ಒಬ್ಬರು ಐಎಎಸ್. ಒಬ್ಬರು ಐಪಿಎಸ್. ರೋಹಿಣಿ ಸಿಂಧೂರಿ ಮತ್ತು ರೂಪಾ ಮೌದ್ಗಿಲ್ ಮಧ್ಯೆ ಬಹಿರಂಗ ಸಮರ ಶುರುವಾಗಿ 3 ವರ್ಷಗಳೇ ಮುಗಿದು ಹೋಗಿದೆ. ಇಬ್ಬರೂ ಈಗ ಹೋರಾಟ ಮಾಡ್ತಿರೋದು ಹೈಕೋರ್ಟಿನಲ್ಲೂ ಅಲ್ಲ, ಸುಪ್ರೀಂಕೋರ್ಟಿನಲ್ಲಿ. ವಿಶೇಷ ಎಂದರೆ ಇತಿಹಾಸದಲ್ಲೇ ಮೊದಲ ಬಾರಿಗೆ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ನಡುವಿನ ಜಗಳವನ್ನು ಬಗೆಹರಿಸಲು ನಿವೃತ್ತ ನ್ಯಾಯಮೂರ್ತಿಯೊಬ್ಬರು ಸಂಧಾನಕ್ಕೆ ನೇಮಕವಾಗಿದ್ದಾರೆ. ಮಧ್ಯವರ್ತಿಯಾಗಿ ನೇಮಕವಾಗಿರುವವರು ನಿವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್.
ರೋಹಿಣಿ ಸಿಂಧೂರಿ ಫೋಟೋ ಬಹಿರಂಗಪಡಿಸಿದ್ದ ರೂಪಾ ಮೌದ್ಗಿಲ್
ಫೆಬ್ರವರಿ 2023 ರಲ್ಲಿ ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ರೋಹಿಣಿ ಸಿಂಧೂರಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ (ಫೇಸ್‌ಬುಕ್) ಸರಣಿ ಆರೋಪಗಳನ್ನು ಮಾಡಿದ್ದರು. ರೋಹಿಣಿ ಸಿಂಧೂರಿ ಅವರು ತಮ್ಮ ಕೆಲವು ಖಾಸಗಿ ಚಿತ್ರಗಳನ್ನು ಇತರ ಪುರುಷ ಐಎಎಸ್ ಅಧಿಕಾರಿಗಳೊಂದಿಗೆ ಹಂಚಿಕೊಂಡಿದ್ದಾರೆ ಎಂದು ರೂಪಾ ಆರೋಪಿಸಿ, ಆ ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ರೋಹಿಣಿ ಅವರು ಜಾಲಹಳ್ಳಿಯಲ್ಲಿ ನಿರ್ಮಿಸಿರುವ ಬೃಹತ್ ಬಂಗಲೆಯನ್ನು ತಮ್ಮ ಅಧಿಕೃತ ಆಸ್ತಿ ವಿವರಗಳಲ್ಲಿ ಘೋಷಿಸಿಲ್ಲ ಎಂದೂ ರೂಪಾ ಆರೋಪಿಸಿದ್ದರು. : ಇಬ್ಬರು ಉನ್ನತ ಅಧಿಕಾರಿಗಳ ಈ ಬಹಿರಂಗ ಜಗಳದಿಂದ ಆಡಳಿತ ವ್ಯವಸ್ಥೆಗೆ ಮುಜುಗರ ಉಂಟಾದ ಕಾರಣ, ಅಂದಿನ ರಾಜ್ಯ ಸರ್ಕಾರ ಇಬ್ಬರನ್ನೂ ಯಾವುದೇ ಹುದ್ದೆ ತೋರಿಸದೆ ತಕ್ಷಣವೇ ಎತ್ತಂಗಡಿ ಮಾಡಿಇತ್ತು.
