ಡಾ.ರಾಜ್ ಕುಮಾರ್ ಅವರ ಕುಟುಂಬ ಕೇವಲ ನಟನೆಯಲ್ಲಷ್ಟೇ ಅಲ್ಲ, ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿದೆ. ಸಿನಿಮಾ, ನಟನೆ ಹೇಗೆ ತಲೆಮಾರುಗಳಿಂದ ತಲೆಮಾರುಗೆ ಮುಂದುವರಿಯುತ್ತಿದೆಯೋ ಹಾಗೆಯೇ ಸೇವೆಯೂ ಜನರೇಷನ್ ಟು ಜನರೇಷನ್ ಪಾಸ್ ಆಗುತ್ತಿದೆ. ಹಾಗೆ ನೋಡಿದರೆ ಕರ್ನಾಟಕದ ಜಿಲ್ಲಾಕೇಂದ್ರಗಳಲ್ಲಿರುವ ಬಹುತೇಕ ರಂಗಮಂದಿರಗಳು, ಕನ್ನಡ ಭವನಗಳು, ಮುಂಬೈ ಹಾಗೂ ದೆಹಲಿಯಲ್ಲಿರುವ ಕನ್ನಡ ಭವನಗಳು, ಕೆಲವು ಕ್ರೀಡಾಂಗಣಗಳ ಹಿಂದೆ ಡಾ.ರಾಜ್ ಅವರ ಕೊಡುಗೆ ಇದೆ. ನೂರಾರು ಅಶಕ್ತ ಕಲಾವಿದರಿಗೆ ಸಂಕಷ್ಟದ ಸಂದರ್ಭದಲ್ಲಿ ಕೈಹಿಡಿದಿದೆ ಡಾ.ರಾಜ್ ಕುಮಾರ್. ಇದೀಗ ಆ ಸೇವೆಯ ಮತ್ತೊಂದು ಹೆಜ್ಜೆ ಶುರುವಾಗಿದೆ. ಪುನೀತ್ ರಾಜ್ ಕುಮಾರ್ ಟ್ರಸ್ಟ್ ಆರಂಭವಾಗಿದೆ.
ಕರ್ನಾಟಕ ರತ್ನ ಪುರಸ್ಕೃತ ಡಾ. ಪುನೀತ್ ರಾಜ್ ಕುಮಾರ್ ಅವರು ನಿಧನರಾದ ಮೇಲೆ ಅವರು ಮಾಡುತ್ತಿದ್ದ ಹಲವು ಸಮಾಜಸೇವೆ ವಿಚಾರಗಳು ಬಹಿರಂಗವಾದವು. ಕುಟುಂಬದಲ್ಲಿ ಪತ್ನಿ ಅಶ್ವಿನಿ, ಅಣ್ಣ ಶಿವಣ್ಣ ಅವರಿಗೂ ಗೊತ್ತಿಲ್ಲದಂತೆ ಪುನೀತ್ ಮಾಡುತ್ತಿದ್ದ ಕೆಲಸಗಳು ಪುನೀತ್ ನಿಧನರಾದ ಮೇಲೆ ಗೊತ್ತಾದವು. ಸಹಾಯ ಪಡೆದವರೇ ನಮಗೆ ಪುನೀತ್ ಸಹಾಯ ಮಾಡಿದ್ದರು ಎಂದಾಗ ಹೌದಾ ಎಂದು ಅಚ್ಚರಿಪಟ್ಟಿದ್ದವರು ಒಬ್ಬಿಬ್ಬರಲ್ಲ. ಇದೀಗ ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ಪುನೀತ್ ರಾಜ್ ಕುಮಾರ್ ಚಾರಿಟಬಲ್ ಟ್ರಸ್ಟ್ ಆರಂಭವಾಗಿದೆ.
ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಡಾ. ಪುನೀತ್ ರಾಜ್ ಕುಮಾರ್ ಚಾರಿಟಬಲ್ ಟ್ರಸ್ಟ್ ಉದ್ವಾಟನಾ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಸಿದ್ದಗಂಗಾಮಠದ ಸಿದ್ದಲಿಂಗ ಸ್ವಾಮಿಜಿ, ನಟ ದೊಡ್ಡಣ್ಣ ಹಾಗೂ ವಿವಿಧ ಆಸ್ಪತ್ರೆಗಳ ಮುಖ್ಯಸ್ಥರು ಕೂಡ ಭಾಗಿಯಾಗಿದ್ರು.
