ಕಾಂಗ್ರೆಸ್‌ನಲ್ಲಿ ಎಲ್ಲವೂ ನಿರೀಕ್ಷೆಯಂತೆಯೇ ನಡೆಯುತ್ತಿದೆ. ಒಪ್ಪಂದದ ಪ್ರಕಾರ 6 ತಿಂಗಳು ಲೇಟ್ ಆದರೂ ಅಧಿಕಾರ ಹಸ್ತಾಂತರವಾಗುತ್ತಿದೆ. ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿದೂ ಆಗಿದೆ. ಆದರೆ ಚರ್ಚೆಯಾಗುತ್ತಿರುವುದು ಸತೀಶ್ ಜಾರಕಿಹೊಳಿ ವಿಷಯದ ಬಗ್ಗೆ. ಈಗಲೂ ಬಹುತೇಕರು ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯ ವಿರುದ್ಧ ಹೋದರು ಎನ್ನುವುದನ್ನು ನಂಬುವುದಕೆ ತಯಾರಿಲ್ಲ. ಈ ಮಧ್ಯೆ ‘ಕರುನಾಡ ಕುರುಬ ಗೌಡ್ರು’ ಎಂಬ ಹೆಸರಿನ ಫೇಸ್‌ಬುಕ್ ಪುಟದಲ್ಲಿ ಸತೀಶ್ ಜಾರಕಿಹೊಳಿ ಅವರ ವಿರುದ್ಧ ಸುಳ್ಳು ಸುದ್ದಿ ಪ್ರಕಟಿಸಿದ್ದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ.
ʻʻಸಿದ್ದರಾಮಯ್ಯ ಅವರ ಬೆನ್ನಿಗೆ ನಾನು ನಿಂತಿಲ್ಲ ಅನ್ನೋದು ಆಧಾರ ರಹಿತ ಆರೋಪ. ಸಿದ್ದರಾಮಯ್ಯ ವಿರುದ್ದ ಸಹಿ ಸಂಗ್ರಹ ಮಾಡಲಾಗಿದೆ ಎನ್ನುವ ವಿಚಾರವೇ ಸುಳ್ಳು. ಈ ಸುದ್ದಿಗೆಲ್ಲಾ ಮಹತ್ವ ಕೊಡಬೇಕಾಗಿಲ್ಲ. ಯಾವ ಸಹಿಯೂ ಹೈಕಮಾಂಡ್‌ಗೆ ಹೋಗಿಲ್ಲʼʼ ಎಂದು ಜಾರಕಿಹೊಳಿ ಹೇಳಿದ್ದಾರೆ.
37 ಜನ ಪ್ರಭಾವಿಗಳು ಸಹಿ ಮಾಡಿದ್ದವರು ಅಂದಿದ್ರೆ ಆ ಪತ್ರ ಇರಬೇಕಿತ್ತು ಅಲ್ವಾ. ಅದೆಲ್ಲಾ ಸುಮ್ಮನೆ ಹರಿಡಿರೋ ಸುಳ್ಳು ಸುದ್ದಿ. ಅವನು ಯಾರೋ ಹಾಕಿದ್ದ ಅದಕ್ಕೆಲ್ಲಾ ಅಷ್ಟು ಮಹತ್ವ ಕೊಡಬೇಕಿಲ್ಲ ಎಂದು ಜಾರಕಿಹೊಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಏನಿದು ಕರುನಾಡ ಕುರುಬಗೌಡ್ರು ಪೇಜ್ ವಿವಾದ..?
‘ಕರುನಾಡ ಕುರುಬ ಗೌಡ್ರು’ ಎಂಬ ಹೆಸರಿನ ಫೇಸ್‌ಬುಕ್ ಪುಟದಲ್ಲಿ ಸತೀಶ್ ಜಾರಕಿಹೊಳಿ ಅವರ ವಿರುದ್ಧ ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನಿಗೆ ಅವರ ಆಪ್ತ ಸತೀಶ್ ಜಾರಕಿಹೊಳಿ ಅವರೇ ಚೂರಿ ಹಾಕುತ್ತಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಈಗಾಗಲೇ 37 ಜನ ಶಾಸಕರ ಸಹಿ ಸಂಗ್ರಹಿಸಿದ್ದಾರೆ’ ಎಂದು ಪೋಸ್ಟ್ ಮಾಡಲಾಗಿತ್ತು. ಇದು ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಸತೀಶ್ ಜಾರಕಿಹೊಳಿ ಅವರ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿ, ಅವರ ಆಪ್ತರು ಹಾಗೂ ವಾಲ್ಮೀಕಿ ಸಮುದಾಯದ ಮುಖಂಡರಾದ ರಾಜಶೇಖರ ತಳವಾರ ಅವರು ಬೆಳಗಾವಿ ಸಿಇಎನ್ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಬೆಳಗಾವಿ ಜಿಲ್ಲಾ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಫ್‌ಐಆರ್ ರಿಜಿಸ್ಟರ್ ಆಗಿದೆ.
