ಮೋಸ ಮಾಡಬೇಕು ಎನ್ನುವವರಿಗೆ ಮೋಸ ಮಾಡುವುದಕ್ಕೆ ನೂರಾರು ದಾರಿ. ಅನುಮಾನ ಬಿದ್ದರೆ ಕಂಡು ಹಿಡಿಯುವುದಕ್ಕೂ ನೂರಾರು ದಾರಿ. ಆದರೆ ಪ್ರತಿದಿನ ಕಳ್ಳ ಖದೀಮರ ಜೊತೆಯಲ್ಲೇ ಕೆಲಸ ಮಾಡೊ ಪೊಲೀಸರು ಮನಸ್ಸು ಮಾಡಿದರೆ ಯಾಮಾರಿಸುವುದು ಕಷ್ಟವಲ್ಲ. ಆದರೆ ಅಂತಹ ಪೊಲೀಸರಿಗೆ ಈ ರೀತಿಯ ಹೆಂಡತಿ ಇರಬಾರದು. ಏಕೆಂದರೆ ಗಂಡ ಸೇರಾದರೆ ಹೆಂಡತಿ ಸವ್ವಾಸೇರು. ವಿದೇಶದಲ್ಲಿದ್ದರೂ ಗಂಡನ ʻಅಕ್ರಮ ಕೆಲಸʼವನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಪತ್ನಿಯ ಸ್ಟೋರಿ ಇದು.
ಹೆಂಡತಿಯ ಕೈಗೆ ಸಿಕ್ಕಿಬಿದ್ದ ಗಂಡನ ಹೆಸರು ಅರುಲ್ ಪ್ರಸಾದ್. ಈತನಿಗೆ ಅಭಿನಯ ಅವರ ಜೊತೆ 2 ವರ್ಷಗಳ ಹಿಂದೆ ಮದುವೆ ಆಗಿತ್ತು. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಅಭಿನಯ ಎನ್ನುವವರಿಗೆ ವಿದೇಶದಲ್ಲಿ ಉದ್ಯೋಗ ಸಿಕ್ಕಿತ್ತು. ವಿದೇಶದಲ್ಲಿ ಉದ್ಯೋಗ ಸಿಕ್ಕ ಕಾರಣಕ್ಕಾಗಿ ಅವರು ವಿದೇಶದಲ್ಲೇ ನೆಲೆಸಿ ಕೆಲಸ ಮಾಡುತ್ತಿದ್ದರು. ಹೆಂಡತಿ ವಿದೇಶದಲ್ಲಿ. ಗಂಡ ಇಂಡಿಯಾದಲ್ಲಿ. ಅಂದಹಾಗೆ ಇದು ಚೆನ್ನೈನಲ್ಲಿ ನಡೆದಿರುವ ಕಥೆ.
ಗಂಡ ಅರುಲ್ ಪ್ರಸಾದ್ ಪೊಲೀಸ್ ಆಫೀಸರ್. ಚೆನ್ನೈನ ರಾಮಾಪುರಂನಲ್ಲಿದ್ದರು. ವಿದೇಶಕ್ಕೆ ಹೋಗಿದ್ದರೂ ಗಂಡನ ಮೇಲೆ ಒಂದು ಕಣ್ಣಿಟ್ಟಿದ್ದರು ಪತ್ನಿ ಅಭಿನಯ. ಗಂಡನ ಬಗ್ಗೆ, ಆತನ ವರ್ತನೆ ಬಗ್ಗೆ ಅನುಮಾನ ಬಂದಿದ್ದೇ ತಡ, ತಾವಿದ್ದ ಮನೆಗೆ ಸಿಸಿಟಿವಿ ಹಾಕಿಸಿದ್ರು ಅಭಿನಯ. ಆದರೆ ಅದು ಗಂಡನಿಗೆ ಗೊತ್ತೇ ಇರಲಿಲ್ಲ. ಚೆನ್ನೈಗೆ ಬಂದಾಗ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾವನ್ನು ತಮ್ಮ ಮೊಬೈಲ್ ಫೋನ್‌ಗೆ ಕನೆಕ್ಟ್ ಮಾಡಿಕೊಂಡಿದ್ದರು. ಆದರೆ ಈ ವಿಚಾರವನ್ನು ತಮ್ಮ ಪತಿಗೆ ಹೇಳಿರಲಿಲ್ಲ. ವಿದೇಶದಲ್ಲಿದ್ದರೂ ಮನೆಯ ಚಟುವಟಿಕೆಗಳನ್ನು ಗಮನಿಸುತ್ತಲೇ ಇದ್ದರು. ಗಂಡನಿಗೆ ತನ್ನ ಹೆಂಡತಿ ತನ್ನೆಲ್ಲ ಚಟುವಟಿಕೆಗಳನ್ನು ಗಮನಿಸುತ್ತಿದ್ದಾಳೆ ಎಂಬ ಕಲ್ಪನೆಯೂ ಇರಲಿಲ್ಲ.
