ಬೆಂಗಳೂರಿನ ಪುರಭವನದಲ್ಲಿ ಶನಿವಾರ ನಡೆದ ‘ಕರ್ನಾಟಕ ಮುಸ್ಲಿಂ ಸಮಾವೇಶ’ವು ಕಾಂಗ್ರೆಸ್ ಸರ್ಕಾರಕ್ಕೆ ಸಾಂವಿಧಾನಿಕ ಜವಾಬ್ದಾರಿಗಳನ್ನು ನೆನಪಿಸುವ ಜೊತೆಗೆ, ಮುಸ್ಲಿಮರನ್ನು ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದೆ.10 ಬೇಡಿಕೆಗಳನ್ನು ಕಾಂಗ್ರೆಸ್ ಸರ್ಕಾರದ ಮುಂದಿಟ್ಟಿರುವ ಮುಸ್ಲಿಂ ಒಕ್ಕೂಟ 18 ನಾಯಕರ ಹೆಸರನ್ನು ಹೇಳಿದೆ. ‘ಕರ್ನಾಟಕ ರಾಜ್ಯ ಮುಸ್ಲಿಂ ಸಂಘಟನೆಗಳ ಒಕ್ಕೂಟ’ದ ಪ್ರಕಾರ ಆ 18 ನಾಯಕರು ʻರಿಪೀಟೆಡ್ ಕ್ರೈಂ ಮಾಡುತ್ತಿರುವವರುʼ. ಅಂದಹಾಗೆ ಈ ಸಮಾವೇಶ ನಡೆದಿದ್ದು ಸುಮಾರು 40 ಮುಸ್ಲಿಂ ಸಂಘಟನೆಗಳಿಂದ ರೂಪುಗೊಂಡಿರುವ ‘ಕರ್ನಾಟಕ ರಾಜ್ಯ ಮುಸ್ಲಿಂ ಸಂಘಟನೆಗಳ ಒಕ್ಕೂಟ’ ದಿಂದ. ‘ಕಾಂಗ್ರೆಸ್ ಹೇಳಿದ್ದೇನು? ಮಾಡಿದ್ದೇನು? ಮುಂದೇನು?’ ಎನ್ನವುದೇ ಅಜೆಂಡಾ ಆಗಿತ್ತು. ಆದರೆ ಬಿಡುಗಡೆಯಾದ ಪಟ್ಟಿಯಲ್ಲಿದ್ದದ್ದು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ನಾಯಕರ ಹೆಸರು.
ಬಿಜೆಪಿ ನಾಯಕರನ್ನು ‘ಪುನರಾವರ್ತಿತ ಅಪರಾಧಿಗಳು’ ಎಂದು ಕರೆದ ಮುಸ್ಲೀಂ ಸಂಘಟನೆಗಳ ಒಕ್ಕೂಟ, ದ್ವೇಷ ಭಾಷಣದ ವಿಚಾರದಲ್ಲಿ ಬಿಜೆಪಿ ನಾಯಕರ ಹೆಸರು ರಿಲೀಸ್ ಮಾಡಿದೆ. 2023 ಮತ್ತು 2026ರ ನಡುವೆ ಸತತವಾಗಿ ದ್ವೇಷ ಭಾಷಣ ಮತ್ತು ಕೋಮು ಪ್ರಚೋದನೆಗೆ ಕಾರಣರಾದ ವ್ಯಕ್ತಿಗಳು ಮತ್ತು ನಾಯಕರ ಹೆಸರಿನಲ್ಲಿ ಒಟ್ಟಿ 18 ಜನರಿದ್ದಾರೆ.
