ಶಿವರಾಜ್ ಕುಮಾರ್ ಅವರ ಕಣ್ಣುಗಳ ಬಗ್ಗೆ ಮೊದಲು ಬಹಿರಂಗವಾಗಿ ಮೆಚ್ಚಿಕೊಂಡವರು ಉಪೇಂದ್ರ. ಅದನ್ನು ಡಾ.ರಾಜ್ ಮೊದಲು ಹೇಳಿದ್ದರಂತೆ. ಈಗ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಕೂಡಾ ಅದೇ ಮಾತನ್ನು ಹೇಳಿದ್ಧಾರೆ. ‘ಶಿವಣ್ಣ ಕಣ್ಣಲ್ಲೇ ಆ್ಯಕ್ಟ್ ಮಾಡುತ್ತಾರೆ. ಅವರ ಕಣ್ಣುಗಳು ಫವರ್‌ಫುಲ್, ಡೇಂಜರ್ ಅಂತ ಕೇಳಿದ್ದೆ. ಅದು ನಿಜ ಎಂದು ‘ಪೆದ್ದಿ’ ಸಿನಿಮಾ ಶೂಟಿಂಗ್ ಸೆಟ್‌ನಲ್ಲೇ ಗೊತ್ತಾಯಿತು’ ಎಂದಿದ್ದಾರೆ. ಅಂದಹಾಗೆ ಶಿವಣ್ಣ ಕಣ್ಣುಗಳನ್ನು ಮೆಚ್ಚಿಕೊಂಡ ಸ್ಟಾರ್ ನಟ, ನಟಿ, ತಂತ್ರಜ್ಞರು ಯಾರೆಲ್ಲ ಗೊತ್ತಾ..?
ಮೊದಲು ಗುರುತಿಸಿಸಿದ್ದು ಡಾ.ರಾಜ್ ಕುಮಾರ್ :
ಡಾ.ರಾಜ್ ಕುಮಾರ್ ಅವರಿಗೆ ತಮ್ಮ ಮಗನ ಕಣ್ಣುಗಳ ಪವರ್ ಗೊತ್ತಾಗಿದ್ದು ಮೋಡದ ಮರೆಯಲ್ಲಿ ಚಿತ್ರದ ಸಂದರ್ಭದಲ್ಲಿ. ಅದೂವರೆಗೆ ಶಿವಣ್ಣನ ಆಕ್ಟಿಂಗ್ ಚೆನ್ನಾಗಿದೆ ಎಂದಷ್ಟೇ ಹೇಳುತ್ತಿದ್ದ ಡಾ.ರಾಜ್ ಮೋಡದ ಮರೆಯಲ್ಲಿ ಸಿನಿಮಾ ನೋಡಿದ ನಂತರ ʻʻನಮ್ಮ ಶಿವೂ ಕಣ್ಣುಗಳಲ್ಲೆ ಅದ್ಭುತವಾಗಿ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆʼ ಎಂದು ಹೇಳಿದ್ದರಂತೆ. ಅದನ್ನು ಹೇಳಿಕೊಂಡಿದ್ದೂ ಕೂಡಾ ಪಾರ್ವತಮ್ಮನವರ ಬಳಿ.
ಓಂ ವೇಳೆ ಉಪೇಂದ್ರರೂ ಹೇಳಿದ್ದರು..!
ಶಿವಣ್ಣ ಅವರನ್ನು ʻಓಂʼ ಮೂಲಕ ಡಿಫರೆಂಟ್ ಆಗಿ ಪ್ರೊಜೆಕ್ಟ್ ಮಾಡಿದ್ದ ಉಪೇಂದ್ರ ಕೂಡಾ ಶಿವಣ್ಣನ ಕಣ್ಣುಗಳಿಗೆ ಶರಣಾಗಿದ್ದರು. ಓಂ ಚಿತ್ರದ ಸತ್ಯನ ಪಾತ್ರಕ್ಕೆ ಶಿವಣ್ಣ ಸೂಟ್ ಆಗುತ್ತಾರೆ. ಅದನ್ನು ಅವರ ಕಣ್ಣುಗಳನ್ನು ನೋಡಿಯೇ ಡಿಸೈಡ್ ಮಾಡಿದೆ ಎಂದು ಹೇಳಿಕೊಂಡಿದ್ದರು. “ನಾನು ನಿಮ್ಮ ಕಣ್ಣುಗಳ ಕಾರಣಕ್ಕಾಗಿಯೇ ನಿಮ್ಮ ದೊಡ್ಡ ಅಭಿಮಾನಿಯಾದೆ”ಎಂದು ಶಿವಣ್ಣ ಎದುರೇ ಹಲವು ಬಾರಿ ಹೇಳಿಕೊಂಡಿದ್ದಾರೆ. ವೇದಿಕೆಗಳಲ್ಲೂ ಹೇಳಿದ್ಧಾರೆ.
