ಹೀರೋಗಳು ಹೆಣ್ಣಿನ ಪಾತ್ರ ಹಾಕುವುದು ಅಪರೂಪದಲ್ಲಿ ಅಪರೂಪ. ಸಿನಿಮಾಗಳಲ್ಲಿ ಹೆಣ್ಣಿನ ಪಾತ್ರ ಮಾಡುವುದೂ ಕೂಡಾ ಕಷ್ಟವೇ. ಈಗ ಬಂದಿರೋ 45 ಟ್ರೇಲರಿನಲ್ಲಿ ಶಿವಣ್ಣ ಹೆಣ್ಣಿನ ವೇಷದಲ್ಲಿ ಬಂದು, ಸಣ್ಣಗೊಂದು ಕಣ್ಣು ಹೊಡೆದು ಝಲಕ್ ಕೊಡ್ತಾರೆ. ಉಪೇಂದ್ರ ʻಚೆಲುವೆಯ ನೋಟ ಚೆನ್ನ..ʼ ಎಂದು ಹಾಡಿದ ನಂತರ ಬರುವುದೇ ಶಿವಣ್ಣನ ಸ್ತ್ರೀ ವೇಷ. ಆದರೆ, ಶಿವಣ್ಣ ಸ್ತ್ರೀ ಗೆಟಪ್ ಹಾಕಿರುವುದು ಇದೇ ಮೊದಲೇನೂ ಅಲ್ಲ.
ಶಿವರಾಜ್ ಕುಮಾರ್ ಅವರನ್ನು ಹೆಣ್ಣಿನ ವೇಷದಲ್ಲಿ ತೋರಿಸಿದ್ದಾರೆ ಅರ್ಜುನ್ ಜನ್ಯ. 45 ಟ್ರೇಲರ್ ಕೊನೆಗೆ ಉಪೇಂದ್ರ ʻಚೆಲುವೆಯ ನೋಟ ಚೆನ್ನ..ʼ ಹಾಡಿಗೆ ಮೈಮ್ ಮಾಡಿದಾಗ ಅತಿಲೋಕ ಸುಂದರಿಯಂತೆ ತುಟಿ ಕೊಂಕಿಸುವುದು ಶಿವಣ್ಣ. 45ನಲ್ಲಿ ಶಿವಣ್ಣನ ಪಾತ್ರದ ಬಗ್ಗೆ ಕುತೂಹಲ ಹುಟ್ಟಿರುವುದೇ ಈ ಕಾರಣಕ್ಕೆ. 45 ಮಾಮೂಲಿ ಸಿನಿಮಾ ಟ್ರೇಲರ್‌ನಂತೆ ಇಲ್ಲ. ರೆಗ್ಯುಲರ್ ಜಾನರ್‌ನಲ್ಲಿಲ್ಲ. ಸಂಥಿಂಗ್ ಈಸ್ ಡಿಫರೆಂಟ್.
ಆದರೆ ಈ ಹಿಂದೆಯೂ ಶಿವಣ್ಣ ಸ್ತ್ರೀ ಗೆಟಪ್ ಹಾಕಿದ್ದರು. ಎರಡು ಬಾರಿ ಸ್ತ್ರೀ ವೇಷದಲ್ಲಿ ಕಾಣಿಸಿಕೊಂಡಿದ್ದರು. ಮಿಡಿದ ಶೃತಿ ಚಿತ್ರದಲ್ಲಿ ಸುಧಾರಾಣಿಗೆ ಹತ್ತಿರವಾಗಲು ಹೆಣ್ಣಿನ ವೇಷ ಧರಿಸಿ ಬರುವ ಪಾತ್ರ ಹಾಗೂ ಅಣ್ಣಾವ್ರ ಮಕ್ಕಳು ಚಿತ್ರದಲ್ಲಿ ವೇಶ್ಯಾವಾಟಿಕೆ ಮನೆ ಮೇಲೆ ರೇಡ್ ಮಾಡಲು ಬರುವಾಗ ಹೆಣ್ಣಿನ ವೇಷ ಧರಿಸುವ ಸೀನ್ʻನಲ್ಲಿ ಶಿವಣ್ಣ ನಟಿಸಿದ್ದಾರೆ. ಎರಡೂ ಚಿತ್ರಗಳು ಸೂಪರ್ ಹಿಟ್ ಎನ್ನುವುದನ್ನು ಮರೆಯುವಂತಿಲ್ಲ.