- ಬಸನಗೌಡ ಪಾಟೀಲ್ ಯತ್ನಾಳ್ (ಬಿಜೆಪಿ ಶಾಸಕ)
- ಪ್ರಮೋದ್ ಮುತಾಲಿಕ್ (ಶ್ರೀರಾಮಸೇನೆ)
- ಕೆ.ಎಸ್. ಈಶ್ವರಪ್ಪ (ಬಿಜೆಪಿ ನಾಯಕ)
- ಅರುಣ್ ಕುಮಾರ್ ಪುತ್ತಿಲ (ಮಾಜಿ ಬಿಜೆಪಿ / ಪಕ್ಷೇತರ)
- ಎಚ್.ಕೆ. ಪುರುಷೋತ್ತಮ ದತ್ತನಗರ (VHP)
- ಸಿದ್ದಲಿಂಗ ಸ್ವಾಮಿ (ಶ್ರೀರಾಮಸೇನೆ)
- ಡಾ. ಕಲ್ಲಡ್ಕ ಪ್ರಭಾಕರ ಭಟ್ (RSS ನಾಯಕ)
- ಗಂಗಾಧರ ಕುಲಕರ್ಣಿ (ಶ್ರೀರಾಮಸೇನೆ)
- ಶೋಭಾ ಕರಂದ್ಲಾಜೆ (ಕೇಂದ್ರ ಸಚಿವರು / ಬಿಜೆಪಿ)
- ಸಿ ಟಿ ರವಿ ( MLC)
- ತೇಜಸ್ವಿ ಸೂರ್ಯ (ಬಿಜೆಪಿ ಸಂಸದ)
- ಹರೀಶ್ ಪೂಂಜಾ (ಬಿಜೆಪಿ ಶಾಸಕ)
- ಪ್ರತಾಪ ಸಿಂಹ (ಮಾಜಿ ಸಂಸದ / ಬಿಜೆಪಿ)
- ಚಕ್ರವರ್ತಿ ಸೂಲಿಬೆಲೆ (ಕಾರ್ಯಕರ್ತ/ ಭಾಷಣಕಾರ)
- ವೈ. ಭರತ್ ಶೆಟ್ಟಿ (ಬಿಜೆಪಿ ಶಾಸಕ)
- ಅನಂತ ಕುಮಾರ್ ಹೆಗಡೆ (ಮಾಜಿ ಸಂಸದ / ಬಿಜೆಪಿ)
- ಪುನೀತ್ ಕೆರೆಹಳ್ಳಿ (ಸ್ವಘೋಷಿತ ಗೋ ರಕ್ಷಕ/ ಕಾರ್ಯಕರ್ತ)
- ಶರಣ್ ಪಂಪ್‌ವೆಲ್ (VHP)
ವಿವಿಧ ಜಿಲ್ಲೆಗಳಲ್ಲಿ ಇವರ ವಿರುದ್ದ ಅನೇಕ ಕಾನೂನು ಮೊಕದ್ದಮೆಗಳು ದಾಖಲಾಗಿವೆ. ಆದರೂ ಈ ವ್ಯಕ್ತಿಗಳು ಯಾವುದೇ ಗಮನಾರ್ಹ ನ್ಯಾಯಾಂಗ ಅಥವಾ ಆಡಳಿತಾತ್ಮಕ ನಿರ್ಬಂಧವಿಲ್ಲದೆ ತಮ್ಮ ಚಟುವಟಿಕೆಗಳನ್ನು ಮುಂದುವರಿಸುತ್ತಿದ್ದಾರೆ ಎನ್ನವುದು ಮುಸ್ಲಿಂ ಒಕ್ಕೂಟದವರ ನಿಲುವು. ಈ ಬಗ್ಗೆ ಹೆಸರು ಮಾತ್ರವೇ ಬಹಿರಂಗವಾಗಿದೆ.
ಅಂದಹಾಗೆ ಈ ಸಮಾವೇಶದಲ್ಲಿ 40ಕ್ಕೂ ಹೆಚ್ಚು ಮುಸ್ಲಿಂ ಸಂಘಟನೆಗಳು, ವಿವಿಧ ಜಿಲ್ಲೆಗಳ ಮಸೀದಿ, ಜಮಾತ್‌ಗಳ ಹೊಣೆಗಾರರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಉಲೇಮಾಗಳು, ವಿವಿಧ ಮುಸ್ಲಿಂ ಸಂಘಟನೆಗಳ ನಾಯಕರು ಭಾಗವಹಿಸಿದ್ದರು.



