ಡಿಕೆ ಶಿವಕುಮಾರ್ ಇನ್ನೇನು ಕೆಲವೇ ದಿನಗಳಲ್ಲಿ ಸಿಎಂ ಆಗುತ್ತಾರೆ. ಕರ್ನಾಟಕ ಕಂಡ 24ನೇ ಸಿಎಂ ಆಗುವುದಕ್ಕೆ ಇನ್ನು ಹೆಚ್ಚು ಸಮಯ ಇಲ್ಲ. ಆದರೆ ಇಲ್ಲಿ ರಾಜಕಾರಣ, ತಂತ್ರಗಾರಿಕೆ ಹೊರತು ಪಡಿಸಿದ ಕೆಲವು ಜ್ಯೋತಿಷಿಗಳ, ಸ್ವಾಮೀಜಿಗಳ ಮಾತು ಚರ್ಚೆಯಾಗುತ್ತಿದೆ. ಡಿಕೆ ಸಿಎಂ ಆಗುತ್ತಾರೆ. ಇದು ಪೊಲಿಟಿಕಲ್ ಸ್ಟೋರಿ ಅಲ್ಲ. ರಾಜಕೀಯದ ವಿಷಯವೇ ಇರುವ ದೈವ ಭಕ್ತಿ, ಜ್ಯೋತಿಷ್ಯ ಭವಿಷ್ಯದ ಕಥೆ. ಡಿಕೆಗೆ ಸಿಎಂ ಆಗುವ ಸಮಯ ಹತ್ತಿರದಲ್ಲಿದೆ ಎಂದು ಧೈರ್ಯ ಮತ್ತು ಭರವಸೆ ಕೊಟ್ಟಿದ್ದವರು ಒಬ್ಬಿಬ್ಬರಲ್ಲ.
ದ್ವಾರಕಾನಾಥ್ ಗುರೂಜಿ : ರಾಜಗುರು ದ್ವಾರಕಾನಾಥ್ ಗುರೂಜಿ (ಬೆಳ್ಳೂರು ದ್ವಾರಕಾನಾಥ್) — ಅತ್ಯಂತ ಪ್ರಮುಖ ಮತ್ತು ಆಪ್ತ ಜ್ಯೋತಿಷಿ. 40 ವರ್ಷಗಳ ಹಿಂದೆಯೇ (ಸುಮಾರು 1980-86ರ ಸುಮಾರು) ಡಿಕೆಶಿ ಸಿಎಂ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದರಂತೆ. ಇತ್ತೀಚೆಗೆ (2026 ಮೇ) ಅವರು ಮತ್ತೆ ಭವಿಷ್ಯ ಹೇಳಿದ್ದಾರೆ: ಡಿಕೆಶಿ ದೀರ್ಘಕಾಲ (8 ವರ್ಷ ಅಥವಾ ಎರಡು ಟರ್ಮ್) ಮುಖ್ಯಮಂತ್ರಿಯಾಗುತ್ತಾರೆ, 2028ರಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತಾರೆ ಎಂದು ಹೇಳಿದ್ದಾರೆ. ಇವರು ಡಿಕೆಶಿ ಅವರ ಜಾತಕ ವಿಶ್ಲೇಷಣೆ ಮಾಡಿ ದೀರ್ಘಕಾಲದಿಂದಲೂ ಈ ಭವಿಷ್ಯ ಹೇಳುತ್ತಿದ್ದಾರೆ. ಇವರು ಡಿಕೆಗೆ ಸಿಎಂ ಆಗುವ ಭವಿಷ್ಯ ಹೇಳಿದಾಗ ಡಿಕೆ ಇನ್ನೂ ಮೊದಲ ಬಾರಿ ಶಾಸಕರಾಗಿದ್ದರಷ್ಟೇ.
ನೊಣವಿನಕೆರೆ ಕಾಡುಸಿದ್ದೇಶ್ವರ ಮಠದ ಶ್ರೀಗಳು : ಡಿ.ಕೆ. ಶಿವಕುಮಾರ್ ಅವರು ಅತ್ಯಂತ ಭಕ್ತಿಯಿಂದ ನಡೆದುಕೊಳ್ಳುವ ತುಮಕೂರು ಜಿಲ್ಲೆಯ ನೊಣವಿನಕೆರೆಯ ಅಜ್ಜಯ್ಯನ ಗದ್ದುಗೆಯ (ಶ್ರೀ ಕಾಡುಸಿದ್ದೇಶ್ವರ ಮಠ) ಶ್ರೀಗಳು ಕೂಡ ಡಿಕೆಶಿ ಮುಖ್ಯಮಂತ್ರಿ ಆಗುವ ಕಾಲ ಸನ್ನಿಹಿತವಾಗಿದೆ ಎಂದು ಈ ಹಿಂದೆ ಆಶೀರ್ವದಿಸಿದ್ದರು. “ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ” ಎಂದು ಸಾರ್ವಜನಿಕವಾಗಿ ಭವಿಷ್ಯ ನುಡಿದಿದ್ದರು.
