ಹಿರಿಯ ನಟರು, ಕಲಾವಿದರ ಜೊತೆ ನಟಿಸುವ ಕನಸು ಹಲವರದ್ದು. ಹಿಂದಿಗೆ ಹೋದರೆ ಅಮಿತಾಬ್ ಬಚ್ಚನ್, ತಮಿಳಿಗೆ ಹೋದರೆ ರಜನಿಕಾಂತ್, ಕಮಲ್ ಹಾಸನ್, ತೆಲುಗಿನಲ್ಲಿ ಚಿರಂಜೀವಿ.. ಅದೇ ರೀತಿ ಕನ್ನಡದಲ್ಲಿ ಶಿವಣ್ಣ. ರಜನಿಕಾಂತ್ ಜೊತೆ ನಟಿಸಬೇಕು ಎನ್ನುವುದು ಹಲವು ನಟ, ನಟಿಯರ ಕನಸು. ಅದಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಕೂಡಾ ಹೊರತಲ್ಲ. ಇತ್ತೀಚೆಗೆ ಶಿವ ರಾಜ್ ಕುಮಾರ್ ಕೂಡಾ ರಜನಿಕಾಂತ್ ಜೊತೆ ಚಿತ್ರವೊಂದರಲ್ಲಿ ನಟಿಸಿದ್ದರು. ಇದೀಗ ಉಪೇಂದ್ರ ಸರದಿ. ‘ ರಜನಿಕಾಂತ್ ಅವರ ಮುಂದಿನ ‘ಕೂಲಿ’ ಚಿತ್ರದಲ್ಲಿ ಉಪೇಂದ್ರ ನಟಿಸುತ್ತಿದ್ದಾರೆ. ಅಂತಹ ದೊಡ್ಡ ನಟ ಶಿವಣ್ಣ ಅವರೇ, ರಜನಿಕಾಂತ್ ಚಿತ್ರದಲ್ಲಿ ನಟಿಸುವ ಅವಕಾಶವನ್ನು ಪುಟ್ಟ ಪಾತ್ರವಾದರೂ ಖುಷಿಯಾಗಿ ನಟಿಸಿದ್ದರು. ಜೈಲರ್ ಚಿತ್ರದಲ್ಲಿ ಶಿವಣ್ಣ ಅವರಿಗೆ ರಜನಿಗಿಂತ ದೊಡ್ಡ ಚಪ್ಪಾಳೆ ಬಿದ್ದಿದ್ದವು. ಆ ಮಾತು ಬೇರೆ.
ಇದೀಗ ಸ್ವತಃ ಉಪೇಂದ್ರ ಪತ್ನಿ ಪ್ರಿಯಾಂಕಾ ಅವರು, ರಜನಿಕಾಂತ್ ಜೊತೆಗೆ ಉಪ್ಪಿ ಇರುವ ಫೋಟೋವನ್ನು ಶೇರ್ ಮಾಡಿಕೊಂಡು ಸುದ್ದಿಯನ್ನು ಖಚಿತಪಡಿಸಿದ್ದಾರೆ. ಒಂದೇ ಸಿನಿಮಾದಲ್ಲಿ ‘ಸೂಪರ್ ಸ್ಟಾರ್’ & ‘ರಿಯಲ್ ಸ್ಟಾರ್’ ಮೋಡಿ ಮಾಡೋಕೆ ರೆಡಿ ಆಗಿದ್ದಾರೆ. ಆದರೆ ‘ಕೂಲಿ’ ಚಿತ್ರತಂಡ ಮಾತ್ರ ಈವರೆಗೂ ಈ ಸುದ್ದಿಯನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ನಟಿಸುತ್ತಿರುವುದನ್ನು ಸ್ವತಃ ಉಪೇಂದ್ರ ಕೂಡಾ ಖಚಿತಪಡಿಸಿದ್ದಾರೆ.
ಅಂದಹಾಗೆ ಈ ವೇಳೆ ಉಪೇಂದ್ರ ಅವರು ರಜನಿಕಾಂತ್ ಜೊತೆ ನಟಿಸುತ್ತಿರುವ ಬಗ್ಗೆ ಖುಷಿಯಾಗಿದ್ದಾರೆ. ಉಪೇಂದ್ರ ಅವರ ಸೂಪರ್ ಸಿನಿಮಾ ರಿಲೀಸ್ ವೇಳೆ ಬೆಂಗಳೂರಿಗೆ ಬಂದಿದ್ದ ರಜನಿಕಾಂತ್, ಉಪೇಂದ್ರ ಬೆನ್ನು ತಟ್ಟಿದ್ದರು. ಆಗ ರಜನಿಕಾಂತ್ ಉಪೇಂದ್ರ ಅವರಿಗೆ ಒಂದು ಕಪ್ಪೆಯ ಕಥೆ ಹೇಳಿದ್ದರಂತೆ.
