ದೃಶ್ಯಂ 03 ಚಿತ್ರದ ಟ್ರೇಲರ್ ಹೊರಬಿದ್ದಿದೆ. ಈ ಬಾರಿಯೂ ಅಷ್ಟೇ. ಜಾರ್ಜ್ ಕುಟ್ಟಿಯೇ ಹೀರೋ. ಆತನ ಸುತ್ತ ಪೊಲೀಸ್, ಮೀಡಿಯಾ ಎಲ್ಲರ ಕಣ್ಣೂ ಇದೆ. ಈ ಹಿಂದಿನ ಚಿತ್ರಗಳಲ್ಲಿ ಪೊಲೀಸ್ ಟೀಂ ಮಾತ್ರವೇ ಕುಟ್ಟಿಯ ವಿರುದ್ಧ ವ್ಯೂಹ ರಚಿಸುತ್ತಿತ್ತು. ಈ ಬಾರಿ ಮೀಡಿಯಾ ಕೂಡಾ ಇದೆ. ದೃಶ್ಯಂ 03 ಟ್ರೇಲರ್ ಹೇಳುತ್ತಿರುವುದೇ ಈ ಕಥೆ. ಜೀತು ಜೋಸೆಫ್ ಈ ಬಾರಿಯೂ ಗುಟ್ಟು ಬಿಟ್ಟು ಕೊಟ್ಟಿಲ್ಲ.
ಮೋಹನ್ ಲಾಲ್ ಆರಂಭದಲ್ಲಿ ಇದು ಕೇವಲ ಎಮೋಷನಲ್ ಡ್ರಾಮಾ, ಕ್ರೈಂ ಥ್ರಿಲ್ಲರ್ ಎಂಬರ್ಥದಲ್ಲಿ ಮಾತನಾಡಿದ್ದು. ಆದರೆ, ಹಾಗೆ ಅನಿಸುತ್ತಿಲ್ಲ. ಟ್ರೇಲರಿನಲ್ಲಿ ಜಾರ್ಜ್‌ಕುಟ್ಟಿ ಮತ್ತು ಆತನ ಕುಟುಂಬವು ಹಳೆಯ ನೆನಪುಗಳಿಂದ ಹೊರಬರಲು ಪ್ರಯತ್ನಿಸುತ್ತಿರುವುದನ್ನು ತೋರಿಸಲಾಗಿದೆ. ಆದರೆ, ಜಾರ್ಜ್‌ಕುಟ್ಟಿಗೆ ಮಾತ್ರ ಈ ಅಪಾಯ ಇನ್ನೂ ಮುಗಿದಿಲ್ಲ ಎಂಬ ಆತಂಕವಿರುತ್ತದೆ. ಈ ಬಾರಿ ಪೊಲೀಸರ ಜೊತೆಗೆ ಮಾಧ್ಯಮದವರು ಕೂಡ ಈ ಪ್ರಕರಣದ ಬೆನ್ನುಹತ್ತಿರುವುದು ಕುತೂಹಲ ಕೆರಳಿಸಿದೆ. ಟ್ರೇಲರ್‌ನ ಪ್ರಕಾರ, ಈ ಬಾರಿ ಜಾರ್ಜ್‌ಕುಟ್ಟಿ ಕೇವಲ ತನ್ನ ಕುಟುಂಬವನ್ನ ರಕ್ಷಿಸುವುದು ಮಾತ್ರವಲ್ಲದೆ, ತನ್ನ ಹಿಂದಿನ ಕೃತ್ಯಗಳ ನೆರಳಿನಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದಾನೆ. ಟ್ರೈಲರ್‌ನಲ್ಲಿ ಮೋಹನ್ ಲಾಲ್ ಅವರ ಗಂಭೀರ ನೋಟ ಮತ್ತು ಅವರು ಹೇಳುವ, “ಈ ಬಾರಿ ನನಗೆ ಭಯವಾಗುತ್ತಿದೆ” ಎಂಬ ಮಾತು, ಈ ಭಾಗವು ಮೊದಲಿನ ಎರಡು ಭಾಗಗಳಿಗಿಂತ ಹೆಚ್ಚು ತೀವ್ರವಾಗಿರಲಿದೆ ಎಂಬುದನ್ನ ಸೂಚಿಸುತ್ತದೆ.
