ಶಿವರಾಜ್ ಕುಮಾರ್. ಕನ್ನಡದಲ್ಲಿ ಸದಾ ಬ್ಯುಸಿ ಇರುವ ಏಕೈಕ ನಟ. ತಮಿಳಿನಲ್ಲಿ ರಜನಿಕಾಂತ್ ಜೊತೆ ಜೈಲರ್ 2, ತೆಲುಗಿನಲ್ಲಿ ರಾಮ್ ಚರಣ್ ಜೊತೆ ಪೆದ್ದಿ. ಇವುಗಳ ಜೊತೆ 666 ಆಪರೇಷನ್ ಡ್ರೀಮ್ ಥಿಯೇಟರ್, A ಫಾರ್ ಆನಂದ್, ಡ್ಯಾಡ್, ತೆಲುಗಿನ ಗುಮ್ಮಡಿ ನರಸಯ್ಯ.. ಇವೆಲ್ಲ ಪ್ರೀ ಪ್ರೊಡಕ್ಷನ್ ಅಥವಾ ಪೋಸ್ಟ್ ಪ್ರೊಡಕ್ಷನ್, ಚಿತ್ರೀಕರಣ, ರಿಲೀಸ್ ಹಂತದಲ್ಲಿರೋ ಸಿನಿಮಾಗಳು. ಇದೆಲ್ಲದರ ಮಧ್ಯೆ ಇನ್ನೊಂದು ಸಿನಿಮಾ ಒಪ್ಪಿಕೊಂಡು ಟೀಸರ್ ಕೂಡಾ ರಿಲೀಸ್ ಆಗಿದೆ. ಚಿತ್ರದ ಹೆಸರು ಬೇಲ್.
ಪವನ್ ಒಡೆಯರ್ ನಿರ್ದೇಶನದ ಬೇಲ್ ಚಿತ್ರದ ಟೀಸರ್ ಹೊರಬಿದ್ದಿದ್ದೆ. ಟೀಸರ್ ಮೂಲಕ ಶಿವಣ್ಣ ಪಾತ್ರದ ಪರಿಚಯ ಮಾಡಿಕೊಟ್ಟಿದ್ದಾರೆ ಶಿವಣ್ಣ.
ಬೆಂಗಳೂರಿನ ಮಳೆ ಮತ್ತು ಅದರಿಂದ ರಕ್ಷಿಸಿಕೊಳ್ಳಲು ಹಿಡಿದುಕೊಳ್ಳುವ ಛತ್ರಿ, ಸ್ವಲ್ಪ ಬಿಳಿಯಾಗಿರುವ ದಪ್ಪ ಮೀಸೆ.. ಎಲ್ಲವೂ ಶಿವಣ್ಣಗೆ ಬೇರೆಯದೇ ಲುಕ್ ಕೊಟ್ಟಿವೆ. ಬೇಲ್ ಅಲ್ಲಿ ಶಿವಣ್ಣನ ಪಾತ್ರದ ಹೆಸರು ವಿಜಿ.
ಟೀಸರ್‌ನಲ್ಲಿ ವಿಜಿ ಜೊತೆ ರಾಬರ್ಟ್ ಮಾತಾಡ್ತಾನೆ. ಧ್ವನಿ ನೋಡಿದರೆ ಸಿನಿಮಾದಲ್ಲಿ ರಾಬರ್ಟ್, ವಿಜಿಯ ಒಳ್ಳೆಯ ಫ್ರೆಂಡ್ ಎನಿಸುತ್ತದೆ. ವಿಜಿ..ವಿಜಿ ..ವಿಜಿ…ಅದೇನ್ ಬೆಂಕಿ ಹಚ್ಚಿದಿಯೋ ? ನೀನು ಹಚ್ಚಿದ ಬೆಂಕಿ ಇಡೀ ಊರಲ್ಲ. ಇಡೀ ದೇಶವನ್ನ ಸುಡುತ್ತಿದೆ. ಇದಕ್ಕೆ ಶಿವಣ್ಣ ಹೇಳ್ತಾರೆ. ವ್ಹಾವ್ ಸೋ ನೈಸ್ ಅಂತಾರೆ ವಿಜಿ ಅರ್ಥಾತ್ ಶಿವಣ್ಣ.
