ದರ್ಶನ್ ಅವರಿಗೆ 2ನೇ ಬಾರಿ ಜಾಮೀನು ಅರ್ಜಿ ರದ್ದುಗೊಳಿಸಲಾಗಿದೆ. ರದ್ದು ಮಾಡಿರುವುದು ಸುಪ್ರೀಂಕೋರ್ಟ್. ಆದರೆ, ಈ ಆದೇಶದಲ್ಲೂ ಒಂದು ಗುಡ್ ನ್ಯೂಸ್ ಇದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗಳ ವಿಚಾರಣೆ ಇನ್ನು ಮುಂದೆ ಪ್ರತಿದಿನ ನಡೆಯಲಿದೆ. ಭಾನುವಾರ, ಸೆಕೆಂಡ್ ಸಾಟರ್‌ಡೇ, ಅಧಿಕೃತ ರಜಾದಿನಗಳಲ್ಲಿ ಮಾತ್ರವೇ ಕೋರ್ಟಿನಲ್ಲಿ ವಿಚಾರಣೆ ಇರೋದಿಲ್ಲ. ಕೆಲವೇ ದಿನಗಳಲ್ಲಿ ಈ ಕುರಿತು ಹೈಕೋರ್ಟ್ ಆದೇಶ ಹೊರಬೀಳಬಹುದು. ಅಂದಹಾಗೆ ಸುಪ್ರೀಂ ಕೋರ್ಟಿನಲ್ಲಿ ದರ್ಶನ್ ಅವರ ಪರ ವಾದಿಸಿದ್ದ ಖ್ಯಾತ ವಕೀಲ ಮುಕುಲ್ ರೋಹಟಗಿ. ಇವರ ಹಿನ್ನೆಲೆ, ಸಾಧನೆಯೂ ಅಷ್ಟೇ ವಿಶೇಷ.
ಮುಕುಲ್ ರೋಹಟಗಿ ಅವರು ಭಾರತದ ಅತ್ಯಂತ ಪ್ರಮುಖ ಹೈ ಪ್ರೊಫೈಲ್ ಕೇಸುಗಳಲ್ಲಿ ವಾದಿಸಿದ ಹಿರಿಯ ವಕೀಲರು. ಅವರು ಸಂವಿಧಾನಿಕ, ಕ್ರಿಮಿನಲ್, ಕಾರ್ಪೊರೇಟ್ ಮತ್ತು ರಾಜಕೀಯ ಕೇಸುಗಳಲ್ಲಿ ತಜ್ಞರಾಗಿ ಪ್ರಸಿದ್ಧರಾಗಿದ್ದಾರೆ. ಅವರು 2014ರಿಂದ 2017ರವರೆಗೆ ಭಾರತದ ಅಟಾರ್ನಿ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಮುಕುಲ್ ರೋಹಟಗಿ ಅವರು ವಾದಿಸಿದ ಕೇಸುಗಳ ಸಣ್ಣ ಪಟ್ಟಿ ಇಲ್ಲಿದೆ. ಅದನ್ನು ನೋಡಿದರೆ ಇವರು ಯಾಕೆ ಖ್ಯಾತ ವಕೀಲರು ಎನ್ನುವುದು ಅರ್ಥವಾಗುತ್ತದೆ.
ಗುಜರಾತ್ ದಂಗೆಗಳು (Gujarat Riots cases): 2002ರ ಗುಜರಾತ್ ದಂಗೆಗಳ ಸಂಬಂಧಿತ ಹಲವು ಅರ್ಜಿಗಳಲ್ಲಿ ಗುಜರಾತ್ ಸರ್ಕಾರ ಮತ್ತು ನರೇಂದ್ರ ಮೋದಿ ಅವರ ಪರ ವಾದಿಸಿದ್ದಾರೆ. ಜಕಿಯಾ ಜಾಫರಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಆರ್ಯನ್ ಖಾನ್ ನಾರ್ಕೋಟಿಕ್ಸ್ ಕೇಸ್: ಶಾರುಖ್ ಖಾನ್ ಮಗ ಆರ್ಯನ್ ಖಾನ್ ಅವರನ್ನು ಕಾರ್ಡೆಲಿಯಾ ಕ್ರುಯಿಸ್ ನಾರ್ಕೋಟಿಕ್ಸ್ ಪ್ರಕರಣದಲ್ಲಿ ರಕ್ಷಿಸಿದ ಪ್ರಮುಖ ವಕೀಲ. ಇದು ಅವರ ಇತ್ತೀಚಿನ ಅತ್ಯಂತ ಹೈ ಪ್ರೊಫೈಲ್ ಕೇಸುಗಳಲ್ಲಿ ಒಂದು.
ಜಸ್ಟಿಸ್ ಲೋಯಾ ಮರಣ ಪ್ರಕರಣ (Justice Loya Death Case): ಅಮಿತ್ ಶಾ ಅವರನ್ನು ಸಂಬಂಧಿಸಿದ ಸೋಹ್ರಾಬುದ್ದೀನ್ ಶೇಖ್ ಕೇಸ್‌ನ ನ್ಯಾಯಾಧೀಶ ಲೋಯಾ ಅವರ ಮರಣದ ಪ್ರಕರಣದಲ್ಲಿ ಅಮಿತ್ ಶಾ ಪರ ವಾದಿಸಿದ್ದಾರೆ. ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿತು.
