ಡಾ.ನಾ ಸೋಮೇಶ್ವರ. ಈ ಹೆಸರು ಕೇಳಿದರೆ ಅವರೇ ಎರಡು ಬಾರಿ ಹೌದಾ.. ಹೌದಾ.. ಎಂದು ಕೇಳಿಕೊಂಡಾರು. ಆದರೆ.. ಥಟ್ ಅಂತ ಹೇಳಿ ಸೋಮೇಶ್ವರ.. ಎಂದರೆ ಅವರ ಮುಖದ ಮೇಲೊಂದು ನಗು ಅರಳುತ್ತದೆ. ಅಷ್ಟು ಫೇಮಸ್ ಆಗಿರುವುದು ಥಟ್ ಅಂತ ಹೇಳಿ. ಬಹುಶಃ ವಿಶ್ವದ ಎಲ್ಲಿಯೂ ಒಂದು ಕಾರ್ಯಕ್ರಮ.. ಇಷ್ಟೊಂದು ವರ್ಷ ಸತತವಾಗಿ ಪ್ರಸಾರವಾದ ದಾಖಲೆ ಇಲ್ಲ. ಈಗ 5000ನೇ ಸಂಚಿಕೆಗೆ ಸಿದ್ಧವಾಗಿದೆ.
5000 ಸಂಚಿಕೆ ಅಥವಾ ಎಪಿಸೋಡ್ ಎಂದರೆ ಸರಳವಾದ ಮಾತಲ್ಲ. ಡಾ.ನಾ ಸೋಮೇಶ್ವರ ಅವರಿಗೀತ 70 ವರ್ಷ. ಈ ಕಾರ್ಯಕ್ರಮ ಶುರುವಾಗಿದ್ದು 2002ರ ಜನವರಿ 4ರಂದು. ಅಂದರೆ 23 ವರ್ಷಗಳ ಹಿಂದೆ. ಅಂದಹಾಗೆ ಥಟ್ ಅಂತಾ ಹೇಳಿ ಮೆಗಾ ಸೀರಿಯಲ್ ಅಲ್ಲ. ಪ್ರತಿದಿನ ಬರುವುದಿಲ್ಲ. ವಾರಕ್ಕೆ ಎರಡು ದಿನ ಅಂದರೆ ಶನಿವಾರ ಹಾಗೂ ಭಾನುವಾರ ಪ್ರಸಾರವಾಗುವುದಿಲ್ಲ. ರಾಷ್ಟ್ರೀಯ ಹಬ್ಬ, ಆಚರಣೆ, ಉತ್ಸವ, ಕ್ರೀಡೆ, ವಿಧಾನಮಂಡಲ ಕಲಾಪ ನಡೆಯುವಾಗ ಆಗಾಗ್ಗೆ ಬ್ರೇಕ್ ಬೀಳುತ್ತದೆ. ಹೀಗಿದ್ದರೂ.. ಥಟ್ ಅಂತ ಹೇಳಿ ಇದೀಗ 5000 ಸಂಚಿಕೆ ಪೂರೈಸುತ್ತಿದೆ. ಕನ್ನಡದ ಮೊಟ್ಟ ಮೊದಲ ದೂರದರ್ಶನ ಚಂದನ ವಾಹಿನಿಯಲ್ಲಿಪ್ರಸಾರವಾಗುತ್ತಿರುವ ರಸಪ್ರಶ್ನೆ ಕಾರ್ಯಕ್ರಮ ಥಟ್ ಅಂಥ ಹೇಳಿ ಕಾರ್ಯಕ್ರಮದ ಐದು ಸಾವಿರ ಸಂಚಿಕೆ ಅ.13ರಂದು ಪ್ರಸಾರವಾಗಲಿದೆ. ಅ.11ರ ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಜಿಕೆವಿಕೆ ಆವರಣದ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಕನ್ವೆನ್ಷನ್ ಸೆಂಟರ್ ನಲ್ಲಿಚಿತ್ರೀಕರಣಗೊಳ್ಳಲಿದೆ. ಕಾರ್ಯಕ್ರಮದಲ್ಲಿರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ , ಅರಣ್ಯ, ಜೀವಿಶಾಸ್ತ್ರ, ಪರಿಸರ ಸಚಿವ ಈಶ್ವರ ಖಂಡ್ರೆ ಮತ್ತಿತರೆ ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ ಎಂದು ದೂರದರ್ಶನ ಕೇಂದ್ರ ದಕ್ಷಿಣ ವಲಯದ ಉಪ ಮಹಾನಿರ್ದೇಶಕ ಭಾಗ್ಯವಾನ್ ತಿಳಿಸಿದ್ದಾರೆ.