ʻಒಂದು ಬೆಟ್ಟದ ಬುಡದಲ್ಲಿ ಕಪ್ಪೆಗಳ ರೇಸ್ ನಡೆಯುತ್ತೆ. ರೇಸ್ ಶುರುವಾದಾಗ ಸುತ್ತಮುತ್ತ ಇದ್ದ ಜನ ಆ ಕಡೆ ಕಲ್ಲು, ಮುಳ್ಳು ಇದೆ. ಈ ಕಡೆ ಬೆಂಕಿ ಇದೆ ಎಂದು ಕೂಗುತ್ತಿದ್ದರಂತೆ. ಜನ ಯಾವ ಮಟ್ಟಿಗೆ ಕಿರುಚುತ್ತಿದ್ದರು ಎಂದರೆ, ಎಷ್ಟೋ ಕಪ್ಪೆಗಳು ಹೆದರಿಯೇ ಸತ್ತು ಹೋದವಂತೆ. ಆದರೆ ಒಂದು ಕಪ್ಪೆ ಮಾತ್ರ ಯಾರ ಮಾತಿಗೂ ಕಿವಿಗೊಡದೆ ಬೆಟ್ಟದ ತುದಿ ತಲುಪಿಯೇಬಿಟ್ಟಿತು. ಏಕೆಂದರೆ ಅದಕ್ಕೆ ಕಿವಿ ಕೇಳುತ್ತಿರಲಿಲ್ಲ. ಆ ಕಿವುಡು ಕಪ್ಪೆಯೇ ನಾನುʼ ಎಂಬ ಕಥೆ ಹೇಳಿದ್ದರಂತೆ ರಜನಿಕಾಂತ್. ಅಂತಹ ಪಾಸಿಟಿವ್ ಕಥೆಗಳನ್ನು ಕೇಳುವುದಕ್ಕಾಗಿಯೇ ರಜನಿ ಸರ್ ಜೊತೆ ನಟಿಸುತ್ತೇನೆ ಎಂದಿರುವ ಉಪೇಂದ್ರ, ಅಂದಿಗೂ ಇಂದಿಗೂ ಎಂದೆಂದಿಗೂ ರಜನಿಕಾಂತ್ ಸೂಪರ್ ಸ್ಟಾರ್ ಎಂದು ಹೇಳಿದ್ದಾರೆ.
ಉಪೇಂದ್ರ ಅವರು ತಮಿಳಿಗೆ 16 ವರ್ಷಗಳ ನಂತರ ಎಂಟ್ರಿ ಕೊಡುತ್ತಿದ್ದಾರೆ. 2008ರಲ್ಲಿ ತೆರೆಕಂಡಿದ್ದ ‘ಸತ್ಯಂ’ ಎಂಬ ತಮಿಳು ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಉಪೇಂದ್ರ ಕಾಣಿಸಿಕೊಂಡಿದ್ದರು. ವಿಶಾಲ್ ಆ ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದರು. ಆನಂತರ ತಮಿಳಿನತ್ತ ಉಪ್ಪಿ ಮುಖ ಮಾಡಿರಲಿಲ್ಲ. ಇದೀಗ ‘ಕೂಲಿ’ ಚಿತ್ರದ ಮೂಲಕ ಪುನಃ ಕಾಲಿವುಡ್‌ಗೆ ಅವರು ಮರಳಿದ್ದಾರೆ.
ಇನ್ನು, ‘ಕೂಲಿ’ ಸಿನಿಮಾಗೆ ಲೋಕೇಶ್ ಕನಕರಾಜ್ ನಿರ್ದೇಶನ ಮಾಡುತ್ತಿದ್ದು, ಶ್ರುತಿ ಹಾಸನ್, ಸತ್ಯರಾಜ್ ಮುಂತಾದವರು ನಟಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶನ ಮಾಡುತ್ತಿದ್ದು, ಸನ್ ಪಿಕ್ಚರ್ಸ್ ಇದರ ನಿರ್ಮಾಣದ ಹೊಣೆ ಹೊತ್ತುಕೊಂಡಿದೆ. ಅಂದಹಾಗೆ ರಜನಿಕಾಂತ್ ಅವರ ರೋಬೋಟ್ ಚಿತ್ರದ ಕಥೆ ಉಪೇಂದ್ರ ಅವರ ಹಾಲಿವುಡ್ ಕಥೆಯಂತೆಯೇ ಇತ್ತು. ಆದರೆ, ಹಾಲಿವುಡ್ ಮೇಕಿಂಗ್ ಡಲ್ಲು ಹೊಡೆಯುತ್ತಿದ್ದರೆ, ರೋಬೋ ಚಿತ್ರ ಅದ್ಭುತ ತಾಂತ್ರಿಕತೆಯಿಂದ ಶ್ರೀಮಂತವಾಗಿತ್ತು.



