ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ವಿಜಯೇಂದ್ರ ಅವರನ್ನೇ ಪುನಃ ನೇಮಕ ಮಾಡುವ ಬಗ್ಗೆ ಹೈಕಮಾಂಡ್ ಉತ್ಸುಕವಾಗಿಯೇನೋ ಇದೆ. ಆದರೆ.. ಅದಕ್ಕೆ ಒಂದು ರೀತಿಯಲ್ಲಿ ಅಡ್ಡಿಯಾಗಿರುವುದು ಮೋದಿ ಮತ್ತು ಅಮಿತ್ ಶಾ. ಏಕೆಂದರೆ.. ದೆಹಲಿಯಲ್ಲಿನ್ನೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಯಾರು ಎನ್ನುವುದೇ ನಿರ್ಧಾರವಾಗಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಪದಚ್ಯುತಿಗೆ ಹವಣಿಸುತ್ತಿರುವ ಬಿಜೆಪಿ ಭಿನ್ನರ ಪಡೆಯು ದಿಲ್ಲಿಯತ್ತ ಮುಖ ಮಾಡಿ ಕುಳಿತಿದೆ.
ಆರ್‌ಎಸ್‌ಎಸ್ ಮತ್ತು ಮೋದಿ-ಶಾ ಮಧ್ಯೆ ಕೋಲ್ಡ್ ವಾರ್..?
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಹಲ ತಿಂಗಳ ಹಿಂದೆಯೇ ಮುಗಿಯಬೇಕಿತ್ತು. ಆದರೆ ಆರೆಸ್ಸೆಸ್ ವರಿಷ್ಠರು ಪಕ್ಷಾಧ್ಯಕ್ಷ ಸ್ಥಾನಕ್ಕೆ ಶಿವರಾಜ್ ಸಿಂಗ್ ಚೌಹಾಣ್ ಬರಲಿ ಎನ್ನುತ್ತಿದ್ದಾರೆ. ಅರೆಸ್ಸೆಸ್ ವರಿಷ್ಠರಿಗೆ ಮೋದಿಯವರ ನಂತರ ನಿತಿನ್ ಗಡ್ಕರಿ ಇಲ್ಲವೇ ಯೋಗಿ ಆದಿತ್ಯ ನಾಥ್ ಪ್ರಧಾನಿಯಾಗಲಿ ಎಂಬ ಬಯಕೆ ಇದೆ.
ಧರ್ಮೇಂದ್ರ ಪ್ರಧಾನ್ ಇಲ್ಲವೇ ಭೂಪೇಂದ್ರ ಯಾದವ್ ಬರಲಿ ಅಂತ ಮೋದಿ-ಅಮಿತ್ ಶಾ ಜೋಡಿ ಪಟ್ಟು ಹಿಡಿದಿದೆಯಂತೆ. ಅಮಿತ್ ಶಾ ಅವರಿಗೆ ಭವಿಷ್ಯದಲ್ಲಿ ಪ್ರಧಾನಿ ಹುದ್ದೆಗೇರುವ ಕನಸಿದೆ. ಇಂಥ ಕನಸು ಈಡೇರುವ ಕಾಲದಲ್ಲಿ ತಮಗೆ ಬೇಕಾದವರು ಪಕ್ಷದ ಅಧ್ಯಕ್ಷರಾಗಿರಬೇಕು ಎಂಬುದು ಅವರ ಯೋಚನೆ. ಒಂದು ವೇಳೆ ಹಾಗಾಗದೆ ಆರೆಸ್ಸೆಸ್ ಸೂಚಿಸಿದವರು ಅಧ್ಯಕ್ಷರಾದರೆ ತಮಗೆ ಅಡ್ಡಿಯಾಗುತ್ತದೆ ಎನ್ನುವ ಆಲೋಚನೆ ಅವರದ್ದು. ಆರೆಸ್ಸೆಸ್ ಹೇಳಿದಂತೆ ಶಿವರಾಜ್ ಸಿಂಗ್ ಚೌಹಾಣ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಬಂದರೆ ತಮಗೆ ಅಡ್ಡಿಯಾಗುತ್ತದೆ ಎಂಬುದು ಅಮಿತ್ ಶಾ ಚಿಂತೆ.
ಹೀಗಾಗಿ ಮೋದಿ-ಶಾ ಜೋಡಿ ಧರ್ಮೇಂದ್ರ ಪ್ರಧಾನ್ ಇಲ್ಲವೇ ಭೂಪೇಂದ್ರ ಯಾದವ್ ಹೆಸರು ಹೇಳುತ್ತಿದೆ. ಆದರೆ.. ಅದು ಅರ್‌ಎಸ್‌ಎಸ್‌ಗೆ ಇಷ್ಟವಿಲ್ಲ. ಯಾಕೆಂದರೆ ಧರ್ಮೇಂದ್ರ ಪ್ರಧಾನ್ ಮತ್ತು ಭೂಪೇಂದ್ರ ಯಾದವ್ ಅವರಿಗೆ ಸಂಘ ನಿಷ್ಠೆಗಿಂತ ಮೋದಿ-ಅಮಿತ್ ಶಾಗೆ ಹೆಚ್ಚು ನಿಷ್ಠಾವಂತರು ಎನ್ನುವ ಆಲೋಚನೆ ಅವರದ್ದು. ಕೀ ಪೋಸ್ಟು ಗಳಲ್ಲಿ ಸಂಘನಿಷ್ಠರೇ ಇರಬೇಕು ಎನ್ನುವುದು ಆರ್‌ಎಸ್‌ಎಸ್ ಪಟ್ಟು.