ಛಾಯಾಗ್ರಾಹಕ ಬಿ. ಸಿ. ಗೌರಿಶಂಕರ್ ಗುರುತಿಸಿದ್ದರು..!
ಬಿ. ಸಿ. ಗೌರಿಶಂಕರ್. ನಟಿ ರಕ್ಷಿತಾ ಪ್ರೇಮ್ ಅವರ ತಂದೆ. ಡಾ.ರಾಜ್ ಬ್ಯಾನರ್‌ಗಳಲ್ಲಿ ಇವರು ಸದಾ ಇರುತ್ತಿದ್ದವರು. ಅವರೂ ಕೂಡಾ “ಡಾ. ರಾಜ್‌ಕುಮಾರ್ ಅವರ ನಂತರ, ಕ್ಯಾಮೆರಾದಲ್ಲಿ ಕ್ಲೋಸ್-ಅಪ್ ಶಾಟ್ ಇಡಲು ನಾನು ಇಷ್ಟಪಡುವ ಏಕೈಕ ನಟ ಅಂದರೆ ಅದು ಶಿವರಾಜ್ ಕುಮಾರ್ ಮಾತ್ರ” ಎಂದು ಹೊಗಳಿದ್ದರು.
ಸಂಗೀತ ನಿರ್ದೇಶಕ ರವಿ ಬಸ್ರೂರ್: ಇತ್ತೀಚೆಗೆ ‘ಭೈರತಿ ರಣಗಲ್’ ಸಿನಿಮಾದ ಮರು-ಧ್ವನಿಮುದ್ರಣ (Re-recording) ಸಮಯದಲ್ಲಿ ಮಾತನಾಡುತ್ತಾ, “ಶಿವರಾಜ್ ಕುಮಾರ್ ಅವರ ಕಣ್ಣುಗಳು ಅಪಾರವಾಗಿ ಮಾತನಾಡುತ್ತವೆ (Incredibly expressive). ಅವರ ಕಣ್ಣುಗಳ ಪವರ್‌ಗೆ ತಕ್ಕಂತೆ ಹಿನ್ನೆಲೆ ಸಂಗೀತ ನೀಡುವುದು ಒಂದು ಅದ್ಭುತ ಅನುಭವ” ಎಂದು ಹೇಳಿದ್ದರು.
‘ಜೈಲರ್’ ಚಿತ್ರದ ನಂತರ ತಮಿಳು ಹಾಗೂ ಪರಭಾಷಾ ಪ್ರೇಕ್ಷಕರು: ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾದಲ್ಲಿ ಶಿವಣ್ಣ ಅವರು ‘ನರಸಿಂಹ’ ಎಂಬ ಅತಿಥಿ ಪಾತ್ರದಲ್ಲಿ ಕೇವಲ ಕಣ್ಣುಗಳ ತೀಕ್ಷ್ಣ ನೋಟ ಮತ್ತು ನಡಿಗೆಯ ಮೂಲಕವೇ ಇಡೀ ದಕ್ಷಿಣ ಭಾರತದಾದ್ಯಂತ ದೊಡ್ಡ ಟ್ರೆಂಡ್ ಸೃಷ್ಟಿಸಿದ್ದರು. ಆ ಸಮಯದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಅಭಿಮಾನಿಗಳು “ಶಿವಣ್ಣ ಕಣ್ಣುಗಳಲ್ಲೇ ಇಡೀ ಥಿಯೇಟರ್‌ಗೆ ಬೆಂಕಿ ಹಚ್ಚುತ್ತಾರೆ” ಎಂದು ಅವರ ಕಣ್ಣುಗಳ ತೀವ್ರತೆಯನ್ನು ಕೊಂಡಾಡಿದ್ದರು.
ಇದೀಗ ನಟಿ ಜಾಹ್ನವಿ ಕಪೂರ್ (ಶ್ರೀದೇವಿ-ಬೋನಿ ಕಪೂರ್ ಮಗಳು) “ಶಿವಣ್ಣ ಅವರ ಕಣ್ಣುಗಳು ಎಷ್ಟು ಪವರ್‌ಫುಲ್ ಮತ್ತು ಡೇಂಜರಸ್ ಎಂದರೆ, ಅವರು ಕಣ್ಣುಗಳ ಮೂಲಕವೇ ಎದುರಿಗಿರುವವರನ್ನು ಕೊಲ್ಲಬಲ್ಲರು!” ಎಂದು ವೇದಿಕೆಯ ಮೇಲೆ ಶಿವಣ್ಣನ ಕಣ್ಣಿನ ಕಾಂತಿಯನ್ನು ಕೊಂಡಾಡಿದ್ದಾರೆ.



