ಕೆ. ಚಂದ್ರಶೇಖರ್ ರಾವ್. ಇದೀಗ ತೆಲಂಗಾಣದ ಮಾಜಿ ಮುಖ್ಯಮಂತ್ರಿ. ಸತತ ಎರಡು ಬಾರಿ ಭರ್ಜರಿಯಾಗಿ ಗೆದ್ದಿದ್ದ ಕೆಸಿಆರ್, ಈ ಬಾರಿ ಹ್ಯಾಟ್ರಿಕ್ ಸಾಧಿಸೋಕೆ ಆಗಿಲ್ಲ. ಕೆಸಿಆರ್ ಸೋಲಿಗೆ ಕಾರಣವಾಗಿದ್ದು ಯಾರು ಎಂದರೆ ರೇವಂತ್ ರೆಡ್ಡಿ ಸೇರಿದಂತೆ ನಮ್ಮ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಜಮೀರ್ ಅಹ್ಮದ್ ಸೇರಿದಂತೆ ಹಲವು ಕನ್ನಡಿಗರ ಹೆಸರು ಹೇಳಬಹುದಾದರೂ, ರಿಯಲ್ ಕಾರಣಕರ್ತ ಸುನಿಲ್ ಕನುಗೋಲು ಎಂಬುದು ವಾಸ್ತವ. ಅದನ್ನು ಸ್ವತಃ ರೇವಂತ್ ರೆಡ್ಡಿಯೂ ಒಪ್ಪಿಕೊಂಡಿದ್ದಾರೆ.
ಯಾರು ಈ ಸುನಿಲ್ ಕುನಗೋಲು..?
ಕರ್ನಾಟಕದ ಬಳ್ಳಾರಿಯವರು. ಹುಟ್ಟಿದ್ದು, ಬೆಳೆದಿದ್ದು ಚೆನ್ನೈನಲ್ಲಿ. ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆದು, ಮೆಕ್‌ಕಿನ್ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಭಾರತಕ್ಕೆ ಮರಳಿದ ಬಳಿಕ ಅಸೋಸಿಯೇಷನ್ ಆಫ್ ಬಿಲಿಯನ್ ಮೈಂಡ್ಸ್ ಸೇರಿ ಗುಜರಾತ್ ಚುನಾವಣೆಗೆ ತಂತ್ರಗಾರಿಕೆ ಮಾಡಿದ್ದರು. ಕೆಲ ವರ್ಷಗಳ ಹಿಂದೆ ಎಲೆಕ್ಷನ್ ಸ್ಟ್ರಾಟಜಿಸ್ಟ್ ಆಗಿ ಗುರುತಿಸಿಕೊಂಡಿದ್ದ ಪ್ರಶಾಂತ್ ಕಿಶೋರ್ ತಂಡದ ಪ್ರಮುಖ ಸದಸ್ಯರಾಗಿದ್ದವರು. ಮೋದಿಯವರ ಗುಜರಾತ್ ಚುನಾವಣೆ ಹಾಗೂ 2014ರಲ್ಲಿ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರ ಹಿಂದೆ ಇದ್ದ ಪ್ರಮುಖ ತಂತ್ರಗಾರರಲ್ಲಿ ಇವರೂ ಇಬ್ಬರು. 2017ರಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ, 2019ರ ಲೋಕಸಭೆ ಚುನಾವಣೆಯಲ್ಲಿ ಡಿಎಂಕೆ ಪರ ಕೆಲಸ ಮಾಡಿದ್ದರು. ಪ್ರಚಾರ ಪ್ರಿಯ ಅಲ್ಲ. ಎಲ್ಲೂ ಕಾಣಿಸಿಕೊಳ್ಳುವುದಿಲ್ಲ. ಎಲೆಮರೆಕಾಯಿಯಂತೆ ಇದ್ದು ಪ್ರಚಾರ ತಂತ್ರ ರೂಪಿಸುವುದು ಕಾನುಗೋಲು ಶೈಲಿ. ಆದರೆ ಪಕ್ಕಾ ಲೆಕ್ಕಾಚಾರದ ಮನುಷ್ಯ. ಎದುರಿಗೆ ಇರುವ ನಾಯಕರ ಖುಷಿಗಾಗಿ ಹೇಳದೆ, ಸತ್ಯವನ್ನು ಇದ್ದಂತೆ ನಿಷ್ಠುರವಾಗಿ ಹೇಳುವ ವ್ಯಕ್ತಿ.
