ನಿಖಿಲ್ ಕುಮಾರಸ್ವಾಮಿ ʻಸೋಲಿನ ಹ್ಯಾಟ್ರಿಕ್ʼ ಬಾರಿಸಿದ್ದಾರೆ. ಮಂಡ್ಯ ಲೋಕಸಭೆ, ನಂತರ ರಾಮನಗರ ವಿಧಾನಸಭೆಯಲ್ಲಿ ಸೋತಿದ್ದ ನಿಖಿಲ್ ಕುಮಾರಸ್ವಾಮಿ, ತದನಂತರ ಚನ್ನಪಟ್ಟಣ ಉಪಚುನಾವಣೆಯಲ್ಲೂ ಸೋತಿದ್ದರು. ಈಗ ಮತ್ತೆ ರಾಮನರಕ್ಕೇ ರಿಟರ್ನ್ ಎಂದು ಘೋಷಿಸಿದ್ದಾರೆ ನಿಖಿಲ್.
ಚುನಾವಣೆಗೆ ನಿಲ್ಲುವ ಸಮಯ ಬಂದರೆ ರಾಮನಗರದಲ್ಲಿಯೇ ನನ್ನ ಮುಂದಿನ ಚುನಾವಣೆ. ಯಾವುದೇ ಕಾರಣಕ್ಕೂ ನಾನು ಜಿಲ್ಲೆಯಿಂದ ಪಲಾಯನ ಮಾಡುವುದಿಲ್ಲ ಎಂದಿರುವ ನಿಖಿಲ್, ಇದು ನಮ್ಮ ಸ್ವ ಕ್ಷೇತ್ರ, ನೀವು ಬೆಳೆಸಿದ ಮನೆ ಮಕ್ಕಳು ನಾವು. ನಮ್ಮನ್ನು ಪ್ರೀತಿಯಿಂದ ಹರಸಿದ್ದೀರಿ. ಬೆಳೆಸಿದ್ದೀರಿ. ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಪಲಾಯನ ಮಾಡುವುದಿಲ್ಲ. ಸೋಲು-ಗೆಲುವು ಸರ್ವೇ ಸಾಮಾನ್ಯ. ನನ್ನ ಮೂರು ಸೋಲುಗಳು ನನಗೆ ರಾಜಕೀಯವಾಗಿ ಪರಿಪಕ್ವತೆಯನ್ನು ಕಲಿಸಿವೆ. ಈ ಸೋಲುಗಳಿಂದ ಕುಗ್ಗದೆ ಮತ್ತೆ ಅವಕಾಶ ಸಿಕ್ಕರೆ ರಾಮನಗರದಿಂದಲೇ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ.
ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಆರನೇ ದಿನದ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿದ ವೇಳೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಇದೇ ವೇಳೆ ಮುಂದೆ ನಡೆಯುವ ವಿಧಾನಸಭೆ ಚುನಾವಣೆಗೆ ತಮ್ಮ ಟಿಕೆಟ್ ತಾವೇ ಘೋಷಿಸಿಕೊಂಡಿದ್ದಾರೆ.
ಕುಮಾರಸ್ವಾಮಿ ಬಗ್ಗೆ ಡಿಕೆ ಬ್ರದರ್ಸ್ ಆಡಿರುವ ಮಾತಿಗೆ ತಿರುಗೇಟು ನೀಡಿರುವ ನಿಖಿಲ್ ಮಾವು ಬೆಳೆಗಾರರಿಗೆ ಬೆಂಬಲ ಬೆಲೆಯನ್ನು ಡಿ.ಕೆ ಸುರೇಶ್ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಕೊಡಿಸಿದ್ರಾ? ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದ ಕುಮಾರಣ್ಣ ಅವರ ಮನವಿಗೆ ಸ್ಪಂದಿಸಿ ಕೇಂದ್ರ ಸರ್ಕಾರ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯಡಿ ಬೆಂಬಲ ಬೆಲೆ ಘೋಷಿಸಿದೆ. ಹೆಸರು ಬದಲಾವಣೆ ಮಾಡುವುದರಿಂದ ಅಭಿವೃದ್ಧಿ ಆಗಲ್ಲ. ಕೆಂಗಲ್ ಹನುಮಂತಯ್ಯ ಅವರು ಕಟ್ಟಿದ ರಾಮನಗರ ಹೆಸರನ್ನು ಕಾಂಗ್ರೆಸ್ ಅಳಿಸಿದೆ. ಆದರೆ ರಾಮನಗರ ಜನರ ಹೃದಯದಲ್ಲಿ ರಾಮನಗರ ಶಾಶ್ವತವಾಗಿ ಉಳಿದಿದೆ ಎಂದಿದ್ದಾರೆ.