ಧನಕರ್ ಪಾಠ ನೆನಪಿಸಿದ ಆರ್‌ಎಸ್‌ಎಸ್..!
ಬೇರೆ ಪಕ್ಷದಿಂದ ವಲಸೆ ಬಂದವರಿಗೆ ಉನ್ನತ ಹುದ್ದೆ ಕೊಡುವುದು ಬೇಡ ಎಂದು ಆರ್‌ಎಸ್‌ಎಸ್ ಹೇಳಿತ್ತು. ಅದನ್ನು ಮೀರಿ ವಲಸೆ ಬಂದ ಜೈದೀಪ್ ಧನಕರ್ ಅವರನ್ನು ರಾಜ್ಯಸಭೆಯ ಅಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸಿದ್ದಕ್ಕೆ ಆದಂತಹ ಮುಜುಗರ ಎಂಥದ್ದು ಎನ್ನುವುದನ್ನು ಆರ್‌ಎಸ್‌ಎಸ್ ಹೇಳುತ್ತಿದೆ. ಭವಿಷ್ಯ ದಲ್ಲಿ ಇಂಥ ಎಪಿಸೋಡು ಪುನರಾವರ್ತನೆ ಆಗಬಾರದು ಎಂದರೆ, ತಮ್ಮ ನಿಷ್ಠರಿಗಿಂತ ಸಂಘ ನಿಷ್ಠರಿಗೆ ಮೋದಿ-ಅಮಿತ್ ಶಾ ಆದ್ಯತೆ ಕೊಡಬೇಕು ಎನ್ನುತ್ತಿದೆ. ಇದನ್ನು ನಿರಾಕರಿಸುವ ಸ್ಥಿತಿಯಲ್ಲಿ ಮೋದಿ-ಶಾ ಜೋಡಿ ಇಲ್ಲ.
ದೆಹಲಿ ಕ್ಲಿಯರ್ ಆದ ನಂತರವೇ.. ಕರ್ನಾಟಕ ಕ್ಲಿಯರ್..!
ಕರ್ನಾಟಕದ ಬಿಕ್ಕಟ್ಟು ನೋಡುತ್ತಿರುವ ಹೈಕಮಾಂಡಿನವರಿಗೆ ಪದೇ ಪದೇ ಅನಂತ್ ಕುಮಾರ್ ನೆನಪಾಗುತ್ತಿದ್ದಾರೆ. ಏಕೆಂದರೆ ಅನಂತ್ ಕುಮಾರ್ ಇದ್ದಾಗ.. ಆಂತರಿಕ ಕಚ್ಚಾಟಗಳೇನೇ ಇದ್ದರೂ.. ಪಕ್ಷ ಸಂಘಟನೆ ವಿಷಯದಲ್ಲಿ ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಜೋಡೆತ್ತಿನಂತೆ ಹೋಗುತ್ತಿದ್ದರು. ಬೇರೆ ಬೇರೆಯ ನಾಯಕರ ಹೆಸರು ಹೊರಬರುತ್ತಿದ್ದಾದರೂ.. ಅಂತಿಮ ಆದ ಮೇಲೆ ಒಟ್ಟಾಗಿಯೇ ಇರುತ್ತಿದ್ದರು. ಅಂತಹ ಪರಿಸ್ಥಿತಿ ಈಗಿಲ್ಲ.
ಅಷ್ಟೇ ಅಲ್ಲ, ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಮಧ್ಯೆ ಜಟಾಪಟಿ ನಡೆಯದೇ ಇರುವುದಕ್ಕೆ ಕಾರಣ, ಆಗ ಬಿಜೆಪಿಗೆ ಅಧಿಕಾರ ಸಿಕ್ಕಿರಲಿಲ್ಲ. ಆದರೆ.. ಈಗಿನ ಪರಿಸ್ಥಿತಿಯೇ ಬೇರೆ. ಈಗ ಚುನಾವಣೆ ನಡೆದರೂ.. ಪಕ್ಷಕ್ಕೆ ಗೆಲುವಿನ ಸುಳಿವಿದೆ. ಹೀಗಾಗಿಯೇ.. ʻಸಿಎಂ ಕನಸುʼ ಹಲವು ನಾಯಕರಲ್ಲಿದೆ. ಅಂಥಾದ್ದೊಂದು ಅವಕಾಶವನ್ನು ವಿಜಯೇಂದ್ರಗೆ ಕೊಡುವುದು ಬೇಡ ಎನ್ನುವುದೇ ವಿರೋಧಿಪಡೆಯ ಒಗ್ಗಟ್ಟಿಗೆ ಕಾರಣ.