ಹೇಳುವ ಯಾವುದೇ ವಿಷಯವನ್ನಾಗಲೀ ಹಲವು ಕೋನಗಳಿಂದ ಅಧ್ಯಯನ ಮಾಡಿ ಹೇಳುವ ಸುನಿಲ್, 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಸೂತ್ರಧಾರರಾಗಿದ್ದರು. ಸುನಿಲ್ ಅವರಿಗೆ ಕರ್ನಾಟಕ ಉಸ್ತುವಾರಿ ವಹಿಸಿದ್ದವರು ಮತ್ತದೇ ಡಿಕೆ ಶಿವಕುಮಾರ್. ತೀರಾ ಅನಿವಾರ್ಯವಾದ ಪರಿಸ್ಥಿತಿ ಹೊರತುಪಡಿಸಿದರೆ, ಬಹುತೇಕ ಸುನಿಲ್ ಹೇಳಿದಂತೆಯೇ ಟಿಕೆಟ್ ಹಂಚಿಕೆ ಮಾಡಲಾಗಿತ್ತು ಎಂದು ಡಿಕೆ ಹೇಳಿದ್ದರು. ಅದನ್ನೇ ರೇವಂತ್ ರೆಡ್ಡಿ ಕೂಡಾ ತೆಲಂಗಾಣದಲ್ಲಿ ಮಾಡಿದ್ಧಾರೆ.
ನಾನು ನನಗಾಗಿ, ನನ್ನ ಜೊತೆಗಾರ, ಹಿಂಬಾಲಕರಿಗಾಗಿ ಒಂದೇ ಒಂದು ಟಿಕೆಟ್ ಕೇಳಲೂ ಇಲ್ಲ. ಸುನಿಲ್ ಕುನಗೋಲು ಹೇಳಿದಂತೆಯೇ ಅವರಿಗೆ ಟಿಕೆಟ್ ಕೊಟ್ಟಿದ್ದೇನೆ. ಅವರೊಬ್ಬ ಅದ್ಭುತ ರಾಜಕೀಯ ತಂತ್ರಗಾರ ಎಂದಿದ್ದರು ರೇವಂತ್ ರೆಡ್ಡಿ. ಆದರೆ ಮಧ್ಯಪ್ರದೇಶದಲ್ಲಿ ಕಮಲನಾಥ್ ಅವರು ಸುನಿಲ್ ಕುನಗೋಲು ಅವರನ್ನೂ ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲವಂತೆ. ಮೂಲಗಳ ಪ್ರಕಾರ ನೀನ್ಯಾವನಯ್ಯಾ… ನನಗೇ ರಾಜಕೀಯ ಎಬಿಸಿಡಿ ಹೇಳ್ಕೊಡೋಕೆ ಬರಬೇಡಿ. ನನ್ನ ಅನುಭವದಷ್ಟು ನಿಮಗೆ ವಯಸ್ಸಾಗಿಲ್ಲ.. ಎಂದು ಸಾರಾಸಗಟಾಗಿ ಸುನಿಲ್ ರಿಪೋರ್ಟ್ ಪಕ್ಕಕ್ಕಿಟ್ಟು, ತಮಗೆ ಸರಿ ಎನ್ನಿಸಿದವರಿಗೆ ಟಿಕೆಟ್ ಕೊಟ್ಟರಂತೆ. ಅದರ ಪರಿಣಾಮ, ಅವರಿಗೆ ಹೀನಾಯ ಸೋಲು.
ಕೆಸಿಆರ್ ಅವತ್ತು ಯೆಸ್ ಎಂದಿದ್ದರೆ.. ದಿಕ್ಕೇ ಬದಲಾಗುತ್ತಿತ್ತು..!