ತಿರುಗಿಬಿದ್ದ ರೋಹಿಣಿ ಸಿಂಧೂರಿ :
ಡಿ. ರೂಪಾ ಅವರ ಆರೋಪಗಳಿಂದ ತಮ್ಮ ಘನತೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ರೋಹಿಣಿ ಸಿಂಧೂರಿ ಅವರು ಕೋರ್ಟ್ ಮೆಟ್ಟಿಲೇರಿದ್ದರು. ರೂಪಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿ, ಬೇಷರತ್ ಕ್ಷಮೆಯಾಚಿಸಬೇಕು ಮತ್ತು ₹1 ಕೋಟಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದರು. ಇದರ ನಡುವೆ, ರೋಹಿಣಿ ಸಿಂಧೂರಿ ಅವರು ತಮ್ಮನ್ನು “ಮಾನಸಿಕ ಅಸ್ವಸ್ಥೆ” ಎಂದು ಕರೆದು ಅವಮಾನಿಸಿದ್ದಾರೆ ಎಂದು ಆರೋಪಿಸಿ ಡಿ. ರೂಪಾ ಅವರೂ ಕೂಡ ರೋಹಿಣಿ ವಿರುದ್ಧ ದೂರು ದಾಖಲಿಸಿದ್ದರು. : ರೂಪಾ ಅವರು ಮಾನನಷ್ಟ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಅದನ್ನು ವಜಾಗೊಳಿಸಿ, ವಿಚಾರಣೆ ಎದುರಿಸುವಂತೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಕುರಿಯನ್ ಜೋಸೆಫ್ ಮಧ್ಯಸ್ಥಿಕೆ :
ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠ, “ಇಬ್ಬರೂ ಅತ್ಯುತ್ತಮ ಅಧಿಕಾರಿಗಳು. ಆದರೆ ಈ ರೀತಿ ನ್ಯಾಯಾಲಯದಲ್ಲಿ ಕಿತ್ತಾಡುವ ಮೂಲಕ ಪರಸ್ಪರ ತಮ್ಮ ವೃತ್ತಿಜೀವನವನ್ನು (ಕೆರಿಯರ್) ಹಾಳುಮಾಡಿಕೊಳ್ಳುತ್ತಿದ್ದೀರಿ” ಎಂದು ತೀವ್ರ ಕಳವಳ ವ್ಯಕ್ತಪಡಿಸಿದೆ. : ಈ ಹಗೆತನವನ್ನು ಕೋರ್ಟ್‌ನಲ್ಲೇ ಮುಂದುವರಿಸುವ ಬದಲಿಗೆ, ಸೌಹಾರ್ದಯುತವಾಗಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ಕೋರ್ಟ್ ನಿರ್ದೇಶಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಂಜೀವ್ ಸಚ್‌ದೇವ್ ಅವರ ಪೀಠವು , ಇಬ್ಬರು ಉನ್ನತ ಅಧಿಕಾರಿಗಳ ನಡುವಿನ ಸುದೀರ್ಘ ಜಗಳದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಈ ಪ್ರಕರಣವನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಇಬ್ಬರ ಕಡೆ ವಕೀಲರಿಗೆ ಸೂಚಿಸಿದ್ದು, ಕೋರ್ಟ್‌ನ ಹೊರಗಡೆ ಇಬ್ಬರೂ ಕುಳಿತು ಮಾತನಾಡಿ ವಿವಾದ ಬಗೆಹರಿಸಿಕೊಳ್ಳಲು ಸಂಧಾನಕಾರರಾಗಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯಾಗಿರುವ ಕುರಿಯನ್ ಜೋಸೆಫ್ ಅವರನ್ನು ನೇಮಿಸಿದೆ.
ಮಾತುಕತೆಗೆ ಒಪ್ಪಿರುವ ರೋಹಿಣಿ ಸಿಂಧೂರಿ : ಈ ಹಿಂದೆ ರೋಹಿಣಿ ಸಿಂಧೂರಿ ಅವರು ಸಂಧಾನಕ್ಕೆ ಒಪ್ಪಿಕೊಂಡಿರಲಿಲ್ಲ. ಆದ್ರೆ, ಈ ಬಾರಿ ಒಪ್ಪಿದ್ಧಾರೆ. ಹೀಗಾಗಿ ಶೀಘ್ರದಲ್ಲೇ ಜೋಸೆಫ್ ನೇತೃತ್ವದಲ್ಲಿ ಸಂಧಾನ ಸಭೆ ನಡೆಯುವ ಸಾಧ್ಯತೆ ಇದೆ. ಈ ಮೂಲಕ ಕೋರ್ಟ್, ಹಲವು ವರ್ಷಗಳಿಂದ ಇಬ್ಬರು ಅಧಿಕಾರಿಗಳ ನಡುವಿನ ನಡೆಯುತ್ತಿದ್ದ ಜಟಾಪಟಿಗೆ ಬ್ರೇಕ್ ಹಾಕಲು ಮುಂದಾಗಿದೆ. ಅಂದಹಾಗೆ ಇಬ್ಬರು ಅಧಿಕಾರಿಗಳ ನಡುವೆ ಸಂಧಾನಕ್ಕೆ ಸುಪ್ರೀಂಕೋರ್ಟ್ ಮುಂದಾಗಿರುವುದು ದೇಶದಲ್ಲೇ ಮೊದಲು.



