SIR ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆ ಶುರುವಾಗಿದೆ. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ನೀಡಿರುವ ಎಚ್ಚರಿಕೆ ವಿಶೇಷ ಕುತೂಹಲ ಮೂಡಿಸಿದೆ. ಜೂನ್ 30 ರಿಂದ ಜುಲೈ 29 ರ ಅವಧಿಯಲ್ಲಿ ನಡೆಯುವ ಎಸ್‌ಐಆರ್ ಪ್ರಕ್ರಿಯೆ ವೇಳೆ ಕಾಂಗ್ರೆಸ್ ಶಾಸಕರು, ಸಂಸದರು ಮತ್ತು ಕಾರ್ಯಕರ್ತರು ಅಲರ್ಟ್ ಆಗಿರಬೇಕು, ಇಲ್ಲದೇ ಹೋದರೆ ಕಾಂಗ್ರೆಸ್ ಸರ್ವನಾಶ ಖಚಿತ ಎಂದು ಎಚ್ಚರಿಕೆ ನೀಡಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ. ಅವರ ವಾದಗಳೂ ಇಂಟ್ರೆಸ್ಟಿಂಗ್ ಆಗಿವೆ. ಸಾವಿರಕ್ಕಿಂತ ಕಡಿಮೆ ಅಂತರದಲ್ಲಿ ಗೆದ್ದಿರುವ ಕ್ಷೇತ್ರಗಳಲ್ಲಿ ಎಸ್‌ಐಆರ್ ಡೇಂಜರ್ ಎನ್ನುತ್ತಿದ್ದಾರೆ ಸಿದ್ದರಾಮಯ್ಯ. ಆದರೆ 2023ರಲ್ಲಿ ಆ ರೀತಿ ಗೆದ್ದಿರುವ ಕ್ಷೇತ್ರಗಳ ಸಂಖ್ಯೆ ನೋಡಿದರೆ ಅಚ್ಚರಿಯಾಗುತ್ತದೆ. ಅದು ಕೇವಲ 7 ಮಾತ್ರ.
2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 7 ಕ್ಷೇತ್ರಗಳು 1,000 ಕ್ಕಿಂತ ಕಡಿಮೆ ಮತಗಳ ಅತ್ಯಲ್ಪ ಅಂತರದಿಂದ (Wafer-thin margins) ಗೆಲುವನ್ನು ನಿರ್ಧರಿಸಿವೆ. ಈ ಪೈಕಿ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು 1 ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಿದೆ. ಹೀಗಿದ್ದರೂ ಸಿದ್ದರಾಮಯ್ಯ ಹೇಳುತ್ತಿರುವುದು ಬೇರೆ.
ಕಡಿಮೆ ಅಂತರದಲ್ಲಿ ಗೆದ್ದ ಕ್ಷೇತ್ರಗಳೇ ಟಾರ್ಗೆಟ್ : ರಾಜ್ಯದ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು 1,000 ದಿಂದ 5,000 ಮತಗಳ ಅತ್ಯಲ್ಪ ಅಂತರದಿಂದ ಗೆದ್ದಿದ್ದಾರೆ. ಇಂತಹ ಕಡೆಗಳಲ್ಲಿ ನಾಲ್ಕೈದು ಸಾವಿರ ಅರ್ಹ ಮತಗಳನ್ನು ಕಿತ್ತುಹಾಕಿದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಕಷ್ಟವಾಗುತ್ತದೆ ಸಿದ್ದರಾಮಯ್ಯ.
ಹೋಗಲಿ 5 ಸಾವಿರ ಅಥವಾ ಅದಕ್ಕಿಂತ ಕಡಿಮೆ ಅಂತರದಲ್ಲಿ ಗೆದ್ದ ಕ್ಷೇತ್ರಗಳ ಲಿಸ್ಟ್ ನೋಡಿದರೆ ಒಟ್ಟು 42 ಕ್ಷೇತ್ರಗಳು 5,000 ಕ್ಕಿಂತ ಕಡಿಮೆ ಮತಗಳ ಅತ್ಯಲ್ಪ ಅಂತರದಿಂದ (Narrow Margin) ಗೆಲುವನ್ನು ನಿರ್ಧರಿಸಿವೆ. ಇದರಲ್ಲಿ ಸಾವಿರಕ್ಕಿಂತ ಕಡಿಮೆ ಅಂತರದಲ್ಲಿ ಗೆಲುವು ಕಂಡ 7 ಕ್ಷೇತ್ರಗಳೂ ಸೇರಿವೆ. ಒಟ್ಟಾರೆ ಈ ತೀವ್ರ ಪೈಪೋಟಿಯ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 22, ಬಿಜೆಪಿ 17 ಮತ್ತು ಜೆಡಿಎಸ್ 3 ಸ್ಥಾನಗಳಲ್ಲಿ ಜಯಗಳಿಸಿವೆ. ಸರಾಸರಿ 2.3 ಲಕ್ಷ ಮತದಾರರಿರುವ ಒಂದು ಕ್ಷೇತ್ರದಲ್ಲಿ 5 ಸಾವಿರಕ್ಕಿಂತ ಕಡಿಮೆ ಮಾರ್ಜಿನ್ ಅತಿ ಸೂಕ್ಷ್ಮ ಗೆಲುವಾಗಿರುತ್ತದೆ. 140 ಸ್ಥಾನಗಳಲ್ಲಿ ಗೆದ್ದಿರುವ ಕಾಂಗ್ರೆಸ್, ಇಲ್ಲಿಯೂ ಬೇರೆಯದೇ ಕಥೆ ಹೇಳ್ತಿದೆ.
