ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಗೆ ರಾಜ್ಯ ಸರ್ಕಾರ ಒಂದೂ ಕಾಲು ಕೋಟಿ ಮೌಲ್ಯದ ಐಷಾರಾಮಿ ಕಾರು ಕೊಟ್ಟಿದೆ. ಈ ಕಾರು ಕೊಡುವುದಕ್ಕೆಂದೇ ವಿಶೇಷ ಅನುದಾನಕ್ಕೆ ಪಡೆದುಕೊಳ್ಳಲಾಗಿದೆ. ಪೂರಕ ಅಂದಾಜುಗಳ ಮೂರನೇ ಮತ್ತು ಅಂತಿಮ ಕಂತಿನಲ್ಲಿ ಇದರ ಬಗ್ಗೆ ಮಾಹಿತಿ ನೀಡಲಾಗಿದೆ. ಅಂದಹಾಗೆ ದೇವೇಗೌಡರಿಗೆ ಈ ವಿಶೇಷ ಮಾನ್ಯತೆ ಏಕೆ..? ಇಷ್ಟಕ್ಕೂ ಕಾರಿನ ವಿಶೇಷತೆ ಏನು ಎನ್ನುವುದನ್ನು ನೋಡುವುದಾದರೆ..
ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಹೆಚ್‌ಡಿ ದೇವೇಗೌಡರು ದೇಶ ಕಂಡ ಅತ್ಯಂತ ಮೇರು ರಾಜಕಾರಣಿ. ಕರ್ನಾಟಕ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ದೇವೇಗೌಡರಿಗೆ ಈಗ 92ರ ಇಳಿವಯಸ್ಸು. ಮೊದಲಿನಂತೆ ಓಡಾಡಲು ಸಾಧ್ಯವಿಲ್ಲ. ಆರೋಗ್ಯವೂ ಸರಿ ಇಲ್ಲ. ಅವರ ವಯಸ್ಸು ಮಾಜಿ ಪ್ರಧಾನಿ ಎಂಬ ಗೌರವದ ಕಾರಣದಿಂದಾಗಿ ಈ ದುಬಾರಿ ಕಾರನ್ನು ಒದಗಿಸಲಾಗಿದೆ. ದೇವೇಗೌಡರು ಕೂಡಾ ಅಧಿಕೃತವಾಗಿ ಮನವಿ ಮಾಡಿದ್ದರಂತೆ.
ಬೆಂಗಳೂರಿನ ‘ಮಾರ್ಷಲ್ ಮೋಟಾರ್ಸ್’ನಿಂದ 1.25 ಕೋಟಿ ರೂಪಾಯಿ ವೆಚ್ಚದಲ್ಲಿ ಈ ವಾಹನವನ್ನು ನೇರವಾಗಿ ಖರೀದಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ (DPAR) ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಅದರಂತೆ ದೇವೇಗೌಡ್ರು ಸಹ ಈಗಾಗಲೇ KAXX G3636 ನಂಬರಿನ ಬಿಳಿ ಬಣ್ಣದ ಕಾರು ಖರೀದಿಸಿದ್ದಾರೆ
ಇನ್ನು ಈ ಕಾರಿನ ವಿಶೇಷತೆ ನೋಡಿದರೆ..
ಲೆವೆಲ್ 2 ಅಡಾಸ್ (ADAS) ಫೀಚರ್, ಹಿಲ್ ಸ್ಟಾರ್ಟ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ಪಾರ್ಕಿಂಗ್ ಅಸೆಸ್ಟೆಂಟ್, ಎಬಿಎಸ್, ಎಬಿಡಿ, 7 ಏರ್ ಬ್ಯಾಗ್, 360 ಡಿಗ್ರಿ ಕ್ಯಾಮೆರಾ ಸೇರಿದಂತೆ ಗರಿಷ್ಠ ಸುರಕ್ಷತಾ ಫೀಚರ್ಸ್ ಈ ಕಾರಿನಲ್ಲಿದೆ. ಇನ್ನು ಕಾರನ್ನು ಮಾಡಿಫಿಕೇಶನ್ ಮಾಡಲು ಸಾಧ್ಯವಿದೆ. ಸದ್ಯ ದೇವೇಗೌಡರಿಗೆ ಕಾರು ಹತ್ತಿ ಇಳಿಯಲು, ಕಾರಿನಲ್ಲಿ ಕುಳಿತುಕೊಳ್ಳಲು ಕೆಲ ಮಾಡಿಫಿಕೇಶನ್ ಮಾಡಲಾಗಿದೆ.
2.0 ಲೀಟರ್ ಟರ್ಬೋ ಎಂಜಿನ್ ಹೊಂದಿರುವ ಈ ಕಾರು ಮೈಲ್ಡ್ ಹೈಬ್ರಿಡ್ ಪವರ್‌ಟ್ರೇನ್ ಹೊಂದಿದೆ. 250 hp ಪವರ್ ಹಾಗೂ 360 Nm ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ. 12.3 ಇಂಚಿನ್ ಇನ್ಸ್‌ಸ್ಟ್ರುಮೆಂಟ್ ಕ್ಲಸ್ಟರ್, 11.2 ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಪನರೋಮಿಕ್ ಸನ್‌ರೂಫ್, ಕ್ಲೈಮೇಟ್ ಕಂಟ್ರಲ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ.
ಅಂದಹಾಗೆ ದೇವೇಗೌಡರು ಈಗ ವೀಲ್ ಚೇರಿನಲ್ಲಿಯೇ ಓಡಾಡುತ್ತಾರೆ. ಹೀಗಾಗಿ ಈ ಕಾರಿನಲ್ಲಿ ವೀಲ್ ಚೇರ್ ಇಡಲು, ಕೂರಿಸಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುತ್ತದೆ. ಗುಂಡಿಗಳಿಗೆ ಇಳಿದರೂ, ಕಾರಿನ ಒಳಗೆ ಅಲುಗಾಟ ಇರುವುದಿಲ್ಲ. ಈ ರೀತಿಯ ವ್ಯವಸ್ಥೆ ಕಾರಿನಲ್ಲಿದೆ. ಜೊತೆಗೆ ಅಗತ್ಯ ಬಿದ್ದರೆ ಚಿಕಿತ್ಸೆಗೂ ಅನುಕೂಲವಾಗುವಂತೆ ಕಾರಿನ ಇಂಟೀರಿಯರ್ ಡಿಸೈನ್ ಮಾಡಲಾಗಿದೆ.