ಇದರ ನಡುವೆ ಸತೀಶ್ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಮಂತ್ರಿ ಸ್ಥಾನ ಎರಡನ್ನೂ ಕೊಡಿಸುವ ಕುರಿತಂತೆ ಸಿದ್ದರಾಮಯ್ಯ ಅವರು ತಲೆ ಕೆಡಿಸಿಕೊಳ್ಳುತ್ತಿಲ್ಲವಂತೆ. ಸತೀಶ್ ಅವರೇನೋ ತಮ್ಮ ವಿರುದ್ಧದ ಆರೋಪಗಳೆಲ್ಲ ಸುಳ್ಳು ಎಂದು ನೇರವಾಗಿಯೇ ಹೇಳಿದ್ಧಾರೆ. ಈಗ ಸತೀಶ್ ಜಾರಕಿಹೊಳಿ ಇಟ್ಟಿರುವ ಬೇಡಿಕೆಗಳನ್ನು ಈಡೇರಿಸುವುದಕ್ಕೆ ಸಿದ್ದರಾಮಯ್ಯ ಪ್ರಯತ್ನ ಮಾಡ್ತಾರಾ ಎನ್ನವುದು ಪ್ರಶ್ನೆ. ಸತೀಶ್ ಜಾರಕಿಹೊಳಿ ಬಹಿರಂಗವಾಗಿ ಏನನ್ನೂ ಹೇಳುವವರಲ್ಲ. ಇನ್-ಡೈರೆಕ್ಟ್ ಆಗಿ ಹೇಳುವವರು. ಈ ಬಾರಿಯೂ ಅದೇ ಆಗಿದೆ.
ಆ ರೀತಿಯ ಬೆಳವಣಿಗೆಗಳನ್ನು ನೋಡಿದರೆ ಬೆಂಗಳೂರಿನ ಸತೀಶ್ ಜಾರಕಿಹೊಳಿ ಅವರ ಅಧಿಕೃತ ಸರ್ಕಾರಿ ನಿವಾಸಕ್ಕೆ ಬೋವಿ ಮಠ, ವಾಲ್ಮೀಕಿ ಪೀಠ, ಕುರುಬ ಮತ್ತು ಮಡಿವಾಳ ಸಮುದಾಯ ಸೇರಿದಂತೆ ವಿವಿಧ ಹಿಂದುಳಿದ ವರ್ಗಗಳ 21 ಮಠಾಧೀಶರು ಬಂದು ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಮೂಲಗಳ ಪ್ರಕಾರ, ಈ ಸ್ವಾಮೀಜಿಗಳು ಈ ಬಾರಿಯ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗದ ಪ್ರಭಾವಿ ನಾಯಕರಿಗೆ ನೀಡಬೇಕು ಎಂಬ ಒಕ್ಕೊರಲ ಒತ್ತಾಯ ಮಾಡಿದ್ದಾರೆ. ಸತೀಶ್ ಜಾರಕಿಹೊಳಿ ಅವರು ಈ ಸ್ಥಾನಕ್ಕೆ ಅರ್ಹರಾಗಿದ್ದು, ಅವರಿಗೆ ಹೈಕಮಾಂಡ್ ಮೇಲೆ ಒತ್ತಡ ಹೇರಲು ಬೆಂಬಲ ನೀಡುವುದಾಗಿ ಸ್ವಾಮೀಜಿಗಳು ಭರವಸೆ ನೀಡಿದ್ದಾರೆ. ಸತೀಶ್ ಜಾರಕಿಹೊಳಿ ಅವರೊಂದಿಗೆ ಪ್ರಾಥಮಿಕ ಚರ್ಚೆ ಮುಗಿಸಿದ ಸ್ವಾಮೀಜಿಗಳ ತಂಡ, ಅಲ್ಲಿಂದ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಭೇಟಿ ಮಾಡಲು ತೆರಳಿದೆ.



