ಸಿದ್ದರಾಮಯ್ಯ ಮನೆಗೆ ಡಿಕೆ ಶಿವಕುಮಾರ್ ಹೋಗಿ ಇಡ್ಲಿ ಸಾಂಬಾರ್ ಸೇವಿಸಿ ಬಂದಿದ್ದು ಆಯ್ತು. ಈಗ ಡಿಕೆ ಮನೆಗೆ ಸಿದ್ದರಾಮಯ್ಯ ಹೋಗಿ ನಾನ್ ವೆಜ್ ಟಿಫನ್ ಮಾಡಿದ್ದಾರೆ. ಇದರಲ್ಲಿ ವಿಶೇಷ ಎಂದರೆ.. ತಂತ್ರಗಾರಿಕೆ ಬದಲಾಗಿರುವುದು. ಹೈಕಮಾಂಡ್ ಕೂಡಾ ತಂತ್ರಗಾರಿಕೆ ಬದಲಿಸಿಕೊಂಡಿದ್ದರೆ, ಸಿದ್ದು-ಡಿಕೆ ಕೂಡಾ ಬೇರೆಯದೇ ಹಾದಿ ಹಿಡಿದಿದ್ದಾರೆ. ಇದರ ಮಧ್ಯೆ ಈ ಇಬ್ಬರ ನಡುವೆ ಒಬ್ಬ ವ್ಯಕ್ತಿ ಕಾಣಿಸಿಕೊಂಡಿದ್ದಾರೆ. ರಾಜ್ಯದ ಜನತೆಗೆ ಗೊತ್ತಿಲ್ಲದವರೇನಲ್ಲ. ಆದರೆ.. ಇದ್ದಕ್ಕಿದ್ದಂತೆ ಹೈಕಮಾಂಡ್ ನಾಯಕರ ನಂಬಿಗೆಯ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅವರ ಹೆಸರು ಪೊನ್ನಣ್ಣ.
ಸಿದ್ದರಾಮಯ್ಯ ಮನೆಗೆ ಡಿಕೆ ಶಿವಕುಮಾರ್ ಉಪಾಹಾರಕ್ಕೆ ಹೋದಾಗ ಕಾಣಿಸಿಕೊಂಡಿದ್ದು ಪೊನ್ನಣ್ಣ. ಬಹುತೇಕರು ನಿರೀಕ್ಷೆ ಮಾಡದೇ ಇದ್ದ ಹೆಸರು ಅದು. ಹೈಕಮಾಂಡ್ ಜೊತೆ ಉತ್ತಮ ಸಂಪರ್ಕ ಇರುವ ಹಲವು ನಾಯಕರಿದ್ದಾರೆ. ಬಿಕೆ ಹರಿಪ್ರಸಾದ್, ಕೆಜೆ ಜಾರ್ಜ್, ಇತ್ತೀಚೆಗೆ ಪ್ರಿಯಾಂಕ್ ಖರ್ಗೆ, ಪರಮೇಶ್ವರ್, ದಿನೇಶ್ ಗುಂಡೂರಾವ್.. ಹೀಗೆ ಹಲವು ನಾಯಕರಿದ್ದಾರೆ. ಅವರೆಲ್ಲರನ್ನೂ ಬಿಟ್ಟು ಹೈಕಮಾಂಡ್ ಆಯ್ಕೆ ಮಾಡಿಕೊಂಡಿದ್ದು ಪೊನ್ನಣ್ಣ ಅವರನ್ನು.
ಎ ಎಸ್ ಪೊನ್ನಣ್ಣ. ವಿರಾಜಪೇಟೆಯಿಂದ ಆಯ್ಕೆಯಾಗಿರುವ ಶಾಸಕ. ಮೂಲತಃ ವಕೀಲರು. ಪೊನ್ನಣ್ಣ ಅವರ ತಂದೆ ಎಕೆ ಸುಬ್ಬಯ್ಯ. ಆರ್‌ಎಸ್‌ಎಸ್ ಕಾರ್ಯಕರ್ತರಾಗಿದ್ದವರು, ಎಮರ್ಜೆನ್ಸಿ ವಿರುದ್ಧ ಹೋರಾಟದಲ್ಲಿ ಜೈಲಿಗೆ ಹೋಗಿದ್ದವರು.ವಿಶೇಷವೇನು ಗೊತ್ತೇ, ಬಿಜೆಪಿ ಉದ್ಭವವಾದಾಗ ರಾಜ್ಯ ಬಿಜೆಪಿಯ ಮೊದಲ ಅಧ್ಯಕ್ಷರಾಗಿದ್ದವರು ಎಕೆ ಸುಬ್ಬಯ್ಯ. ಎಕೆ ಸುಬ್ಬಯ್ಯ ಅವರ ಮಗ ಪೊನ್ನಣ್ಣ, ಈಗ ಕಾಂಗ್ರೆಸ್ ಶಾಸಕ ಎನ್ನುವುದೇ ವಿಶೇಷ.