಚ್ಚು ಭಕ್ತರು ‘ಕಲ್ಯಾಣ ಕಟ್ಟ’ದಲ್ಲಿ (ಮುಡಿ ಕೊಡುವ ಸ್ಥಳ) ತಮ್ಮ ಮುಡಿಯನ್ನು ಅರ್ಪಿಸುತ್ತಾರೆ. ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯವು ಭಕ್ತಿ, ನಂಬಿಕೆ ಮತ್ತು ಅಹಂಕಾರದ ಶರಣಾಗತಿಗೆ ಜೀವಂತ ಉದಾಹರಣೆಯಾಗಿದೆ.