ಕರ್ನಾಟಕದ ಅನರ್ಹ ಶಾಸಕರ ಕೇಸ್: 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಅನರ್ಹ ಶಾಸಕರ ಪರ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ್ದಾರೆ.
ತ್ರಿಪಲ್ ತಲಾಖ್ ಕೇಸ್: ಅಟಾರ್ನಿ ಜನರಲ್ ಆಗಿದ್ದಾಗ ಕೇಂದ್ರ ಸರ್ಕಾರ ಪರ ವಾದಿಸಿದ್ದಾರೆ.
ಅರ್ನಬ್ ಗೋಸ್ವಾಮಿ ಪ್ರಕರಣ, ದೆಹಲಿ ದಂಗೆ, ದಿಶಾ ರವಿ ಕಿರುಕುಳ ಪ್ರಕರಣ, ಮೆಟಾ ವರ್ಸಸ್ ಕೇಂದ್ರ ಸರ್ಕಾರ.. ಹೀಗೆ ಹಲವು ಕೇಸುಗಳಲ್ಲಿ ಮುಕುಲ್ ರೋಹಟಗಿ ವಾದಿಸಿದ್ಧಾರೆ.
ಇದೀಗ ದರ್ಶನ್ ಕೇಸಿನಲ್ಲಿ 2025ರ ಆಗಸ್ಟ್ 14ರಂದು ಜಾಮೀನು ರದ್ದಾಗಿ ಜೈಲು ಸೇರಿದ್ದ ದರ್ಶನ್, ಮತ್ತೆ ಪರಪ್ಪನ ಅಗ್ರಹಾರದಿಂದ ಆಚೆ ಬಂದಿಲ್ಲ. ಸಾಕ್ಷ್ಯಗಳ ವಿಚಾರಣೆಯಲ್ಲಿ ವಿಳಂಬ, ಜೈಲಿನಲ್ಲಿ ಸೌಲಭ್ಯಗಳ ಕೊರತೆ, ಕುಟುಂಬವನ್ನು ಭೇಟಿ ಮಾಡಲು ಜೈಲಧಿಕಾರಿಗಳಿಂದ ಅವಕಾಶ ನಿರಾಕರಣೆ, ಆರೋಗ್ಯ ಸಮಸ್ಯೆ, ಸಹ ಕೈದಿಗಳಿಂದ ಕಿರುಕುಳ, ಬೆದರಿಕೆ, ಇನ್ನೂ ಕ್ವಾರಂಟೈನ್ ಸೆಲ್ನಲಿ ಇಟ್ಟಿರುವುದು ಹೀಗೆ ಹಲವು ಕಾರಣಗಳನ್ನು ನೀಡಿ ದರ್ಶನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಇನ್ನೂ ಒಂದು ವರ್ಷ ಜಾಮೀನು ಇಲ್ಲ,
ಮೇಲ್ನೋಟಕ್ಕೆ ಇದು ದರ್ಶನ್ ಅವರಿಗೆ ಇನ್ನೂ ಕನಿಷ್ಟ ಒಂದು ವರ್ಷ ಜೈಲು ವಾಸ ಖಾಯಂ ಎಂದು ಅರ್ಥವಾದರೂ, ಒಂದು ವರ್ಷದ ನಂತರ ಜಾಮೀನಿಗೆ ಅರ್ಜಿ ಸಲ್ಲಿಸಬಹುದು ಎನ್ನುವುದು ಗುಡ್ ನ್ಯೂಸ್. ಅಷ್ಟೇ ಅಲ್ಲ ಪ್ರಕರಣದ ವಿಚಾರಣೆ ಪ್ರತಿದಿನ ನಡೆಸಬೇಕು ಎಂದು ಕೂಡಾ ಕೋರ್ಟ್ ಹೇಳಿದೆ. ಅಲ್ಲಿಗೆ ತ್ವರಿತವಾಗಿಯೇ ಪ್ರಕರಣದ ವಿಚಾರಣೆ ಮುಗಿದು, ತೀರ್ಪು ಹೊರಬೀಳಲಿದೆ. ಮುಕುಲ್ ರೋಹಟಗಿ ಅವರು ವಾದಿಸಿದ್ದ ಪ್ರಕರಣದ ಸದ್ಯದ ಆದೇಶ ದರ್ಶನ್ ವಿರುದ್ಧ ಇರುವಂತೆ ಕಂಡರೂ, ಇದರಿಂದ ದರ್ಶನ್ ಅವರಿಗೆ ಅನುಕೂಲವಾಗುವ ಸಾಧ್ಯತೆ ಇದೆ ಎಂದು ಸ್ವತಃ ಪವಿತ್ರಾ ಗೌಡ ಪರ ವಕೀಲ ಬಾಲನ್ ಅವರೇ ಅಭಿಪ್ರಾಯ ಪಟ್ಟಿದ್ದಾರೆ.