ಕಾಂಗ್ರೆಸ್ಸಿಗಿಂತ ಮೊದಲೇ ಕಾನುಗೋಲು ಅವರನ್ನು ಸಂಪರ್ಕಿಸಿದ್ದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ (ಕೆಸಿಆರ್). ತಮಿಳುನಾಡಿನಲ್ಲಿ ಸ್ಟಾಲಿನ್ ಪರ ಕೆಲಸ ಮಾಡಿದ್ದ ಕನುಗೋಲು ಹೊಸ ಜವಾಬ್ದಾರಿ ಹೊರಲು ಸಿದ್ಧರಾಗಿದ್ದರು. ಆ ವೇಳೆ ಹೈದರಾಬಾದ್‌ನ ತಮ್ಮ ಫಾರ್ಮ್ ಹೌಸ್‌ಗೆ ಕರೆಸಿ ಅವರ ಜತೆ ಕೆಸಿಆರ್ ಹಲವು ಸುತ್ತಿನ ಮಾತುಕತೆ ನಡೆಸಿದರು. ಆದರೆ ಇಬ್ಬರ ನಡುವೆ ಸಹಮತ ಮೂಡಲಿಲ್ಲ. ಇದೀಗ ಅದೇ ಕೆಸಿಆರ್ ಸೋಲಿಗೆ ಕಾನುಗೋಲು ಕಾರಣರಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಕೆಸಿಆರ್ ಜತೆಗಿನ ಮಾತುಕತೆ ವಿಫಲವಾದ ಬಳಿಕ ಕಾಂಗ್ರೆಸ್ಸಿಗೆ ಚುನಾವಣಾ ತಂತ್ರಗಾರರಾಗಿ ಕಾನುಗೋಲು ನಿಯೋಜನೆಗೊಂಡರು. ತೆಲಂಗಾಣ ಜತೆಗೆ ಕರ್ನಾಟಕದ ಜವಾಬ್ದಾರಿಯನ್ನೂ ಹೊತ್ತುಕೊಂಡರು. ಎರಡೂ ರಾಜ್ಯಗಳಲ್ಲೂ ಒಟ್ಟಿಗೇ ಕೆಲಸ ಮಾಡಿದರು. ತೆಲಂಗಾಣದಲ್ಲಿ ಗೆಲ್ಲುವುದು ಕಷ್ಟ ಎಂಬ ಭಾವನೆ ಹೊಂದಿದ್ದ ಕಾಂಗ್ರೆಸ್ಸಿಗರಿಗೆ, ಅಲ್ಲಿ ಹೇಗೆ ಗೆಲ್ಲಬಹುದು ಎಂಬ ದಾರಿಯನ್ನು ಕಾನುಗೋಲು ತೋರಿಸಿಕೊಟ್ಟರು.
ಬಿಜೆಪಿಯ ಜೊತೆ ಇತರೆ ಪಕ್ಷಗಳೂ ಪೈಪೋಟಿಗೆ ಇಳಿದರೆ ಮತಗಳು ವಿಭಜನೆಯಾಗುತ್ತವೆ ಎಂದು ಅರಿತ ಸುನಿಲ್, ಒಂದು ಕಡೆ ಬಿಜೆಪಿಯ ಪ್ರಭಾವವನ್ನು ತಗ್ಗಿಸಲು ಕಾರ್ಯತಂತ್ರ ರೂಪಿಸಿದರಷ್ಟೇ ಅಲ್ಲ, ಆಂಧ್ರ ಸಿಎಂ ಜಗನ್ಮೋಹನ ರೆಡ್ಡಿ ಸೋದರಿ ವೈ.ಎಸ್.ಶರ್ಮಿಳಾ ಅವರನ್ನು ಚುನಾವಣೆಯಿಂದ ಹಿಂದೆ ಸರಿಯುವಂತೆ ಮಾಡಿದರು. ಇದು ಕಾಂಗ್ರೆಸ್ ಮತಗಳನ್ನು ವಿಭಜನೆಯಾಗದಂತೆ ತಡೆಯಿತು. ಅನಿರೀಕ್ಷಿತವಾಗಿ ತೆಲುಗುದೇಶಂ ಕೂಡಾ ಚುನಾವಣೆಯಿಂದ ಹಿಂದೆ ಸರಿದ ಕಾರಣ ಸುನಿಲ್ ಅವರ ಕೆಲಸ ಸುಲಭವಾಯಿತು.
ಜತೆಗೆ ಅಬ್ಬರದ ಆನ್‌ಲೈನ್ ಪ್ರಚಾರ, ಗ್ಯಾರಂಟಿ ಸ್ಕೀಂಗಳನ್ನು ಜನರಿಗೆ ಮುಟ್ಟಿಸಿದ್ದೂ ಫಲ ನೀಡಿತು ಎಂದು ವಿಶ್ಲೇಷಿಸಲಾಗುತ್ತಿದೆ. ಕೆಸಿಆರ್ ಗುರಿಯಾಗಿಸಿಕೊಂಡು ಕನುಗೋಲು ಪ್ರಚಾರ ಆರಂಭಿಸಿದ್ದರು. ಅದರಿಂದ ಕೆರಳಿದ್ದ ಕೆಸಿಆರ್ ಅವರು ಕನುಗೋಲು ಕಚೇರಿಗೆ ಪೊಲೀಸರನ್ನು ಕಳುಹಿಸಿ ದಾಳಿ ನಡೆಸಿ, ವಿಚಾರಣೆಗೂ ಒಳಗಾಗುವಂತೆ ನೋಡಿಕೊಂಡಿದ್ದರು. ಆದರೂ ಕನುಗೋಲು ಎದೆಗುಂದಲಿಲ್ಲ.