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮಧ್ಯೆ ಸಿದ್ದರಾಮಯ್ಯ ಅವರ ಮನೆಯಲ್ಲಿ ನಡೆದ ಬ್ರೇಕ್ ಫಾಸ್ಟ್ ಮೀಟಿಂಗ್ ಮಧ್ಯೆ ಇದ್ದವರು ಪೊನ್ನಣ್ಣ ಒಬ್ಬರೇ. ಪೊನ್ನಣ್ಣ ಅವರನ್ನು ಹೈಕಮಾಂಡ್ ಕೊಂಡಿಯಾಗಿ ಬಳಸಿಕೊಂಡಿತು ಎನ್ನುವ ಮಾತುಗಳಿವೆ. ಅದು ಸಹಜವೇ. ಪೊನ್ನಣ್ಣ, ಸಿಎಂ ಸಿದ್ದರಾಮಯ್ಯ ಅವರಿಗೆ ಅಡ್ವೋಕೇಟ್ ಆಗಿದ್ದವರು. ಲೀಗಲ್ ಅಡ್ವೈಸರ್ ಆಗಿದ್ದವರು. ಎಕೆ ಸುಬ್ಬಯ್ಯ ಅವರೊಂದಿಗೆ ಸಿದ್ದರಾಮಯ್ಯ ಅವರಿಗೆ ಸ್ನೇಹ ಇತ್ತು. ಆ ಕಾರಣಕ್ಕಾಗಿ ಪೊನ್ನಣ್ಣ ಅವರಿಗೆ ಸಲೀಸಾಗಿ ಟಿಕೆಟ್ ಸಿಕ್ಕಿತು ಎಂಬ ಮಾತುಗಳಿವೆ. ಆದರೆ, ವಿರೋಧದ ಮಧ್ಯೆಯೂ ಪೊನ್ನಣ್ಣಗೆ ಟಿಕೆಟ್ ಕೊಟ್ಟಿದ್ದು ತಾನು ಎಂದು ಡಿಕೆ ಶಿವಕುಮಾರ್ ಇತ್ತೀಚೆಗೆ ಹೇಳಿಕೊಂಡಿದ್ದಾರೆ.
ಅಂದಹಾಗೆ ಹೈಕಮಾಂಡ್ ನಾಯಕರಿಗೆ ಯಾರನ್ನು ಆಯ್ಕೆ ಮಾಡಿದರೂ ಒಂದು ಸಮಸ್ಯೆ. ಹೈಕಮಾಂಡ್ ಜೊತೆ ಆಪ್ತರಾಗಿರುವವರೆಲ್ಲ ಒಂದಲ್ಲ ಒಂದು ಗುಂಪಿನಲ್ಲಿ ಗುರುತಿಸಿಕೊಂಡು ಬಿಟ್ಟಿದ್ದಾರೆ. ಹೀಗಾಗಿ ಅವರಿಂದ ಏನೇ ರಿಪೋರ್ಟ್ ಬಂದರೂ.. ಪಕ್ಷಪಾತದ ವರದಿಯೇ ಸಿಗುತ್ತದೆ ಎನ್ನುವ ಕಾರಣಕ್ಕೆ ಪೊನ್ನಣ್ಣ ಅವರನ್ನು ಆಯ್ಕೆ ಮಾಡಿಕೊಂಡಿದೆ ಎನ್ನುವುದು ಕಾಂಗ್ರೆಸ್ಸಿಗರಲ್ಲಿ ಕೇಳಿ ಬರ್ತಿರೋ ವಾದ. ಮುಖ್ಯಮಂತ್ರಿಗೆ ಲೀಗಲ್ ಅಡ್ವೈಸರ್ ಆಗಿರವ ಪೊನ್ನಣ್ಣ, ಆ ಮೂಲಕವೇ ಹೈಕಮಾಂಡಿನ ಸೋನಿಯಾ, ರಾಹುಲ್ ಅವರಿಗೆ ಆಪ್ತರಾಗಿದ್ದಾರಂತೆ. ಇಂಗ್ಲಿಷೂ ಸೂಪರ್ಬ್ ಆಗಿದೆ.
ಇಷ್ಟೆಲ್ಲದರ ಮಧ್ಯೆ ಪೊನ್ನಣ್ಣ ಅವರು ಮಾತ್ರ ಹಾಗೇನೂ ಇಲ್ಲ. ಹೈಕಮಾಂಡಿನವರು ಫೋನ್ ಮಾಡಿದಾಗ ಆಕಸ್ಮಿಕವಾಗಿ ಇವರ ಜೊತೆಯಲ್ಲಿದ್ದೆ, ಅವರಿಬ್ಬರೂ ಮಾತನಾಡುವಾಗಲೂ ನಾನು ಇರಲಿಲ್ಲ ಎಂದು ಹೇಳ್ಕೊಂಡಿದ್ದಾರೆ.
ಆದರೆ, ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಶಾಸಕ ಎ.ಎಸ್ ಪೊನ್ನಣ್ಣಗೆ ಹೈಕಮಾಂಡ್ನಿಂದ ಕರೆಬಂದಿತ್ತು. ಸಿಎಂ ನಿವಾಸದಲ್ಲಿ ಬ್ರೇಕ್ಫಾಸ್ಟ್ ಮಾಡಿ ಡಿಕೆ ಶಿವಕುಮಾರ್ ಜೊತೆ ಮಾತುಕತೆ ಮಾಡಬೇಕು ಅಂತಾ ಫೋನ್ ಬಂದಿತ್ತು ಎಂದು ಹೇಳಿರೋ ಕಾರಣ, ಪೊನ್ನಣ್ಣ ಅವರ ಕಾಂಟ್ಯಾಕ್ಟು ಗೊತ್ತಾಗುವಂತಾಗಿದೆ.



