ತಮಿಳುನಾಡಿನಲ್ಲಿ ಚುನಾವಣೆ ಘೋಷಣೆಯಾಗುವುದಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಚುನಾವಣೆ ಹೊಸ್ತಿಲಲ್ಲಿ ಇರುವಾಗ ತಮಿಳುನಾಡು ಬಿಜೆಪಿ ಅಧ್ಯಕ್ಷನನ್ನು ಬದಲಾವಣೆ ಮಾಡಿತ್ತು. ಅಣ್ಣಾಮಲೈ ಅವರಿದ್ದ ಜಾಗಕ್ಕೆ ನಾಗೇಂದ್ರನ್ ಎಂಬ ವ್ಯಕ್ತಿಯನ್ನು ನೇಮಕ ಮಾಡಿತ್ತು ಬಿಜೆಪಿ ಹೈಕಮಾಂಡ್. ಈತ ನೋಡಿದರೆ ಎಡವಟ್ಟು ಹೇಳಿಕೆ ಕೊಟ್ಟು, ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಿರುವುದೇ ಹೆಚ್ಚು.
ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ವಿಜಯ್ ಅವರನ್ನು ಟೀಕಿಸುವ ಭರದಲ್ಲಿ ನಟಿ ತ್ರಿಷಾ ಅವರನ್ನು ಎಳೆದು ತಂದಿದ್ದರು. ʻʻವಿಜಯ್ ಅವರಿಗೆ ರಾಜಕೀಯದ ಅನುಭವ ಕಡಿಮೆ. ರಾಜಕೀಯದ ಅನುಭವ ಆಗಬೇಕಾದ್ರೆ ತ್ರಿಷಾ ಮನೆಯಿಂದ ವಿಜಯ್ ಹೊರಬರಲಿʼʼ ಎಂದು ಹೇಳಿದ್ದರು ನಾಗೇಂದ್ರನ್. ಒಂದು ಪಕ್ಷದ ರಾಜ್ಯಾಧ್ಯಕ್ಷನಿಗೆ ಇರಬೇಕಾದ ಘನತೆ, ಗೌರವ ಯಾವುದೂ ಇಲ್ಲದಂತೆ ವರ್ತಿಸಿದ್ದರು ನೈನಾರ್ ನಾಗೇಂದ್ರನ್. ʻಉನ್ನತ ಸ್ಥಾನದಲ್ಲಿರುವವರಿಂದ ಇಂತಹ ಮಾತು ನಿರೀಕ್ಷಿಸಿರಲಿಲ್ಲʼ ಎಂದಿದ್ದರು ತ್ರಿಷಾ. ಈಗ ನೈನಾರ್ ರಾಜೇಂದ್ರನ್ ಕ್ಷಮೆ ಕೇಳಿದ್ದಾರೆ. ಕ್ಷಮೆ ಎಂದರೂ ಎಂಥದ್ದು.. ವಿಷಾದವಂತೆ. ನೋವಾಗಿದ್ದರೆ ವಿಷಾದವಂತೆ. ಇತ್ತೀಚೆಗೆ ಕ್ಷಮೆ ಕೇಳುವುದರಲ್ಲೂ ʻನೋವಾಗಿದ್ದರೆ ವಿಷಾದʼ ಎಂಬ ಗುರಾಣಿ ಹಿಡಿಯುತ್ತಿದ್ದಾರೆ. ʻʻನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವೆʼʼ ಎಂದು ತಿಪ್ಪೆ ಸಾರಿಸಿದ್ದಾರೆ.
2025 ಏಪ್ರಿಲ್ 12 ರಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಾಗೇಂದ್ರನ್, ಅಣ್ಣಾಮಲೈ ಅವರಿಗೆ ಬದಲಾಗಿ ಅವರು ಈ ಹುದ್ದೆಗೆ ಬಂದರು. ಅವರು ತಿರುನಲ್ವೇಲಿ (ನೆಲ್ಲೈ) ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿರುವ ಶಾಸಕ. ಹಿಂದೆ AIADMKಯಲ್ಲಿ ಸಚಿವರಾಗಿದ್ದರು ಮತ್ತು ನಂತರ ಬಿಜೆಪಿಗೆ ಸೇರಿದರು. ತಮಿಳುನಾಡಿನಲ್ಲಿ ಹೊಸದಾಗಿ ಪಕ್ಷ ಸಂಘಟನೆ ಮಾಡುತ್ತಿದ್ದ, ಲೋಕಸಭಾ ಚುನಾವಣೆಯಲ್ಲಿ ಶೇ.10ಕ್ಕಿಂತ ಹೆಚ್ಚು ವೋಟ್ ಶೇರ್ ಪಡೆಯುವಂತೆ ಮಾಡಿದ್ದವರು ಅಣ್ಣಾಮಲೈ. ಆದರೆ, ಕೇಂದ್ರ ಬಿಜೆಪಿ ನಾಯಕರಿಗೆ ಅಧಿಕಾರದ ಅವಸರ. ಹೀಗಾಗಿ ಹಲವು ಅಕ್ರಮಗಳ ಆರೋಪ ಹೊತ್ತಿದ್ದರೂ, ನಾಗೇಂದ್ರನ್ ಅವರಿಗೆ ಅಧ್ಯಕ್ಷ ಸ್ಥಾನ ನೀಡಿದ್ದರು.