ಸ್ಟಾರ್ ನಟರು ಹೆಣ್ಣಿನ ವೇಷ ಹಾಕುವುದು ಹೊಸದೇನಲ್ಲ. ಕನ್ನಡದಲ್ಲಿಯೇ ಡಾ.ರಾಜ್ (ಶ್ರೀಕೃಷ್ಣ ಗಾರುಡಿ.. ಸೇರಿದಂತೆ ಇನ್ಣೂ ಎರಡು ಮೂರು ಚಿತ್ರಗಳು) , ರಮೇಶ್ (ರಂಗೇನಹಳ್ಳಿಯಾಗೆ ರಂಗಾದ ರಂಗೇಗೌಡ), ಉಮೇಶ್ (ವೆಂಕಟ ಇನ್ ಸಂಕಟ), ಶರಣ್ (ಜೈಲಲಿತಾ).. ಮೊದಲಾದ ಕೆಲವರು ಸ್ತ್ರೀ ಗೆಟಪ್ ಹಾಕಿದ್ದಾರೆ. ವಿಷ್ಣುವರ್ಧನ್, ಅಂಬರೀಷ್ ಮೊದಲಾದವರು ಸ್ತ್ರೀ ಗೆಟಪ್ ಹಾಕಿದ್ದಾರಾದರೂ, ಅದು ವೇಷವೇ ಹೊರತು, ಪಾತ್ರವಾಗಿ ಅಲ್ಲ.
ಇನ್ನು ತಮಿಳಿನಲ್ಲಿ ಕಮಲ್ ಹಾಸನ್, ಶಿವಕಾರ್ತಿಕೇಯನ್ ಮೊದಲಾದವರೂ ಸ್ತ್ರೀ ವೇಷ ಹಾಕಿ ಗೆದ್ದಿದ್ದಾರೆ. ಸ್ತ್ರೀ ವೇಷ ಹಾಕಿ ನಟಿಸುವುದು ಎಷ್ಟು ಕಷ್ಟ ಎನ್ನುವುದು ಆ ಪಾತ್ರಗಳಲ್ಲಿ ವೇಷ ತೊಟ್ಟ ಕಲಾವಿದರನ್ನೇ ಕೇಳಿದರೆ ಅರ್ಥವಾಗುತ್ತದೆ.
ಟ್ರೇಲರಿನಲ್ಲಿ ಶಿವಣ್ಣ ಅವರ ಹೆಣ್ಣಿನ ಝಲಕ್ ಒಂದೇ ಒಂದು ಸೆಕೆಂಡ್ ಬರುತ್ತದೆ. ಆ ಒಂದು ಸೆಕೆಂಡಿನಲ್ಲಿಯೇ ಗಮನ ಸೆಳೆದುಬಿಡ್ತಾರೆ ಶಿವರಾಜ್ ಕುಮಾರ್. ಈಗ 45 ಬರ್ತಾ ಇದೆ. ಡಿಸೆಂಬರ್ 25ರ ನಂತರ 45 ಕೂಡಾ ಹಿಟ್ ಸಾಲಿಗೆ ಸೇರಲಿದೆ ಎನ್ನುವುದು ಅಭಿಮಾನಿಗಳ ನಿರೀಕ್ಷೆ.
ಶಿವಣ್ಣನ ಲುಕ್ ಬೇರೆಯದೇ ಝಲಕ್ ಕೊಡುತ್ತದೆ. ಈ ಪಾಪ ಪುಣ್ಯಗಳ ಜಗತ್ತಿನಲ್ಲಿ ಶಿವಣ್ಣನ ಗುಡ್ ಪಾತ್ರದಲ್ಲಿದ್ದಾರಾ.. ಬ್ಯಾಡ್ ಪಾತ್ರದಲ್ಲಿದ್ದಾರಾ.. ಗೊತ್ತಾಗುವುದಿಲ್ಲ. 45, ಮೊದಲೇ ಹೇಳಿದ್ದಂತೆ ಫ್ಯಾಂಟಸಿ ಸಿನಿಮಾ. ಪಾಪ ಪುಣ್ಯದ ಕಥೆ. ಟ್ರೇಲರ್ ರಿಲೀಸ್ ಆಗಿದೆ. ಬಹುತೇಕರ ಅಭಿಪ್ರಾಯ ಬೊಂಬಾಟ್.. ಅಷ್ಟೇ. ಕಥೆ ಹೇಗಿರಬಹುದು. ತುಂಬಾ ದಿನಗಳೇನೂ ಇಲ್ಲ. 25ನೇ ತಾರೀಕು ಥಿಯೇಟರಿಗೆ ಬರಲಿದೆ 45.



