ಪೆಟ್ರೋಲ್, ಡೀಸೆಲ್ ದರ ಏರಿಕೆ ನಿರಂತರವಾಗಿ ನಡೆಯುತ್ತಲೇ ಇದೆ. ಈ ಬಾರಿ 4ನೇ ಬಾರಿ. ಮೊದಲ ಬಾರಿ 3 ರೂ. ದರ ಏರಿಕೆ ಮಾಡಿದ್ದ ಕೇಂದ್ರ ಸರ್ಕಾರ ನಂತರ 2 ಬಾರಿ ಪೈಸೆಗಳ ಲೆಕ್ಕದಲ್ಲಿ ಒಂದು ರೂ.ಗಿಂತ ಕಡಿಮೆ ದರ ಏರಿಕೆ ಮಾಡಿತ್ತು. ಈ ಬಾರಿ 2 ರೂಗಿಂತಲೂ ಜಾಸ್ತಿ ದರ ಏರಿಕೆ ಮಾಡಿದೆ. ಇದಕ್ಕೆ ಕಾರಣಗಳೂ ಇವೆ. ಇಂದಿನ ಭಾರಿ ಏರಿಕೆಯೊಂದಿಗೆ, ಪೆಟ್ರೋಲ್ ದರವು ₹110.99 ಮತ್ತು ಡೀಸೆಲ್ ದರವು ₹98.80 ಕ್ಕೆ ತಲುಪಿದ್ದು, ಗ್ರಾಹಕರಿಗೆ ದೊಡ್ಡ ಹೊರೆಯಾಗಿದೆ.
11 ದಿನಗಳಲ್ಲಿ 4ನೇ ಬಾರಿ ದರ ಏರಿಕೆ ಮಾಡಿದ್ದು, ಪೆಟ್ರೋಲ್ ದರ ಲೀಟರ್‌ಗೆ 2.61 ರೂ. ಮತ್ತು ಡೀಸೆಲ್ 2.71 ರೂ. ಹೆಚ್ಚಳವಾಗಿದೆ. ಪರಿಷ್ಕೃತ ಪೆಟ್ರೋಲ್, ಡೀಸೆಲ್ ದರ ತಕ್ಷಣದಿಂದಲೇ ಜಾರಿಯಾಗಿದೆ. ಮೇ 15ರಿಂದ ದರ ಪರಿಷ್ಕರಣೆ ಪುನರಾರಂಭವಾಯ್ತು. ಆನಂತರ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಒಟ್ಟು ಸುಮಾರು 7.5 ರೂ. ಏರಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಹಾಗೂ ರೂಪಾಯಿ ಮೌಲ್ಯ ಕುಸಿತದಿಂದ ತೈಲ ಮಾರುಕಟ್ಟೆ ಕಂಪನಿಗಳ ಆಮದು ವೆಚ್ಚ ಹೆಚ್ಚಾಗಿದೆ. ಘರ್ಷದ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 65-70 ಡಾಲರ್‌ನಿಂದ 110-115 ಡಾಲರ್‌ಗೆ ಏರಿಕೆಯಾಗಿದೆ. ಭಾರತ ತನ್ನ ಅಗತ್ಯದ ಸುಮಾರು ಶೇಕಡಾ 85 ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದರಿಂದ ಆರ್ಥಿಕತೆಯ ಮೇಲೆ ಪರಿಣಾಮ ಹೆಚ್ಚಾಗಿದೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ 110 ರೂ. ಗಡಿ ದಾಟಿದೆ. ಶೆಲ್ ಪೆಟ್ರೋಲ್ ಬಂಕ್ ಬೇರೆ. ಅಲ್ಲಿ 140 ರೂ. ಸಮೀಪ ಇದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ ಒಂದು ಲೀ.ಗೆ 110.60 ರೂ. ಇದ್ದರೆ, ಡೀಸೆಲ್ ದರ ಒಂದು ಲೀಟರ್‌ಗೆ 98.50 ರೂ. ಇದೆ. ಒಟ್ಟಾರೆಯಾಗಿ ಪೆಟ್ರೋಲ್ ದರ ಹಾಗೂ ಡೀಸೆಲ್ ದರ ಏಳೂವರೆ ರೂಪಾಯಿ ಹೆಚ್ಚಾಗಿದೆ.
ಇನ್ನು ರಾಜ್ಯದಲ್ಲಿ ದರ ಇಳಿಕೆಯಂತೂ ಆಗುವುದಿಲ್ಲ. ಈಗಾಗಲೇ ಸಿಎಂ ಸಿದ್ದರಾಮಯ್ಯ ನಾವೇಕೆ ತೆರಿಗೆ ಇಳಿಸಬೇಕು, ದರ ಹೆಚ್ಚಳ ಮಾಡಿದ್ದು ಕೇಂದ್ರ ಸರ್ಕಾರ. ಮೋದಿಯವರೇ ಇಳಿಸಲಿ ಎನ್ನುತ್ತಿದ್ಧಾರೆ. ಅದಕ್ಕೆ ಉತ್ತರವಾಗಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಬೇರೆ ಅಂಕಿ ಅಂಶ ಮುಂದಿಟ್ಟಿದ್ಧಾರೆ.