ಎಂದಿನಂತೆ ಮೋಹನ್ ಲಾಲ್, ಮೀನಾ ಜೊತೆ ಸಂಪೂರ್ಣ ಹಳೆಯ ತಂಡವೇ ಇದೆ. ಅನ್ಸಿಬಾ ಹಸನ್ ಮತ್ತು ಎಸ್ತರ್ ಅನಿಲ್ ಹಿಂದಿನ ಭಾಗಗಳಂತೆ ತಮ್ಮ ಪಾತ್ರಗಳನ್ನು ಮುಂದುವರಿಸಿದ್ದಾರೆ. ಮೇ 21, 2026 ರಂದು ಮೋಹನ್‌ಲಾಲ್ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.
ಹೇಗಾದರೂ ಮಾಡಿ ಜಾರ್ಜ್ ಕುಟ್ಟಿಯ ಕುಟುಂಬವನ್ನು ಕೊಲೆ ಕೇಸಿನಲ್ಲಿ ಜೈಲಿಗೆ ಹಾಕಬೇಕು, ಕೋರ್ಟ್ ಎದುರು ತಪ್ಪಿತಸ್ಥ ಮಾಡಬೇಕು ಎನ್ನುವುದು ಪೊಲೀಸರ ಗುರಿ. ಅದಕ್ಕಾಗಿ ಅವರು ವ್ಯೂಹ ಮಾಡ್ತಾನೇ ಇದ್ದಾರೆ. ಅವರೆಲ್ಲರನ್ನೂ ಸೋಲಿಸಿರುವುದು 4ನೇ ಕ್ಲಾಸ್ ಓದಿರುವ ಜಾರ್ಜ್ ಕುಟ್ಟಿ. ಈ ಬಾರಿ ಜಾರ್ಜ್ ಕುಟ್ಟಿಗೆ ಆತನೇ ರಕ್ಷಣೆ ಮಾಡಿಕೊಂಡಿದ್ದ ಆತನ ಕುಟುಂಬವೇ ತಿರುಗಿ ಬೀಳಬಹುದಾ..? ಅದನ್ನು ಮೋಹನ್‌ಲಾಲ್ ಹೇಗೆ ಸ್ವೀಕರಿಸಬಹುದು? ಕುಟುಂಬ ದೂರವಾಗುವ ದು:ಖದಲ್ಲಿ ತನ್ನ ಸತ್ಯವನ್ನು ಒಪ್ಪಿಕೊಳ್ಳಬಹುದಾ? ಇದು ಸದ್ಯದ ಕುತೂಹಲ. ಸಿದ್ದಿಕ್, ಆಶಾ ಶರತ್ ಮತ್ತು ಮುರಳಿ ಗೋಪಿ ಅವರಂತಹ ಪ್ರಮುಖ ನಟರು ಪೊಲೀಸ್ ಮತ್ತು ತನಿಖಾ ಅಧಿಕಾರಿಗಳಾಗಿ ಮರಳಿ ಬಂದಿದ್ದು, ಜಾರ್ಜ್‌ಕುಟ್ಟಿಯನ್ನ ಈ ಬಾರಿಯಾದರೂ ಸೆರೆ ಹಿಡಿಯುತ್ತಾರಾ ಎಂಬ ಪ್ರಶ್ನೆ ಕಾಡುತ್ತಿದೆ.
ಸಿನಿಮಾ ವಲಯದಲ್ಲಿ ಕೇಳಿ ಬರ್ತಿರುವ ಸುದ್ದಿಗಳ ಪ್ರಕಾರ, ಇದು ʻದೃಶ್ಯಂ’ ಸರಣಿಯ ಕೊನೆಯ ಭಾಗವಾಗಿರಬಹುದು ಎನ್ನಲಾಗಿದೆ. ಜಾರ್ಜ್‌ಕುಟ್ಟಿ ಅಂತಿಮವಾಗಿ ಜೈಲು ಪಾಲಾಗುತ್ತಾನೆಯೇ ಅಥವಾ ಮತ್ತೊಮ್ಮೆ ತನ್ನ ಚಾಣಾಕ್ಷ ಬುದ್ದಿಯಿಂದ ತಪ್ಪಿಸಿಕೊಳ್ಳುತ್ತಾನೆಯೇ ಎಂಬುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.