ಕಾಂಗ್ರೆಸ್ ಮತದಾರರ ಹೆಸರು ಡಿಲೀಟ್ ಆಗುವ ಭಯ : ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತಬ್ಯಾಂಕ್ ಆಗಿರುವ ಬಡವರು, ರೈತರು, ಕಾರ್ಮಿಕರು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಮತದಾರರನ್ನು ಗುರಿಯಾಗಿಸಿಕೊಂಡು ಅವರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲು ಬಿಜೆಪಿ ಹುನ್ನಾರ ನಡೆಸುತ್ತಿದೆಯಂತೆ.
ಕಾಂಗ್ರೆಸ್ ಮತದಾರರನ್ನೇ ಕೈಬಿಡ್ತಾರಂತೆ : ದೇಶದಲ್ಲಿ ಬಿಜೆಪಿ ಪಕ್ಷ ಕೇವಲ 36% ಮತ ಪಡೆದಿದೆ. 64% ಜನ ಬಿಜೆಪಿ ವಿರುದ್ಧವಾಗಿ ಮತ ಹಾಕಿದ್ದಾರೆ. ಈ 64% ನಲ್ಲಿ 10% ಮತಗಳನ್ನು ಕೈಬಿಟ್ಟರೆ ಏನಾಗುತ್ತದೆ ಎಂದು ಊಹಿಸುವುದು ಕಷ್ಟ. ಬಿಜೆಪಿಯವರು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿಗಳು. ಅವರಿಗೆ ಸರ್ವಾಧಿಕಾರದಲ್ಲಿ ಮಾತ್ರ ನಂಬಿಕೆ. ಅವರದ್ದು ಒನ್ ನೇಷನ್, ಒನ್ ಎಲೆಕ್ಷನ್ ನೀತಿ. ಹಿಂದುತ್ವದ ಮಾತಾಡುವವರು ಜಾತಿ, ವರ್ಣಾಶ್ರಮದ ಹೆಸರಲ್ಲಿ ಜನರನ್ನು ಶೋಷಣೆ ಮಾಡಿಲ್ಲವೇ? ಎಂದ ಸಿದ್ದರಾಮಯ್ಯ, ಶೂದ್ರ ಸಮುದಾಯ ಬಿಜೆಪಿ ಜೊತೆ ಹೋಗಲೇಬಾರದು ಎಂದೆಲ್ಲ ಎಚ್ಚರಿಸಿದ್ದಾರೆ.
ಸಿದ್ದರಾಮಯ್ಯ ಅವರು ಬಿಎಲ್‌ಒ ಗಳ ಜೊತೆ ಸಮನ್ವಯ ಮಾಡಿಕೊಂಡು ಅವರ ಜೊತೆ ಮನೆ ಮನೆಗೆ ತೆರಳಬೇಕು. ಜೊತೆಗೆ ಕನಿಷ್ಠ ಪಕ್ಷ ಇಬ್ಬರು ಸ್ಥಳೀಯ ಮತದಾರರನ್ನು ಪ್ರತಿ ಬೂತ್‌ಗೆ ಆಯ್ಕೆ ಮಾಡಬೇಕು. ಯಾರಿಗೆಲ್ಲಾ ಶಾಸಕರಾಗುವ, ಸಂಸದರಾಗುವ ಆಸೆ ಇದೆ, ಅವರು ಪ್ರಜಾಪ್ರಭುತ್ವ, ಸಂವಿಧಾನ ಮತ್ತು ದೇಶವನ್ನು ಉಳಿಸಲು ಈ ಪ್ರಯತ್ನ ಮಾಡಬೇಕು. ಬಿಜೆಪಿಯ, ಮೋದಿಯವರ ಕುತಂತ್ರವನ್ನು ಬಯಲು ಮಾಡಲು ಕೆಲಸ ಮಾಡಬೇಕು. ದೇಶದಲ್ಲಿ ಒಮ್ಮೆ ಪ್ರಜಾಪ್ರಭುತ್ವ ಹೋದರೆ ಮತ್ತೆ ಗುಲಾಮಗಿರಿ ಬರುತ್ತದೆ ಎಚ್ಚರ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.



