ಬಾಗಲಕೋಟೆಯ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ (BTDA) ಕಚೇರಿಯಲ್ಲಿ ಮುಳುಗಡೆ ಭೂಮಿಗೆ ಸಿಗಬೇಕಾದ ಪರಿಹಾರದ ವಿಳಂಬದಿಂದ ಬೇಸತ್ತ ರೈತರೊಬ್ಬರು ಸರ್ಕಾರಿ ಅಧಿಕಾರಿಗೆ ಚಪ್ಪಲಿಯಿಂದ ಹೊಡೆದ ಘಟನೆ ಶನಿವಾರ ನಡೆದಿದೆ. ಈ ಕುರಿತಾದ ಸಂಪೂರ್ಣ ವಿವರಗಳನ್ನು ನೋಡಿದರೆ ರೈತರು ಅದೆಷ್ಟು ಅಸಹಾಯಕರಾಗಿದ್ದಾರೆ ಎಂದು ಅನ್ನಿಸದೇ ಇರದು. ಏಕೆಂದರೆ ರೈತ ಸರ್ಕಾರಕ್ಕೆ ಭೂಮಿಯನ್ನು ಕೊಟ್ಟು 22 ವರ್ಷಗಳಾಗಿವೆ. ಪರಿಹಾರ ಬಂದಿಲ್ಲ.
22 ವರ್ಷಗಳ ಹಿಂದೆ ಬಾಗಲಕೋಟೆ ತಾಲೂಕಿನ ಬಸಪ್ಪ (ಬಸವರಾಜ) ದೊಡ್ಡಮನಿ ಅವರ 4 ಎಕರೆ ಭೂಮಿಯನ್ನು ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಸರ್ಕಾರ ವಶಪಡಿಸಿಕೊಂಡಿದೆ. ಆದರೆ, ಎರಡು ದಶಕಗಳು ಕಳೆದರೂ ಸರ್ಕಾರದಿಂದ ಸಿಗಬೇಕಾದ ಭೂ ಪರಿಹಾರ ಧನ ಅಥವಾ ಹಕ್ಕುಪತ್ರ ದೊರೆತಿರಲಿಲ್ಲ.
22 ವರ್ಷಗಳಲ್ಲಿ ಏನೇನೆಲ್ಲ ಆಗಿದೆ..?
ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ.. ಈ 22 ವರ್ಷಗಳ ಅವಧಿಯಲ್ಲಿ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಈಗ ಆಟಕ್ಕೆ ಉಂಟು.. ಲೆಕ್ಕಕ್ಕೆ ಇಲ್ಲ ಎಂಬ ಪಕ್ಷವಾಗಿದೆ. 2004ರಲ್ಲಿ ಪ್ರಧಾನಿಯಾಗಿದ್ದ ವಾಜಪೇಯಿ, ಆನಂತರ ಪ್ರಧಾನಿಯಾದ ಮನಮೋಹನ್ ಸಿಂಗ್ ಅವರಿಬ್ಬರೂ ಈಗ ಬದುಕಿಲ್ಲ. ಅಷ್ಟೇ ಏಕೆ, 2004ರಲ್ಲಿ ಕರ್ನಾಟಕದ ಸಿಎಂ ಆಗಿದ್ದ ಎಸ್ ಎಂ ಕೃಷ್ಣ ಅವರೂ ಈಗ ಜೀವಂತವಾಗಿಲ್ಲ. 2004ರಲ್ಲಿ ಕರ್ನಾಟಕದಲ್ಲಿ ಜೆಡಿಎಸ್‌ನಲ್ಲಿ ಬೆಂಕಿ ಉಗುಳುತ್ತಿದ್ದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಸೇರಿ 2 ಬಾರಿ ಸಿಎಂ ಆಗಿ ಹೋಗಿದ್ಧಾರೆ. ಯಡಿಯೂರಪ್ಪ 4 ಬಾರಿ ಸಿಎಂ ಆಗಿ ಹೋಗಿದ್ದಾರೆ. ಕುಮಾರಸ್ವಾಮಿ 2 ಬಾರಿ ಸಿಎಂ. ಈಗ ಡಿಕೆ ಶಿವಕುಮಾರ್ ಸಿಎಂ.
ಅಷ್ಟೆಲ್ಲ ಯಾಕೆ.. ಸರ್ಕಾರ ಈ ರೈತನ ಭೂಮಿ ವಶಪಡಿಸಿಕೊಂಡಾಗ ವಾಟ್ಸಪ್, ಯೂಟ್ಯೂಬ್, ಫೇಸ್ ಬುಕ್ ಕೂಡಾ ಇರಲಿಲ್ಲ. ಗೂಗಲ್ ಆಗಿನ್ನೂ ಭಾರತಕ್ಕೆ ಕಾಲಿಟ್ಟು ಅಂಬೆಗಾಲಿಡುತ್ತಿತ್ತು. ಆ ರೈತನೂ ಅಷ್ಟೇ, ಯೌವ್ವನದ ದಿನಗಳಲ್ಲಿದ್ದನೇನೋ.. ಈಗ ಆತನಿಗೂ ವಯಸ್ಸಾಗಿದೆ. ಪರಿಹಾರ ಸಿಕ್ಕಿಲ್ಲ.