ಪಂಚಮುಖಿ ಆಂಜನೇಯ ದೇವಾಲಯ (ರಾಯಚೂರು / ಮಂತ್ರಾಲಯ)
ರಾಯಚೂರಿನ ಗಾಣದಾಳದಲ್ಲಿರುವ ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದ ಡಿ.ಕೆ. ಶಿವಕುಮಾರ್, ಪತ್ನಿ ಉಷಾ ಅವರ ಜೊತೆ : ಡಿ.ಕೆ. ಶಿವಕುಮಾರ್ ಅವರು ತಮ್ಮ ಪತ್ನಿಯೊಂದಿಗೆ ರಾಯಚೂರಿನ ಗಾಣದಾಳದಲ್ಲಿರುವ ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಮಧು ಅಭಿಷೇಕ ಮತ್ತು ಪುಷ್ಪಾರ್ಚನೆ ಮಾಡಿಸಿದ್ದರು. ಆ ಸಮಯದಲ್ಲಿ ದೇವಸ್ಥಾನದ ಮುಖ್ಯ ಅರ್ಚಕರಾದ ಶಾಮಾಚಾರ್ಯರು, “ಡಿಕೆಶಿ ಅವರು ಕರ್ನಾಟಕದ ಮುಖ್ಯಮಂತ್ರಿ ಆಗುವುದು ನೂರಕ್ಕೆ ನೂರು ನಿಶ್ಚಿತ” ಎಂದು ದೃಢವಾಗಿ ಭವಿಷ್ಯ ನುಡಿದಿದ್ದರು.
ಯಾದಗಿರಿಯ ಗಡೇ ದುರ್ಗಾದೇವಿ ದೇವಸ್ಥಾನ : ಡಿಕೆಶಿ ಅವರು ಈ ದೇವಿಯ ಪರಮ ಭಕ್ತರಾಗಿದ್ದು, 2020 ರಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾಗ ತಾವು ಮುಖ್ಯಮಂತ್ರಿ ಆಗಬೇಕೆಂದು ಚೀಟಿ ಬರೆದು ದೇವಿಯ ಪಾದಕ್ಕೆ ಅರ್ಪಿಸಿದ್ದರು. ಈ ವೇಳೆ ಅರ್ಚಕ ಮಹಾದೇವಪ್ಪ ಪೂಜಾರಿಯವರು, ದೇವಿಯ ಕೃಪೆಯಿಂದ ಡಿಕೆಶಿಗೆ ಸಿಎಂ ಯೋಗ ಸಿಗಲಿದೆ ಎಂದು ಭವಿಷ್ಯ ಹೇಳಿದ್ದರು.
ಜಗದೀಶ್ವರಿ ಅಮ್ಮನವರ ದೇವಸ್ಥಾನ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಆಂದ್ಲೆ ಗ್ರಾಮದಲ್ಲಿರುವ ದೇವಸ್ಥಾನ. ಇಷ್ಟಾರ್ಥ ಸಿದ್ಧಿಗಾಗಿ ಡಿಕೆಶಿ ಈ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಅಲಂಕಾರ ಮಾಡಿಸಿ ‘ಪ್ರಶ್ನೆ’ ಕೇಳಿಸಿದ್ದರು. ಈ ವೇಳೆ ದೇವಿ ಐದು ರೂಪದಲ್ಲಿ ಪ್ರಸಾದ ಕರುಣಿಸುವ ಮೂಲಕ ಅವರ ಕೋರಿಕೆ (ಸಿಎಂ ಸ್ಥಾನದ ಆಸೆ) ಈಡೇರಲಿದೆ ಎಂಬ ಧನಾತ್ಮಕ ಸಂಕೇತ ನೀಡಿದ್ದಾಳೆ ಎಂದು ಅರ್ಚಕರು ತಿಳಿಸಿದ್ದರು.
ಗೋಕರ್ಣ ಮಹಾಬಲೇಶ್ವರ : ಡಿಕೆಶಿ ಅವರು ಗೋಕರ್ಣದ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಲು ಹೋದಾಗ, ಅಲ್ಲಿನ ಅರ್ಚಕರು ಪೂಜೆಯ ಸಂಕಲ್ಪ ಮಾಡುವಾಗಲೇ “ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿ” ಎಂದು ದೇವರಲ್ಲಿ ಪ್ರಾರ್ಥಿಸಿದ್ದರು. ಇದರ ವಿಡಿಯೋ ವೈರಲ್ ಆದಾಗ ಡಿಕೆಶಿ, “ಅರ್ಚಕರು ನನ್ನ ಮೇಲೆ ಅಭಿಮಾನದಿಂದ ಹಾಗೆ ಹಾರೈಸಿದ್ದಾರೆ, ಅದರಲ್ಲಿ ತಪ್ಪೇನಿದೆ?” ಎಂದು ಪ್ರತಿಕ್ರಿಯಿಸಿದ್ದರು.
ಇಂತಹ ಇನ್ನೂ ಹತ್ತು ಹಲವು ದೇವಸ್ಥಾನಗಳಿವೆ. ಜ್ಯೋತಿಷಿಗಳಿದ್ಧಾರೆ. ಕೆಲವು ಅಘೋರಿಗಳು ಸೇರಿದಂತೆ ಹಲವಾರಿದ್ಧಾರೆ. ಇನ್ನು ಕೋಡಿಶ್ರೀಗಳು ಅಂದು ನುಡಿದಿದ್ದ ಭವಿಷ್ಯದಂತೆಯೇ ಈಗ ಸಿದ್ದರಾಮಯ್ಯ ಅವರು ಯಾವುದೇ ಒತ್ತಡಕ್ಕೆ ಮಣಿಯದೆ, ಹೈಕಮಾಂಡ್ ಮೇಲಿನ ನಿಷ್ಠೆಯಿಂದಾಗಿ ತಾವಾಗಿಯೇ ಸ್ವಪ್ರೇರಣೆಯಿಂದ ಮುಖ್ಯಮಂತ್ರಿ ಸ್ಥಾನವನ್ನು ತ್ಯಾಗ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಈ ಗೌರವಯುತ ನಿರ್ಗಮನದೊಂದಿಗೆ ಕೋಡಿಮಠದ ಶ್ರೀಗಳ ಮಾತುಗಳು ಸತ್ಯವಾಗಿದೆ.