ಇಷ್ಟೆಲ್ಲ ಮಾಡಿದ್ಮೇಲೆ ಅದು ಹ್ಯಾಗೋ ಅಷ್ಟು ಆರಾಮಾಗಿದ್ದೀಯಾ ಅನ್ನೋ ರಾಬರ್ಟ್ ಪ್ರಶ್ನೆಗೆ ಕೆಲವು ಸ್ವಭಾವಕ್ಕೆ ಧೈರ್ಯದ ಅಭಾವ ಯಾವತ್ತೂ ಆಗೋದಿಲ್ಲ ಅನ್ನೋ ಉತ್ತರ ಕೊಡ್ತಾರೆ ಶಿವಣ್ಣ. ಇದನ್ನ ಬಿಡಿಸಿ ಹೇಳೋದಾದ್ರೆ, ನನ್ನ ಸ್ವಭಾವವೇ ಆಗಿದೆ. ಇದಕ್ಕೆ ಧೈರ್ಯ ಜಾಸ್ತಿ ಅಂತಲೇ ಹೇಳ್ತಾರೆ. ಅಂದಹಾಗೆ ರಾಬರ್ಟ್ ಯಾರು ಎನ್ನುವುದು ಗೊತ್ತಾಗಲ್ಲ. ಧ್ವನಿ ಮಾತ್ರ ಕೇಳುತ್ತದೆ.
ಈ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ. ಕಥೆ, ನಿರ್ದೇಶನ ಪವನ್ ಒಡೆಯರ್ ಅವರದ್ದು. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಇದೆ. ಚಿತ್ರವು ವರಮಹಾಲಕ್ಷ್ಮಿ ಹಬ್ಬದ ವೇಳೆಗೆ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಶಿವರಾಜ್‌ಕುಮಾರ್ ಜೊತೆಗೆ ಸಾಯಿ ಕುಮಾರ್ ಮತ್ತು ಜಯರಾಮ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, ಪಾತ್ರ ಪರಿಚಯ ಇನ್ನೂ ಆಗಿಲ್ಲ. ಸಾಯಿ ಕುಮಾರ್ ಹಾಗೂ ಜಯರಾಂ ಇಬ್ಬರೂ ಶಿವಣ್ಣಗೆ ಹೊಸಬರಲ್ಲ. ಈ ಪಾತ್ರಕ್ಕೆ ಅವರೇ ಬೇಕು ಎಂದು ಒಪ್ಪಿಸಿದೆ ಎನ್ನುತ್ತಾರೆ ಪವನ್ ಒಡೆಯರ್. ಶಿವಣ್ಣ ಇಲ್ಲಿ ಲಾಯರ್ ಪಾತ್ರ ಮಾಡ್ತಿದ್ದಾರೆ.
ಶಿವರಾಜ್ ಕುಮಾರ್. ಶಿವಣ್ಣ ಅಭಿನಯದ ಚಿತ್ರಗಳು ಒಂದಲ್ಲ ಒಂದು ರೀತಿಯಲ್ಲಿ ಸದ್ದು ಮಾಡುತ್ತಲೇ ಇರುತ್ತವೆ. ಅಂದಹಾಗೆ ಧ್ರುವ ಸರ್ಜಾ ಅವರಿಗೆ ಕೆಡಿ, ತಮಿಳಿನ ವಿಜಯ್ ಅವರಿಗೆ ಜನನಾಯಗನ್, ಯಶ್ ಅವರಿಗೆ ಟಾಕ್ಸಿಕ್ ನಿರ್ಮಾಣ ಮಾಡಿರುವ ವೆಂಕಟ್ ನಾರಾಯಣ್ ಅವರೇ ಬೇಲ್ ಚಿತ್ರಕ್ಕೆ ಪ್ರೊಡ್ಯೂಸರ್.



