ಒಂದು ಸಿನಿಮಾ ಹಿಟ್ ಆದರೆ ಕ್ರೆಡಿಟ್ ನಂದೂ ನಂದೂ ಅಂತಿರೋ ಸೂಪರ್ ಸ್ಟಾರುಗಳ ಮಧ್ಯೆ ಶಿವರಾಜ್ ಕುಮಾರ್ ವಿಭಿನ್ನವಾಗಿ ನಿಂತಿದ್ದಾರೆ. ಚಿತ್ರದ ಗೆಲುವಿನ ಕ್ರೆಡಿಟ್‌ನ್ನು ನಿರ್ದೇಶಕ ನರ್ತನ್ ಅವರಿಗೆ ಅರ್ಪಿಸಿದ್ದಾರೆ. ಎಲ್ಲ ಕ್ರೆಡಿಟ್ಟೂ ಡಿಒಪಿ ನವೀನ್ ಮತ್ತು ನಿರ್ದೇಶಕ ನರ್ತನ್ʻಗೆ ಸಲ್ಲಬೇಕು ಎಂದಿದ್ದಾರೆ ಗೀತಾ ಶಿವರಾಜ್ ಕುಮಾರ್ ಮತ್ತು ಶಿವಣ್ಣ. ಇದೇ ವೇಳೆ ಒಣಗಿ ಹೋಗುತ್ತಿದ್ದ ಚಿತ್ರಮಂದಿರಗಳಿಗೆ ಆಕ್ಸಿಜನ್ ನೀಡಿದ ಭೈರತಿ ರಣಗಲ್ ಚಿತ್ರಕ್ಕೆ ಥ್ಯಾಂಕ್ಸ್ ಹೇಳಿದ್ದಾರೆ ಥಿಯೇಟರ್ ಮಾಲೀಕರು. ಯಾಕಂದ್ರೆ ಭೈರತಿ ರಣಗಲ್ ಸೂಪರ್ ಹಿಟ್ಟಾಗಿದೆ. ಮಫ್ತಿ ಚಿತ್ರದ ಪ್ರೀಕ್ವೆಲ್ ಆಗಿರೋ ಸಿನಿಮಾ ಸಿಕ್ಕಾಪಟ್ಟೆ ಹೌಸ್ ಫುಲ್ ಆಗ್ತಿದೆ. ಶಿವಣ್ಣ ಫ್ಯಾನ್ಸ್ ಹಬ್ಬ ಮಾಡ್ತಿದ್ದಾರೆ. ಈ ನಡುವೆಯೇ ಶಿವರಾಜ್ ಕುಮಾರ್ ಮಫ್ತಿ ಸೀಕ್ವೆಲ್ ಘೋಷಿಸಿದ್ದಾರೆ.
ಭೈರತಿ ರಣಗಲ್ ಸಿನಿಮಾ ಸಕ್ಸಸ್ ಮೀಟ್ ನಲ್ಲಿ ಮಾತಾಡಿದ ನಟ ಶಿವರಾಜ್ಕುಮಾರ್, ಸಿನಿಮಾವನ್ನು ಅಪ್ಪಿಕೊಂಡು ಬ್ಲಾಕ್ ಬಸ್ಟರ್ ಹಿಟ್ ಮಾಡಿದ ನಿಮಗೆ ಧನ್ಯವಾದಗಳು. ನಿಮ್ಮ ಪ್ರೀತಿಯಿಂದಲೇ ಈ ಸಿನಿಮಾ ಗೆದ್ದಿದೆ. ನನ್ನ ಟೀಮ್ಗೆ ತುಂಬಾ ತಲೆ ತಿಂದಿದ್ದೇನೆ. ಸಿಕ್ಕಾಪಟ್ಟೆ ಕಷ್ಟ ಕೊಟ್ಟಿದ್ದೇನೆ. ಭೈರತಿ ರಣಗಲ್ ಸೀಕ್ವೆಲ್ ಕೂಡ ಬರಲಿದೆ. ಮಫ್ತಿ 2 ಅಂತಿದ್ದಾರೆ. ನಾನು ಬೇರೆಯದೆ ಟೈಟಲ್ ಪ್ಲಾನ್ ಮಾಡಿದ್ದೇನೆ ಎಂದು ಹೇಳುವ ಮೂಲಕ ಶಿವರಾಜ್ ಕುಮಾರ್ ಸೀಕ್ವೆಲ್ ಬರಲಿದೆ ಎಂದು ಹೇಳಿದ್ದಾರೆ.