ಹೀಗೆಲ್ಲ ಹೇಳುವ ಮೂಲಕ ತಾವು ಮತ್ತೆ ಚನ್ನಪಟ್ಟಣಕ್ಕೆ ಹೋಗುವುದಿಲ್ಲ ಎಂದು ಘೋಷಿಸಿದ್ದಾರೆ ನಿಖಿಲ್ ಕುಮಾರಸ್ವಾಮಿ. ಇನ್ನು ಮಂಡ್ಯ ಲೋಕಸಭೆಗೂ ಹೋಗದೆ.. ಒಂದೇ ಕ್ಷೇತ್ರವನ್ನು ಕೇಂದ್ರೀಕರಿಸುವ ಸೂಚನೆ ಕೊಟ್ಟಿದ್ದಾರೆ.
ನಿಖಿಲ್‌ಗೆ ಹಿರಿಯರ ಬುದ್ದಿವಾದ :
ನಿಖಿಲ್ ಕುಮಾರಸ್ವಾಮಿ ರಾಜ್ಯವನ್ನೇನೋ ಸುತ್ತುತ್ತಿದ್ದಾರೆ. ಆದರೆ, ಬಹುತೇಕ ಕಡೆಗಳಲ್ಲಿ ಪಕ್ಷದ ಹಿರಿಯ, ವಯಸ್ಸಾದ ಕಾರ್ಯಕರ್ತರು, ಸ್ಥಳೀಯ ನಾಯಕರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ಕಾರ್ಯಕರ್ತರ ಜೊತೆ ಇರುವಾಗ ದೇವೇಗೌಡರಂತೆ ವರ್ತಿಸಬೇಡಿ. ನಿಮಗಿನ್ನೂ ಆ ಹಿರಿತನ ಬಂದಿಲ್ಲ. ತಾಳ್ಮೆಯಿಂದ ಎಲ್ಲರನ್ನೂ ಮಾತನಾಡಿಸಿ ಎಂದು ಬುದ್ದಿ ಹೇಳಿದ್ದಾರಂತೆ.
ನಿಖಿಲ್ ಕುಮಾರಸ್ವಾಮಿ ಪಕ್ಷದ ನಾಯಕರ ಜೊತೆ ತಾಳ್ಮೆಯಿಂದ ಮಾತನಾಡುವುದಿಲ್ಲ ಎಂಬ ಆರೋಪ ಇಂದು ನಿನ್ನೆಯದಲ್ಲ. ಅದನ್ನು ತಿದ್ದಿಕೊಳ್ಳದ ಹೊರತು ನಿಖಿಲ್ ನಾಯಕರಾಗಿ ಬೆಳೆಯಲು ಸಾಧ್ಯವಿಲ್ಲ ಎನ್ನುತ್ತಾರೆ ರಾಜಕೀಯ ತಜ್ಞರು. ಜೆಡಿಎಸ್ ಕಾರ್ಯಕರ್ತರಲ್ಲಿ ಬಹುತೇಕರು ದೇವೇಗೌಡರ ಕಾರಣಕ್ಕಾಗಿ ಮಾತ್ರ ಪಕ್ಷದಲ್ಲಿದ್ದಾರೆ, ಅಷ್ಟೇ ಎಂದು ಕೆಲವರು ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. ತಿದ್ದಿಕೊಳ್ಳೋದು ಬಿಡೋದು ನಿಖಿಲ್ ಅವರಿಗೆ ಬಿಟ್ಟಿದ್ದು.



