ದರ್ಶನ್ ಬಿಡುಗಡೆಗೆ ಹೋಮ ಹವನಗಳು ನಡೆಯುತ್ತಿವೆ. ಸರ್ಪಶಾಂತಿ ನಡೆಯುತ್ತಿದೆ. ಹಲವು ಜ್ಯೋತಿಷಿಗಳು ದರ್ಶನ್ ರಿಲೀಸ್ ಯಾವಾಗ ಅಂತಾ ಭವಿಷ್ಯ ಹೇಳ್ತಿದ್ದಾರೆ. ದರ್ಶನ್ʻಗೆ ರಾಹು ದೆಸೆ, ಕೇತು ಕಂಟಕ, ಶನಿ ಪ್ರಭಾವ.. ಹೀಗೆ ಹಲವು ಭವಿಷ್ಯ ಹೇಳಿದ್ಧಾರೆ. ದರ್ಶನ್ ಜೈಲಿಂದ ಹೊರಬರಲಿ ಎಂದು ಕಾಯುತ್ತಿರುವ ಸಾವಿರಾರು ದರ್ಶನ್ ಅಭಿಮಾನಿಗಳಿಗೆ ಈಗ ಗುಂಡು ಕಲ್ಲು ಸಿಕ್ಕಿದೆ. ಆ ಗುಂಡು ಕಲ್ಲು ದರ್ಶನ್ ಬಿಡುಗಡೆ ಯಾವಾಗ ಅನ್ನೋ ಭವಿಷ್ಯ ಹೇಳಿದೆ. ದರ್ಶನ್ ಜೈಲು ಸೇರಿ 50 ದಿನ ಕಂಪ್ಲೀಟ್ ಆಗಿದೆ. ಪೊಲೀಸರಿನ್ನೂ ಚಾರ್ಜ್ʻಶೀಟ್ ಹಾಕಿಲ್ಲ. ಪ್ರಕರಣ ನಡೆದ ೯೦ ದಿನಗಳ ಒಳಗೆ ಚಾರ್ಜ್ʻಶೀಟ್ ಹಾಕ್ಬೇಕು. ಅಲ್ಲಿಗೆ ದರ್ಶನ್ ಜೈಲುವಾಸ 100 ದಿನ ಪೂರೈಸಿದರೂ ಅಚ್ಚರಿ ಇಲ್ಲ. ಹೀಗಿರುವಾಗಲೇ ಗುಂಡು ಕಲ್ಲಿನ ಭವಿಷ್ಯ ಹೊರಬಿದ್ದಿದೆ.
ಬೆಂಗಳೂರಿನಬಾಪೂಜಿನಗರದ ಶಾರದಾಂಬೆ ದೇವಸ್ಥಾನದಲ್ಲಿ ಕುಟ್ಟೊ ಕಲ್ಲು ಮೂಲಕ ಅರ್ಚಕರ ಮಗಳಿಂದ ದೇವಿ ಓಂ ಶಕ್ತಿ ಶಾರದಾಂಬೆ ಭವಿಷ್ಯ ಬರೆಸಿದೆ ಅನ್ನುವ ಸುದ್ದಿ ವೈರಲ್ ಆಗಿದೆ. ದರ್ಶನ್ ಸದ್ಯ ಮೀನ ರಾಶಿಯಲ್ಲಿದ್ದಾರೆ. ಯಾವುದಕ್ಕೂ ಗ್ರಹಚಾರ ಸರಿಯಾಗಿಲ್ಲ. ಗುರುಬಲ ಇಲ್ಲದೇ ಇರುವುದರಿಂದ ಕೆಟ್ಟ ದೆಸೆ ನಡೆಯುತ್ತಿದೆ, ಶನಿ ಬಂದು ಕೂತಿದ್ದಾನೆ. ಇನ್ನು ಬೆಂಗಳೂರಿನಲ್ಲಿರುವ ರಾಜರಾಜೇಶ್ವರಿನಗರದ ದರ್ಶನ್ ನಿವಾಸಕ್ಕೆ ವಾಸ್ತುದೋಷ ಇದೆ. ಮನೆಯ ಮೂಲೆಯೇ ಸರಿಯಿಲ್ಲ. ಈ ಎಲ್ಲಾ ಕಾರಣದಿಂದ ಅವರ ಬಿಡುಗಡೆಗೆ ಅಡ್ಡಿ ಆಗಿದೆ. ಇನ್ನೂ 2 ತಿಂಗಳು ಬಿಡುಗಡೆಯ ಭಾಗ್ಯವಿಲ್ಲ. ಬಳಿಕ ಜೈಲಿನಿಂದ ಹೊರಬರಲಿದ್ದಾರೆ ಎಂದು ದೈವ ಭವಿಷ್ಯ ನುಡಿದಿದೆ.