ನಿರ್ದೇಶಕ ನರ್ತನ್ ಅವರನ್ನೂ ಕೊಂಡಾಡಿದ ಶಿವಣ್ಣ ಮತ್ತು ಗೀತಾ ಇಬ್ಬರೂ, ಚಿತ್ರದ ಗೆಲುವನ್ನು ನರ್ತನ್ ಅವರಿಗೆ ಕೊಟ್ಟಿದ್ದಾರೆ. ನರ್ತನ್ ಅವರಿಗೆ ಇನ್ನೂ ಸಂಭಾವನೆ ಕೊಟ್ಟಿಲ್ಲ. ನಾವೇ ಬ್ಯಾಲೆನ್ಸ್ ಇದ್ದೇವೆ. ಖಂಡಿತಾ ಕೊಡ್ತೇವೆ ಎಂದ ಶಿವಣ್ಣ ಎಲ್ಲರೂ ದುಡ್ಡಿಗೆ ಆಸೆ ಪಡ್ತಾರೆ. ನರ್ತನ್ ಹಾಗಲ್ಲ. ನಾವೂ ಕೂಡಾ ಯಾರನ್ನೂ ಬರಿಗೈಲಿ ವಾಪಸ್ ಕಳಿಸಿಲ್ಲ. ಏನುಕೊಡಬೇಕೋ ಅದನ್ನು ಕೊಟ್ಟೇ ಕಳಿಸೋದು ಎಂದಿದ್ದಾರೆ ಶಿವಣ್ಣ.
ಇನ್ನು ಗಾಯತ್ರಿ ಥಿಯೇಟರ್ ಮಾಲೀಕ ರಾಜಾರಾಂ, ವೀರೇಶ್ ಥಿಯೇಟರ್ ಮಾಲೀಕ ಕುಶಾಲ್, ವಿತರಕ ಜಗದೀಶ್ ಮೊದಲಾದವರು ಮಾತನಾಡಿ, ಒಣಗಿ ಹೋಗುತ್ತಿದ್ದ ಚಿತ್ರಮಂದಿರಗಳಿಗೆ ಉಸಿರು ತುಂಬಿದ ಶಿವಣ್ಣ ಮತ್ತು ಭೈರತಿ ರಣಗಲ್ ಚಿತ್ರಕ್ಕೆ ಧನ್ಯವಾದ ಅರ್ಪಿಸಿದರು.
ವಿಶೇಷ ಅಂದ್ರೆ ಚಿತ್ರ ರಿಲೀಸ್ ಆದ ಮೇಲೆ ಎರಡನೇ ದಿನದಿಂದಲೇ 100 ಶೋ ಜಾಸ್ತಿ ಮಾಡಿದ್ದಾರಂತೆ ವಿತರಕರು. ಸದ್ಯಕ್ಕೆ ಕಲೆಕ್ಷನ್ ಹೇಳೋ ಹಾಗಿಲ್ಲ. ಆದರೆ 100 ಶೋ ಹೆಚ್ಚಿಸಿದ್ದೇವೆ. ಭೈರತಿ ರಣಗಲ್ ಒಂದು ಹುತ್ತ ಇದ್ದಂತೆ. ನಾವೆಲ್ಲ ಹಾವುಗಳಂತೆ ಸೇರಿಕೊಳ್ತೇವೆ ಎಂದಿದ್ದಾರೆ ವಿತರಕ ಜಗದೀಶ್.
ಇಂತಹ ಚಿತ್ರಗಳಿಂದ ಇಂಡಸ್ಟ್ರಿ ಸುಭಿಕ್ಷವಾಗುತ್ತದೆ. ಜನ ಥಿಯೇಟರಿಗೆ ಬರಲ್ಲ ಅನ್ನೋ ಮಾತಿತ್ತು. ಅದು ಈ ಚಿತ್ರದಿಂದ ಸುಳ್ಳಾಗಿದ. ನನ್ನ ಹೆಂಡತಿ ಕೂಡಾ ಚಿತ್ರವನ್ನ ನೋಡಿ ಸೂಪರ್ ಅಂದ್ಲು ಅಂದಿದ್ದಾರೆ ವೀರೇಶ್ ಚಿತ್ರಮಂದಿರದ ಮಾಲೀಕ ಕುಶಾಲ್.
ಗಾಯತ್ರಿ ಥಿಯೇಟರ್ ಮಾಲೀಕ ರಾಜಾರಾಂ ಪ್ರಕಾರ ಒಣಗಿ ಹೋಗುತ್ತಿದ್ದ ಥಿಯೇಟರುಗಳು ಹಸಿರಾಗುವಂತೆ ಮಾಡಿದೆ ಭೈರತಿ ರಣಗಲ್.



