ʻನಾಯಕತ್ವ ವಿಚಾರವಾಗಿ ಸಿದ್ದರಾಮಯ್ಯ-ನನ್ನ ನಡುವೆ ಕದ್ದುಮುಚ್ಚಿ ಗುಟ್ಟಿನ ವ್ಯವಹಾರ ನಡೆದಿಲ್ಲ. ಸಮಯ ಬಂದಾಗ ಸಿದ್ದರಾಮಯ್ಯ ಅವರೇ ನಮ್ಮ ತೀರ್ಮಾನದ ಬಗ್ಗೆ ಜನರಿಗೆ ಸಂದೇಶ ನೀಡುತ್ತಾರೆʼ ಇದು ಡಿಕೆ ಶಿವಕುಮಾರ್ ಮಾತು. ಮಾತು ಕೇಳಿದವರಿಗೆ ಅಚ್ಚರಿಯಾಗಿರುವುದಂತೂ ಸತ್ಯ. ಏಕೆಂದರೆ ಡಿಕೆ ಶಿವಕುಮಾರ್ ವರಸೆ ಈಗ ಬದಲಾಗಿದೆ. ಅದು ಕೊಡುತ್ತಿರುವ ಸಂದೇಶಗಳೇ ಬೇರೆ. ಡಿಕೆ ನಿಧಾನವಾಗಿ ಸಿಡಿಯುವ ಹಾದಿಯಲ್ಲಿದ್ದಾರೆ. ಅವರನ್ನು ಕಟ್ಟಿಹಾಕಿರುವುದು ಕೆಪಿಸಿಸಿ ಅಧ್ಯಕ್ಷ ಎಂಬ ಪಟ್ಟ.
ಈಗ ರಾಜ್ಯದಲ್ಲಿ ಚರ್ಚೆಯಾಗ್ತಾ ಇರೋದು ನಾಯಿ ಬಾಲದ ವಿಚಾರ. ‘ಬಾಲವು ನಾಯಿಯನ್ನು ಅಲ್ಲಾಡಿಸಲು ಸಾಧ್ಯವೆ? ಅದೇ ರೀತಿ ನಾಯಕತ್ವ ಬದಲಾವಣೆ ಕೇಳುವ ಶಾಸಕರು ಹೈಕಮಾಂಡನ್ನು ಅಲ್ಲಾಡಿಸಲು ಸಾಧ್ಯವೆ?’ ಎಂಬ ಸಚಿವ ಎಚ್.ಸಿ.ಮಹದೇವಪ್ಪ ಅವರ ಹೇಳಿಕೆ ಈಗ ದೊಡ್ಡ ಸುದ್ದಿ ಮಾಡ್ತಾ ಇದೆ.
ಅದಕ್ಕೆ ಉತ್ತರ ನೀಡಿರುವ ಡಿಕೆ ಶಿವಕುಮಾರ್ ‘ನಾಯಕರ ಹೇಳಿಕೆ ಕುರಿತು ಮುಖ್ಯಮಂತ್ರಿ ಮತ್ತು ಹೈಕಮಾಂಡ್ ಕ್ರಮ ಕೈಗೊಳ್ಳುತ್ತಾರೆ. ಮಹದೇವಪ್ಪ ಹಾಗೂ ಬೇರೆಯವರಿಗೆ ಉತ್ತರ ನೀಡಲು ನಾನು ತಯಾರಿಲ್ಲ. ನಾಯಕತ್ವ ವಿಚಾರವಾಗಿ ಈ ಹಿಂದೆ ಹೇಳಿರುವಂತೆ ನಾನು, ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ಎಲ್ಲರೂ ಸೇರಿ ತೀರ್ಮಾನ ತೆಗೆದುಕೊಂಡಿದ್ದೇವೆ. ಆ ತೀರ್ಮಾನ ಏನೆಂಬುದು ಸಮಯ ಬಂದಾಗ ತಿಳಿಯುತ್ತೆ. ಅದು ಕದ್ದುಮುಚ್ಚಿ ಮಾಡಿಕೊಂಡಿರುವ ಗುಟ್ಟಿನ ವ್ಯವಹಾರವಲ್ಲ. ಸಿದ್ದರಾಮಯ್ಯ ಅವರೇ ಸಮಯ ಬಂದಾಗ ರಾಜ್ಯಕ್ಕೆ ಸಂದೇಶ ನೀಡುತ್ತಾರೆ’ ಎಂದಿದ್ದಾರೆ.
ಆದರೆ ಡಿಕೆ ಶಿವಕುಮಾರ್ ಅವರಷ್ಟೇ ಶಾಂತರಾಗಿ ಇನ್ನುಳಿದ ಶಾಸಕರು ಉತ್ತರ ನೀಡಿಲ್ಲ. ಡಿಕೆ ಸುರೇಶ್ ʻನಾಯಿಗಳಲ್ಲಿ ಎರಡು ವಿಧ. ನಿಯತ್ತಿನ ನಾಯಿ ಹಾಗೂ ಬೀದಿ ನಾಯಿಗಳ ಕಥೆ ಹೇಳಿದ್ದಾರೆ. ಶಾಸಕ ಶಿವಗಂಗಾ ಬಸವರಾಜ್ ʻಮಹದೇವಪ್ಪನವರೂ ಶಾಸಕರೇ ಅಲ್ಲವೇ..ʼ ಎಂದು ನೇರವಾಗಿಯೇ ತಿರುಗೇಟು ಕೊಟ್ಟಿದ್ದಾರೆ..
ಈ ವರೆಗೂ ಸೌಜನ್ಯಯುತವಾಗಿ ನಡೆಯುತ್ತಿದ್ದ ಕುರ್ಚಿ ಕಾಳಗ ಇದೇ ಮೊದಲ ಭಾರಿಗೆ ಪ್ರಾಣಿಗಳ ಮಟ್ಟಕ್ಕಿಳಿದಿದೆ. ಆದರೆ ಡಿಕೆ ಶಿವಕುಮಾರ್ ಅವರು ಮಹದೇವಪ್ಪ ಅವರ ಬಗ್ಗೆ ಸಚಿವರು ಬಹಳ ದೊಡ್ಡವರು. ಈಗ ಅವರೂ ನಮ್ಮ ಹೈಕಮಾಂಡ್ ಭಾಗವಾಗಿದ್ದಾರೆ. ಅವರ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ ಎನ್ನುತ್ತಿದ್ದಾರೆ.
ಆದರೆ ಈಗ ಎಲ್ಲರನ್ನೂ ಕಾಡುತ್ತಿರುವ ಕಟ್ಟ ಕಡೆಯ ಪ್ರಶ್ನೆ ಒಂದೇ.. ಸಿದ್ದರಾಮಯ್ಯ ಅವರೇ ಎಲ್ಲದಕ್ಕೂ ಉತ್ತರ ಕೊಡ್ತಾರಾ ಎನ್ನುವುದು. ಕೊಡುವುದಾದರೆ ಯಾವಾಗ.. ಎಲ್ಲಿ.. ಹೇಗೆ.. ಯಾರಿಗೆ.. ಕಾದು ನೋಡಬೇಕಷ್ಟೇ.



