ಭಾರತದಲ್ಲಿ ಇನ್ನು ಮುಂದೆ ಕರೆನ್ಸಿ ನೋಟುಗಳು ಅರ್ಥಾತ್ ಕಾಗದದ ನೋಟುಗಳು ಹೋಗಿ, ಪ್ಲಾಸ್ಟಿಕ್ ಕರೆನ್ಸಿಯೇ ರಾಜ್ಯಭಾರ ಮಾಡುವ ಕಾಲ ಬಂದಿದೆಯೇ.. ಹೌದು ಎನ್ನುತ್ತಿವೆ ಇತ್ತೀಚಿನ ಬೆಳವಣಿಗೆಗಳು. ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಾಗದದ ನೋಟುಗಳ ಬದಲಿಗೆ ಪ್ಲಾಸ್ಟಿಕ್ (ಪಾಲಿಮರ್) ನೋಟುಗಳನ್ನು ತರಲು ಗಂಭೀರವಾಗಿ ಆಲೋಚಿಸುತ್ತಿದೆ. ಪ್ರಾಯೋಗಿಕವಾಗಿ ಆ ನೋಟುಗಳು ಕೆಲವೇ ತಿಂಗಳಲ್ಲಿ ಮಾರುಕಟ್ಟೆಗೆ ಬಂದರೂ ಅಚ್ಚರಿ ಇಲ್ಲ. ಅಂದಹಾಗೆ ಈ ಪ್ರಯೋಗ ಯಾವ ಕರೆನ್ಸಿಗಳಿಂದ ಶುರವಾಗಲಿವೆ ಗೊತ್ತೇ..? ಇದನ್ನು ಖೋಟಾ ನೋಟು ತಯಾರಿಸಲು ಕೂಡಾ ಸಾಧ್ಯ ಇಲ್ಲವಂತೆ.
ಸದ್ಯದ ಪ್ರಮುಖ ಮಾಹಿತಿ: ಎಲ್ಲೂ ಅಧಿಕೃತವಾಗಿ ಎಲ್ಲಾ ನೋಟುಗಳನ್ನು ಬದಲಾಯಿಸುತ್ತಿಲ್ಲ. ಆರಂಭದಲ್ಲಿ ಸಣ್ಣ ಮುಖಬೆಲೆಯ ಅಂದರೆ 10 ಮತ್ತು 20 ರೂಪಾಯಿ ನೋಟುಗಳ ಪ್ಲಾಸ್ಟಿಕ್ ರೂಪಾಂತರವನ್ನು ಪ್ರಾಯೋಗಿಕವಾಗಿ (Pilot Project) ಜಾರಿಗೆ ತರಲು ಆರ್‌ಬಿಐ ಯೋಜಿಸುತ್ತಿದೆ, ಅಷ್ಟೇ.
ಪ್ಲಾಸ್ಟಿಕ್ ನೋಟುಗಳ ಪ್ರಮುಖ ಪ್ರಯೋಜನಗಳು
ಹೆಚ್ಚಿನ ಬಾಳಿಕೆ: ಕಾಗದದ ನೋಟುಗಳಿಗಿಂತ ಪ್ಲಾಸ್ಟಿಕ್ ನೋಟುಗಳು 3 ರಿಂದ 4 ಪಟ್ಟು ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಪ್ರತಿ ವರ್ಷ ಕೋಟ್ಯಂತರ ಕಾಗದದ ನೋಟುಗಳು ಕೊಳಕಾಗುತ್ತವೆ ಅಥವಾ ಹರಿಯುತ್ತವೆ. ಕೇವಲ ಕಳೆದ ವರ್ಷವೊಂದರಲ್ಲೇ 23.8 ಬಿಲಿಯನ್ (2,380 ಕೋಟಿ) ಹಳಸಿದ ನೋಟುಗಳನ್ನು ಆರ್‌ಬಿಐ ಚಲಾವಣೆಯಿಂದ ಹೊರತೆಗೆದು ನಾಶಪಡಿಸಿದೆ
ಹಾಳಾಗುವುದಿಲ್ಲ: ಇವು ನೀರು, ತೇವಾಂಶ ಮತ್ತು ಧೂಳಿಗೆ ಹಾಳಾಗುವುದಿಲ್ಲ. ಸುಲಭವಾಗಿ ಹರಿಯುವುದಿಲ್ಲ. ಯುಪಿಐ (UPI) ನಂತಹ ಡಿಜಿಟಲ್ ಪಾವತಿಗಳು ಹೆಚ್ಚಾಗಿದ್ದರೂ, ಮಾರುಕಟ್ಟೆಯಲ್ಲಿ ನಗದಿನ ಒಟ್ಟು ಚಲಾವಣೆ ದಾಖಲೆಯ ₹42.86 ಲಕ್ಷ ಕೋಟಿಗೆ ತಲುಪಿದೆ. ಹೀಗಾಗಿ ದೀರ್ಘಕಾಲ ಬಾಳಿಕೆ ಬರುವ ನೋಟುಗಳ ಅಗತ್ಯವಿದೆ.
