ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮಧ್ಯೆ ಮತ್ತೊಮ್ಮೆ ಪವರ್ ಶೇರಿಂಗ್ ಫೈಟ್ ಶುರು ಆಗಿದೆ. ವಿಶೇಷ ಏನಂದ್ರೆ.. ಈ ಬಾರಿಯ ಆಟವೇ ಬೇರೆ. ಆಟದ ಗಮ್ಮತ್ತೇ ಬೇರೆ. ಈ ಬಾರಿ ಹಾಕುವ ಪಟ್ಟುಗಳಲ್ಲಿ ಯಾರು ಗೆಲ್ತಾರೋ.. ಬಿಡ್ತಾರೋ.. ತಂತ್ರಗಳಂತೂ ಸೂಪರ್ಬ್ ಆಗಿವೆ. ಈ ಬಾರಿ ಗೆದ್ದವರನ್ನು ಚಾಣಕ್ಯ ಎಂದೇ ಕರೆಯಬೇಕು. ಗೆಲ್ಲುವುದು ಸುಲಭ ಇಲ್ಲ.
ಏನಾಗಿದೆ ಅಂದ್ರೆ..
ಎಲ್ಲರಿಗೂ ಗೊತ್ತಾಗಲಿ ಎಂದೇ ಫೋನ್ ಕಾಲ್ :
ಫೋನ್ ಬಂದಿದ್ದು ಸಿದ್ದರಾಮಯ್ಯ ಅವರಿಗೆ. ಫೋನ್ ಮಾಡಿದ್ದವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್. ಹಾಗೆ ಫೋನ್ ಮಾಡಿದಾಗ ಅವರಿಗೆ ಬೆಂಗಳೂರಿನಲ್ಲಿ ಸಭೆ ನಡೆಯುತ್ತಿದೆ. ಆ ಸಭೆಯಲ್ಲಿ ಡಿಕೆ, ಸುರ್ಜೇವಾಲ ಸೇರಿದಂತೆ ರಾಜ್ಯ ಕಾಂಗ್ರೆಸ್ಸಿನ ಪ್ರಮುಖ ನಾಯಕರೆಲ್ಲ ಇದ್ದಾರೆ ಎನ್ನುವುದು ಗೊತ್ತಿತ್ತು. ಹೀಗಿದ್ದರೂ ಫೋನ್ ಮಾಡಿದ್ದರೆಂದರೆ.. ಅದರ ಅರ್ಥ ಸರಳ. ಇದು ಎಲ್ಲರಿಗೂ ಗೊತ್ತಾಗಬೇಕು. ಸಿದ್ದರಾಮಯ್ಯ ಬೇಕು ಎನ್ನುವವರಿಗೂ ಗೊತ್ತಾಗಬೇಕು.. ಡಿಕೆ ಬೇಕು ಎನ್ನುವವರಿಗೂ ತಿಳಿಯಬೇಕು. ಹೈಕಮಾಂಡ್ ಇಂತಹ ಹೆಜ್ಜೆಗಳನ್ನು ಸುಮ್ಮನೆ ಇಡುವುದಿಲ್ಲ.
ಹೋಗಲ್ಲ.. ಹೋಗಲ್ಲ.. ಎನ್ನುತ್ತಲೇ ಹೋದರು :
ಇದು ಇನ್ನೊಂದು ವಿಷಯ. ಮೀಟಿಂಗ್ ಯಾಕೆ ಎನ್ನುವುದು ಡಿಕೆಗೂ ಗೊತ್ತು. ಸುರ್ಜೇವಾಲಾಗೂ ಗೊತ್ತು. ಸಿದ್ದರಾಮಯ್ಯಗೂ ಗೊತ್ತು. ಡಿಕೆಗೂ ಗೊತ್ತು. ಆದರೆ, ತನಗೆ ಗೊತ್ತೇ ಇಲ್ಲ ಎನ್ನುವುದೂ ಒಂದು ತಂತ್ರಗಾರಿಕೆ. ನನ್ನನ್ನು ಕರೆದಿಲ್ಲ ಎನ್ನುತ್ತಲೇ ಇದ್ದ ಡಿಕೆ ಶಿವಕುಮಾರ್, ಅದಕ್ಕೆ ತೆರೆಯ ಹಿಂದೆ ಏನು ಮಾಡಬೇಕೋ.. ಅಷ್ಟನ್ನೂ ಮಾಡಿದರು. ಫೈನಲಿ ಏನಾಯ್ತಂದರೆ.. ಡಿಕೆ ಶಿವಕುಮಾರ್ ಅವರಿಗೆ ನೀವೂ ಬನ್ನಿ. ಬರಲೇಬೇಕು ಎಂದು ಫೋನ್ ಬಂತು. ಅವರಿಗೆ ಫೋನ್ ಮಾಡಿದವರೂ ಕೆ.ಸಿ. ವೇಣುಗೋಪಾಲ್ ಅವರೇನಾ.. ಗೊತ್ತಿಲ್ಲ. ಅದನ್ನು ಡಿಕೆ ಹೇಳಿಲ್ಲ.