ಕಾರ್ಯಕ್ರಮ ಉಸ್ತುವಾರಿ ಹಾಗೂ ನಿರ್ವಹಣೆ ಜವಾಬ್ದಾರಿ ನಿಭಾಯಿಸುತ್ತಿರುವ ಎಚ್ .ಎನ್ .ಆರತಿ, ಥಟ್ ಅಂತ ಹೇಳಿ ಕಾರ್ಯಕ್ರಮ ನಿರ್ಮಾಪಕಿ ಎಂ.ಎನ್ .ಚಂದ್ರಕಲಾ ಅವರು ಈ ಮಹತ್ವದ ಸಂಚಿಕೆ ನಿರ್ಮಾಣದಲ್ಲಿತೊಡಗಿದ್ದಾರೆ.
23 ವರ್ಷಗಳ ಹಿಂದೆ ಉಷಾಕಿಣಿ ಅವರು ಆರಂಭಿಸಿದ್ದ ಥಟ್ ಅಂತ ಹೇಳಿ ಕಾರ್ಯಕ್ರಮಕ್ಕೆ, 100ನೇ ಸಂಚಿಕೆ ಪ್ರಸಾರವಾದಾಗ ಆಗ ಕೇವಲ ಉದ್ಯಮಿ, ಲೇಖಕಿಯಷ್ಟೇ ಅಗಿದ್ದ, ಈಗಿನ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಭಾಗವಹಿಸಿದ್ದರು. 2012ರಲ್ಲಿಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಗೌರವಕ್ಕೆ ಪಾತ್ರವಾಗಿದ್ದ ಶೋ.. ಹಲವು ದಾಖಲೆ ಬರೆದಿದೆ.ಇದುವರೆಗೆ ಒಟ್ಟು . 2500 ಗಂಟೆಗಳ ಪ್ರಸಾರದ ಅವಧಿಯಲ್ಲಿ75 ಸಾವಿರ ಪ್ರಶ್ನೆಗಳನ್ನು ಕೇಳಲಾಗಿದ್ದು, 15 ಸಾವಿರ ಸ್ಪರ್ಧಿಗಳು ಭಾಗವಹಿಸಿ, 70 ಸಾವಿರ ಕನ್ನಡದ ನಾನಾ ಪ್ರಕಾರಗಳ ಪುಸ್ತಕಗಳನ್ನು ಬಹುಮಾನವಾಗಿ ಪಡೆದಿದ್ದಾರೆ. ಈ ಶೋ ವಿಶೇಷತೆ ಎಂದರೆ ಬಹುಮಾನವಾಗಿ ಕೊಡುವುದು ಕನ್ನಡ ಪುಸ್ತಕಗಳನ್ನು ಮಾತ್ರ.
ಈ ಕಾರ್ಯಕ್ರಮ ಶುರುವಾದಾಗ ಡಾ.ನಾ.ಸೋಮೇಶ್ವರ ಅವರ ವಯಸ್ಸು 47. ಮಧ್ಯವಯಸ್ಕ ಎನ್ನಬಹುದು. ಈಗ ಹಿರಿಯ ಅಜ್ಜನಾಗಿರುವ ನಾ ಸೋಮೇಶ್ವರ, ಈಗಲೂ ಅದೇ ಜನಪ್ರಿಯತೆ ಉಳಿಸಿಕೊಂಡಿದ್ದಾರೆ.