ನಕಲಿ ನೋಟುಗಳಿಗೆ ತಡೆ: ಇವುಗಳಲ್ಲಿ ಅತ್ಯಾಧುನಿಕ ಭದ್ರತಾ ವೈಶಿಷ್ಟ್ಯಗಳಾದ ಪಾರದರ್ಶಕ ವಿಂಡೋ ಮತ್ತು ವಿಶೇಷ ಶಾಯಿ ಬಳಸುವುದರಿಂದ ಕಳ್ಳನೋಟು ತಯಾರಿಸುವುದು ಅಸಾಧ್ಯ ಎಂದು ಹೇಳಲಾಗುತ್ತಿದೆ.
ವೆಚ್ಚ ಕಡಿತ: ನೋಟುಗಳನ್ನು ಪದೇ ಪದೇ ಮುದ್ರಿಸುವ ಮತ್ತು ಹರಿದ ನೋಟುಗಳನ್ನು ಬದಲಾಯಿಸುವ ಆರ್‌ಬಿಐನ ಸಾವಿರಾರು ಕೋಟಿ ರೂಪಾಯಿ ವೆಚ್ಚ ಇದರಿಂದ ಉಳಿಯುತ್ತದೆ. ಇತ್ತೀಚಿನ ಆರ್‌ಬಿಐ ವರದಿಯ ಪ್ರಕಾರ, 2025ರ ಹಣಕಾಸು ವರ್ಷದಲ್ಲಿ ನೋಟು ಮುದ್ರಣದ ವೆಚ್ಚ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಬರೋಬ್ಬರಿ ₹6,372 ಕೋಟಿ ದಾಟಿದೆ.
ಭಾರತವು 2012 ರಲ್ಲಿಯೇ ಮೈಸೂರು, ಕೊಚ್ಚಿ, ಜೈಪುರ ಸೇರಿದಂತೆ 5 ನಗರಗಳಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಿತ್ತು. ಆದರೆ ಅಂದಿನ ಎಟಿಎಂ ಯಂತ್ರಗಳ ತಾಂತ್ರಿಕ ಸಮಸ್ಯೆಗಳಿಂದಾಗಿ ಅದನ್ನು ಸ್ಥಗಿತಗೊಳಿಸಲಾಗಿತ್ತು. ಈಗ ತಂತ್ರಜ್ಞಾನ ಸುಧಾರಿಸಿರುವುದರಿಂದ ಮತ್ತೊಮ್ಮೆ ಈ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಪ್ರಸ್ತುತ ಆಸ್ಟ್ರೇಲಿಯಾ, ಕೆನಡಾ, ಬ್ರಿಟನ್, ಸಿಂಗಾಪುರ ಸೇರಿದಂತೆ ಜಗತ್ತಿನ 60ಕ್ಕೂ ಹೆಚ್ಚು ದೇಶಗಳಲ್ಲಿ ಈಗಾಗಲೇ ಪ್ಲಾಸ್ಟಿಕ್ ಕರೆನ್ಸಿ ಯಶಸ್ವಿಯಾಗಿ ಬಳಕೆಯಲ್ಲಿದೆ. [1]
ಖೋಟಾ ನೋಟು ಮಾಡೋಕೆ ಆಗುವುದಿಲ್ಲವೇ..?
ಪ್ಲಾಸ್ಟಿಕ್ ಅಥವಾ ಪಾಲಿಮರ್ ನೋಟುಗಳನ್ನು ಕಳ್ಳನೋಟು (Counterfeit) ಮಾಡುವುದು ಅಸಾಧ್ಯ ಎನ್ನಲಾಗುತ್ತದೆ. ಕಾರಣ ಏನೆಂದರೆ..
ಪಾರದರ್ಶಕ ವಿಂಡೋ (See-through Window): ನೋಟಿನ ಒಂದು ಭಾಗದಲ್ಲಿ ಪಾರದರ್ಶಕವಾದ ಪ್ಲಾಸ್ಟಿಕ್ ವಿಂಡೋ ಇರುತ್ತದೆ. ಇದನ್ನು ಕಾಗದದ ಮೇಲೆ ನಕಲು ಮಾಡಲು ಸಾಧ್ಯವೇ ಇಲ್ಲ.
ಹೊಲೊಗ್ರಾಮ್ ಮತ್ತು ವಿಶೇಷ ಶಾಯಿ: ಬೆಳಕಿಗೆ ಹಿಡಿದಾಗ ಬಣ್ಣ ಬದಲಾಯಿಸುವ ಆಪ್ಟಿಕಲ್ ಮತ್ತು ಹೊಲೊಗ್ರಾಫಿಕ್ ವೈಶಿಷ್ಟ್ಯಗಳನ್ನು ಅಳವಡಿಸಲಾಗುತ್ತದೆ.
ಮೈಕ್ರೋ-ಟೆಕ್ಸ್ಟ್: ಬರಿಗಣ್ಣಿಗೆ ಕಾಣಿಸದ ಅತ್ಯಂತ ಸಣ್ಣ ಗಾತ್ರದ ಅಕ್ಷರಗಳ ಮುದ್ರಣ ಇದರ ಮೇಲಿರುತ್ತದೆ.
ವಿಶೇಷ ಸ್ಪರ್ಶ ಗುಣ (Tactile Features): ಅಂಧರು ಸುಲಭವಾಗಿ ನೋಟನ್ನು ಗುರುತಿಸಲು ಅನುಕೂಲವಾಗುವಂತೆ ವಿಶೇಷ ಉಬ್ಬು ಮುದ್ರಣವನ್ನು ಇದು ಹೊಂದಿರುತ್ತದೆ.