ಅರುಲ್ ಪ್ರಸಾದ್ ಜನನಿ ಎಂಬ ಮಹಿಳೆಯನ್ನು ಮನೆಗೇ ಕರೆದುಕೊಂಡು ಬರುತ್ತಿದ್ದ. ತೀರಾ ಗಂಡನ ಬೆಡ್ ರೂಂಗೆ ಸಿಸಿಟಿವಿ ಹಾಕಿಸಿರಲಿಲ್ಲವಂತೆ. ಹೀಗಾಗಿ ಏನು ನಡೆಯುತ್ತಿದೆ ಎಂದು ಗೊತ್ತಾಗಿರಲಿಲ್ಲ.
ಕೊನೆಗೆ ಗಂಡನಿಗೆ ತಿಳಿಸದೆ ಚೆನ್ನೈಗೆ ಬಂದ ಅಭಿನಯ, ಹೋಟೆಲ್ ಒಂದರಲ್ಲಿ ಸ್ಟೇ ಮಾಡ್ತಾರೆ. ಅಲ್ಲಿಂದಲೂ ಗಂಡನ ಮನೆಯನ್ನ ರೆಗ್ಯುಲರ್ ಆಗಿ ವಾಚ್ ಮಾಡ್ತಾ ಹೋಗ್ತಾರೆ. ಸತತ 3 ದಿನ ಕಾದ ಬಳಿಕ ಆ ಮಹಿಳೆ ಬಂದಿರುವುದು ಸಿಸಿಟಿವಿಯಲ್ಲಿ ಗೊತ್ತಾಗುತ್ತೆ. ತಕ್ಷಣವೇ ಗೆಳತಿಯ ಜತೆ ತನ್ನದೇ ಮನೆಗೆ ದಾಳಿ ಇಟ್ಟ ಅಭಿನಯ, ಗಂಡನನ್ನು ರೆಡ್ ಹ್ಯಾಂಡ್ ಆಗಿ ಹಿಡೀತಾರೆ. ಜನನಿಗೆ ಹೊಡೀತಾರೆ. ವಿಚಿತ್ರ ಅಂದ್ರೆ, ಗಂಡನ ಜೊತೆಯಲ್ಲಿದ್ದ ಜನನಿ ಮತ್ತು ಅಭಿನಯ ಇಬ್ಬರೂ ಫ್ರೆಂಡ್ಸ್. ಸ್ನೇಹಿತೆಯ ಗಂಡನ ಜೊತೆ ಅಫೇರ್ ಇಟ್ಟುಕೊಂಡಿದ್ದರಂತೆ ಜನನಿ.
ವಲಸರವಕ್ಕಂ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿದೇಶದಲ್ಲಿದ್ದ ಪತ್ನಿಯೊಬ್ಬರು ಸಿಸಿಟಿವಿ ಕ್ಯಾಮೆರಾ ಮೂಲಕ ಪತಿಯ ಚಟುವಟಿಕೆಗಳ ಮೇಲೆ ನಿಗಾ ಇಟ್ಟು, ಇದ್ದಕ್ಕಿದ್ದಂತೆ ಚೆನ್ನೈಗೆ ಬಂದು ಪತಿಯನ್ನು ಮಹಿಳಾ ಸ್ನೇಹಿತೆಯೊಂದಿಗೆ ರೆಡ್‌ಹ್ಯಾಂಡ್ ಆಗಿ ಹಿಡಿದ ಘಟನೆ ಭಾರೀ ಚರ್ಚೆ ಹುಟ್ಟುಹಾಕಿದೆ.



