ಒಂದು ಸಿನಿಮಾ ನೋಡುವಾಗ ಇನ್ನೊಂದು ಸಿನಿಮಾ ನೆನಪಾಗುವುದು ಸಹಜ. ಯಾವುದೋ ದೃಶ್ಯ, ಕಥೆಯ ಎಳೆ, ಯಾವುದೋ ಸಂಭಾಷಣೆ, ಭಾವನೆ, ಸೆಂಟಿಮೆಂಟ್.. ಹೀಗೆಲ್ಲ ಇರುತ್ತವೆ. ಅಂಥದ್ದೇ ಅನುಭವ ತೆಲುಗಿನ ಹನುಮಾನ್ ನೋಡಿದಾಗ ಶಿವಣ್ಣಂಗೂ ಆಗಿದೆ. ಆದರೆ ಫ್ಯಾಂಟಸಿ ಚಿತ್ರವೊಂದನ್ನು ನೋಡುವಾಗ ಶಿವಣ್ಣಂಗೆ ನೆನಪಾಗಿರುವುದು ಸೆಂಟಿಮೆಂಟ್ ಸಿನಿಮಾ ಹಾಗೂ ಫ್ಯಾಕ್ಷನ್ ಸಿನಿಮಾ ಎನ್ನುವುದೇ ವಿಶೇಷ.
ಹನುಮಾನ್. ತೆಲುಗಿನ ಈ ಚಿತ್ರ ಈಗ ಎಲ್ಲ ಭಾಷೆಗಳಲ್ಲೂ ಬ್ಲಾಕ್ ಬಸ್ಟರ್ ಎನಿಸಿಕೊಂಡಿದೆ. 2024ರ ಮೊದಲ ಹಿಟ್ ಸಿನಿಮಾ ಎಂದೇ ಕರೆಸಿಕೊಂಡಿರೋ ಚಿತ್ರ ಬಾಕ್ಸಾಫೀಸ್ʻನಲ್ಲಿ ಭರ್ಜರಿ ಸದ್ದು ಮಾಡ್ತಿದೆ. ಕೇವಲ 20 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ ಹನುಮಾನ್, ನಾಲ್ಕೇ ದಿನಗಳಿಗೆ 100 ಕೋಟಿ ರೂ. ಬಾಚಿಕೊಂಡಿದೆ. ಸದ್ಯ ಈ ಸಿನಿಮಾವು ವಿಶ್ವಾದ್ಯಂತ 120 ಕೋಟಿ ರೂ. ಗಳಿಸಿ, ಮುನ್ನುಗ್ಗುತ್ತಿದೆ. ಆ ಚಿತ್ರವನ್ನು ಶಿವಣ್ಣ ನೋಡಿ ಮೆಚ್ಚಿಕೊಂಡಿದ್ದಾರೆ. ಪತ್ನಿ ಗೀತಾ ಶಿವರಾಜ್‌ಕುಮಾರ್ ಮತ್ತು ಮಗಳು ನಿವೇದಿತಾ ಜೊತೆಗೆ ಶಿವಣ್ಣ ಸಿನಿಮಾ ನೋಡಿ ಹನುಮಾನ್ ತಂಡದ ಬೆನ್ನು ತಟ್ಟಿದ್ಧಾರೆ.
ಈ ಸಿನಿಮಾ ನೋಡುವಾಗ ನನಗೆ ತವರಿಗೆ ಬಾ ತಂಗಿ ನೆನಪಾಯ್ತು. ಭಜರಂಗಿಯೂ ಕಣ್ಮುಂದೆ ಬಂತು ಎಂದಿರುವ ಶಿವಣ್ಣ ಸೂಪರ್ ಹೀರೋ ಕಾನ್ಸೆಪ್ಟ್ʻನ್ನು ಚೆಂದವಾಗಿ ಬಳಸಿಕೊಂಡಿರುವ ಕಲ್ಪನೆಯೇ ಅದ್ಭುತ ಎಂದು ಹೇಳಿದ್ಧಾರೆ.
ತವರಿಗೆ ಬಾ ತಂಗಿಯಲ್ಲಿ ತಂಗಿಯ ಪ್ರತಿ ಕಷ್ಟಕ್ಕೂ ಎದೆಗೊಟ್ಟು ನಿಲ್ಲುವ ಅಣ್ಣನ ಕಥೆ ಇದೆ. ಹನುಮಾನ್ ಚಿತ್ರದಲ್ಲಿ ಶಿವಣ್ಣನ ಜಾಗದಲ್ಲಿ ವರಲಕ್ಷ್ಮಿ ಬರುತ್ತಾರೆ. ತಮ್ಮನ ಕಷ್ಟಕ್ಕೆ ಎದುರು ನಿಂತು ಹೋರಾಡುವ ಅಕ್ಕನ ಪಾತ್ರವದು. ಇನ್ನು ಭಜರಂಗಿಯಂತೂ ಬಿಡಿ, ಹನುಮಂತನ ಕಲ್ಪನೆ. ಹೀಗಾಗಿಯೇ ಶಿವಣ್ಣ ಅವರಿಗೆ ಹನುಮಾನ್ ನೋಡುವಾಗ ತಮ್ಮದೇ ಅಭಿನಯದ ಎರಡೂ ಚಿತ್ರಗಳು ನೆನಪಾಗಿವೆ. ಹೀರೋ ತೇಜ, ಕನ್ನಡದ ಹುಡುಗಿ ಹನುಮಾನ್ ಹೀರೋಯಿನ್ ಅಮೃತಾ, ಶರತ್ ಕುಮಾರ್ ಮಗಳು ವರಲಕ್ಷ್ಮಿ ಎಲ್ಲರೂ ಅದ್ಭುತವಾಗಿ ನಟಿಸಿದ್ಧಾರೆ ಎಂದು ಹೇಳಿದ್ದಾರೆ ಶಿವಣ್ಣ.
ಸಂಕ್ರಾಂತಿ ಹಬ್ಬದ ಸಮಯಕ್ಕೆ ತೆಲುಗಿನಲ್ಲಿ ಮಹೇಶ್ ಬಾಬು ಅವರ ‘ಗುಂಟೂರು ಖಾರಂ’, ‘ವಿಕ್ಟರಿ’ ವೆಂಕಟೇಶ್ ನಟನೆಯ ‘ಸೈಂಧವ್’, ನಾಗಾರ್ಜುನ ನಟನೆಯ ‘ನಾ ಸಾಮಿ ರಂಗ’ ಸಿನಿಮಾಗಳು ತೆರೆಕಂಡಿದ್ದವು. ಈ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ, ‘ಹನುಮಾನ್’ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದೆ. ಈ ಎಲ್ಲ ಹೀರೋಗಳ ಸಿನಿಮಾಗಳಲ್ಲಿಯೂ ತೇಜ ಪುಟ್ಟ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದವರೇ. ಈಗ ಅವರೆಲ್ಲರ ಎದುರು ರಿಲೀಸ್ ಆದ ಚಿತ್ರದ ಮೂಲಕ ಅದ್ಭುತ ಗೆಲುವನ್ನೂ ಕಂಡಿದ್ಧಾರೆ.