ಹಕ್ಕುಪತ್ರ ವಿತರಣೆ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ, ಕಚೇರಿಗೆ ಪದೇ ಪದೇ ಅಲೆದಾಡಿ ಬೇಸತ್ತಿದ್ದ ರೈತ ಬಸಪ್ಪ, ನನ್ನ ಫೈಲ್ ಏಕೆ ಮಾಡಿಲ್ಲ ಎಂದು ಅಧಿಕಾರಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ರೊಚ್ಚಿಗೆದ್ದ ರೈತ ಅಧಿಕಾರಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಆದರೆ, ಸರ್ಕಾರಿ ನೌಕರನ ಮೇಲೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಜೀವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ರೈತ ಬಸಪ್ಪ ದೊಡ್ಡಮನಿ ವಿರುದ್ಧ ಬಾಗಲಕೋಟೆಯ ನವನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.
ಹಲ್ಲೆಗೊಳಗಾದ ಅಧಿಕಾರಿ ನೀಲಕಂಠ ಅಂಕದ ಅವರು ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಿದ್ದು, “ರೈತನ ಫೈಲ್‌ಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಹಣ ತಿಂದಿದ್ದರೆ ಸಾಬೀತು ಮಾಡಲಿ. ಸಾರ್ವಜನಿಕವಾಗಿ ನನಗೆ ಮಾನಹಾನಿ ಮತ್ತು ಅನ್ಯಾಯವಾಗಿದೆ” ಎಂದು ಕಣ್ಣೀರಿಟ್ಟು ರೈತನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದ್ದು, ವರ್ಷಗಟ್ಟಲೆ ರೈತರನ್ನು ಸತಾಯಿಸುವ ಆಡಳಿತ ವ್ಯವಸ್ಥೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಘಟನೆ ನಡೆದ ಸಮಯದಲ್ಲಿ ಕಚೇರಿಯ ಮುಂಭಾಗದಲ್ಲೇ ಸಫಾಯಿ ಕರ್ಮಚಾರಿಗಳ ನಿವೇಶನ ಹಂಚಿಕೆಗಾಗಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಸಂಘರ್ಷ ಸಮಿತಿ (DSS) ಮತ್ತು ಸ್ಥಳೀಯ ರೈತ ಮುಖಂಡರು ತಕ್ಷಣವೇ ರೈತನ ಪರವಾಗಿ ಧ್ವನಿ ಎತ್ತಿದ್ದಾರೆ. ಕಾನೂನನ್ನು ಕೈಗೆತ್ತಿಕೊಳ್ಳುವುದು ತಪ್ಪಾಗಿದ್ದರೂ, ಬದುಕಿನ ಆಧಾರವಾಗಿದ್ದ ಜಮೀನನ್ನು ಕಳೆದುಕೊಂಡು 20 ವರ್ಷಗಳಾದರೂ ಪರಿಹಾರ ನೀಡದ ಈ ಭ್ರಷ್ಟ ಮತ್ತು ವಿಳಂಬ ಆಡಳಿತ ವ್ಯವಸ್ಥೆಯೇ ರೈತನನ್ನು ಈ ಮಟ್ಟದ ಆಕ್ರೋಶಕ್ಕೆ ತಳ್ಳಿದೆ” ಎಂದು ಸಂಘಟನೆಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ, ರೈತನಿಗೆ ತಕ್ಷಣವೇ ಮುಳುಗಡೆ ಭೂಮಿಯ ಹಕ್ಕುಪತ್ರ ಮತ್ತು ಸೂಕ್ತ ಪರಿಹಾರ ಧನ ವಿತರಿಸದಿದ್ದರೆ ಬಿಟಿಡಿಎ ಕಚೇರಿ ಮುಂದೆ ಉಗ್ರ ಹೋರಾಟ ಮಾಡುವುದಾಗಿ ರೈತ ಸಂಘಟನೆಗಳ ಮುಖಂಡರು ಎಚ್ಚರಿಸಿದ್ದಾರೆ.
ಎಲ್ಲಿದ್ಧಾನೆ ರೈತ..?
ಬಸವರಾಜಪ್ಪ ದೊಡ್ಡಮನಿ ಅವರು ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದಂತೆಯೇ ಹೆದರಿದ್ಧಾರಂತೆ. ಊರು ಬಿಟ್ಟು ತಲೆಮರೆಸಿಕೊಂಡಿದ್ಧಾರೆ ಎನ್ನುವ ಸುದ್ದಿಗಳೂ ಇವೆ. ಸರ್ಕಾರಕ್ಕೆ ಭೂಮಿ ಕೊಟ್ಟ ಒಂದೇ ಒಂದು ತಪ್ಪಿಗೆ.. ರೈತ ಈಗ ಕ್ರಿಮಿನಲ್ ಕೇಸ್ ಎದುರಿಸುತ್ತಿದ್ದಾನೆ..