ನಾಗೇಂದ್ರನ್ ಅವರು ಈ ಹಿಂದೆ ಎಐಎಡಿಎಂಕೆ ಸರ್ಕಾರದಲ್ಲಿ ಸಚಿವರಾಗಿದ್ದ ಅವಧಿಯಲ್ಲಿ (2001-2006) ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ್ದಾರೆ ಎಂಬ ಆರೋಪದ ಮೇಲೆ ತಮಿಳುನಾಡು ವಿಚಕ್ಷಣ ಮತ್ತು ಭ್ರಷ್ಟಾಚಾರ ವಿರೋಧಿ ದಳ (DVAC) ತನಿಖೆ ನಡೆಸುತ್ತಿದೆ. 024ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಚೆನ್ನೈನ ತಾಂಬರಂ ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿದ್ದ ₹3.98 ಕೋಟಿ ನಗದು, ನಾಗೇಂದ್ರನ್ ಅವರಿಗೆ ಸೇರಿದ್ದು ಎನ್ನಲಾಗಿದೆ. ಹೀಗಿದ್ದರೂ ಕೇಂದ್ರ ಬಿಜೆಪಿ ನಾಯಕರು ಅಣ್ಣಾಮಲೈ ಅವರನ್ನು ಸೈಡಿಗೆ ತಳ್ಳಿ ನಾಗೇಂದ್ರನ್ ಅವರಿಗೆ ಮಣೆ ಹಾಕಿದ್ದಾರೆ.
ಈತ ತ್ರಿಷಾ ಅವರ ಮಾನಕ್ಕೇ ಕೈ ಹಾಕಿದ್ದಾರೆ. ನಾಗೇಂದ್ರನ್ ಅವರ ಮಾತುಗಳಲ್ಲಿ ಹಿಡಿತ ಇರೋದಿಲ್ಲ. ಮೂಲ ಬಿಜೆಪಿ ಕಾರ್ಯಕರ್ತರಲ್ಲೇ ಅನೇಕರಿಗೆ ಈತ ಅಣ್ಣಾಮಲೈ ಅವರಿದ್ದ ಸ್ಥಾನಕ್ಕೆ ಬಂದಿರುವುದು ಇಷ್ಟವಾಗಿಲ್ಲ. ನಟ ನಟಿಯರು ರಾಜಕಾರಣಕ್ಕೆ ಬಂದ ಕೂಡಲೇ ಅವರ ಪರ್ಸನಲ್ ವಿಷಯಗಳನ್ನು ತೆಗೆದುಕೊಳ್ಳುವುದು, ಅವರ ಜೊತೆ ನಟಿಸಿದ್ದ ವಿಶೇಷವಾಗಿ ನಟಿಯರ ಹೆಸರು ಎಳೆದು ತರುವುದು ರಾಜಕಾರಣಿಗಳ ಚಾಳಿ. ತಮಿಳುನಾಡಿನಲ್ಲಿ ಆ ರೀತಿಯ ದಾಳಿಗಳು ಹೆಚ್ಚು.
ಈಗ ರಾಜೇಂದ್ರನ್ ಅವರ ಈ ಹೇಳಿಕೆಯಿಂದಾಗಿ ಮರ್ಯಾದೆ ಹೋಗಿದ್ದು ನಟಿ ತ್ರಿಷಾ ಅವರದ್ದು. ಮತ್ತು ಬಿಜೆಪಿಯದ್ದು. ಇದನ್ನು ನೋಡಿ ಬಿಜೆಪಿ ಕಾರ್ಯಕರ್ತರೇ.. ಈತನಿಗೋಸ್ಕರವಾಗಿನಾ.. ಅಣ್ಣಾಮಲೈ ಸ್ಥಾನ ತೆರವು ಮಾಡಿಸಿದ್ದು.. ಛೆಛೆ.. ಎನ್ನುತ್ತಿದ್ದಾರೆ.