ಸಿದ್ಧಗಂಗಾ ಮಠದ ಶಾಲಾ ಮಕ್ಕಳು ಹಾಗೂ ಸಿಬ್ಬಂದಿ ವರ್ಗದವರಿಗೆ ಉಚಿತ ನೇತ್ರ ತಪಾಸಣೆ ಕೂಡ ನಡೆಸಲಾಯ್ತು. ಇದೇ ವೇಳೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಕೆಲ ಮಕ್ಕಳಿಗೆ ಕನ್ನಡಕ ವಿತರಣೆ ಕೂಡ ಮಾಡಿದ್ರು.
ಗೀತಾ ಶಿವರಾಜ್ ಕುಮಾರ್ ಸೇವೆ :
ಇನ್ನು ಶಿವಣ್ಣ ಅವರದ್ದೂ ಕೂಡ ಪ್ರತ್ಯೇಕ ಸಮಾಜ ಸೇವೆ ನಿರಂತರವಾಗಿ ನಡೆಯುತ್ತಿದೆ. ಮೈಸೂರು ಬಳಿಯ ಶಕ್ತಿಧಾಮದಲ್ಲಿ ಪ್ರತೀ ವರ್ಷ 500ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಅಲ್ಲದೆ ನೂರಾರು ನೊಂದ ಮಹಿಳೆಯರಿಗೆ ಆಶ್ರಯ ನೀಡಿ, ಉದ್ಯೋಗ ತರಬೇತಿ ನೀಡಿ ಸ್ವಾವಲಂಬಿಗಳನ್ನಾಗಿ ಮಾಡಿ ಹೊರಗೆ ಕಳಿಸಲಾಗುತ್ತಿದೆ. ಪಾರ್ವತಮ್ಮ ಇರುವವರೆಗೂ ಅವರೇ ನೋಡಿಕೊಳ್ಳುತ್ತಿದ್ದ ಜವಾಬ್ದಾರಿಯನ್ನು ಈಗ ಗೀತಾ ಶಿವರಾಜ್ ಕುಮಾರ್ ಅವರು ಏಕಾಂಗಿಯಾಗಿಯೇ ನಡೆಸಿಕೊಂಡು ಹೋಗುತ್ತಿದ್ದಾರೆ.
ಅಲ್ಲದೆ ಗೀತಾ ಅವರು ಬಳ್ಳಾರಿ, ಹೊಸಪೇಟೆಯ ಕೆಲವು ಶಾಲೆಗಳನ್ನು ದತ್ತು ಪಡೆದುಕೊಂಡಿದ್ದಾರೆ. ಶಾಲೆಯ ಅಭಿವೃದ್ಧಿಯನ್ನಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೂ ನೆರವು ನೀಡುತ್ತಿದ್ದಾರೆ.
ಡಾ.ರಾಜ್ ಅಕಾಡೆಮಿ.. ರಾಘವೇಂದ್ರ ರಾಜ್ ಕುಮಾರ್ :
ಇನ್ನು ಡಾ.ರಾಜ್ ಕುಮಾರ್ ಅಕಾಡೆಮಿ ಮೂಲಕ ರಾಘವೇಂದ್ರ ರಾಜ್ ಕುಮಾರ್ ಕೂಡಾ ಮತ್ತೊಂದು ರೀತಿಯಲ್ಲಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ಧಾರೆ. ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಐಎಎಸ್/ಕೆಎಎಸ್/ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದಕ್ಕೆ ಸಹಾಯ ಮಾಡುತ್ತಿದ್ಧಾರೆ. ಕೆಲವರು ಈ ಸಂಸ್ಥೆಯಿಂದಲೇ ತೇರ್ಗಡೆಯಾಗಿದ್ದಾರೆ.
ಒಟ್ಟಿನಲ್ಲಿ ಡಾ.ರಾಜ್ ಕುಟುಂಬದವರು ಚಿತ್ರರಂಗದಲ್ಲಿ ಹೇಗೆ ಜನರೇಷನ್ ಫ್ಯಾನ್ ಬೇಸ್ ಮುಂದುವರಿಯುತ್ತಿದೆಯೋ.. ಹಾಗೆಯೇ ಸೇವೆಯಲ್ಲೂ ಮುಂದುವರಿಯುತ್ತಿದೆ.