ʻʻ ಕೇಂದ್ರ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ನಿಗದಿತ ರೂಪಾಯಿ ಮೊತ್ತವನ್ನು ಅಬಕಾರಿ ಸುಂಕವಾಗಿ ವಿಧಿಸುತ್ತದೆ. ಪೆಟ್ರೋಲ್ ಬೆಲೆ ₹80 ಇರಲಿ, ₹108 ಆಗಲಿ, ಕೇಂದ್ರಕ್ಕೆ ಸಿಗುವ ತೆರಿಗೆ ಮೊತ್ತ ಬಹುತೇಕ ಒಂದೇ. ಆದರೆ ಕರ್ನಾಟಕ ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಶೇಕಡಾವಾರು ವ್ಯಾಟ್ ವಸೂಲಿ ಮಾಡುತ್ತದೆ. ಪೆಟ್ರೋಲ್ ವ್ಯಾಟ್ – 29.84% ಹಾಗೂ ಡೀಸೆಲ್ ವ್ಯಾಟ್ – 18.4%. ಇದರಿಂದ, ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿದ ಕ್ಷಣದಿಂದಲೇ ಕರ್ನಾಟಕ ಸರ್ಕಾರದ ಆದಾಯ ತನ್ನಿಂದ ತಾನೇ ಹೆಚ್ಚಾಗುತ್ತದೆʼʼ ಎಂದು ವಿವರಣೆ ಕೊಟ್ಟಿದ್ಧಾರೆ.
ಈ ಲೆಕ್ಕದ ಪ್ರಕಾರ ಒಂದು ವೇಳೆ ಪೆಟ್ರೋಲ್ ಮೂಲ ಬೆಲೆ ₹50 ಇದ್ದರೆ, ರಾಜ್ಯ ಸರ್ಕಾರಕ್ಕೆ ಸುಮಾರು ₹15 ತೆರಿಗೆ ಸಿಗುತ್ತದೆ. ಅದೇ ಬೆಲೆ ₹70ಕ್ಕೆ ಏರಿದರೆ, ರಾಜ್ಯ ಸರ್ಕಾರದ ಪಾಲು ತಾನಾಗಿಯೇ ₹21ಕ್ಕೆ ಏರುತ್ತದೆ. ಈಗ ಗ್ರಾಹಕರಿಗೆ ಸಿಗುವ ಪೆಟ್ರೋಲ್ 110 ರೂ ಗಡಿ ದಾಟಿದೆ. ಹೀಗಾಗಿ ಒಂದು ಲೀ. ಪೆಟ್ರೋಲ್ ಮೇಲೆ ರಾಜ್ಯ ಸರ್ಕಾರ ಹೆಚ್ಚೂ ಕಡಿಮೆ 30 ರೂಪಾಯಿ ತೆರಿಗೆ ಪಡೆಯುತ್ತದೆ. ಕೇಂದ್ರದ ಪಾಲು ಸುಮಾರು 19 ರೂ. ಇದೆ.
ಮೇ 15 ರಂದು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ 3 ರೂಪಾಯಿ ಏರಿಕೆಯಾಗುವ ಮೂಲಕ ಈ ಸರಣಿ ಆರಂಭವಾಗಿತ್ತು. ತದನಂತರ ಮೇ 19 ರಂದು ಪೆಟ್ರೋಲ್ ದರ 94 ಪೈಸೆ ಹೆಚ್ಚಳ ಕಂಡರೆ, ಮೇ 23 ರಂದು ಪ್ರತಿ ಲೀಟರ್ ಪೆಟ್ರೋಲ್ ಗೆ 94 ಪೈಸೆ ಹಾಗೂ ಡೀಸೆಲ್ ಗೆ 60 ಪೈಸೆಯಷ್ಟು ದರ ಏರಿಕೆಯಾಗಿತ್ತು. ಇದೀಗ ಇಂದಿನ ನಾಲ್ಕನೇ ಬಾರಿಯ ಏರಿಕೆಯಲ್ಲಿ ಗ್ರಾಹಕರಿಗೆ ಮತ್ತೊಂದು ದೊಡ್ಡ ಶಾಕ್ ಎದುರಾಗಿದ್ದು, ಇಂದು ಒಂದೇ ದಿನ ಪ್ರತಿ ಲೀಟರ್ ಪೆಟ್ರೋಲ್ ಗೆ ಭಾರಿ 2.90 ರೂಪಾಯಿ ಹಾಗೂ ಡೀಸೆಲ್ ಗೆ 2.81 ರೂಪಾಯಿಯಷ್ಟು ಬೆಲೆ ಹೆಚ್ಚಳವಾಗಿದೆ.