ಸದ್ಯ ದರ್ಶನ್, ಪವಿತ್ರಾ ಗೌಡ ಸೇರಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ 13 ಆರೋಪಿಗಳು ಹಾಗೂ ತುಮಕೂರು ಜೈಲಿನಲ್ಲಿರುವ 4 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಆಗಸ್ಟ್ 14ರಂದು ಮುಕ್ತಾಯವಾಗಲಿದೆ. ಇನ್ನೂ ಎರಡು ತಿಂಗಳಾದ ಮೇಲಾದ್ರೂ ದರ್ಶನ್ ರಿಲೀಸ್ ಆಗ್ತಾರಲ್ಲ ಎಂದು ಅಭಿಮಾನಿಗಳು ಖುಷಿಯಾಗಿದ್ದರೆ, ಇನ್ನೂ ಎರಡು ತಿಂಗಳು ಜೈಲಲ್ಲೇ ಇರ್ಬೇಕಾ ನಮ್ ಬಾಸು ಅನ್ನೋವ್ರಿಗೇನೂ ಕೊರತೆ ಇಲ್ಲ.
ದರ್ಶನ್ ಅವರ ಬಿಡುಗಡೆಗಾಗಿ ಪ್ರಾರ್ಥಿಸಿ ರಾಜ್ಯಾದ್ಯಂತ ಪೂಜೆ, ಪುನಸ್ಕಾರಗಳು ನಡೆಯುತ್ತಿವೆ. ತಿರುಪತಿ, ಚಾಮುಂಡೇಶ್ವರಿ, ನಂಜುಂಡೇಶ್ವರ.. ಹೀಗೆ ರಾಜ್ಯದ ಪ್ರಖ್ಯಾತ ದೇವಸ್ಥಾನಗಳಲ್ಲಿ ಅಭಿಮಾನಿಗಳು ಹಾಗೂ ಕುಟುಂಬಸ್ಥರು ಪೂಜೆ ಪುನಸ್ಕಾರ ಮಾಡಿಸುತ್ತಿದ್ದಾರೆ. ಕೊಲ್ಲೂರು ಸನ್ನಿಧಿಯಲ್ಲಿ ವಿಜಯಲಕ್ಷ್ಮಿ ದರ್ಶನ್ ಚಂಡಿಕಾ ಹೋಮವನ್ನೂ ಮಾಡಿಸಿದ್ಧಾರೆ. ಆದರೆ.. ದರ್ಶನ್ ಬಿಡುಗಡೆಗೆ ಸಂಬಂಧಪಟ್ಟಂತೆ ಯಾವುದೇ ಭರವಸೆ ಸಿಕ್ಕುತ್ತಿಲ್ಲ.
ಈಗ ಈ ಗುಂಡುಕಲ್ಲು ಭವಿಷ್ಯವೂ ಅದನ್ನೇ ಹೇಳಿದೆ. ಒಟ್ಟಿನಲ್ಲಿ ದರ್ಶನ್ ಪ್ರಕರಣದಲ್ಲಿ ಗುಂಡುಕಲ್ಲಿಗೂ ಕಾಲ ಬಂದಿದೆ. ದರ್ಶನ್ ಜೈಲು ಸೇರಿ 2 ತಿಂಗಳೇ ಕಳೆದಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಕಾದು ಕಾದು ಸುಸ್ತಾಗಿದ್ದಾರೆ.