ಸಿಂಹಗಳು ಸಿಂಗಲ್ ಅಲ್ಲ
ಇನ್ನು ಹೈಕಮಾಂಡ್ ಒಬ್ಬರೇ ಬನ್ನಿ ಎಂದು ಕೇಳಿತ್ತು. ಇದಾಗುತ್ತಿದ್ದಂತೆಯೇ ಸಿದ್ದರಾಮಯ್ಯ ತಮ್ಮ ಜೊತೆ ಒಂದು ಟೀಂ ರೆಡಿ ಮಾಡಿದರು. ದೆಹಲಿಗೆ ಒಬ್ಬರೇ ಹೋಗಲಿಲ್ಲ. ಸಚಿವರಾದ ಹೆಚ್ಕೆ ಪಾಟೀಲ್, ಹೆಚ್ಸಿ ಮಹದೇವಪ್ಪ, ಬೈರತಿ ಸುರೇಶ್, ಕೆಜೆ ಜಾರ್ಜ್ ಮತ್ತು ಗೃಹ ಸಚಿವ ಡಾ. ಜಿ ಪರಮೇಶ್ವರ ಸಹ ದೆಹಲಿಗೆ ತೆರಳುತ್ತಿದ್ದಾರೆ.
ಇತ್ತ ಡಿಕೆ ಶಿವಕುಮಾರ್ ಕೂಡಾ ಅಷ್ಟೇ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಬೆಂಬಲಿಗ ಸಚಿವರೊಂದಿಗೆ ಪ್ರತ್ಯೇಕವಾಗಿ ಈಗಾಗಲೇ ದೆಹಲಿ ತಲುಪಿದ್ದಾರೆ. ಅವರ ಜೊತೆ ಹ್ಯಾರಿಸ್ ಸೇರಿದಂತೆ ಕೆಲವು ನಾಯಕರಿದ್ದಾರೆ. ಡಿಕೆ ಶಿವಕುಮಾರ್ ತಮ್ಮ ಡಿಕೆ ಸುರೇಶ್ ಈಗಾಗಲೇ ದೆಹಲಿ ರೀಚ್ ಆಗಿದ್ದಾರೆ.
ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ಲಭ್ಯವಾಗಲಿರುವ ಮೂರು ಸ್ಥಾನಗಳಿಗೆ ಅಭ್ಯರ್ಥಿ ಅಖೈರುಗೊಳಿಸುವುದು ಈ ಸಭೆಯ ಅಧಿಕೃತ ಅಜೆಂಡಾ. ಆದರೆ, ಸಭೆಯಲ್ಲಿ ರಾಹುಲ್ ಜತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಐದು ಮಂದಿಗೆ ಮಾತ್ರ ಈವರೆಗೆ ಅಧಿಕೃತ ಆಹ್ವಾನವಿದೆ. ಹಾಗಾದರೆ ಸಚಿವರು ಯಾಕೆ.. ಅದು ತಂತ್ರಗಾರಿಕೆಯ ಒಂದು ಭಾಗ.
ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರೊಬ್ಬರು ಕಡೆ ಕ್ಷಣದಲ್ಲಿ ಸಭೆಗೆ ಸೇರಿಕೊಳ್ಳಬಹುದು. ಆದರೆ, ಅವರ ಉಪಸ್ಥಿತಿ ಇನ್ನೂ ಖಚಿತವಾಗಿಲ್ಲ. ಸಭೆಯಲ್ಲಿ ಹೊರಬೀಳುವ ನಿರ್ಧಾರ ಅಥವಾ ಸುಳಿವು ರಾಜ್ಯದ ಮುಂದಿನ ಎರಡು ವರ್ಷಗಳ ಆಡಳಿತದ ಮೇಲೆ ನೇರ ಪರಿಣಾಮ ಬೀರಲಿದೆ. ಹೀಗಾಗಿ ಇಡೀ ರಾಜ್ಯ ರಾಜಕಾರಣದ ದೃಷ್ಟಿ ಈ ಸಭೆಯತ್ತ ನೆಟ್ಟಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ಬಯಸುತ್ತಿರುವ ಸಚಿವ ಸಂಪುಟ ಪುನಾರಚನೆ ಹಾಗೂ ಕೆಪಿಸಿಸಿ ಅಧ್ಯಕ್ಷ ಪಲ್ಲಟ ಅಥವಾ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣ ಬಯಸುತ್ತಿರುವ ನಾಯಕತ್ವ ಬದಲಾವಣೆ- ಈ ಎರಡರ ಪೈಕಿ ಹೈಕಮಾಂಡ್ ಯಾವುದಕ್ಕೆ ಮನ್ನಣೆ ನೀಡಲಿದೆ ಮತ್ತು ಯಾವುದೋ ಒಂದಕ್ಕೆ ಮನ್ನಣೆ ನೀಡಿದರೂ ಅದರಿಂದಾಗುವ ದೂರಗಾಮಿ ಪರಿಣಾಮಗಳಿಗೆ ಹೇಗೆ ಮದ್ದು ಅರೆಯುತ್ತದೆ ಎಂಬುದು ಕುತೂಹಲದ ಮೂಲ.
ಏಕೆಂದರೆ, ಸಿದ್ದರಾಮಯ್ಯ ಬಣ ಬಯಸುವಂತೆ ಸಚಿವ ಸಂಪುಟ ವಿಸ್ತರಣೆಗೆ ಒಪ್ಪಿಗೆ ನೀಡಿದರೆ ಅದರ ಅರ್ಥ ನಾಯಕತ್ವ ಬದಲಾವಣೆ ಅರ್ಥಾತ್ ಮುಖ್ಯಮಂತ್ರಿಯಾಗುವ ಡಿ.ಕೆ.ಶಿವಕುಮಾರ್ ಅವರ ಬಯಕೆಗೆ ಈ ಅವಧಿಯಲ್ಲಿ ಎಳ್ಳು ನೀರು ಬಿಟ್ಟಂತೆ.



